“ಶ್ರೀಮಠದ ಸೇವೆಗೆ ಶ್ರೀಗುರುಗಳೇ ಪ್ರೇರಣೆ” : ಜೆಡ್ಡು ಸರಸ್ವತಿ ಭಟ್

ಮಾತೃತ್ವಮ್

 

ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ‘ಜೆಡ್ಡು ಅಕ್ಕ’ ಎಂದೇ ಎಲ್ಲರಿಂದಲೂ ಪ್ರೀತಿಯಿಂದ ಕರೆಯಲ್ಪಡುವ ಸರಸ್ವತಿ ಭಟ್ ಅವರು ಮೂಲತಃ ವಿಟ್ಲ ಸಮೀಪದ ಜೆಡ್ಡು ಮನೆತನದವರು. ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಜಯಪ್ರಕಾಶ ವಲಯ ನಿವಾಸಿಯಾಗಿದ್ದಾರೆ.
ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ತಮ್ಮ ಎಲ್ಲಾ ಕೆಲಸಗಳಿಗೂ ಪ್ರೇರಣೆ ಶ್ರೀಗುರುಗಳು ಎಂಬುದು ದೃಢವಾದ ನಂಬಿಕೆ.‌

ಪೆರುವಾಜೆಯ ಗೋವಿಂದ ಭಟ್, ಗೌರೀ ದಂಪತಿಗಳ ಪುತ್ರಿಯಾದ ಇವರು ಜೆಡ್ಡು ರಾಮಚಂದ್ರ ಭಟ್ಟರ ಪತ್ನಿ. ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸುವ ಮೂಲಕ ಗುರಿ ತಲುಪಿದ ಮಾಸದ ಮಾತೆಯಾದವರು.

“ಶ್ರೀಮಠದ ಸೇವೆ ನನ್ನಿಂದ ಸಾಧ್ಯವಾದಷ್ಟು ಮಾಡುತ್ತಿದ್ದೇನೆ, ಶ್ರೀಗುರುಗಳ ಆಶೀರ್ವಚನಗಳೇ ಬದುಕಿಗೆ ಪ್ರೇರಣೆ, ದಾರಿದೀಪ” ಎನ್ನುವ ಜೆಡ್ಡು ಅಕ್ಕ ಶ್ರೀಸಂಸ್ಥಾನದವರ ‘ಮರೆಯಲಾರದ ಯಾತ್ರಿಕರು ನಾವು’ ಎಂಬ ಮಂಕುತಿಮ್ಮನ ಕಗ್ಗದ ಪ್ರವಚನದಿಂದ ತುಂಬಾ ಪ್ರಭಾವಿತರಾದವರು.

ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದವರು. ಕೋಟಿ ನೀರಾಜನ ಕಾರ್ಯಕ್ರಮ, ಶಂಕರಪಂಚಮಿಯ ಸಂದರ್ಭಗಳಲ್ಲೆಲ್ಲ ವಿವಿಧ ವಿಭಾಗಗಳಲ್ಲಿ ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಸೇವೆ ಮಾಡಿದವರು. ೨೦೧೫ ರಿಂದ ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತಿರುವ ದೀಪಾರತಿಯ ವಲಯ ಸಂಯೋಜಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸಾವಿರದ ಸುರಭಿ ಯೋಜನೆಯ ಮೂಲಕ ನಾಲ್ಕು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿದ ಜೆಡ್ಡು ಸರಸ್ವತಿ ಅಕ್ಕ ಅಭಯಾಕ್ಷರ ಅಭಿಯಾನದಲ್ಲೂ ಹತ್ತು ಸಾವಿರಕ್ಕೂ ಹೆಚ್ಚು ಅಭಯಾಕ್ಷರ ಸಹಿ ಸಂಗ್ರಹ ಮಾಡಿದ್ದಾರೆ.

“೨೦೧೫ರ ನಂತರ ಬೆಂಗಳೂರಿನಲ್ಲಿ ನಡೆದ ಚಾತುರ್ಮಾಸ್ಯಗಳ ಎಲ್ಲಾ ದಿನಗಳಲ್ಲೂ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿದೆ, ಮುಖ್ಯವಾಗಿ ಭೋಜನ ವ್ಯವಸ್ಥೆ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದೇನೆ ಮಾತ್ರವಲ್ಲ ಅನ್ನನಿಧಿ ಸಂಗ್ರಹದ ಹೊಣೆಯನ್ನು ನಿರ್ವಹಿಸಿದ್ದೇನೆ” ಎನ್ನುವ ಇವರು ವಿರಾಟ್ ಪೂಜೆಯ ಸಂದರ್ಭದಲ್ಲಿ,ರಾಮೋತ್ಸವಗಳಲ್ಲಿ ಹಾಗೂ ಅಂಬಾಗಿರಿಯಲ್ಲಿ ಜರಗಿದ ನವರಾತ್ರಿ ಕಾರ್ಯಕ್ರಮಗಳಲ್ಲಿ ಶ್ರೀ ಭಾರತೀ ಶ್ರೀಭಾರತೀ ಪ್ರಕಾಶನದ ಪ್ರತಿನಿಧಿಯಾಗಿ ಶ್ರೀಮಠದ ಸಾಹಿತ್ಯ/ ಪುಸ್ತಕಗಳು, ಧ್ವನಿಮುದ್ರಿಕೆಗಳ ಮಳಿಗೆಯನ್ನು ನಿರ್ವಹಣೆ ಮಾಡಿದ್ದಾರೆ.

ಕೆಲವು ವರ್ಷಗಳಿಂದ ಜಯಪ್ರಕಾಶ ವಲಯದ ಮಾತೃಪ್ರಧಾನೆಯಾಗಿ ಕಾರ್ಯನಿರ್ವಹಿಸುವ ಇವರು ಸ್ವಯಂ ಇಚ್ಛೆಯಿಂದ ಮಾತೃತ್ವಮ್ ಯೋಜನೆಯ ಮಾಸದ ಮಾತೆಯಾಗಿ ಸೇರಿ ಗುರಿ ತಲುಪಿದ್ದಾರೆ.
“ದೇಶೀ ಗೋವಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ. ಶ್ರೀಮಠದ ಗೋ ಸಂರಕ್ಷಣಾ ಅಭಿಯಾನಕ್ಕೆ ಜನ ಕೈ ಜೋಡಿಸುತ್ತಿದ್ದಾರೆ. ಇದು ನಿಜಕ್ಕೂ ಖುಷಿ ಎನಿಸುತ್ತಿದೆ” ಎನ್ನುವ ಜೆಡ್ಡು ಅಕ್ಕ ಕೆಲವು ಸಮಯ ಧರ್ಮಭಾರತೀ ಪತ್ರಿಕೆಯ ಪ್ಯಾಕಿಂಗ್ ವಿಭಾಗದಲ್ಲೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಶ್ರೀಸಂಸ್ಥಾನದವರ ವೈಷ್ಣೋದೇವಿ ಸಂದರ್ಶನದ ಸಂದರ್ಭದಲ್ಲಿ ಜೊತೆಗೆ ಇದ್ದ ತಂಡದಲ್ಲಿ ಜೆಡ್ಡು ಅಕ್ಕ ಸಹಾ ಇದ್ದರು.
“ವೈಷ್ಣವದೇವ ದರ್ಶನಕ್ಕೆ ಪಾದಯಾತ್ರೆಯ ಮೂಲಕ ತೆರಳಿದ ಅನುಭವವನ್ನು ಎಂದೂ ಮರೆಯಲಾರದು ಎನ್ನುವ ಇವರು ಆ ದರ್ಶನ ಭಾಗ್ಯ ಬದುಕಿನ ಅವಿಸ್ಮರಣೀಯ ಘಟನೆ, ಪೂರ್ವ ಜನ್ಮದ ಸುಕೃತದಿಂದ ಬಂದೊದಗಿದ ಭಾಗ್ಯ” ಎಂದು ಸ್ಮರಿಸಿಕೊಳ್ಳುತ್ತಾರೆ.

“ಬೆಂಗಳೂರಿನ ತಮ್ಮ ಮನೆಯಲ್ಲಿ ಶ್ರೀಸಂಸ್ಥಾನದವರ ಭಿಕ್ಷಾಸೇವೆ ನಡೆಸುವ ಸೌಭಾಗ್ಯ ನಮಗೆ ಒದಗಿ ಬಂತು. ಶ್ರೀಗುರುಗಳು ನಮ್ಮ ಮನೆಯಲ್ಲಿ ಮೊಕ್ಕಾಂ ಮಾಡಿ ವಿಶೇಷ ಅನಗ್ರಹದ ಮೂಲಕ ಆಶೀರ್ವದಿಸಿದ್ದು ಬದುಕಿಗೆ ವಿಶೇಷ ಬದಲಾವಣೆಯನ್ನುಂಟು ಮಾಡಿದೆ. ಶ್ರೀಮಠದ ಭಕ್ತರಾದ ನಮಗೆ ದೊರಕಿದ ಪುಣ್ಯ ಇದು” ಎಂದು ಭಾವಪೂರ್ಣವಾಗಿ ನುಡಿಯುವ ಜೆಡ್ಡು ಸರಸ್ವತಿ ಅವರಿಗೆ ‘ ಸಾಧ್ಯವಿರುವಷ್ಟು ಕಾಲ, ಸಾಧ್ಯವಾಗುವ ರೀತಿಯಲ್ಲಿ ಶ್ರೀಮಠದ ಸೇವೆ ಮಾಡಲು ಶ್ರೀಸಂಸ್ಥಾನದವರ ಅನುಗ್ರಹ ದೊರಕಬಹುದು ಎಂಬ ದೃಢವಾದ ನಂಬಿಕೆಯಿದೆ.

Leave a Reply

Your email address will not be published. Required fields are marked *