ವೇಣುವಾದಕ ಕೃಷ್ಣ ಶೌರಿ ದೊಡ್ಡಮಾಣಿ.

ಅಂಕುರ

ಕೊಳಲು ಕೇವಲ ಒಂದು ಬಿದಿರ ತುಂಡು. ಮತ್ತೇನೂ ಇಲ್ಲ ಎಂದು ಭಾವಿಸುವವರಿಗೆ ಅದು ಅಷ್ಟೇ. ಆದರೆ ಅದರ ಒಳಹೊರಗು ತಿಳಿದವರಿಗೆ ರಸಧಾರಾ ಸಮುದ್ರ, ಆನಂದ ಸಾಗರ, ಮಾಧುರ್ಯ ಸೂಸುವ ಸುಮ, ಸುಮಧುರು ಗಾಯನ ಸಾಧನ. ಅದನ್ನು ಅರಿತು ಅದರ ಒಳಹೊಕ್ಕು ಅಭ್ಯಾಸ ಮಾಡಿ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪ್ರತಿಭೆ ಕೃಷ್ಣಶೌರಿ ದೊಡ್ಡಮಾಣಿ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಎಡನಾಡು ಗ್ರಾಮದ ದೊಡ್ಡಮಾಣಿ ಕುಟುಂಬದ ಕುಡಿ ಕೃಷ್ಣಶೌರಿ ಎಂಬ ಬಾಲಕ. ಶ್ರೀಮತಿ ಆಶಾ ಮತ್ತು ಶ್ರೀ ಶ್ಯಾಮರಾಜ ದೊಡ್ಡಮಾಣಿ ದಂಪತಿಗಳ ಮಗನಾಗಿ 2004 ಅಗೋಸ್ತು 29ರಂದು ಜನಿಸಿದ ಕೃಷ್ಣಶೌರಿ ಇತ್ತೀಚೆಗೆ ಕೊಳಲು ವಾದನದಲ್ಲಿ ಯುವಪ್ರತಿಭೆಯಾಗಿ ಮೂಡಿಬಂದಿದ್ದಾರೆ.
ಎಳವೆಯಿಂದಲೇ ಸಂಗೀತ ವಿದುಷಿ ಶ್ರೀಮತಿ ಸಾವಿತ್ರಿ ಡಿ.ಕೆ ಭಟ್ಟ ಅವರಿಂದ ಸಂಗೀತದ ಬಾಲಪಾಠ ಹೇಳಿಸಿಕೊಂಡ ಕೃಷ್ಣಶೌರಿಯ ಮುಂದೆ ಶ್ರೀಮತಿ ದಿವ್ಯಾಮಹೇಶ್ ಅವರಲ್ಲಿ ಕರ್ನಾಟಕ ಸಂಗೀತಾಭ್ಯಾಸವನ್ನು ಮುಂದುವರಿಸಿದರು.
ಕೊಳಲು ವಾದನದಲ್ಲಿ ಆಸಕ್ತಿ ಹೊಂದಿದ ಕೃಷ್ಣಶೌರಿ ಕೆರೆಮನೆ ಮನಮೋಹನ ಆಚಾರ್ಯ ಇವರಲ್ಲಿ ಕೊಳಲು ವಾದನವನ್ನು ಅಭ್ಯಾಸ ಮಾಡಲು ತೊಡಗಿದ್ದು ಪ್ರತಿಭೆ ಮತ್ತಷ್ಟು ಅರಳಲು ಕಾರಣವಾಯಿತು. ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವ ಭಾರತೀ ಮಹಾಸ್ವಾಮಿಗಳವರ ಅನುಗ್ರಹ ಮತ್ತು ಮಾರ್ಗದರ್ಶನದಲ್ಲಿ ಕಾರ್ಯವೆಸಗುತ್ತಿರುವ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದ ಇವರು ಧರ್ಮಚಕ್ರ ಟ್ರಸ್ಟ್ ಶಾಲೆಗಳ ಮಕ್ಕಳಿಗಾಗಿ ರಾಜ್ಯ ಮಟ್ಟದಲ್ಲಿ ನಡೆಸಲಾದ ಸ್ಪರ್ಧೆಯಲ್ಲಿ ಕೊಳಲು ವಾದನ ವಿಭಾಗದಲ್ಲಿ ತನ್ನ ಶಾಲೆಯನ್ನು ಪ್ರತಿನಿಧಿಸಿ ಕೇಳುಗರ ಮನಸೂರೆಗೊಳ್ಳುವಂತೆ ಕೊಳಲು ನುಡಿಸಿದವರು. ಮಾತ್ರವಲ್ಲ ತನ್ನ ಶಾಲಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ ವಿದ್ವಾನ್ ಸದಾಶಿವ ಅನಂತಪುರ ಅವರ ಪಕ್ಕವಾದ್ಯದೊಂದಿಗೆ ಮಧುವಾಗಿ ಹಾಡುಗಳನ್ನು ಕೊಳಲಿನ ಮೂಲಕ ಮೂಡಿಸಿ ಜನಮನಗೆದ್ದವರು.
2017- 18ನೇ ಶೈಕ್ಷಣಿಕ ವರ್ಷದಲ್ಲಿ ಕುಂಬಳೆ ಉಪಜಿಲ್ಲೆಯ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಎಂಟನೇ ತರಗತಿಗೆ ಸೇರಿದ ಇವರು ಆ ವರ್ಷ ನಡೆದ ಏಶ್ಯಾ ಖಂಡದಲ್ಲೇ ಚರಿತ್ರೆ ಮಾಡಿದ ಕೇರಳ ಶಾಲಾ ಕಲೋತ್ಸವದಲ್ಲಿ ಭಾಗವಹಿಸಿ ಉಪಜಿಲ್ಲಾ, ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಕೊಳಲು ವಾದನದಲ್ಲಿ ಜಯಭೇರಿಯನ್ನು ಬಾರಿಸಿ ಪ್ರತಿಷ್ಠಿತ ರಾಜ್ಯ ಮಟ್ಟದ ಸ್ಪರ್ಧೆಗೆ ಎ ಗ್ರೇಡ್ನೊಂದಿಗೆ ಆಯ್ಕೆಯಾದವರು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ರೀತಿಯಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿ ಕೇಳುಗರ ಪ್ರಶಂಸೆಗೆ ಪಾತ್ರರಾದವರು.
ಕೊಳಲು ವಾದನವನ್ನು ತನ್ನ ದಿನಚರಿಯ ಅಂಗವಾಗಿ ಮಾಡಿಕೊಂಡಿರುವ ನಿಗರ್ವಿ, ಸೌಮ್ಯ ಸ್ವಭಾವದ ಮಿತಭಾಷಿ ಕೃಷ್ಣಶೌರಿ ಕುಂಬಳೆ ಸೀಮೆಯ ಪ್ರಸಿದ್ಧ ದೇವಸ್ಥಾನಗಳಲ್ಲೊಂದಾದ ಮುಜುಂಗಾವು ಶ್ರೀ ಪಾರ್ಥಸಾರಥಿ ಕೃಷ್ಣ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಹಿಮ್ಮೇಳ ಸವ್ಯಸಾಚಿ ಎನಿಸಿಕೊಂಡ ಶ್ರೀ ಉದಯ ಕಂಬಾರು ಅವರ ಮೃದಂಗ ವಾದನದ ಜೊತೆಗೆ ಕೊಳಲಿ ಮಾಧರ್ಯವನ್ನು ಕಲಾರಸಿಕರಿಗೆ ಉಣಬಡಿಸಿದವರು. ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶದ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಶ್ರೀಮತಿ ವಿಜಯಾ ಪ್ರಕಾಶ್ (ವಯಲಿನ್) ಶ್ರೀ ಅಕ್ಷರ ಬೆದ್ರಡಿ ( ಮೃದಂಗ) ಇವರ ಹಿಮ್ಮೇಳದೊಂದಿಗೆ ಕೊಳಲು ವಾದನ ಕಚೇರಿಯನ್ನು ನಡೆಸಿ ಜನಮೆಚ್ಚುಗೆಯನ್ನು ಗಳಿಸಿದ್ದಾರೆ.
ಕೊಳಲು ವಾದನವನ್ನು ತನ್ನ ವಿದ್ಯಾಭ್ಯಾಸದೊಂದಿಗೆ ಮುಂದುವರಿಸುತ್ತಿರುವ ಈ ಯುವ ಪ್ರತಿಭೆ ಕೊಳಲು ವಾದನದಲ್ಲಿ ಜೂನಿಯರ್ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ಶೇಕಡಾ 85 ಅಂಕ ಪಡೆದು ಉತ್ತಮ ಕಲಾವಿದನಾಗುವ ಎಲ್ಲ ಲಕ್ಷಣಗಳನ್ನು ತೋರ್ಪಡಿಸಿದ್ದಾರೆ. ಪ್ರಸ್ತುತ ಪ್ರಸಿದ್ಧ ಕೊಳಲು ವಾದಕರಾದ ಶ್ರೀ ಬಾಲಕೃಷ್ಣ ಕುಂಜಾರು ಇವರಲ್ಲಿ ಕೊಳಲು ವಾದನದ ಮಾಧ್ಯಮಿಕ ಹಂತವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಶೈಕ್ಷಣಿಕವಾಗಿಯೂ ಉತ್ತಮ ಸಾಧನೆಯನ್ನು ಮಾಡುತ್ತಾ ಮುಂದುವರಿಯುತ್ತಿರುವ ಪಿಯುಸಿ ವಿದ್ಯಾರ್ಥಿಯಾಗಿರುವ ಕೃಷ್ಣಶೌರಿಗೆ ಉತ್ತಮ ಭವಿಷ್ಯವು ದೊರೆಯುವಂತಾಗಲು ಶ್ರೀಗುರುದೇವತಾನುಗ್ರಹ ಇರಲೆಂದು ಹಾರೈಕೆಗಳು.

 

Author Details


Srimukha

Leave a Reply

Your email address will not be published. Required fields are marked *