ಗುರು ಕಾರುಣ್ಯದಿಂದ ಗುರಿ ಸೇರಿದೆ: ಎನ್ನುವ ಗೀತಾ ಪ್ರಸಾದ್ ಪೋಳ್ಯ

ಮಾತೃತ್ವಮ್

ಗೀತಾಪ್ರಸಾದ್ ಪೋಳ್ಯ ಇವರು ಗೋ ಸೇವೆಯಲ್ಲಿ ಆಸಕ್ತಿ ಹೊಂದಿ ಗುರು ಸೇವೆಯ ಶ್ರದ್ಧೆಯಿಂದ ಮಾಸದ ಮಾತೆಯಾಗಿ ಸೇರಿ ಗುರಿ ತಲುಪಿದ ಮಾಸದ ಮಾತೆ.

“ಪೆರಾಜೆ ಮಾಣಿ ಮಠದಲ್ಲಿ ನಡೆದ ಚಾತುರ್ಮಾಸ್ಯದ ಸಂದರ್ಭದಲ್ಲಿ ಮೊದಲ ಬಾರಿಗೆ ಶ್ರೀ ಸಂಸ್ಥಾನದವರ ಆಶೀರ್ವಚನ, ರಾಮಕಥೆಗಳನ್ನು ಕೇಳಿಸಿಕೊಂಡೆ. ನಂತರ ಆಧ್ಯಾತ್ಮಿಕವಾಗಿ ಬಹಳಷ್ಟು ಸೆಳೆತವುಂಟಾಯಿತು.ಇದು ಅನೇಕ ಮಾನಸಿಕ ಒತ್ತಡಗಳಿಂದ ಮುಕ್ತಿಯನ್ನು ನೀಡಿದಾಗ ಶ್ರೀ ಗುರುಗಳ ನಿರ್ದೇಶಾನುಸಾರವಾಗಿ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ” ಎನ್ನುವ ಗೀತಾ ಪೋಳ್ಯ ಅವರು ತಮ್ಮ ಮಾಸದ ಮಾತೆಯಾದ ಅನುಭವವನ್ನು ವಿವರಿಸುತ್ತಾರೆ.

ಪೋಳ್ಯದ ಶ್ಯಾಮ ಪ್ರಸಾದ್ ಅವರ ಪತ್ನಿಯಾದ ಗೀತಾ ಪ್ರಸಾದ್ ಅವರಿಗೆ ಈರ್ವರು ಪುತ್ರಿಯರು.ಈಗ ಪೋಳ್ಯ ವಲಯದ ಮುಷ್ಟಿ ಭಿಕ್ಷಾ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ‌.

“ಮಾಣಿಯಲ್ಲಿ ನಡೆದ ಚಾತುರ್ಮಾಸ್ಯದ ನಂತರ ಪೋಳ್ಯ ವಲಯದ ಘಟಕಾಧ್ಯಕ್ಷೆಯಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿತು.
ಅನೇಕ ಬಾರಿ ಶ್ರೀ ಮಠಕ್ಕೆ ಹೋಗಿ ಬಂದೆ‌.ಬದುಕಿನ ಏರಿಳಿತಗಳಲ್ಲಿ ಕೈ ಹಿಡಿದು ನಡೆಸಿದ್ದು ಶ್ರೀ ಗುರುಗಳ ಅನುಗ್ರಹ” ಎಂದು ಭಕ್ತಿ ಶ್ರದ್ಧೆಗಳಿಂದ ಸ್ಮರಿಸುವ ಅವರಿಗೆ ಈ ಬಾರಿಯ ಚಾತುರ್ಮಾಸ್ಯಕ್ಕೆ ಹೋಗಿ ಬಂದ ಮೇಲೆ ಮಾತೃತ್ವಮ್ ಯೋಜನೆಯ ಬಗ್ಗೆ ಆಸಕ್ತಿ ಮೂಡಿತು,ಶ್ರೀ ಗುರುಗಳ ಮಾತುಗಳ ಪ್ರಭಾವದಿಂದಾಗಿ ಗೋವಿನ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು ಎಂಬ ಭಾವನೆಯಿಂದ ಮಾಸದ ಮಾತೆಯಾಗಿ ಸೇವೆ ಗೈಯಲು ಮುಂದೆ ಬಂದರು.

ತಮ್ಮ ಆತ್ಮೀಯರ ಬಳಗದಲ್ಲಿಯೇ ಗೋವಿನ ಮಹತ್ವದ ಅರಿವು ಮೂಡಿಸಿ,ಅವರ ಮನವೊಲಿಸಿ ಬಹಳ ಶೀಘ್ರವಾಗಿ ಎರಡು ವರ್ಷಗಳ ಗುರಿ ಮುಟ್ಟಿದ ಮಾಸದ ಮಾತೆಯಾದ ಗೀತಾ ಪೋಳ್ಯ ಅವರಿಗೆ ಆರಂಭದಲ್ಲಿ ಗುರಿ ತಲುಪುವ ಬಗ್ಗೆ ಗೊಂದಲವುಂಟಾದರೂ ಗುರು ಕೃಪೆಯಿಂದ ಈ ಗುರಿ ತಲುಪಲು ಸಾಧ್ಯವಾಯಿತು ಎಂಬ ಭರವಸೆಯಿದೆ.
ಮಠದ ಸಂಪರ್ಕದಿಂದ ತುಸು ದೂರವಿರುವವರನ್ನು ಮಾತೃತ್ವಮ್ ಯೋಜನೆಯ ಮೂಲಕ ಶ್ರೀ ಮಠದ ಸಂಪರ್ಕ ಬೆಸೆಯುವಂತೆ ಮಾಡಿದ ನೆಮ್ಮದಿಯೂ ಇವರಿಗಿದೆ.

“ಮೊದಲ ದೇಣಿಗೆ ದೊರೆತ ದಿನದಿಂದ ಮನಸ್ಸಿನಲ್ಲಿ ಧೈರ್ಯ ಮೂಡಿತು‌.ಆ ಧೈರ್ಯ ಗುರು ದರ್ಶನ ಭಾಗ್ಯ ಹಾಗೂ ಶ್ರೀ ಗುರುಗಳ ಅನುಗ್ರಹದಿಂದ ದೊರಕಿದ್ದು. ಅದೇ ಧೈರ್ಯದೊಂದಿಗೆ ಮುಂದುವರಿದು ಗುರಿ ತಲುಪಿದೆ” ಎನ್ನುವ ಗೀತಾ ಈಗ ತಮ್ಮ ಮಗಳನ್ನು ಸಹಾ ಮಾಸದ ಮಾತೆಯಾಗಿಸಿದ್ದಾರೆ.

ಗೋವಿನ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆಯಿದೆ.ಹಳ್ಳಿಗಳಲ್ಲಿ ಹಸುಗಳನ್ನು ಸಾಕುವವರು ಸಹಾ ಶ್ರೀ ಗುರುಗಳ ಯೋಜನೆಗೆ ಕೈ ಜೋಡಿಸುತ್ತಾರೆ. ಪಟ್ಟಣಗಳಲ್ಲಿರುವವರಿಗೆ ಗೋ ಸಾಕಣೆಗೆ ಪೂರಕವಾದ ವಾತಾವರಣ ಇಲ್ಲದಿದ್ದರೂ ಹಸುಗಳ ವಿಚಾರದಲ್ಲಿ ವಿಶೇಷ ಕಾಳಜಿಯಿಂದ ಪ್ರೋತ್ಸಾಹ ನೀಡುತ್ತಾರೆ ಎಂಬುದು ಇವರ ಅನುಭವ.
ಅಭಯಾಕ್ಷರ ಅಭಿಯಾನದ ಸಂದರ್ಭದಲ್ಲಿ ಏಕಾಂಗಿಯಾಗಿಯೇ ಮನೆ ಮನೆ ತೆರಳಿ ಸಹಿ ಸಂಗ್ರಹಿಸಿದವರು ಇವರು.

ತಮ್ಮ ವ್ಯಾಪ್ತಿಗೂ ಮೀರಿ ತಮಗೆ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸಂಪರ್ಕಿಸಿ ಜನಮಾನಸದಲ್ಲಿ ಗೋವಿನ ಬಗ್ಗೆ ಅರಿವು ಮೂಡಿಸುವ ಉಜ್ವಲ ಗುರಿ ಹೊಂದಿದ ಗೀತಾ ಪೋಳ್ಯ ಅವರಿಗೆ ಮನೆಯವರ ಸಹಕಾರ ,ಬಂಧುಮಿತ್ರರ ಪ್ರೋತ್ಸಾಹ ಸದಾ ತನ್ನ ಬೆಂಬಲವಾಗಿದ್ದರೂ ಅದಕ್ಕೂ ಮೀರಿ ಶ್ರೀ ಸಂಸ್ಥಾನದವರ ಅನುಗ್ರಹದಿಂದ ಅಸಾಧ್ಯ ಎನಿಸಿದ ಕಾರ್ಯಗಳು ಕೂಡಾ ಬಹಳ ಬೇಗನೆ ಗುರಿ ತಲುಪುವುದು ಎಂಬ ನಂಬಿಕೆಯಿದೆ.

1 thought on “ಗುರು ಕಾರುಣ್ಯದಿಂದ ಗುರಿ ಸೇರಿದೆ: ಎನ್ನುವ ಗೀತಾ ಪ್ರಸಾದ್ ಪೋಳ್ಯ

Leave a Reply

Your email address will not be published. Required fields are marked *