” ಗೋಸೇವೆಯಲ್ಲಿ ಸಮರ್ಪಣಾ ಭಾವದ ಸಾರ್ಥಕತೆ ” : ವಸುಂಧರಾ ಶರ್ಮಾ , ಬೆಂಗಳೂರು

ಮಾತೃತ್ವಮ್

 

” ಗೋವುಗಳಿಂದ ಮಾನವನ ಜೀವನಕ್ಕೆ ದೊರಕುವ ಪ್ರಯೋಜನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಬದುಕಿನಲ್ಲಿ ಮಾತೆಯ ನಂತರದ ಸ್ಥಾನ ಗೋಮಾತೆಗೆ ಸಲ್ಲಬೇಕು, ವ್ಯಾವಹಾರಿಕ ದೃಷ್ಟಿಯಿಂದ ಗೋಮಾತೆಯ ಸೇವೆ ಮಾಡಬಾರದು, ಅದರಲ್ಲಿ ಸಮರ್ಪಣಾ ಭಾವ ಮೂಡಬೇಕು, ಆಗಲೇ ಬದುಕಿನಲ್ಲಿ ಸಾರ್ಥಕ ಭಾವನೆ ಮೂಡಲು ಸಾಧ್ಯ ” ಎನ್ನುವವರು ಬೆಂಗಳೂರಿನ ಕೃಷ್ಣರಾಜ ವಲಯದ ವಸುಂಧರಾ ಶರ್ಮ.

ಸಿದ್ಧಾಪುರದ ಸಸಿಗುಳಿಯ ಗಣೇಶ ಹೆಗಡೆ, ಸಾವಿತ್ರಿ ಹೆಗಡೆಯವರ ಪುತ್ರಿಯಾದ ಇವರು ಮಾಲೂರು ಗೋಶಾಲೆಯ ನಿರ್ವಹಣಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅರವಿಂದ ಶರ್ಮಾ ಅವರ ಪತ್ನಿ.

ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವ ಈ ದಂಪತಿಗಳು ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದವರು.

” ಹಲವು ವರ್ಷಗಳ ಕಾಲ ಹೊಸನಗರದಲ್ಲಿ ಇದ್ದ ನಾವು ಮಗಳ ವಿದ್ಯಾಭ್ಯಾಸದ ಸಂದರ್ಭದಲ್ಲಿ ಬೆಂಗಳೂರಿಗೆ ಬಂದೆವು.‌ ಶ್ರೀಗುರುಗಳ ಅನುಗ್ರಹದಿಂದ ಬದುಕಿನಲ್ಲಿ ಬಂದ ಕಷ್ಟಗಳೆಲ್ಲ ಪರಿಹಾರವಾಗಿದೆ. ಮಗಳಿಗೂ ಸೂಕ್ತ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಯಿತು. ಸರಕಾರಿ ಉದ್ಯೋಗದಲ್ಲಿರುವ ಮಗಳು ವಾಣಿಶ್ರೀ ಸಹಾ ಗೋಸೇವೆಯಲ್ಲಿ ಆಸಕ್ತಿ ಹೊಂದಿದ್ದು ಪ್ರಸ್ತುತ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾಳೆ. ನಮ್ಮ ಬದುಕಿನ ಪ್ರೇರಕ ಶಕ್ತಿಯೇ ಶ್ರೀಗುರುಗಳು ” ಎಂದು ನುಡಿಯುವ ವಸುಂಧರಾ ಶರ್ಮಾ ಅವರು ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆ ಹಾಗೂ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನ ಸ್ವೀಕರಿಸುವ ಸೌಭಾಗ್ಯವನ್ನೂ ಪಡೆದವರು.

” ಗೋಮಾತೆಯ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆಯಿದೆ. ನಮ್ಮ ಸಂಸ್ಥಾನನದವರ ಭಾರತೀಯ ಗೋ ತಳಿಗಳ ಸಂರಕ್ಷಣಾ ಯೋಜನೆಯ ವಿಚಾರ ತಿಳಿದು ಇತರ ಸಮಾಜದವರು ಸಹಾ ಮಾತೃತ್ವಮ್ ಯೋಜನೆಗೆ ಸಹಕಾರ ನೀಡಿದ್ದಾರೆ. ನಮ್ಮ ಬಂಧುಗಳು, ಮಗಳ ಸಹಪಾಠಿಗಳು ಸಹಾ ಗೋಮಾತೆಯ ಸೇವೆಯಲ್ಲಿ ಕೈ ಜೋಡಿಸಿದ ಕಾರಣದಿಂದ ನಿರೀಕ್ಷೆಗಿಂತಲೂ ಬೇಗನೆ ಗುರಿ ತಲುಪುವಂತಾಯಿತು ” ಎನ್ನುವ ವಸುಂಧರಾ ಶರ್ಮಾ ಅವರ ಎಲ್ಲಾ ಕಾರ್ಯಗಳಿಗೂ ಪತಿ ಅರವಿಂದ ಶರ್ಮಾ ಅವರ ಸಂಪೂರ್ಣ ಸಹಕಾರವಿದೆ. ಗೋಸೇವೆ, ಶ್ರೀಮಠದ ಸೇವೆ ನಿತ್ಯ ನಿರಂತರ, ನಮ್ಮ ಬದುಕಿಗೆ ಬೆಳಕು ನೀಡಿದ ಗೋಮಾತೆಯ ಸೇವೆ ಸಾಧ್ಯವಾದಷ್ಟು ಕಾಲ ,ಸಾಧ್ಯವಾದ ರೀತಿಯಲ್ಲಿ ಮುಂದುವರಿಸಬೇಕು ಎಂಬುದೇ ಶ್ರೀಚರಣಗಳಲ್ಲಿ ಹಾಗೂ ಶ್ರೀರಾಮ ದೇವರಲ್ಲಿ ಪ್ರಾರ್ಥನೆ ‘ ಇದುವೇ ಜೀವನದ ಗುರಿ’ ಎನ್ನುತ್ತಾರೆ ವಸುಂಧರಾ ಶರ್ಮಾ.

Leave a Reply

Your email address will not be published. Required fields are marked *