ಈ ಬದುಕು ರಾಘವಾನುಗ್ರಹ ” : ಗಾಯತ್ರಿ ಎಸ್. ಗಿರಿ, ಸಾಗರ

ಮಾತೃತ್ವಮ್

 

” ಶ್ರೀರಾಮ , ಶ್ರೀಗುರುಗಳ ಮೇಲಿನ ಅಚಲ ನಂಬಿಕೆಯ ಪ್ರತೀಕವೇ ನಮ್ಮ ಈ ಬದುಕು. ಎಂತಹ ಕಡುಕಷ್ಟದ ಪರಿಸ್ಥಿತಿಯನ್ನಾದರೂ ಅವರೇ ನಿವಾರಿಸಿಕೊಡುತ್ತಾರೆ ಎಂಬ ಭರವಸೆ ಇದೆ. ನಮಗೆ ಶ್ರೀಗುರು ಸೇವೆ, ಗೋಸೇವೆ ಮುಖ್ಯ. ಈ ಸೇವೆ ಮಾಡುವ ಅವಕಾಶ ಒದಗಿಸಿಕೊಟ್ಟ ಅವರಿಗೆ ಸದಾ ಶರಣು ” ಎನ್ನುವವರು ಸಾಗರ ಮಂಡಲ ಪೂರ್ವ ವಲಯದ ಶೇಷಗಿರಿ ಅವರ ಪತ್ನಿ ಗಾಯತ್ರಿ ಎಸ್. ಗಿರಿ.

ಅರಲಗೋಡು ಸಮೀಪದ ಮರಗೋಡಿ ವಲಯ ಕಣಗಿಲೆಘಟ್ಟದ ದೇವಪ್ಪ , ದೇವಕಿ ಅಮ್ಮ ದಂಪತಿಗಳ ಪುತ್ರಿಯಾದ ಗಾಯತ್ರಿ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ಸಾವಿರದ ಸುರಭಿ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಮಾತೆಯರಿಗೆ, ಮಾಸದ ಮಾತೆಯರಿಗೆ ನನ್ನಿಂದಾದಷ್ಟು ಸಹಾಯ ಮಾಡುತ್ತಿದ್ದೆ. ನಮ್ಮ ಮಾತೃಪ್ರಧಾನೆಯಾಗಿರುವ ಮಂಗಳಗೌರಿಯವರು ನನ್ನಲ್ಲಿ ‘ ನೀನೇ ಮಾಸದ ಮಾತೆಯಾಗು ‘ ಎಂದರು. ಅವರ ಮಾತು ಪ್ರೇರಣೆಯಾಯಿತು. ಶ್ರೀಗುರುಗಳ ಕೃಪೆಯಿಂದ ಗುರಿ ತಲುಪುವೆ ಎಂಬ ಭರವಸೆಯೊಂದಿಗೆ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ ” ಎನ್ನುವ ಗಾಯತ್ರಿಯವರಿಗೆ ಒಂದಿಬ್ಬರು ಗೋಪ್ರೇಮಿಗಳ ಸಹಕಾರ ಬಿಟ್ಟರೆ ಉಳಿದಂತೆ ತಾವೇ ಪೂರ್ಣಪ್ರಮಾಣದ ದಾನಿಗಳಾಗಿ ಎರಡು ವರ್ಷಗಳ ಗುರಿ ತಲುಪಿದವರು.

ಅಡುಗೆ ವೃತ್ತಿಯನ್ನು ಆಶ್ರಯಿಸಿರುವ ಗಾಯತ್ರಿ ಎಸ್.ಗಿರಿ ಅವರ ಜೀವನದಲ್ಲಿ ನಡೆದ ಪವಾಡ ಸದೃಶ ಘಟನೆಯೊಂದು ಶ್ರೀರಾಮ,ಶ್ರೀ ಗುರುಗಳ ಮೇಲಿನ ನಂಬಿಕೆ ಶ್ರದ್ಧೆಯನ್ನು ಇಮ್ಮಡಿಗೊಳಿಸಿತು.

” ನಮ್ಮವರಿಗೆ ಕೆಲವು ವರ್ಷಗಳ ಹಿಂದೆ ತೀವ್ರವಾದ ಕಾಯಿಲೆಯೊಂದು ಕಾಣಿಸಿತು. ಆಪರೇಷನ್ ಮಾಡಲು ಅನಸ್ತೇಷಿಯಾ ಕೊಟ್ಟ ವೈದ್ಯರು ಕೊನೆಯ ಕ್ಷಣದಲ್ಲಿ ಆಪರೇಷನ್‌ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಕೈ ಚೆಲ್ಲಿ ಬಿಟ್ಟರು.‌ ಕೊನೆಗೆ ನಾವು ಶ್ರೀಗುರುಗಳ ಚರಣಕ್ಕೆ ಶರಣಾದೆವು.‌ ಶ್ರೀಗುರುಗಳ ಅನುಗ್ರಹದಿಂದ ಕೇರಳದ ಕಾಸರಗೋಡಿನ ವೈದ್ಯರೊಬ್ಬರ ಚಿಕಿತ್ಸೆ ಪಡೆಯುವಂತಾಯಿತು. ಈ ಬದುಕು ಶ್ರೀರಾಘವರ ಅನುಗ್ರಹ..! ಶ್ರೀಗುರುಗಳ, ಶ್ರೀರಾಮ ದೇವರ ಕೃಪೆಯಿಂದ ನಮ್ಮವರು ಸಂಪೂರ್ಣ ಗುಣಮುಖರಾದರು.‌ ಹಿಂದೆ ಚಿಕಿತ್ಸೆ ನೀಡಿದ ವೈದ್ಯರಿಗೂ ಅಚ್ಚರಿಯಾಗುವಂತೆ ಸಹಜವಾದ ಬದುಕು ನಿಭಾಯಿಸಲು ಸಾಧ್ಯವಾಯಿತು ” ಎನ್ನುವ ಗಾಯತ್ರಿಗೆ ಬದುಕು ನೀಡಿದ ಗುರುಗಳು ಬಾಳಿಗೆ ಬೆಳಕಾಗಿ ಕಾಯುವರು ಎಂಬ ಅಚಲ ನಂಬಿಕೆಯಿದೆ.

” ಗುರು,ಗೋವು,ರಾಮ ಎಂಬ ಹೆಸರುಗಳು ನಮ್ಮ ಉಸಿರಿನೊಂದಿಗೆ ಬೆರೆತಿವೆ. ಅವರಿಲ್ಲದೆ ನಾವಿಲ್ಲ. ಅವರಿತ್ತ ಜೀವನ ಇದು. ಸೇವೆ ಮಾಡುವ ಸೌಭಾಗ್ಯವನ್ನೂ ಅವರೇ ಒದಗಿಸಿಕೊಟ್ಟಿದ್ದಾರೆ ” ಎಂದು ಭಾವಪೂರ್ಣವಾಗಿ ನುಡಿಯುವ ಗಾಯತ್ರಿ ಎಸ್.ಗಿರಿ ಅವರಿಗೆ ಸಾಧ್ಯವಿರುವಷ್ಟು ಕಾಲ ಶ್ರೀ ಗುರುಗಳ,ಗೋಮಾತೆಯ,ಶ್ರೀ ರಾಮ ದೇವರ ಸೇವೆ ಮಾಡುವ ಹಂಬಲವಿದೆ.

 

Leave a Reply

Your email address will not be published. Required fields are marked *