” ನಮ್ಮ ಸಂಸ್ಕೃತಿಯಲ್ಲಿ ಮಾತೆಯ ಸ್ಥಾನದಲ್ಲಿ ಗುರುತಿಸಲ್ಪಡುವುದು ಗೋವು ಮಾತ್ರ. ನಮ್ಮ ಗುರುಗಳ ಗೋ ಪರ ಆಂದೋಲನಗಳು ನಮ್ಮ ಗೋಸೇವೆಗೆ ಸ್ಪೂರ್ತಿ ನೀಡಿದೆ. ಗೋವಿನ ಧಾರ್ಮಿಕ ಮಹತ್ವ, ಗೋಜನ್ಯ ಉತ್ಪನ್ನಗಳ ಔಷಧೀಯ ಗುಣಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸುವ ಹೊಣೆ ನಮ್ಮಂತಹ ಮಾತೆಯರ ಮೇಲಿದೆ. ಶ್ರೀಗುರುಗಳ ಅನುಗ್ರಹದಿಂದ ಈ ನಿಟ್ಟಿನಲ್ಲಿ ಕಿಂಚಿತ್ ಸೇವೆ ಮಾಡಲು ಸಾಧ್ಯವಾಗುತ್ತಿದೆ ಎಂಬುದೇ ಸಂತಸದ ವಿಚಾರ ” ಎಂದು ನುಡಿದವರು ಮೂಲತಃ ಪೈಲೂರಿನವರಾದ ಪ್ರಸ್ತುತ ಮಂಗಳೂರು ಮಂಡಲ ಮಧ್ಯ ವಲಯ ನಿವಾಸಿಗಳಾಗಿರುವ ಶಂಕರನಾರಾಯಣ ಪೈಲೂರು ಅವರ ಪತ್ನಿ ಸುನಂದಾ.
ನಿಟ್ಟೂರು ನಾರಾಯಣಪ್ಪ , ಜಾನಕಿ ದಂಪತಿಗಳ ಪುತ್ರಿಯಾದ ಇವರು ಒಂದು ವರ್ಷದ ಗುರಿ ತಲುಪಿರುವ ಮಾಸದ ಮಾತೆಯಾಗಿದ್ದಾರೆ.
” ಹಿರಿಯ ಗುರುಗಳ ಪೂರ್ವಾಶ್ರಮದ ನಿಕಟ ಬಂಧುವಾಗಿದ್ದ ಕಾರಣ ತವರುಮನೆಯಿಂದಲೇ ಶ್ರೀಮಠದ ಮಹತ್ವದ ಬಗ್ಗೆ ಅರಿವಿತ್ತು. ಮದುವೆಯ ನಂತರ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಒದಗಿಬಂತು. ಮಾತೃತ್ವಮ್ ಯೋಜನೆಯ ಗುರಿ ತಲುಪಲು ಅನೇಕ ಮಂದಿ ಸಹಕಾರ ನೀಡಿದ್ದಾರೆ. ಒಬ್ಬರಂತೂ ಜೀವನಾದ್ಯಂತ ಗೋಸೇವೆಗಾಗಿ ಪ್ರತಿ ತಿಂಗಳೂ ಕಾಣಿಕೆ ಸಮರ್ಪಿಸುವುದಾಗಿ ಹೇಳಿದ್ದಾರೆ ” ಎನ್ನುವ ಸುನಂದಾ ಶ್ರೀಮಠದ ವಿವಿಧ ವಿಭಾಗಗಳಲ್ಲಿ ಸೇವೆ ಮಾಡಿದ ಅನುಭವ ಹೊಂದಿದವರು.
ಯಾವುದೇ ಶುಭಕಾರ್ಯ ಆರಂಭಿಸುವಾಗಲೂ ಶ್ರೀಗುರುಗಳ ಸ್ಮರಣೆ ಮಾಡಿಯೇ ಮುಂದುವರಿಯುವ ಅಭ್ಯಾಸವನ್ನು ರೂಢಿಸಿಕೊಂಡಿರುವ ಸುನಂದಾ ಅವರ ಶ್ರೀಮಠದ ಸೇವೆಗೆ ಮನೆಯವರ ಸಂಪೂರ್ಣ ಬೆಂಬಲವಿದೆ.
” ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಮನಸ್ಸಿಗೆ ನೆಮ್ಮದಿ, ಶಾಂತಿಯನ್ನು ನೀಡಿದೆ. ಸಾಧ್ಯವಿರುವಷ್ಟು ಕಾಲ ಶ್ರೀಮಠದ ಸೇವೆ, ಗೋಮಾತೆಯ ಸೇವೆಯನ್ನು ಮುಂದುವರಿಸಬೇಕೆಂಬ ಅಭಿಲಾಷೆಯಿದೆ ” ಎನ್ನುವ ಇವರು ಶ್ರೀಮಠದ ವಿವಿಧ ಯೋಜನೆಗಳಿಗೆ ಸಮರ್ಪಣೆ ನೀಡಿದ್ದಾರೆ.