ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಸಭೆಯು ದಿನಾಂಕ ೩೦ – ೦೭ – ೨೦೨೧ ,ಶುಕ್ರವಾರ ಎಡಕ್ಕಾನ ಘಟಕದ ಅಧ್ಯಕ್ಷರಾದ ಸುಬ್ಬಾ ಭಟ್ಟರ ‘ ಸುಖನಿಧಿ ‘ ನಿವಾಸದಲ್ಲಿ ಜರಗಿತು.
ಧ್ವಜಾರೋಹಣ , ಶಂಖನಾದ, ಗುರುವಂದನೆಗಳೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ವಹಿಸಿದರು.
ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಮಾತನಾಡಿ ಪ್ರಸ್ತುತ ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಜರಗುತ್ತಿರುವ ಶ್ರೀ ಸಂಸ್ಥಾನದವರ ವಿಶ್ವವಿದ್ಯಾ – ಚಾತುರ್ಮಾಸ್ಯದ ಸಂದರ್ಭದಲ್ಲಿ ಗುಂಪೆ ವಲಯ ಭಿಕ್ಷಾಸೇವೆ ೦೯ – ೦೯ – ೨೦೨೧( ಸೆಪ್ಟೆಂಬರ್ 09) ಗುರುವಾರ ನೆರವೇರಲಿರುವುದು ಎಂದು ತಿಳಿಸಿ ಕಾರ್ಯಕ್ರಮಗಳ ವಿವರಗಳನ್ನು ಹಾಗೂ ಶಿಷ್ಯಬಂಧುಗಳ ಭಾಗವಹಿಸುವಿಕೆಯ ಬಗ್ಗೆ ಮಾಹಿತಿಗಳನ್ನು ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ನಾಯ್ಕಾಪು ಅವರು ಗೋಕರ್ಣದ ಅಶೋಕೆಯಲ್ಲಿ ಕಾರ್ಯಾಚರಿಸುತ್ತಿರುವ ವಿ . ವಿ . ವಿ. ಯ ವಿವಿಧ ಗುರುಕುಲಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾಭ್ಯಾಸ ಹಾಗೂ ಇನ್ನಿತರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕಂಬಾರು ಶ್ರೀಮತಿ ಲಕ್ಷ್ಮೀದೇವಿ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಈ ಬಾರಿಯ ಹತ್ತನೇ ತರಗತಿ ಮತ್ತು ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಲಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಷ್ಠಾನದ ಅಧ್ಯಕ್ಷರಾದ ವೇದಮೂರ್ತಿ ಕಂಬಾರು ಬಾಲಕೃಷ್ಣ ಅಡಿಗಳು ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಅವರು ಪ್ರಶಂಸಾಪತ್ರವನ್ನು ವಾಚಿಸಿದರು.
ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲೂ A+ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರಾದ
೧. ಅಶ್ವಿನಿ ಎಡಕ್ಕಾನ
೨. ಸ್ಪೂರ್ತಿ ಲಕ್ಷ್ಮಿ ಗುಂಪೆ
೩. ಪ್ರಭೋದ ಬಾಯಾಡಿ
೪. ಹಿರಣ್ಮಯಿ ಮರುವಳ
೫. ಚಿನ್ಮಯಿ ಬೆಜಪ್ಪೆ
೬. ಶ್ರೀನಿಧಿ ಕಂಬಾರು ಮತ್ತು
+2 ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲೂ A+ ಗಳಿಸಿದ ವಿದ್ಯಾರ್ಥಿನಿ
ಅರ್ಪಿತ ಅಮ್ಮಂಕಲ್ಲು
ಇವರಿಗೆ ಪ್ರಶಂಸನಾ ಪತ್ರದೊಂದಿಗೆ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿನಿಯರು ಧನ್ಯತಾ ನುಡಿಗಳನ್ನರ್ಪಿಸಿದರು.
ನೆರಿಯ ಘಟಕಾಧ್ಯಕ್ಷರಾದ ನೆರಿಯ ಹೆಗಡೆ ಲಕ್ಷ್ಮೀ ನಾರಾಯಣ ಭಟ್ ಅವರು ವಿದ್ಯಾರ್ಥಿನಿಯರಿಗೆ ಶುಭಹಾರೈಸಿದರು.
ಪತ್ನಿ ಲಕ್ಷ್ಮೀದೇವಿ ಅವರ ಸ್ಮರಣಾರ್ಥ ಪ್ರತಿಷ್ಠಾನವೊಂದನ್ನು ಸ್ಥಾಪಿಸಿ, ಕಳೆದ ಹತ್ತು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದರೊಂದಿಗೆ ಇನ್ನಿತರ ಸಮಾಜೋನ್ಮುಖೀ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ವೇದಮೂರ್ತಿ ಕಂಬಾರು ಬಾಲಕೃಷ್ಣ ಭಟ್ ಅವರನ್ನು ಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಅವರು
” ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ” ಎಂದು ಹರಸಿದರು.
” ಶ್ರೀಗುರುಪೀಠದ ಮೇಲಿನ ಅಚಲ ನಂಬಿಕೆಯು ಭವ್ಯ ಬದುಕಿಗೆ ಸೋಪಾನ, ಪ್ರತಿಯೊಬ್ಬರೂ ನಿಸ್ವಾರ್ಥ ಮನೋಭಾವದಿಂದ ಶ್ರೀಗುರುಸೇವೆಯಲ್ಲಿ ತೊಡಗಿಸಿಕೊಳ್ಳಿ ” ಎಂದು ಸಭಾಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಪುರಸ್ಕಾರ ಭಾಜನರಾದ ವಿದ್ಯಾರ್ಥಿಗಳಿಗೆ ಶುಭಹಾರೈಸಿ , ಲಕ್ಷ್ಮೀದೇವಿ ಪ್ರತಿಷ್ಠಾನದ ವೇದಮೂರ್ತಿ ಕಂಬಾರು ಬಾಲಕೃಷ್ಣ ಭಟ್ ಇವರಿಗೆ ವಂದನಾರ್ಪಣೆ ಸಲ್ಲಿಸಿ ,ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಶಿಷ್ಯಬಂಧುಗಳಿಗೆ ಮತ್ತು ‘ ಸುಖನಿಧಿ ‘ ಮನೆಯವರಿಗೆ ಧನ್ಯವಾದ ಸಮರ್ಪಣೆ ಮಾಡಿದರು.
ಸಭೆಯಲ್ಲಿ ಗುಂಪೆ ವಲಯದ ಘಟಕಾಧ್ಯಕ್ಷರುಗಳು, ವಲಯದ ಪದಾಧಿಕಾರಿಗಳು ಹಾಗೂ ಶಿಷ್ಯಬಂಧುಗಳು ಉಪಸ್ಥಿತರಿದ್ದರು.
ರಾಮತಾರಕ ಜಪ, ಶಾಂತಿ ಮಂತ್ರ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.