” ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ” ಪರಮೇಶ್ವರಿ ಭಟ್ ಮಾನಸವನ

ಮಾತೃತ್ವಮ್

 

 

” ಶ್ರೀಮಠದ ಸೇವೆಯಲ್ಲಿ ಅಪಾರ ಶ್ರದ್ದೆ ಇರುವ ಕುಟುಂಬ ನಮ್ಮದು. ಶ್ರೀಗುರುಗಳು ಮೂರು ಬಾರಿ ನಮ್ಮ ಮನೆಗೆ ಚಿತ್ತೈಸಿದ್ದಾರೆ. ಶ್ರೀಮಠದ ವಿವಿಧ ಯೋಜನೆಗಳಲ್ಲಿ ನಮ್ಮ ಮನೆಯ ಸದಸ್ಯರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮವರು ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಮಗಳು, ಸೊಸೆ ಇಬ್ಬರೂ ಮಾಸದ ಮಾತೆಯರಾಗಿದ್ದಾರೆ. ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ಎಂಬುದು ನಮ್ಮ ಜೀವನದ ಅನುಭವ ” ಎಂದವರು ಉಪ್ಪಿನಂಗಡಿ ಮಂಡಲ, ಬೆಳ್ಳಾರೆ ವಲಯದ ಪೆರ್ಲಂಪಾಡಿ ಸಮೀಪದ ಅಲೆಕ್ಕಾಡಿ ಮಾನಸವನದ ಕೇಶವ ಭಟ್ ಅವರ ಪತ್ನಿ ಪರಮೇಶ್ವರಿ ಭಟ್.

 

ಮುಜೂರು ನಿವಾಸಿಗಳಾಗಿರುವ ಸರವು ಕುಕ್ಕೆಮನೆ ಕೃಷ್ಣ ಭಟ್, ಗೌರಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ಹಸುಗಳ ಪೋಷಣೆಯ ಗುರಿ ತಲುಪಿದ ಮಾಸದಮಾತೆ.

 

” ಮಾಸದಮಾತೆಯಾಗಿ ಸೇವೆ ಮಾಡುವ ಅವಕಾಶ ಒದಗಿ ಬಂದಾಗ ಆರಂಭದಲ್ಲಿ ಗುರಿ ಸೇರುವ ಬಗ್ಗೆ ಸ್ವಲ್ಪ ಆತಂಕವಿತ್ತು. ನಮ್ಮ ಯಜಮಾನರು ಜ್ಯೌತಿಷಿಗಳಾದುದರಿಂದ ಅನೇಕ ಮಂದಿಯ ಸಂಪರ್ಕದ ಮೂಲಕ ಕೇವಲ ಐದೇ ತಿಂಗಳಲ್ಲಿ ಗುರಿ ತಲುಪಿದೆ. ಎರಡು ಹಸುಗಳ ಗುರಿ ತಲುಪಿದ ನಂತರ ನನ್ನ ಸೊಸೆ ಹಾಗೂ ಮಗಳನ್ನೂ ಮಾಸದ ಮಾತೆಯಾಗಲು ಪ್ರೇರೇಪಿಸಿದೆ. ಸಹೃದಯೀ ಗೋಪ್ರೇಮಿಗಳ ಸಹಕಾರದಿಂದ ನಾವೆಲ್ಲರೂ ಎರಡು ವರ್ಷದ ಗುರಿ ತಲುಪಿದ್ದೇವೆ ” ಎನ್ನುವ ಪರಮೇಶ್ವರಿ ಭಟ್ ಅವರಿಗೆ ಭಜನೆ ಹಾಡುವ ಹವ್ಯಾಸವಿದೆ. ಚೊಕ್ಕಾಡಿಯ ಶ್ರೀದೇವಿ ಭಜನಾ ತಂಡದ ಸದಸ್ಯೆಯೂ ಆಗಿರುವ ಇವರು ತಮ್ಮ ಮನೆಯಲ್ಲಿಯೂ ದೇಶೀಯ ಹಸುಗಳನ್ನು ಸಾಕುತ್ತಿದ್ದಾರೆ.

 

” ಮಗ ಮುರಳಿಕೃಷ್ಣನಿಗೆ ಆರೋಗ್ಯ ಸಮಸ್ಯೆ ಬಂದಾಗ ವೈದ್ಯರು ಶಸ್ತ್ರಕ್ರಿಯೆ ನಡೆಸಬೇಕೆಂದು ಸೂಚಿಸಿದರು. ಶಸ್ತ್ರಕ್ರಿಯೆಯ ತಯಾರಿ ನಡೆಯುತ್ತಿರುವ ಸಂದರ್ಭದಲ್ಲೇ ಶ್ರೀಗುರುಗಳು ಅನುಗ್ರಹಪೂರ್ವಕವಾಗಿ ಕಳುಹಿಸಿಕೊಟ್ಟ ಮಂತ್ರಾಕ್ಷತೆ ಲಭಿಸಿತು. ಶ್ರೀಗುರುಕೃಪೆಯ ಅನುಗ್ರಹ ಮಂತ್ರಾಕ್ಷತೆಯ ಪ್ರಭಾವದಿಂದ ಶಸ್ತ್ರಕ್ರಿಯೆ ನಡೆಸದೆ ಮಗನ ಅನಾರೋಗ್ಯ ನಿವಾರಣೆಯಾಯಿತು. ಶ್ರೀಗುರುಗಳ ಅನುಗ್ರಹದಿಂದ ಬದುಕು ಹಸನಾಗಿದೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಪರಮೇಶ್ವರಿ ಭಟ್.

 

ಎರಡು ಬಾರಿ ಶ್ರೀಗುರುಭಿಕ್ಷೆ ಹಾಗೂ ಒಂದು ಬಾರಿ ಪಾದಪೂಜೆಯನ್ನು ತಮ್ಮ ಮನೆಯಲ್ಲೇ ನಡೆಸುವ ಸೌಭಾಗ್ಯ ಇವರಿಗೆ ಒದಗಿಬಂದಿದೆ. ಅವಳಿ ಮೊಮ್ಮಕ್ಕಳ ಉಪನಯನವು ಶ್ರೀಗುರುಗಳ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿದ್ದು ಬದುಕಿನ ಅವಿಸ್ಮರಣೀಯ ಕ್ಷಣ ಎಂದು ಭಾವುಕರಾಗುತ್ತಾರೆ ಪರಮೇಶ್ವರಿ ಭಟ್.

 

” ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಅನೇಕ ಮಂದಿಯ ಪರಿಚಯವಾಗಿದೆ. ಮನೆಯೊಳಗೆ ಇದ್ದ ಮಾತೆಯರು ಶ್ರೀಮಠದ ವಿವಿಧ ಯೋಜನೆಗಳಿಂದಾಗಿ ಸಂಘಟಿತರಾಗುತ್ತಿದ್ದಾರೆ ಎಂಬುದು ಸಂತಸದ ವಿಚಾರ ” ಎನ್ನುವ ಪರಮೇಶ್ವರಿ ಭಟ್ ಅವರಿಗೆ ಶ್ರೀಮಠದ ಸೇವೆಯಲ್ಲಿ ನಿರಂತರವಾಗಿ ಮುಂದುವರಿಯುವ ಹಂಬಲವಿದೆ.

 

 

ಪರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *