” ಕೆಲವು ವರ್ಷಗಳ ಹಿಂದೆ ಶ್ರೀ ಸಂಸ್ಥಾನದವರು ನಮ್ಮೂರಿನ ಆಸುಪಾಸಿಗೆ ಬಂದರೆ ಸಾಧ್ಯವಾದಾಗಲೆಲ್ಲ ನಮ್ಮ ಮನೆಯ ಮಲೆನಾಡು ಗಿಡ್ಡ ತಳಿಯ ಹಸುವಿನ ಹಾಲನ್ನು ಕೊಂಡೊಯ್ದು , ಶ್ರೀ ಕರಾರ್ಚಿತ ದೇವರುಗಳ ಪೂಜೆಯನ್ನು ಮನಸ್ಸು ಹೃದಯ ತುಂಬುವಷ್ಟು ಶ್ರದ್ಧೆಯಿಂದ ನೋಡಿ ಬರುತ್ತಿದ್ದೆ. ನಂತರ ಶ್ರೀಮಠದ ಒಂದೊಂದೇ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಶ್ರೀಗುರುಕೃಪೆಯಿಂದ ಒದಗಿಬಂತು. ಶರಾವತಿ ಎಡದಂಡೆಯಲ್ಲಿ ಮುಷ್ಟಿ ಭಿಕ್ಷಾ ಸಹಾಯಕಿಯಾದೆ. ಮುಂದೆ ವಲಯ ಮಾತೃಪ್ರಧಾನೆಯಾದೆ. ಇದೀಗ ಮಂಡಲ ಬಿಂದು ಸಿಂಧು ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದೆಲ್ಲವೂ ಸಾಧ್ಯವಾಗಿದ್ದು ಶ್ರೀಗುರುಗಳ ಕೃಪೆಯಿಂದ ” ಎಂದು ಭಾವನಾತ್ಮಕವಾಗಿ ನುಡಿದವರು ಹೊನ್ನಾವರ ಮಂಡಲ ಗೇರುಸೊಪ್ಪ ವಲಯದ ಮೇಲಿನ ಮಣ್ಣಿಗೆಯ ಕೆಳಮನೆಯ ರಾಮಚಂದ್ರ ಭಟ್ಟ ಅವರ ಪತ್ನಿ ಶೋಭಾ.
ಗೇರುಸೊಪ್ಪಾದ ಗಜಾನನ ರಾಮಚಂದ್ರ ಭಟ್ಟ ,ಅಹಲ್ಯಾ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಶ್ರೀಗುರುಗಳ ಯೋಜನೆಯಲ್ಲಿ ಪಾಲ್ಗೊಳ್ಳುವ ಭಕ್ತಿ ಹಾಗೂ ಗೋಮಾತೆಯ ಮೇಲಿನ ಪ್ರೀತಿಯಿಂದ ಮಾಸದ ಮಾತೆಯಾದೆ. ಎರಡು ವರ್ಷಗಳಲ್ಲಿ ಗುರಿ ತಲುಪಬಹುದು ಎಂಬ ಆತ್ಮವಿಶ್ವಾಸವಿತ್ತು. ಲಕ್ಷ ಭಾಗಿನಿಯಾಗಿ ಶ್ರೀಗುರುಗಳ ಕರಕಮಲಗಳಿಂದ ಬಾಗಿನ ಸ್ವೀಕಾರ ಮಾಡಬೇಕೆಂದು ಬಹಳಷ್ಟು ಕನಸು ಕಂಡವಳು ನಾನು. ಕಳೆದ ಎರಡು ವರ್ಷಗಳಿಂದ ಅದು ಸಾಧ್ಯವಾಗಿರಲಿಲ್ಲ. ಅನೇಕ ಕಾರಣಗಳಿಂದಾಗಿ ಈ ಬಾರಿಯೂ ಬಾಗಿನ ಸ್ವೀಕಾರ ನನ್ನ ಮಟ್ಟಿಗೆ ಗಗನಕುಸುಮ ಎಂದು ಭಾವಿಸಿದ್ದೆ. ಬಾಗಿನ ಸ್ವೀಕಾರ ಎಂದರೆ ಬಾಳಿನ ಸೌಭಾಗ್ಯ. ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸಲು ಪುಣ್ಯ ಮಾಡಬೇಕು. ನಾನು ಇನ್ನೂ ಆ ಹಂತ ತಲುಪಲಿಲ್ಲ ಎಂಬ ನೋವಿನೊಂದಿಗೆ ಆ ಮಹಾ ಸೌಭಾಗ್ಯಕ್ಕಾಗಿ ಕಾಯುತ್ತಿದ್ದೆ . ಎಂಥಹಾ ಪವಾಡ ನಡೆಯಿತು ಗೊತ್ತಾ ? ಗೋಪ್ರೇಮಿಯೊಬ್ಬರು ದೊಡ್ಡ ಮೊತ್ತವನ್ನು ನೀಡಿದರು. ಆ ಮೂಲಕ ನಾನು ಬಾಗಿನ ಸ್ವೀಕಾರ ಮಾಡುವ ಅರ್ಹತೆಯನ್ನು ಪಡೆದೆ . ಈ ಅನುಗ್ರಹ ಶ್ರೀಗುರುಕೃಪೆಯಿಂದ ದೊರಕಿದ್ದಲ್ಲದೆ ಬೇರೇನು ? ” ಎಂದು ಹೃದಯ ತುಂಬಿ ನುಡಿಯುವ ಶೋಭಾ ಬಾಗಿನ ಸ್ವೀಕಾರದ ಅನುಪಮ ಕ್ಷಣಗಳ ಬಗ್ಗೆ ನುಡಿಯುವಾಗ ಗದ್ಗದಿತರಾಗುತ್ತಾರೆ.
ಶಾಲಾ ದಿನಗಳಿಂದಲೇ ಹಸುಗಳ ಪಾಲನೆಯನ್ನು ರೂಢಿಸಿಕೊಂಡಿದ್ದ ಶೋಭಾ ಮುಂದೆಯೂ ಅದನ್ನು ಇಷ್ಟದಿಂದ ಮುಂದುವರಿಸಿದವರು. ಹಸುಗಳಿಗಿರುವ ಪ್ರೀತಿ ಮಮತೆ ಮಾನವರಲ್ಲೂ ಇಲ್ಲ ಎನ್ನುವ ಇವರು ಮನೆಯಲ್ಲಿ ಮಲೆನಾಡು ಗಿಡ್ಡ ತಳಿಯ ನಾಲ್ಕೈದು ಹಸುಗಳುಗಳನ್ನು ಸಾಕುತ್ತಿದ್ದಾರೆ.
ಯಾವುದೇ ನೂತನ ಕಾರ್ಯ ಆರಂಭಿಸುವಾಗಲೂ ಶ್ರೀಗುರುಗಳ ಮಂತ್ರಾಕ್ಷತೆ ಸ್ವೀಕಾರ ಮಾಡಿಯೇ ಮುಂದುವರಿಯುವ ಇವರಿಗೆ ಜೀವನದಲ್ಲಿ ಅನೇಕ ಬಾರಿ ಶ್ರೀಗುರುಗಳ ಅನುಗ್ರಹ ಪವಾಡದಂತೆ ನಡೆದು ಶ್ರೀಗುರುಪೀಠದ ಮೇಲಿರುವ ಅವರ ಶ್ರದ್ಧಾಭಕ್ತಿಗಳು ಮತ್ತಷ್ಟು ಹೆಚ್ಚಿಸಿವೆ.
” ಹಿರಿಮಗನ ವಿದ್ಯಾಭ್ಯಾಸ, ಯಜಮಾನರ ಅನಾರೋಗ್ಯ ಮಾತ್ರವಲ್ಲ ಇತ್ತೀಚೆಗೆ ಕಿರಿಯ ಮಗನ ಅನಾರೋಗ್ಯದ ಸಂದರ್ಭದಲ್ಲಿ ಸಹಾ ನಾವು ಶ್ರೀಗುರುಗಳಿಗೆ ಶರಣಾಗಿ ಶ್ರೀಕರಾರ್ಚಿತ ದೇವರಿಗೆ ಹರಕೆ ಹೊತ್ತೆವು . ಕರುಣಾಳು ಶ್ರೀರಾಮಚಂದ್ರ ನಮ್ಮ ಕೈ ಬಿಡಲಿಲ್ಲ ” ಎನ್ನುವ ಶೋಭಾ ತಾವು ಮಾತೃತ್ವಮ್ ಯೋಜನೆಯ ಗುರಿ ತಲುಪುವುದರ ಜೊತೆ ಇನ್ನಷ್ಟು ಸೋದರಿಯರಿಗೆ ಮಾಸದ ಮಾತೆಯಾಗಲು ಪ್ರೇರಣೆ ನೀಡಿದ್ದಾರೆ.
ಗೇರುಸೊಪ್ಪ ವಲಯದ ಕೋಶಾಧ್ಯಕ್ಷರಾಗಿರುವ ಪತಿಯ ಸಂಪೂರ್ಣ ಸಹಕಾರ ಶೋಭಾಗೆ ಇದೆ. ಹೊಲಿಗೆ, ಕಸೂತಿಯನ್ನು ರೂಢಿಸಿಕೊಂಡಿರುವ ಇವರು ಮನೆಯ ಹಿರಿಯರ ಬಗ್ಗೆಯೂ ಬಹಳಷ್ಟು ಕಾಳಜಿ ವಹಿಸುತ್ತಾರೆ.
ಜೀವನದ ಪ್ರತೀ ಕ್ಷಣದಲ್ಲಿಯೂ ಶ್ರೀಗುರುಗಳ ಮೇಲಿನ ನಂಬಿಕೆ , ಬದುಕಿನಲ್ಲಿ ಆತ್ಮವಿಶ್ವಾಸ, ಭರವಸೆಯನ್ನು ತುಂಬುತ್ತಿದೆ ಎನ್ನುವ ಶೋಭಾಗೆ ಇನ್ನಷ್ಟು ಕಾಲ ಶ್ರೀಮಠದ ಸೇವೆಯಲ್ಲಿ ಮುಂದುವರಿಯುವ ಅಭಿಲಾಷೆಯಿದೆ.
ಪ್ರಸನ್ನಾ ವಿ ಚೆಕ್ಕೆಮನೆ