” ನಮ್ಮ ದೇಶದ ಸಂಸ್ಕೃತಿಯ ಪ್ರತೀಕ ಗೋಮಾತೆ, ಅವಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ‘ ಎಂಬ ಶ್ರೀಗುರುಗಳ ಮಾತುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದೆ. ಗೋಮಾತೆಯ ಸೇವೆ ನಿಜಕ್ಕೂ ಅವಿಸ್ಮರಣೀಯ ಅನುಭವ ನೀಡಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲದ ಬೆಟ್ಟಂಪಾಡಿ ವಲಯದ ಆರ್ಲಪದವು ನಿವಾಸಿಗಳಾಗಿರುವ ಬಾಲಕೃಷ್ಣ ಭಟ್ ಇವರ ಪತ್ನಿ ವನಮಾಲಾ ಭಟ್ ಅವರು.
ವಾದ್ಯಕೋಡಿ ಗಣಪತಿ ಭಟ್, ಶಂಕರಿ ಅಮ್ಮ ದಂಪತಿಗಳ ಪುತ್ರಿಯಾದ ವನಮಾಲಾ ಅವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಅಭಿವೃದ್ಧಿಯನ್ನು ಕಂಡಿದ್ದೇವೆ, ಆರೋಗ್ಯದ ಸುಧಾರಣೆಯೂ ಆಗಿದೆ, ಮಾನಸಿಕ ನೆಮ್ಮದಿಯೂ ದೊರಕಿದೆ, ಮನೆಯಲ್ಲಿ ಹಸು ಸಾಕಣೆ ಕಷ್ಟವಾದರೂ ಗೋಮಾತೆಯ ಮೇಲೆ ಪ್ರೀತಿಯಿದೆ. ದೇಶೀಯ ಹಸುಗಳ ಬಗ್ಗೆ ಸಮಾಜದಲ್ಲಿ ಪೂಜನೀಯ ಭಾವವಿದೆ. ಮಾತೃತ್ವಮ್ ಯೋಜನೆಗೆ ಅನೇಕ ಮಂದಿ ತುಂಬಾ ಪ್ರೀತಿಯಿಂದಲೇ ಕೈ ಜೋಡಿಸಿದ್ದಾರೆ ” ಎನ್ನುವ ವನಮಾಲಾ ಭಟ್ ಅವರು ಈ ಹಿಂದೆ ವಲಯದ ಸಂಘಟನಾ ಕಾರ್ಯದರ್ಶಿ ಹಾಗೂ ಮಾತೃಪ್ರಧಾನೆಯಾಗಿ ಸೇವೆ ಸಲ್ಲಿಸಿದವರು. ಪ್ರಸ್ತುತ ವಲಯ ಬಿಂದು ಸಿಂಧು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಸಿಂಧೂರ ಹವ್ಯಕ ಭಜನಾ ತಂಡದ ಸಕ್ರಿಯ ಸದಸ್ಯೆಯಾಗಿದ್ದಾರೆ.
” ಭಜನಾ ತಂಡದ ಸದಸ್ಯೆಯಾಗಿ ಶ್ರೀ ರಾಮನವಮಿಯ ಸಂದರ್ಭದಲ್ಲಿ ಹೊಸ ನಗರದ ಶ್ರೀರಾಮಚಂದ್ರಾಪುರ ಮಠಕ್ಕೆ ಹೋಗಿ ಭಜನಾ ಸೇವೆ ಸಲ್ಲಿಸಿದ್ದೇವೆ, ಕೆಲವು ವರ್ಷಗಳ ಹಿಂದೆ ಗಿರಿ ನಗರದಲ್ಲಿ ನಡೆದಿದ್ದ ಶ್ರೀಗುರುಗಳ ಚಾತುರ್ಮಾಸ್ಯದ ಸಮಯದಲ್ಲೂ ಭಜನಾ ಸೇವೆ ನಡೆಸುವ ಅವಕಾಶ ಒದಗಿ ಬಂದಿದೆ, ಹಾಗಿದ್ದರೂ ಬದುಕಿನ ಅವಿಸ್ಮರಣೀಯ ಘಟನೆ ಎಂದರೆ ಕಳೆದ ವರ್ಷ ಗೋಸ್ವರ್ಗದಲ್ಲಿ ನಡೆದ ಭಜನಾ ಕಾರ್ಯಕ್ರಮ. ಮೈಮನ ಪಾವನವೆನಿಸಿದ ಪುಣ್ಯ ಕ್ಷಣವದು ” ಎನ್ನುವ ವನಮಾಲಾ ಭಟ್ ಅವರ ಗೋಸೇವೆಗೆ ಪತಿ ಬಾಲಕೃಷ್ಣ ಭಟ್ ಹಾಗೂ ಇಬ್ಬರು ಪುತ್ರಿಯರಾದ ಶ್ವೇತಾ , ಸ್ಮಿತಾ ಅವರ ಸಂಪೂರ್ಣ ಸಹಕಾರವಿದೆ.
ದೇವಿಕಾ ಶಾಸ್ತ್ರಿಯವರ ಮಾರ್ಗದರ್ಶನ ಹಾಗೂ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವಾಗ ತಮ್ಮೊಂದಿಗೆ ಸುರಭಿ ಸೇವಿಕೆಯರಾಗಿ ಸದಾ ಸಹಕರಿಸುವ ಮಧುರಾ ಭಟ್, ಮಾಲತಿ, ಪಾರ್ವತಿ ಹಾಗೂ ಪ್ರೇಮಾ ಅವರ ಸಹಾಯವನ್ನು ಮರೆಯುವಂತಿಲ್ಲ’ ಎನ್ನುವ ವನಮಾಲಾ ಭಟ್ ಅವರಿಗೆ ಶ್ರೀಮಠದ ಸೇವೆಯಲ್ಲಿ, ಗೋಮಾತೆಯ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿರಬೇಕೆಂಬುದೇ ಅಭಿಲಾಷೆ.