ಶ್ರೀಮಠದ ಸಂಪರ್ಕಕ್ಕೆ ಸೇತುವೆಯಾಗಿದ್ದು ಸೋದರ: ಜಯಲಕ್ಷ್ಮಿ ಕುಳಾಯಿ

ಮಾತೃತ್ವಮ್

 

” ಶ್ರೀಮಠದ ಬಗ್ಗೆ, ಶ್ರೀಗುರುಗಳ ಬಗ್ಗೆ ಎಳವೆಯಿಂದಲೇ ಪೂಜ್ಯ ಭಾವನೆಯಿತ್ತು. ಆದರೆ ಶ್ರೀಮಠಕ್ಕೆ ಹೋಗುವ ಅವಕಾಶ ದೊರಕಿದ್ದು ಅಣ್ಣ ಅಂಬಾ ಪ್ರಸಾದ ಪಾತಾಳ ಅವರ ಮೂಲಕ. ಅಲ್ಲಿ ಹೋದ ಮೇಲೆ ಮನಸ್ಸು ಸಂಪೂರ್ಣವಾಗಿ ಶ್ರೀಗುರು ಚರಣಗಳಿಗೆ ಶರಣಾಯಿತು. ಅಂದಿನಿಂದಲೇ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ” ಈ ಮಾತುಗಳು ಉಪ್ಪಿನಂಗಡಿ ಮಂಡಲದ, ಉರುವಾಲು ವಲಯದ ಮೈರ ಶ್ಯಾಮ ಭಟ್ ಅವರ ಪತ್ನಿ ಜಯಲಕ್ಷ್ಮಿ ಕುಳಾಯಿ ಅವರದ್ದು.

ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟ್ರಮಣ ಭಟ್ ಹಾಗೂ ಪರಮೇಶ್ವರಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ತಮ್ಮ ಮನೆಯಲ್ಲೂ ಹಸುಗಳನ್ನು ಸಾಕುವ ಮೂಲಕ ಎಲ್ಲರಿಗೂ ಮಾದರಿಯಾದವರು.

ಉರುವಾಲು ವಲಯದ ಶಿಷ್ಯ ಮಾಧ್ಯಮ ಪ್ರಧಾನೆಯಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಯಲಕ್ಷ್ಮಿ ಅವರು ದೇವಿಕಾ ಶಾಸ್ತ್ರಿ ಅವರ ಪ್ರೇರಣೆಯಿಂದ ಮಾಸದ ಮಾತೆಯಾದವರು. ದೇಶೀಯ ಗೋತಳಿಗಳ ಮಹತ್ವ, ಅವುಗಳ ಸಂರಕ್ಷಣೆಯ ಅಗತ್ಯತೆ ಹಾಗೂ ಅದಕ್ಕಾಗಿ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಕೈಗೊಂಡಿರುವ ಮಹತ್ತರವಾದ ಯೋಜನೆ , ಆ ಯೋಜನೆಗೆ ಯಾವ ರೀತಿಯಲ್ಲಿ ಸಹಕಾರ ನೀಡಬಹುದು ಎಂಬುದರ ಬಗ್ಗೆ ಜನ ಮಾನಸದಲ್ಲಿ ಅರಿವು ಮೂಡಿಸಿ ಆ ಮೂಲಕ ಮಾತೃತ್ವಮ್ ಯೋಜನೆಯ ಗುರಿ ತಲುಪಿದವರು.

” ಪರಸ್ಪರ ಸಹಕಾರ ನೀಡಿದರೆ ಮಾತ್ರ ಹಲವು ಯೋಜನೆಗಳ ಗುರಿ ತಲುಪಲು ಸಾಧ್ಯ. ಇದಕ್ಕಾಗಿ ನನ್ನಿಂದ ಸಾಧ್ಯವಾದ ರೀತಿಯ ಪ್ರಯತ್ನ ಮಾಡಿರುವೆ. ಆರಂಭದಲ್ಲಿ ಹೇಗೆ ಗುರಿ ತಲುಪುವೆನೋ ಎಂಬ ಆತಂಕವಿತ್ತು, ಆದರೆ ಶ್ರೀಗುರುಗಳ ಕೃಪೆಯಿಂದ ಅಸಾಧ್ಯ ಎನಿಸಿದ ಕಾರ್ಯವು ಬಹಳ ಸುಲಭವಾಗಿ ಕೈಗೂಡಿತು , ಯಾವುದೇ ಕಾರ್ಯಕ್ಕೂ ಹೊರಡುವ ಮೊದಲು ಶ್ರೀಗುರುಗಳ ಸ್ಮರಣೆ ಮಾಡಿಯೇ ಹೊರಡುವವಳು ನಾನು. ಆ ಭರವಸೆಯೇ ಬದುಕಿನ ಶ್ರೀರಕ್ಷೆ ” ಎನ್ನುವ ಜಯಲಕ್ಷ್ಮಿ ತಮ್ಮ ಮಗಳಿಗೆ ಅವಳು ಬಯಸಿದ ಮೆಡಿಕಲ್ ಓದಲು ಸೀಟ್ ದೊರಕಿದರೆ ಮಗಳನ್ನೂ ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿಸುವೆ ಎಂದು ಸಂಕಲ್ಪ ಮಾಡಿದವರು. ಶ್ರೀಗುರು ದೇವರ ಕೃಪೆಯೊಂದಿಗೆ ಗೋಮಾತೆಯ ಅನುಗ್ರಹವೂ ದೊರಕಿ ಮಗಳು ಅನನ್ಯ ಗೌರಿ ಬಿಡಿಎಸ್ ಗೆ ಸೇರಿದಾಗ ತಮ್ಮ ಸಂಕಲ್ಪದಂತೆ ಅವಳನ್ನು ಮಾಸದ ಮಾತೆಯಾಗಿಸಿದವರು.

” ಶ್ರೀಗುರುಗಳ, ಗೋಮಾತೆಯ ಅನುಗ್ರಹದಿಂದ ಮಗಳಿಗೆ ಅವಳು ಬಯಸಿದ ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಸಂಗ ಮಾಡುವಂತಾಯಿತು. ದೃಢಮನದಿಂದ ಶ್ರೀಗುರು ಚರಣಗಳನ್ನು ನಂಬಿದವರಿಗೆ ಅವರ ಕನಸುಗಳೆಲ್ಲ ನನಸಾಗುತ್ತವೆ ಎಂಬುದಕ್ಕೆ ನಮ್ಮ ಬದುಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ ” ಎನ್ನುವ ಇವರು ತಮ್ಮ ತವರುಮನೆಯವರ ಗುರಿಕ್ಕಾರರ ಮನೆಯ ವಿವಾಹ ಕಾರ್ಯಕ್ರಮದಲ್ಲಿ ಮಂಟಪದಲ್ಲೇ ಮಾತೃತ್ವಮ್ ಯೋಜನೆಗೆ ದೇಣಿಗೆ ಸ್ವೀಕರಿಸಿದ ಘಟನೆ ಅತ್ಯಂತ ಖುಷಿಯ ಅನುಭವ ಎಂದು ವಿವರಿಸುತ್ತಾರೆ.

ತಮ್ಮ ಮನೆಯಲ್ಲಿ ಆರು ಹಸುಗಳನ್ನು ಸಾಕುವ ಇವರ ಎಲ್ಲಾ ಕಾರ್ಯಕ್ಕೂ ಸದಾ ಬೆಂಬಲವಾಗಿ ನಿಂತು ಪ್ರೋತ್ಸಾಹ ನೀಡುವವರು ಪತಿ ಶ್ಯಾಮ ಭಟ್. ಸಾವಯವ ತರಕಾರಿ ಬೆಳೆ, ಜೇನು ವ್ಯವಸಾಯಗಳೇ ಮೊದಲಾದ ಹವ್ಯಾಸಗಳನ್ನು ಹೊಂದಿರುವ ಜಯಲಕ್ಷ್ಮಿ ಅವರಿಗೆ ತಮ್ಮ ಜೊತೆಗೆ ಮಕ್ಕಳೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ತುಂಬಾ ನೆಮ್ಮದಿ ಹಾಗೂ ಹರ್ಷ ನೀಡಿದೆ.

” ಅಭಯಾಕ್ಷರ ಅಭಿಯಾನ, ವಿಶ್ವ ಮಂಗಲ ಗೋಯಾತ್ರೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅನುಭವವಿದೆ. ಮನೆಯಲ್ಲಿ ಹಸುಗಳಿರುವುದೇ ಮನಸ್ಸಿಗೆ ಹಿತವೆನಿಸುತ್ತಿದೆ, ಶ್ರೀಮಠದ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಹಂಬಲ. ಶ್ರೀಗುರುಗಳ ಶ್ರೀರಾಮದೇವರ ಕೃಪೆ ಸದಾ ನಮ್ಮ ಮೇಲಿರಲಿ ಎಂಬುದೇ ನಿರಂತರ ಕೋರಿಕೆ ” ಇದು ಜಯಲಕ್ಷ್ಮಿ ಕುಳಾಯಿ ಅವರ ಹೃದಯಾಂತರಾಳದ ನುಡಿ.

Author Details


Srimukha

Leave a Reply

Your email address will not be published. Required fields are marked *