ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯ ತಾಲೂಕಿನ ಪ್ರಶಾಂತ ಮತ್ತು ಸೌಮ್ಯ ಅವರ ಸುಪುತ್ರ ಸಾತ್ವಿಕ ಗಣೇಶ್ ಉಜಿರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ ಯಲ್ಲಿ 7 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಚಿತ್ರಕಲೆಗೆ ಯಾವುದೇ ಗುರುವಿಲ್ಲದೆ ತಾನೇ ಸ್ವಯಂ ಅಭ್ಯಾಸ ಮಾಡಿ ಚಿತ್ರಕಲೆಯಲ್ಲಿ ನಿಪುಣನಾಗಿದ್ದಾರೆ. ಕೊರೋನಾ ಮಹಾಮಾರಿ ವಿಶ್ವವನ್ನು ವ್ಯಾಪಿಸಿ ಲಾಕ್ ಡೌನ್ ನಿಂದ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾದಾಗ ಆ ಸಮಯದ ಸದುಪಯೋಗ ಪಡಿಸಿಕೊಂಡರು ಸಾತ್ವಿಕ್ ಗಣೇಶ.
ಈ ಒಂದು ವರ್ಷದ ಅವಧಿಯಲ್ಲಿ ಹಲವಾರು ಸುಂದರವಾದ ಚಿತ್ರಗಳು ಇವರ ಕೈಯಿಂದ ಮೂಡಿಬಂದಿದೆ. ಸಾತ್ವಿಕ ಗಣೇಶ ಬಿಡಿಸಿದ ಚಿತ್ರಗಳು ಮಕ್ಕಳಜಗಲಿ ಎಂಬ ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಶ್ರೀಶಂಕರಾಚಾರ್ಯರ, ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯರ, ಗೋಮಾತೆ, ಆಂಜನೇಯ, ಗಣಪತಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೀಗೆ ಹತ್ತು ಹಲವಾರು ಚಿತ್ರಗಳಿಗೆ ಜೀವಂತಿಕೆ ತುಂಬುವ ಬಾಲ ಪ್ರತಿಭೆ ಇವರು.
ಒಂದನೇ ತರಗತಿಯಿಂದಲೇ ಯಕ್ಷಗಾನವನ್ನು ಕೀರಕ್ಕಾಡು ಗಣೇಶ ಶರ್ಮರಿಂದ ಅಭ್ಯಾಸಿಸುತ್ತಿರುವ ಸಾತ್ವಿಕ್ ತಾಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ಎರಡು ಬಾರಿ ದ್ವಿತಿಯ ಸ್ಥಾನ ಗಳಿಸಿದ್ದಲ್ಲದೆ ಹಲವು ಕಡೆ ಯಕ್ಷಗಾನ ಪಾತ್ರ ನಿರ್ವಹಿಸಿದ್ದಾರೆ. ಸ್ವಲ್ಪ ಮಟ್ಟಿಗೆ ಚೆಂಡೆವಾದನವನ್ನೂ ಅಭ್ಯಾಸ ಮಾಡಿದ್ದಾರೆ.
4 ನೇ ತರಗತಿಯಲ್ಲಿರುವಾಗ ಗ್ರಾಮಪಂಚಾಯತ್ ವೇಣೂರು ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಮಾಸಚಾರಣೆಯ ಓದುವ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ, ತಾಲೂಕು ಮಟ್ಟದ ಪ್ರತಿಭಾಕಾರಂಜಿಯ ಧಾರ್ಮಿಕ ಪಠಣ ಸಂಸ್ಕೃತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇನ್ನಷ್ಟು ಚಿತ್ರಗಳು ಇವರಿಂದ ಮೂಡಿ ಬರಲಿ ಎಂಬ ಶುಭಹಾರೈಕೆ ನಮ್ಮದು.