ಹಸುವೊಂದು ಮನೆಯಲ್ಲಿದ್ದರೆ ಜೀವನವೇ ಹಸಿರು ” : ಲಕ್ಷ್ಮೀ ವಿ.ಜಿ. ಭಟ್

ಮಾತೃತ್ವಮ್

 

” ನಮಗೆ ಮಾತ್ರವಲ್ಲ, ನಮ್ಮ ಮಕ್ಕಳಿಗೂ ಹಸುಗಳೆಂದರೆ ತುಂಬಾ ಪ್ರೀತಿ. ಪೇಟೆಯ ಜೀವನದಲ್ಲೂ, ಉದ್ಯೋಗದ ನಡುವೆಯೂ ಮನೆಯಲ್ಲಿ ಎರಡು ದೇಶೀಯ ತಳಿಯ ಹಸುಗಳನ್ನು ಸಾಕುತ್ತಿರುವುದು ಮಕ್ಕಳ ಆಸಕ್ತಿಯಿಂದ ” ಎನ್ನುವವರು ಮೂಲತಃ ಕರ್ಕಿಯವರಾದ ಪ್ರಸ್ತುತ ಉಪ್ಪಿನಂಗಡಿ ಮಂಡಲ, ಕಬಕ ವಲಯದ ಮುರ ನಿವಾಸಿಗಳಾಗಿರುವ ಲಕ್ಷ್ಮೀ ವಿ.ಜಿ. ಭಟ್.

ಗೋಕರ್ಣದ ದತ್ತಾತ್ರೇಯ ಉಪಾಧ್ಯಾಯ ,ಗಂಗಾ ಉಪಾಧ್ಯಾಯ ದಂಪತಿಗಳ ಪುತ್ರಿಯಾದ ಲಕ್ಷ್ಮಿ ಅವರು ಬಹುಮುಖ ಪ್ರತಿಭೆಯ ಮಾಸದ ಮಾತೆ.
ಸಂಸ್ಕೃತ ಅಲಂಕಾರ ಶಾಸ್ತ್ರದಲ್ಲಿ ವಿದ್ವತ್ ಪದವಿ ಪಡೆದ ಇವರು ಪ್ರಸ್ತುತ ನಂತೂರು ಶ್ರೀ ಭಾರತೀ ವಿದ್ಯಾಲಯದಲ್ಲಿ ನಲ್ಲಿ ಸಂಸ್ಕೃತ ವಿಭಾಗದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

” ಗೀತಾ ಪ್ರಸಾದ್ ಅವರ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ.‌ ಎರಡು ವರ್ಷಗಳ ಗುರಿ ತಲುಪಲು ಅನೇಕ ಮಂದಿ ಗೋಪ್ರೇಮಿಗಳು ಸಹಕಾರ ನೀಡಿದ್ದಾರೆ.‌ ದೇಶೀಯ ಗೋವುಗಳ ಮಹತ್ವವನ್ನು ಸಮಾಜ ಅರ್ಥ ಮಾಡಿಕೊಳ್ಳುತ್ತಿದೆ.‌ ಮಾತೃತ್ವಮ್ ಯೋಜನೆಯ ಬಗ್ಗೆ ತಿಳಿಸಿದ ತಕ್ಷಣವೇ ಸಂತಸದಿಂದಲೇ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಎರಡು ವರ್ಷಗಳ ಗುರಿ ತಲುಪಲು ಇನ್ನೂ ಒಂದಿಷ್ಟು ಹಣದ ಅವಶ್ಯಕತೆ ಇತ್ತು. ಇದನ್ನರಿತ ನನ್ನ ಕಿರಿಯ ಮಗ ೭ ನೇ ತರಗತಿಯ ವಿದ್ಯಾರ್ಥಿ ತನ್ನ ಪ್ಯಾಕೆಟ್ ಮನಿ ಸಂಗ್ರಹದಿಂದ ಮಾತೃತ್ವಮ್ ನಿಧಿಗೆ ₹೬೦೦೦ ನೀಡಿದ ” ಎನ್ನುವ ಲಕ್ಷ್ಮಿ ವಿ.ಜಿ. ಭಟ್ ಅವರ ಮನೆಯಲ್ಲಿ ಗೋಮಾತೆಗೆ ವಿಶಿಷ್ಟ ಸ್ಥಾನವಿದೆ.

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪೀಠಾರೋಹಣದ ಬಳಿಕ ಶ್ರೀಮಠದ ನಿಕಟ ಸಂಪರ್ಕಕ್ಕೆ ಬಂದ ಇವರು ಶ್ರೀಗುರುಗಳ ದೇಶೀಯ ಗೋವುಗಳ ರಕ್ಷಣಾ ಅಭಿಯಾನದ ಬಗ್ಗೆ ತುಂಬಾ ಆಸಕ್ತಿ ಹೊಂದಿದರು. ಇವರ ಕಿರಿಯ ಮಗನಿಗಂತೂ ತಮ್ಮ ಮನೆಯಲ್ಲೇ ಹಸುಗಳನ್ನು ಸಾಕಬೇಕೆಂಬ ಅಭಿಲಾಷೆ ಮೂಡಿತು. ಮನೆಯಲ್ಲಿ ಯಾವುದೇ ತಿಂಡಿ ಮಾಡಿದರೂ ಗೋಮಾತೆಯರಿಗೆ ನೀಡದೆ ಇವರು ಸ್ವೀಕರಿಸುವವರಲ್ಲ. ಮಕ್ಕಳಿಬ್ಬರೂ ಪ್ರೀತಿಯಿಂದಲೇ ಗೋಮಾತೆಯ ಸೇವೆಗೆ ಕೈ ಜೋಡಿಸುತ್ತಾರೆ.

” ಪೇಟೆಯಲ್ಲಿ ಹಸು ಸಾಕಣೆ ಕಷ್ಟವಾಗಬಹುದು ಎಂದು ಭಾವಿಸಿದ್ದೆವು.‌ ಆದರೆ ಮಕ್ಕಳಿಬ್ಬರೂ ತುಂಬಾ ಇಷ್ಟದಿಂದ ಗೋಮಾತೆಯ ಆರೈಕೆ ಮಾಡುತ್ತಿದ್ದಾರೆ. ಹಸು ಸಾಕಣೆ ಆರಂಭಿಸಿದ ಮೇಲೆ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಗೋವುಗಳು ನಮ್ಮ ಮನೆಯ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ ” ಎನ್ನುವ ಇವರ ಮಾತುಗಳಲ್ಲಿಯೇ ಗೋಮಾತೆಯ ಮೇಲಿನ ಪ್ರೇಮ ವ್ಯಕ್ತವಾಗುತ್ತದೆ.

ಕಬಕ ವಲಯದ ಮಾತೃಪ್ರಧಾನೆಯೂ ಆಗಿರುವ ಇವರು ಭಜನಾ ತಂಡವೊಂದರ ಸದಸ್ಯೆಯಾಗಿದ್ದಾರೆ, ತಾಳಮದ್ದಳೆಗಳ ಅರ್ಥಗಾರಿಕೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡಿರುವ ಇವರು ತಮ್ಮ ವಲಯದ ಮಾತೆಯರನ್ನು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆಯನ್ನೂ ನೀಡುತ್ತಿದ್ದಾರೆ.

ವಿವೇಕಾನಂದ ಪದವಿ ಕಾಲೇಜ್ ನ ಪ್ರಿನ್ಸಿಪಾಲ್ ಆಗಿರುವ ವಿ.ಜಿ. ಭಟ್ ಹಾಗೂ ಇಬ್ಬರು ಮಕ್ಕಳ ಸಂಪೂರ್ಣ ಬೆಂಬಲದಿಂದ ಶ್ರೀಮಠದ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಲಕ್ಷ್ಮಿ ವಿ.ಜಿ. ಭಟ್ ಅವರಿಗೆ ಜೀವನದ ಸಂಕಷ್ಟದ ಸಮಯಗಳಲ್ಲಿ ಕೈ ಹಿಡಿದು ನಡೆಸಿದ್ದು ಶ್ರೀಗುರುಗಳ ಕೃಪೆ ಎಂಬ ನಂಬಿಕೆಯಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ಇನ್ನಷ್ಟು ಮಾತೆಯರಿಗೆ ಪ್ರೇರಣೆ ನೀಡಬೇಕು ಎಂಬ ಹಂಬಲ ಇವರದ್ದು.

 

Author Details


Srimukha

Leave a Reply

Your email address will not be published. Required fields are marked *