“ಪ್ರತಿಯೊಂದು ಹಸುವಿನಲ್ಲೂ ಲಕ್ಷ್ಮಿಯನ್ನು ಕಾಣುತ್ತಿದ್ದೇನೆ” : ಗೀತಾ ಯಾಜಿ, ಭಟ್ಕಳ

ಮಾತೃತ್ವಮ್

ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದ ಗೀತಾ ಯಾಜಿ ಅವರಿಗೆ ಹಸುಗಳೆಂದರೆ ವಿಪರೀತ ಮಮತೆ. ತಮ್ಮ ಬಳಿಗೆ ಬಂದ ಹಸುಗಳಿಗೆ ಒಂದಿಷ್ಟಾದರು ಮೇವು ಕೊಡದೆ ಕಳಿಸುವವರಲ್ಲ ಅವರು. ಪ್ರತಿಯೊಂದು ಹಸು ಬಳಿಗೆ ಬಂದಾಗಲೂ ಶ್ರೀಸಂಸ್ಥಾನದವರೇ ಆ ಹಸುವನ್ನು ತನ್ನ ಬಳಿಗೆ ಕಳುಹಿಸಿದ್ದಾರೆ ಎಂಬ ಭಾವನೆಯಿಂದ ನೋಡುವ ಗೀತಾ ಯಾಜಿ ಹೊನ್ನಾವರ ಮಂಡಲದ ಭಟ್ಕಳ ವಲಯದವರು.

“ತವರುಮನೆಯಲ್ಲಿ ಹಿಂದೆ ಎರಡು ಹಟ್ಟಿಗಳ ತುಂಬಾ ಹಸುಗಳಿದ್ದವು. ಆ ಹಸುಗಳ ಜೊತೆಗಿನ ಒಡನಾಟದಿಂದಾಗಿಯೇ ಗೋಮಾತೆಯ ಬಗ್ಗೆ ಪ್ರೀತಿ ಮೂಡಲು ಸಾಧ್ಯವಾಯಿತು” ಎನ್ನುವ ಇವರು ಹದಿನೈದು ವರ್ಷಗಳ ಕಾಲ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಉದ್ಯೋಗಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ನಡೆದ ವಿಶೇಷ ಅನುಭವೊಂದು ಗೀತಾ ಅವರ ಬದುಕಿನಲ್ಲಿ ಗೋಮಾತೆಯ ಬಗ್ಗೆ ಮತ್ತಷ್ಟು ಪ್ರೀತಿ ಮೂಡಲು ಸಾಧ್ಯವಾಯಿತು

“ನಾನು ಉದ್ಯೋಗಕ್ಕೆ ಹೋಗುವ ಸಂದರ್ಭದಲ್ಲಿ ಪ್ರತಿನಿತ್ಯವೂ ಒಂದು ಹಸು ನಮ್ಮ ಮನೆಯ ಮುಂದೆ ಬರುತ್ತಿತ್ತು. ಆ ಗೋಮಾತೆಗೆ ನಾನು ದಿನವೂ ಅನ್ನ ಕೊಡುತ್ತಿದ್ದೆ. ಕೆಲವು ವರ್ಷಗಳ ಕಾಲ ಬರುತ್ತಿದ್ದ ಈ ಹಸು ನನ್ನ ಮೆಚ್ಚಿನ ಲಕ್ಷ್ಮಿ ಆಯಿದು. ನಾನದನ್ನು ಲಕ್ಷ್ಮಿ ಎಂದೇ ಕರೆಯುತ್ತಿದ್ದೆ. ನಾನು ಮನೆಯೊಳಗೆ ಇದ್ದರೆ ” ಅಂಬಾ..” ಎಂದು ಕೂಗುತ್ತಿದ್ದ ಆ ಹಸು ನಾನು ಹೊರಗೆ ಬರುವ ವರೆಗೂ ಕಾಯುತ್ತಿತ್ತು.
ಲಕ್ಷ್ಮಿಗೂ ನನಗೂ ಅಷ್ಟು ಆತ್ಮೀಯತೆ ಬೆಳೆದಿತ್ತು. ಮುಂದೊಮ್ಮೆ ಲಕ್ಷ್ಮಿ ಗೆ ಕಾಲು ನೋವಾಯಿತು. ಆಗ ಮನೆ ವರೆಗೂ ಬರಲು ಸಾಧ್ಯವಾಗದೆ ನಾನು ನಿಲ್ಲುವ ಬಸ್ ನಿಲ್ದಾಣದ ಸಮೀಪಕ್ಕೆ ಬರುತ್ತಿದ್ದ ಅವಳು ಮುಂದೆ ಕೆಲವು ದಿನಗಳ ನಂತರ ಬರುವುದನ್ನೇ ನಿಲ್ಲಿಸಿ ಬಿಟ್ಟಳು. ಇತ್ತಿಚೆಗೆ ಮೂರು ವರ್ಷಗಳಿಂದ ನನ್ನ ಲಕ್ಷ್ಮಿ ನನ್ನಿಂದ ಮರೆಯಾಗಿದ್ದಾಳೆ.ಆದರೂ ಆ ಹಸುವಿನ ನೆನಪು ನನ್ನ ಮನದಿಂದ ಮರೆಯಾಗುವುದೇ ಇಲ್ಲ. ಕಾಣುವ ಪ್ರತಿಯೊಂದು ಹಸುವಿನಲ್ಲೂ ನನ್ನ ಲಕ್ಷ್ಮಿಯನ್ನು ಅರಸುತ್ತಿರುವೆ” ಎಂಬ ಅವರ ಮಾತಿನಲ್ಲಿ ಗೋವುಗಳ ಮೇಲೆ ಅವರಿಗಿರುವ ವಿಶೇಷ ಕಾಳಜಿ ವ್ಯಕ್ತವಾಗುತ್ತದೆ.

ಕೋಣಾರು ಮಂಜುನಾಥ ಹಾಗೂ ಲಕ್ಷ್ಮಿ ದಂಪತಿಗಳ ಪುತ್ರಿಯಾಗಿರುವ ಗೀತಾ ಯಾಜಿ ಭಟ್ಕಳದ ಗಜಾನನ ಯಾಜಿ ಇವರ ಪತ್ನಿ. ಶಿಕ್ಷಕರಾಗಿರುವ ಪತಿಯ ಪ್ರೋತ್ಸಾಹದಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗೀತಾ ೧೯೯೯ ರಲ್ಲಿ ತಮ್ಮ ತವರುಮನೆಯಲ್ಲಿ ನಡೆದ ಶ್ರೀಸಂಸ್ಥಾನದವರ ಭಿಕ್ಷಾಸೇವೆಯ ನಂತರ ಶ್ರೀ ಮಠಕ್ಕೆ ಹೆಚ್ಚು ನಿಕಟವಾದವರು.

“ಸಾವಿರದ ಸುರಭಿ ಯೋಜನೆಯಲ್ಲಿ ಪಾಲ್ಗೊಳ್ಳ ಬೇಕೆಂಬ ಅಭಿಲಾಷೆ ಮನದಲ್ಲಿ ಮೂಡಿದರೂ ಯಾಕೋ ಅಷ್ಟು ದೊಡ್ಡ ಕಾರ್ಯ ತನ್ನಿಂದ ಸಾಧ್ಯವೇ ಎಂಬ ಅನುಮಾನದಿಂದ ಸ್ವಲ್ಪ ಹಿಂಜರಿದೆ, ಆದರೆ ಮಾತೃತ್ವಮ್ ಯೋಜನೆ ಬಂದಾಗ ಶ್ರೀಗುರುಗಳೇ ಧೈರ್ಯ ತುಂಬಿದರು. ಬೇರ್ಕಡವು ಈಶ್ವರಿ ಅಕ್ಕ ಮಾರ್ಗದರ್ಶನ ನೀಡಿದರು. ಇದರ ಫಲವಾಗಿ ಮಾಸದ ಮಾತೆಯಾಗಿ ಸೇವೆ ಮಾಡಲಾರಂಭಿಸಿದ ಎರಡೇ ತಿಂಗಳಿನಲ್ಲಿ ಒಂದು ವರ್ಷದ ಗುರಿ ತಲುಪಿದೆ” ಎನ್ನುತ್ತಾರೆ ಇವರು.

ಹವ್ಯಕೇತರ ಸಮಾಜದವರಿಗೂ ದೇಶೀ ಹಸುಗಳ ಮಹತ್ವದ ಬಗ್ಗೆ ಮಾಹಿತಿ ನೀಡಿ ಅವರು ಸಹಾ ಈ ಕಾರ್ಯಕ್ಕೆ ಕೈ ಜೋಡಿಸುವಂತೆ ಮಾಡಿದ ಇವರು
‘ಇಷ್ಟು ವೇಗವಾಗಿ ಗುರಿ ಸೇರಲು ಕಾರಣ ಶ್ರೀಗುರುಗಳ ಅನುಗ್ರಹ ‘ ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ.

ತಾವು ಹೋದ ಕಡೆಗಳಲ್ಲೆಲ್ಲ ಉತ್ತಮ ಸ್ಪಂದನೆ ದೊರಕಿದೆ ಎಂದು ಸಂತಸದಿಂದ ನುಡಿಯುವ ಗೀತಾ ಅವರಿಗೆ ಸದಾ ಗೋಸೇವೆ, ಶ್ರೀಮಠದ ಸೇವೆಯಲ್ಲಿ ಮುಂದುವರಿಯ ಬೇಕೆಂಬ ಹಂಬಲವಿದೆ. ಗೋವುಗಳ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳ ಬೇಕೆಂಬ ಗುರಿ ಹೊಂದಿರುವ ಇವರಿಗೆ ಶ್ರೀಗುರುಗಳ ಕಾರುಣ್ಯದಿಂದ ಬದುಕಿನಲ್ಲಿ ಇನ್ನಷ್ಟು ಸೇವೆ ಮಾಡಲು ಸಾಧ್ಯ ಎಂಬ ಭರವಸೆಯಿದೆ.

Author Details


Srimukha

Leave a Reply

Your email address will not be published. Required fields are marked *