” ಮಾತೃತ್ವದ ಸವಿ ಉಣಿಸುವ ಗೋಮಾತೆಯ ಸೇವೆಯಲ್ಲಿ ಸಂತೃಪ್ತಿಯಿದೆ ” : ಸೌಮ್ಯ ಹೆಬ್ಬಾರ್ ಕುಮಟಾ”

ಮಾತೃತ್ವಮ್

ಆರ್ಥಿಕ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ನಮ್ಮ ಸಮಾಜವು ವಿದೇಶೀ ತಳಿಯ ಗೋವುಗಳನ್ನು ಸಾಕುವ ಸಂದರ್ಭದಲ್ಲಿ ದೇಶೀಯ ಹಸುಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಿ ಅನೇಕ ಗೋಯಾತ್ರೆಗಳ ಮೂಲಕ ಜನಜಾಗೃತಿ ಮೂಡಿಸಿದ ಹಿರಿಮೆ ನಮ್ಮ ಗುರುಗಳದ್ದು.

ಅಮೃತದಂತಹ ಹಾಲು ನೀಡಿ ನಮ್ಮನ್ನು ಪೊರೆಯುವ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಶ್ರೀಸಂಸ್ಥಾನದವರ ಮಹತ್ವಾಕಾಂಕ್ಷೆಯ ಯೋಜನೆ ಮಾತೃತ್ವಮ್ ಮೂಲಕ ಗೋಸೇವೆ ಮಾಡುವ ವಿಶಿಷ್ಟ ಅವಕಾಶ ಮಾತೆಯರಿಗೆ ಒದಗಿಬಂದಿದೆ. ಮನೆಯಲ್ಲಿ ಹಸುಗಳನ್ನು ಸಾಕಲು ಅವಕಾಶವಿಲ್ಲದವರಿಗೂ ಈ ಯೋಜನೆಯ ಮೂಲಕ ಗೋಮಾತೆಯ ಸೇವೆ ಮಾಡುವ ಅವಕಾಶ ದೊರಕಿದೆ. ‌ಮಾತೆಯಂತೆ ಹಾಲಿತ್ತು ಸಲಹುವ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಂತಸವಿದೆ. ಈ ಸೇವೆಯಿಂದ ನನಗೆ ಸಂತೃಪ್ತಿಯೂ ದೊರಕಿದೆ ” ಎಂದವರು ಕುಮಟಾ ಮಂಡಲ ಕುಮಟಾ ವಲಯದ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಸೀತಾರಾಮ ಕೆ.ಆರ್ ಅವರ ಪತ್ನಿ ಸೌಮ್ಯ ಹೆಬ್ಬಾರ್.ಕುಮಟಾದ ಬಾಲಚಂದ್ರ ಹೆಬ್ಬಾರ್, ಲಲಿತಾ ಹೆಬ್ಬಾರ್ ದಂಪತಿಗಳ ಪುತ್ರಿಯಾದ ಸೌಮ್ಯ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ಎಳವೆಯಿಂದಲೇ ತಾಯ್ತಂದೆಯರ ಮೂಲಕ ಶ್ರೀಮಠದ ಸಂಪರ್ಕದಲ್ಲಿರುವ ಇವರು ಶ್ರೀಗುರುಗಳ ಅನುಗ್ರಹದ ವಿವಿಧ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ಹನ್ನೊಂದು ವರ್ಷದ ಮಗಳು ಅದ್ವೀಕಾ ಸಹಾ ತನ್ನ ತಾಯಿಯ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದಮಾತೆಯಾಗಿದ್ದಾಳೆ. ” ದೇಶೀಯ ಹಸುಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಿ , ನಮ್ಮ ಮಠದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದಾಗ ಅನೇಕ ಮಂದಿ ಗೋಸೇವೆಗೆ ಕೈ ಜೋಡಿಸಿದರು.‌ ಮಠದ ಎಲ್ಲಾ ಯೋಜನೆಗಳಿಗೂ ನಮ್ಮಿಂದ ಸಾಧ್ಯವಾದಷ್ಟು ಸಹಕಾರ ನೀಡಿದ್ದೇವೆ.‌ ಮುಷ್ಟಿ ಭಿಕ್ಷೆ, ಬಿಂದು – ಸಿಂಧು ಯೋಜನೆಗಳನ್ನು ಪ್ರತಿದಿನವೂ ಅನುಷ್ಠಾನಗೊಳಿಸುತ್ತಿದ್ದೇವೆ. ಗೋಮಾತೆಯ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಹಂಬಲವಿದೆ ” ಎನ್ನುವ ಸೌಮ್ಯ ಹೆಬ್ಬಾರ್ ಅವರಿಗೆ ಶ್ರೀಮಠದ ಸಮಾಜೋನ್ಮುಖ ಯೋಜನೆಗಳ ಮಾಹಿತಿಯನ್ನು ಇತರ ಸಮಾಜದವರಿಗೂ ಪಸರಿಸಬೇಕೆಂಬ ಅಭಿಲಾಷೆಯಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *