” ನಮ್ಮ ಪುರಾಣಗ್ರಂಥಗಳಲ್ಲಿ ಗೋಮಾತೆಯ ಮಹಿಮೆಯನ್ನು ಸಾರಲಾಗಿದೆ. ಮಾನವನ ಜೀವನದುದ್ದಕ್ಕೂ ಗೋವಿನ ಸ್ಥಾನ ಹಿರಿದು. ನಮ್ಮ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೋವಿನ ಅಗತ್ಯತೆ ಇದೆ. ಸನಾತನ ಸಂಸ್ಕೃತಿಯಲ್ಲಿ ಗೋಗ್ರಾಸ ನೀಡುವ ವಿಚಾರ ಹಾಗೂ ಅದರ ಮಹತ್ವದ ಬಗ್ಗೆ ಬಣ್ಣಿಸಲಾಗಿದೆ. ಗೋವಿನ ಉತ್ಪನ್ನಗಳನ್ನು ಔಷಧಿಯಾಗಿಯೂ ಬಳಸಲಾಗುತ್ತಿದೆ. ಇತರ ಸಾಕುಪ್ರಾಣಿಗಳಿಗಿಂತ ಅದೆಷ್ಟೋ ಪಾಲು ಗೌರವಾನ್ವಿತ ಸ್ಥಾನ ಹೊಂದಿರುವ ಪೂಜನೀಯಳಾದ ಗೋಮಾತೆಯ ಸೇವೆ ಮಾಡುವುದು ಸಹಾ ಪುಣ್ಯಪ್ರದ ಎಂಬ ನಂಬಿಕೆ ನನ್ನದು ” ಎಂದವರು ಉಪ್ಪಿನಂಗಡಿ ಮಂಡಲ ಬೆಟ್ಟಂಪಾಡಿ ವಲಯದ ದರ್ಭೆ ಸುಬ್ರಹ್ಮಣ್ಯ ಭಟ್ಟರ ಪತ್ನಿ ಪಾರ್ವತಿ ದರ್ಭೆ.
ಕುಂಬಳೆ ಸಮೀಪದ ಹಿಳ್ಳೆಮನೆ ಎಚ್.ಎಸ್. ಮಹಾಲಿಂಗ ಭಟ್ ,ಗಂಗಮ್ಮ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ನಿರತರಾಗಿರುವ ಇವರು ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಜರಗಿದ ಶ್ರೀರಾಮಾಯಣ ಮಹಾಸತ್ರ , ವಿಶ್ವ ಗೋಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
” ಶ್ರೀಗುರುಗಳ ಆಶೀರ್ವಚನದ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ. ಈಗಾಗಲೆ ಒಂದು ಲಕ್ಷದ ಗುರಿ ತಲುಪಿದ್ದೇನೆ. ಕೆಲವೇ ಮಂದಿ ಆತ್ಮೀಯರ ಸಹಕಾರವಿದ್ದರೂ ಬಹುತೇಕ ಭಾಗವನ್ನು ಸ್ವಯಂ ಭರಿಸಿದ ಸಂತೃಪ್ತಿಯಿದೆ ” ಎನ್ನುವ ಇವರು ತಮ್ಮ ಮನೆಯಲ್ಲಿ ಇಪ್ಪತ್ತು ದೇಶೀಯ ಹಸುಗಳನ್ನು ಸಾಕುವ ಮೂಲಕ ತಮ್ಮ ಗೋಪ್ರೇಮವನ್ನು ಮೆರೆದಿದ್ದಾರೆ.
” ಮೊದಲೇ ಹಸುಗಳನ್ನು ಸಾಕುತ್ತಿದ್ದೆವು. ಶ್ರೀಗುರುಗಳ ಆಶೀರ್ವಚನದ ಪ್ರಭಾವದಿಂದ ಇತರ ತಳಿಗಳನ್ನು ಬಿಟ್ಟು ದೇಶೀಯ ತಳಿಗಳನ್ನು ಮಾತ್ರ ಸಾಕಲಾರಂಭಿಸಿದೆವು. ಈಗ ಇಪ್ಪತ್ತು ದೇಶೀಯ ಹಸುಗಳನ್ನು ಸಾಕುತ್ತಿದ್ದೇವೆ. ಮನೆಯವರ, ಮಕ್ಕಳ ಸಹಕಾರದಿಂದ ಇದು ಸಾಧ್ಯವಾಗಿದೆ. ನನ್ನ ಮೊಮ್ಮಕ್ಕಳಿಗೂ ಗೋವುಗಳೆಂದರೆ ತುಂಬ ಇಷ್ಟ. ರಜಾದಿನಗಳಲ್ಲಿ ಮನೆಗೆ ಬಂದಾಗಲೆಲ್ಲ ಗೋವುಗಳ ಒಡನಾಟದಲ್ಲೇ ಇರುತ್ತಾರೆ ” ಎಂದು ನುಡಿಯುವ ಪಾರ್ವತಿ ದರ್ಭೆಯವರ ಇಬ್ಬರು ಮೊಮ್ಮಕ್ಕಳು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳು.
‘ ಶ್ರೀಗುರುಗಳ ಅನುಗ್ರಹದಿಂದ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಗೋಮಾತೆಯ ಸೇವೆಯೂ ಆನಂದದಾಯಕವಾಗಿದೆ. ಮನೆಯವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದೇವೆ ‘ ಎನ್ನುವ ಇವರಿಗೆ ಇನ್ನಷ್ಟು ಕಾಲ ಶ್ರೀಮಠದ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅಭಿಲಾಷೆಯಿದೆ.
ಪ್ರಸನ್ನಾ ವಿ. ಚೆಕ್ಕೆಮನೆ