” ಅಲ್ಪದಿಂದ ಅನಂತವಾದುದನ್ನು ಪಡೆದಿದ್ದು ಶ್ರೀಗುರು ಸೇವೆಯಿಂದ ” : ಮಹಾಲಕ್ಷ್ಮಿ ಎಂ. ಭಟ್ ಮಿತ್ತೂರು

ಮಾತೃತ್ವಮ್

 

” ಶ್ರೀಗುರುಗಳಿಗೆ, ದೇವರಿಗೆ ನಾವು ಏನು ನೀಡುತ್ತೇವೆಯೋ ಅದರ ಜೊತೆ ಭಕ್ತಿಭಾವವನ್ನು ಸೇರಿಸಿ ಸಮರ್ಪಿಸಿದರೆ ಅಲ್ಪವೂ ಮಹತ್ತಾಗುತ್ತದೆ. ಅಲ್ಪದಿಂದ ಅನಂತವಾದುದನ್ನು ಪಡೆಯಲು ಅಂತರಂಗದಲ್ಲಿ ಭಕ್ತಿ ಭಾವ ತುಂಬಿರಬೇಕು ‘ ಎಂಬುದು ಶ್ರೀಗುರುಗಳ ವಚನ. ಇದೇ ಮಾತುಗಳು ನನ್ನ ಗೋಸೇವೆಗೆ, ಶ್ರೀಮಠದ ಸೇವೆಗೆ ಪ್ರೇರಣೆ, ಶ್ರೀಗುರುಗಳ ಆಶೀರ್ವಚನದ ನುಡಿಗಳನ್ನು ಸಾಧ್ಯವಿದ್ದಷ್ಟು ಚೆನ್ನಾಗಿ ಪರಿಪಾಲಿಸುವುದರಿಂದಲೇ ನಮ್ಮ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಬದುಕಿನ ಯಾವುದೇ ಕಷ್ಟಸುಖಗಳಲ್ಲೂ ನಾವು ಆಶ್ರಯಿಸುವುದು ಶ್ರೀಗುರು ಚರಣಗಳನ್ನು. ಇದರಿಂದ ನಮ್ಮ ಜೀವನದಲ್ಲಿ ಒಳಿತಾಗಿದೆ ” ಎಂಬ ಭಾವಪೂರ್ಣ ನುಡಿಗಳಿಗೆ ದನಿಯಾದವರು ಉಪ್ಪಿನಂಗಡಿ ಮಂಡಲ ಮಾಣಿ ವಲಯದ ಮಿತ್ತೂರು ಮಹಾಬಲೇಶ್ವರ ಭಟ್ಟರ ಪತ್ನಿ ಜಯಲಕ್ಷ್ಮಿ ಭಟ್.

ಮುರುಗಜೆ ಪದ್ಮನಾಭ ಭಟ್ ,ಗಂಗಮ್ಮ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ತಮ್ಮ ಮನೆಯಲ್ಲೂ ಹಸುಗಳನ್ನು ಸಾಕುತ್ತಿರುವ ಇವರು ಇಳಿ ವಯಸ್ಸಿನಲ್ಲೂ ಗೋಮಾತೆಯ ಸೇವೆಗಾಗಿ, ದೇಶೀಯ ಹಸುಗಳ ವೈಶಿಷ್ಟ್ಯತೆಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸುವುದಕ್ಕಾಗಿ ಕಾಲ್ನಡಿಗೆಯಲ್ಲೇ ಅನೇಕ ಮನೆಗಳಿಗೆ ತೆರಳಿದವರು. ಮಂಗಲ ಗೋಯಾತ್ರೆಯ ಸಂದರ್ಭದಲ್ಲಿ ಮುನ್ನೂರಕ್ಕೂ ಹೆಚ್ಚು ಮನೆಗಳನ್ನು ಸಂದರ್ಶಿಸಿದ ಹಿರಿಮೆ ಇವರದ್ದು.‌ ಶ್ರೀಗುರುಗಳು ಮುಷ್ಟಿ ಭಿಕ್ಷಾ ಯೋಜನೆಯ ಬಗ್ಗೆ ತಿಳಿಸಿದ ಅಂದಿನಿಂದ ಇಂದಿನವರೆಗೂ ಒಂದು ದಿನವೂ ತಪ್ಪದೆ ಮುಷ್ಟಿ ಭಿಕ್ಷೆ ತೆಗೆದಿರಿಸಿದ ಗುರುಭಕ್ತೆ ಇವರು.

ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸ, ಮದುವೆಗಳಿಗೆ ಸಹಕಾರ ನೀಡಿರುವ ಇವರು ತಮ್ಮ ಈ ರೀತಿಯ ಸಹಾಯಕ್ಕೆ ಪ್ರೇರಣೆ ಶ್ರೀಗುರು ವಚನಗಳು ಎನ್ನುತ್ತಾರೆ.

” ನನ್ನ ಮಗಳ ಉದ್ಯೋಗದ ಹುಡುಕಾಟದ ಸಂದರ್ಭದಲ್ಲಿ, ಇನ್ನೊಬ್ಬ ಮಗಳ ಕಾಲುನೋವಿನ ಸಂದರ್ಭದಲ್ಲಿ ಶ್ರೀಗುರುಗಳ ಆಶೀರ್ವಾದದಿಂದ ಒಳಿತನ್ನೇ ಕಂಡಿದ್ದೇವೆ. ನಮ್ಮ ಮನೆಗೆ ಶ್ರೀಗುರುಗಳು ಮೂರು ಬಾರಿ ಬಂದಿರುವುದು ಪೂರ್ವ ಜನ್ಮದ ಸುಕೃತ. ಮಾತೃತ್ವಮ್ ಯೋಜನೆಗೆ ಅನೇಕ ಮಂದಿ ಸಹಕಾರ ನೀಡಿದ್ದಾರೆ. ನನ್ನ ಮೈದುನ ,ನನ್ನ ಮಕ್ಕಳು ,ಮನೆಯವರೆಲ್ಲರೂ ಶ್ರೀಗುರುಗಳ ಮೇಲೆ ಅತ್ಯಂತ ಶ್ರದ್ಧೆಯುಳ್ಳವರು. ಈ ಹಿಂದೆ ಮಾಣಿ ವಲಯ ಕಾರ್ಯದರ್ಶಿಯಾಗಿಯೂ, ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ ಅನುಭವವಿದೆ. ಮನೆಯವರೆಲ್ಲರ ಸಂಪೂರ್ಣ ಸಹಕಾರದಿಂದ ನನ್ನ ಶ್ರೀಮಠದ ಸೇವೆ ಯಾವುದೇ ತೊಡಕಿಲ್ಲದೆ ಸಾಗುತ್ತಿದೆ ” ಎನ್ನುವ ಜಯಲಕ್ಷ್ಮಿ ಎಂ. ಭಟ್ಟರಿಗೆ ಶ್ರೀಮಠದ ಸೇವೆಯನ್ನು ಸಾಧ್ಯವಿರುವಷ್ಟು ಕಾಲ ಮಾಡಬೇಕೆಂಬ ಅಭಿಲಾಷೆಯಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *