ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹತ್ವ ಪೂರ್ಣ ಕಲ್ಪನೆಯ ಸಾಕ್ಷಾತ್ಕಾರವೇ ಮಾತೃತ್ವಮ್ ಯೋಜನೆಯ ಮಾಸದ ಮಾತೆ. ಈಗಾಗಲೇ ಮಾಸದ ಮಾತೆಯರಾಗಿ ಸ್ವ ಇಚ್ಛೆಯಿಂದ ಮುಂದೆ ಬಂದು ತಮ್ಮ ಗುರಿ ತಲುಪಿದ ಮಾತೆಯರಲ್ಲಿ ಮಂಗಳೂರು ನಗರದ ಪ್ರಸ್ತುತ ಕೊಂಚಾಡಿಯಲ್ಲಿ ವಾಸವಿರುವ, ಮಾತೃತ್ವಮ್ ಮಂಗಳೂರು ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀ ಪ್ರಕಾಶ್ ಇಳಂತಿಲ ಮೊದಲಿಗರು.
ಲಕ್ಷ್ಮೀ ಪ್ರಕಾಶ್ ಅವರು ವಿಟ್ಲ ನೂಜಿ ನಿವಾಸಿಗಳಾದ ಕೆ. ರಾಮಚಂದ್ರ ಭಟ್ ಮತ್ತು ಸರಸ್ವತಿ ಭಟ್ ಅವರ ಪುತ್ರಿ. ಬಿ.ಕಾಂ.ಪದವೀಧರೆಯಾಗಿರುವ ಇವರು ಹೊಸದಿಗಂತ ಪತ್ರಿಕೆಯ ಸ್ಥಾನೀಯ ಸಂಪಾದಕರಾಗಿರುವ ಎಸ್. ವಿ. ಪ್ರಕಾಶ್ ಇಳಂತಿಲ ಅವರ ಪತ್ನಿ. ಇವರಿಗೆ ದಿವ್ಯಶ್ರೀ ಮತ್ತು ಧನ್ಯಶ್ರೀ ಮಕ್ಕಳಿದ್ದಾರೆ. ಗೃಹಿಣಿಯಾಗಿರುವ ಇವರ ಹವ್ಯಾಸಗಳು ಹಲವಾರು. ಹೊಲಿಗೆ, ಕಸೂತಿ ಇವುಗಳಲ್ಲಿ ಅತ್ಯಂತ ಕೌಶಲ ಹೊಂದಿರುವ ಲಕ್ಷ್ಮೀ ಪ್ರಕಾಶ್ ಅವರಿಗೆ ಸಂಗೀತವೂ ತುಂಬಾ ಪ್ರಿಯ.
ಮಾಣಿ ಮಠದಲ್ಲಿ ನಡೆದ ವಿಜಯ ಚಾತುರ್ಮಾಸ್ಯದ ಸಂದರ್ಭದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಅವರು ಮುಂದೆ ಶ್ರೀಮಠದ ವಿವಿಧ ಕಾರ್ಯಯೋಜನೆಯಲ್ಲಿ ಭಾಗಿಯಾದರು. ತಮ್ಮ ದೈನಂದಿನ ಹಲವಾರು ಕೆಲಸಗಳ ಒತ್ತಡದ ನಡುವೆಯೂ ಶ್ರೀ ಕಾರ್ಯಕರ್ತೆಯಾಗಿ ಮುಷ್ಠಿ ಭಿಕ್ಷಾ ಸಂಗ್ರಹ, ಬಿಂದು ಸಿಂಧು ಸಂಗ್ರಹಣೆಗಾಗಿ ಪ್ರತಿ ತಿಂಗಳು ಮನೆಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.
೨೦೧೯ರಲ್ಲಿ ಮಂಗಳೂರು ವಲಯದ ಚಾತುರ್ಮಾಸ್ಯ ಭಿಕ್ಷಾ ಕಾರ್ಯಕ್ರಮಕ್ಕೆ ಹೋದಾಗ ಶ್ರೀಸಂಸ್ಥಾನದವರ ಆಶೀರ್ವಚನದ ಪ್ರೇರಣೆ ಹಾಗೂ ಸ್ವತಃ ತನಗಿರುವ ಗೋ ಪ್ರೇಮದಿಂದಾಗಿ ಸ್ವ ಇಚ್ಛೆಯಿಂದ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಮಾಸದ ಮಾತೆಯಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿ ಅತೀ ಹೆಚ್ಚು ಜನರನ್ನು ಸಂಪರ್ಕಿಸಿ, ಅತಿ ಶೀಘ್ರದಲ್ಲೇ ಗುರಿ ತಲುಪಿದ ಹೆಗ್ಗಳಿಕೆ ಇವರದ್ದು. ಹಗಲಿರುಳು ಗೋ ಸೇವೆಯೊಂದನ್ನೇ ಮನದಲ್ಲಿರಿಸಿ ಅವಿಶ್ರಾಂತವಾಗಿ ಗೋಸೇವೆಗೆ ಮುಂದಾದ ಮಾಸದ ಮಾತೆ ಇವರು.
ತನಗೆ ಪರಿಚಯವಿರುವ ಪ್ರತಿಯೊಬ್ಬರ ಬಳಿಯೂ ಮಾತೃತ್ವಮ್ ಯೋಜನೆಯ ಬಗ್ಗೆ ವಿವರಿಸಿ, ಮಾನವನ ಬದುಕಿನಲ್ಲಿ ಗೋವಿಗಿರುವ ಮಹತ್ವದ ಸ್ಥಾನವನ್ನು ತಿಳಿಯ ಪಡಿಸಿ ಅವರನ್ನು ಗೋಸೇವೆಗಾಗಿ ಮನ ಒಲಿಸುವ ಅವರ ಕಾರ್ಯ ನಿಜಕ್ಕೂ ಪ್ರಶಂಸನೀಯ. ವ್ಯಾಟ್ಸಾಪ್ ಮೂಲಕ, ಪೋನ್ ಮೂಲಕ ಮಾತ್ರವಲ್ಲದೆ ತಾನು ಹೋದಲ್ಲೆಲ್ಲ ಮಾತೃತ್ವಮ್ ಯೋಜನೆಯನ್ನು ಜನ ಮಾನಸಕ್ಕೆ ತಲುಪಿಸುತ್ತಿದ್ದಾರೆ.
ಕಾಲ್ನಡಿಗೆಯಲ್ಲಿಯೇ ಹಲವಾರು ಮನೆಗಳನ್ನು ಸಂದರ್ಶಿಸಿದ ಅವರು ಗೋವಿನ ಬಗ್ಗೆ, ಕಾಮದುಘಾ ಯೋಜನೆಯ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ ಎನ್ನುತ್ತಾರೆ. ಹಳ್ಳಿಯಲ್ಲಿರುವಾಗ ಹಸುಗಳನ್ನು ಸಾಕುತ್ತಿದ್ದೆವು. ಹಟ್ಟಿ ತುಂಬ ಹಸುಗಳಿದ್ದವು. ಆದರೆ ಈಗ ಪೇಟೆ ಜೀವನದಲ್ಲಿ ಅನಿವಾರ್ಯತೆಯಲ್ಲಿ ಗೋ ಸಾಕಣೆ ಸಾಧ್ಯವಾಗುತ್ತಿಲ್ಲ. ಪೂಜ್ಯ ಶ್ರೀರಾಘವೇಶ್ವರಭಾರತೀ ಶ್ರೀಗಳ ಯೋಜನೆಯ ಬಗ್ಗೆ ಕೇಳಿ ತಿಳಿದಿದ್ದೇವೆ. ಗೋ ಸಂರಕ್ಷಣೆಗೆ ಅವರು ಕೈಗೊಂಡ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ” ಎಂದು ಹಲವರು ಹೇಳಿದರೆ ಗೋವು ಸಾಕುವವರೂ ಕೂಡ ಶ್ರೀಗುರುಗಳ ಈ ಮಹತ್ವ ಪೂರ್ಣ ಯೋಜನೆಗೆ ಕೈ ಜೋಡಿಸಿರುವುದು ಶುದ್ಧ ಭಾರತೀಯ ತಳಿಯ ಗೋವುಗಳ ಸಂರಕ್ಷಣೆ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆ ಮೂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಗೋವುಗಳ ಮೇಲೆ ವಿಶೇಷ ಮಮತೆ ಹೊಂದಿದ ಶ್ರೀಮತಿ ಲಕ್ಷ್ಮೀ ಪ್ರಕಾಶ್ ಅವರು ಈ ಹಿಂದೆ ಗೋ ಮಂಗಲ ಯಾತ್ರೆಯ ಸಂದರ್ಭದಲ್ಲಿ ತಮ್ಮದೊಂದು ತಂಡ ರಚಿಸಿ ಅದಕ್ಕಾಗಿ ಸುಮಾರು ಸಾವಿರಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸಿ ದೇಶೀಯ ಹಸುಗಳ ಬಗ್ಗೆ ಜನಮಾನಸದಲ್ಲಿ ಅರಿವು ಮೂಡಿಸಿದವರು.ಅಭಯಾಕ್ಷರ ಅಭಿಯಾನದಲ್ಲೂ ಸಹಿ ಸಂಗ್ರಹಕ್ಕಾಗಿ ಅಹರ್ನಿಶಿ ಸೇವೆ ಸಲ್ಲಿಸಿದವರು.
ಎರಡು ವರ್ಷಗಳ ಕಾಲ ಒಂದು ಗೋವಿನ ನಿರ್ವಹಣಾ ವೆಚ್ಚವನ್ನು ಭರಿಸಿ ಗುರಿ ಮುಟ್ಟಿದ ಮಾತೆಯಾಗಿರುವ ಇವರು ತಮ್ಮ ಮಗಳು ಪದವಿ ವಿದ್ಯಾರ್ಥಿನಿಯಾಗಿರುವ ದಿವ್ಯಶ್ರೀಯನ್ನು ಸಹಾ ಮಾಸದ ಮಾತೆಯಾಗಿ ಗೋ ಸೇವಾ ಕಾರ್ಯಕ್ಕೆ ನಿಯೋಜಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಸಮಾಜದಲ್ಲಿ ದೇಶೀಯ ಹಸುವಿನ ಬಗ್ಗೆ ಅರಿವು ಮೂಡಿಸಿ,ಮಹಿಳೆಯರ ಮನವೊಲಿಸಿ ಹೊಸ ಮಾಸದ ಮಾತೆಯರನ್ನಾಗಿಸಿ,ಅವರಿಗೂ ಗುರಿ ಮುಟ್ಟುವಲ್ಲಿ ಸಹಕಾರ ನೀಡುವ ಮನ ಹೊಂದಿರುವ ಗೋಪ್ರೇಮಿ ಇವರು. ತಾವು ವಾಸಿಸುತ್ತಿರುವ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ನ ಪ್ರತಿಯೊಂದು ಮನೆಗೂ ಭೇಟಿ ನೀಡಿ ಗೋಮಾತೆಯ ಬಗ್ಗೆ ಅರಿವು ಮೂಡಿಸಿ,ಗವ್ಯೋತ್ಪನ್ನಗಳ ಉಪಯೋಗದ ಮಹತ್ವವನ್ನು ಪರಿಚಯಿಸುವ ಗುರಿ ಹೊಂದಿರುವ ಲಕ್ಷ್ಮೀ ಪ್ರಕಾಶ್ ಅವರ ಮನವು ಸದಾ ಸಮಯವೂ ಗೋಮಾತೆಗಾಗಿ ಮಿಡಿಯುತ್ತಿದೆ.ಗೋ ಸಂರಕ್ಷಣೆಯಲ್ಲಿ ತಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಶ್ರೀಮಠದ ಯೋಜನೆಗೆ ನೀಡುವ ತುಡಿತ ಅವರಲ್ಲಿದೆ.
ಮಾಸದ ಮಾತೆಯಾಗಿ ಗುರಿ ತಲುಪುವುದರ ಹಿಂದಿರುವ ಶ್ರಮ,ಕರ್ತವ್ಯ ಪರತೆ, ನಿಷ್ಠೆ ಎಲ್ಲರಿಗೂ ಮಾದರಿಯಾಗಲಿ.
ಉತ್ತಮ ಕಾರ್ಯಕರ್ತೆಯಾಗಿರುವ ಲಕ್ಷ್ಮೀ ಪ್ರಕಾಶ್ ಅವ ಸೇವೆ ಸರ್ವರಿಗೂ ಅನುಸರಣೀಯ,ಅನುಕರಣೀಯ..ಅವರಿಗೆ ಇನ್ನಷ್ಟು ಸೇವಾವಕಾಶ ಶಕ್ತಿ ಸಹಿತವಾಗಿ ಒಂದಾಗಿ ಬರಲಿ.
ಹರೇರಾಮ|