” ಬದುಕಿನ ಅದೃಷ್ಟ ಎಂಬುದು ಶ್ರೀಗುರು ಸೇವೆಯ ಸೌಭಾಗ್ಯ ” : ನವ್ಯಶ್ರೀ ಹೊಸಕೊಪ್ಪ

ಮಾತೃತ್ವಮ್

 

” ಗುರು ಶಿಷ್ಯ ಸಂಬಂಧ ಎಂಬುದು ಆತ್ಮ ಸಂಬಂಧ, ನನ್ನ ಕಣ್ಣಿಗೆ ಕಾಣುವ ಶ್ರೀರಾಮ ದೇವರು ಎಂದರೆ ಶ್ರೀಗುರುಗಳೇ. ಒಮ್ಮೆಯೂ ನಾನು ಯಾವ ವಿಚಾರಕ್ಕೂ ಶ್ರೀಗುರುಗಳನ್ನು ಭೇಟಿಯಾಗಿ ನಿವೇದನೆ ಮಾಡಿಲ್ಲ, ಆದರೂ ಅನೇಕ ಸಂಕಷ್ಟಗಳಿಂದ ಪಾರಾಗಿದ್ದು ಶ್ರೀಗುರುಗಳ ಕೃಪಾ ಕಟಾಕ್ಷದಿಂದ ಎಂಬುದೇ ಸತ್ಯ. ಬದುಕಿನ ಅದೃಷ್ಟ ಎಂದರೆ ಅದು ಶ್ರೀಗುರು ಸೇವೆಯ ಸೌಭಾಗ್ಯ. ಇದಕ್ಕಿಂತ ಮಿಗಿಲಾಗಿ ನನ್ನ ಬದುಕಿನಲ್ಲಿ ಯಾವುದೂ ಇಲ್ಲ ” ಎಂಬ ಭಾವಪೂರ್ಣ ನುಡಿಗಳು ನವ್ಯಶ್ರೀ ಹೊಸಕೊಪ್ಪ ಅವರದ್ದು.

ಮನೆಘಟ್ಟದ ಸುಬ್ಬರಾವ್, ಪ್ರಭಾ ದಂಪತಿಗಳ ಪುತ್ರಿಯಾದ ಇವರು ಬೆಂಗಳೂರು ಉತ್ತರ ಮಂಡಲದ, ರಾಜ ಮಲ್ಲೇಶ್ವರ ವಲಯದ ನಿವಾಸಿಗಳಾಗಿರುವ ರಾಮಮೂರ್ತಿ ಹೊಸಕೊಪ್ಪ ಇವರ ಪತ್ನಿಯಾಗಿದ್ದಾರೆ.

” ಇಪ್ಪತ್ತೆರಡು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿ ಇದ್ದೇನೆ. ಮದುವೆಗೆ ಮೊದಲೇ ಅಪ್ಪನ ಜೊತೆ ಶ್ರೀಮಠಕ್ಕೆ ಬರುತ್ತಿದ್ದೆ.‌ ಶ್ರೀ ರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇನೆ. ಶ್ರೀಚರಣಗಳ ಮೇಲಿನ ಭಕ್ತಿ, ಶ್ರದ್ಧೆಯಿಂದ ಪ್ರತೀ ಬಾರಿ ಬರುವಾಗಲೂ ತುಳಸೀಹಾರಗಳನ್ನು ಕಟ್ಟಿ ತರುತ್ತೇನೆ. ಮನದ ಪ್ರಾರ್ಥನೆಯೂ ಶ್ರೀಗುರುಗಳಿಗೆ ತಲುಪಿದಂತಹ ಅಚ್ಚರಿಯ ಘಟನೆಗಳು ನನ್ನ ಬದುಕಿನಲ್ಲಿ ನಡೆದಿವೆ. ಏನಿದ್ದರೂ ಶ್ರೀಗುರುಗಳ ಕೃಪೆಯಿಂದ ಸಾಗುವ ಬದುಕು ಇದು. ಮದುವೆಯಾಗುವಾಗ ಒಂದೇ ಕೋರಿಕೆ ಇದ್ದಿದ್ದು ನನಗೆ. ಶ್ರೀಮಠದ ಸೇವೆ ಮಾಡಲು ಒಪ್ಪಿಗೆ ನೀಡುವಂತವರಾದರೆ ಸಾಕು ಎಂದು, ಆ ಕೋರಿಕೆಯೂ ನೆರವೇರಿದೆ. ನಮ್ಮವರ ಸಂಪೂರ್ಣ ಸಹಕಾರ ನನಗೆ ದೊರಕಿದೆ. ಇದು ಕೂಡ ಶ್ರೀಗುರುಗಳ ಅನುಗ್ರಹ ” ಎನ್ನುವ ನವ್ಯಶ್ರೀ ಅವರಿಗೆ ಸಂಗೀತ, ವೀಣೆ, ಪೈಂಟಿಂಗ್,ಕರಕುಶಲ ಕಲೆಗಳಲ್ಲಿ ತುಂಬಾ ಆಸಕ್ತಿಯಿದೆ.

ಬರವಣಿಗೆಯ ಹವ್ಯಾಸವನ್ನೂ ರೂಢಿಸಿಕೊಂಡಿರುವ ಇವರಿಗೆ ಕವನಗಳನ್ನು ಬರೆಯಲು ಪ್ರೇರಣೆ ನೀಡಿದ್ದು ಹೊಸ ನಗರದಲ್ಲಿ ಜರಗಿದ ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ನಡೆದ ಒಂದು ಘಟನೆ.

” ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಒಬ್ಬರು ಶ್ರೀಗುರುಗಳ ಬಗ್ಗೆ ಕವನ ಹೊಸೆದು ತುಂಬಾ ಚೆನ್ನಾಗಿ ಹಾಡಿದರು. ಆ ಹಾಡು ಕೇಳಿದಾಗ ತುಂಬಾ ಖುಷಿಯಾಯಿತು ಜೊತೆಗೆ ನನಗೂ ಈ ರೀತಿಯಲ್ಲಿ ಶ್ರೀಗುರುಗಳನ್ನು ಸ್ತುತಿಸಿ ಬರೆಯುವ ಭಾಗ್ಯ ದೊರಕಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅಲ್ಲಿಯೇ ಕಣ್ತುಂಬಿ, ಕೈ ಮುಗಿದು ಪ್ರಾರ್ಥಿಸಿದೆ. ನಿಜಕ್ಕೂ ಪವಾಡ ಎನ್ನುವುದು ಇದನ್ನೇ ಇರಬಹುದು. ‌ಅಂದಿನಿಂದಲೇ ನಾನು ಶ್ರೀಗುರು ಸ್ತುತಿಗಳನ್ನು ಬರೆಯಲಾರಂಭಿಸಿದೆ. ಶ್ರೀಗುರುಗಳ ಸ್ಮರಣೆ ಮಾತ್ರದಿಂದಲೇ ನಾನು ಈಗ ಶ್ರೀಗುರು ಸ್ತುತಿಗಳನ್ನು ಬಹಳ ಸುಲಭವಾಗಿ ಬರೆಯಬಲ್ಲೆ ” ಎನ್ನುವ ಇವರ ನುಡಿಗಳಲ್ಲಿ ಶ್ರೀಗುರುಗಳ ಅನುಗ್ರಹದಿಂದ ಅಸಾಧ್ಯ ಎಂದು ಭಾವಿಸಿದ ಯಾವುದೇ ಕಾರ್ಯವೂ ಹೂವೆತ್ತಿದಂತೆ ನೆರವೇರುತ್ತದೆ ಎಂಬ ನಂಬಿಕೆಯಿದೆ.

ಬೆಂಗಳೂರು ನಗರದಲ್ಲಿರುವ ತಮ್ಮ ಮನೆಯ ಆವರಣದಲ್ಲೇ ಹೂಗಿಡಗಳನ್ನು ಬೆಳೆಸಿದ ಇವರು ಪ್ರತಿದಿನವೂ ತಮ್ಮ ಗಿಡಗಳಲ್ಲಿ ಅರಳಿದ ಹೂವುಗಳನ್ನೇ ದೇವರಿಗೆ ಅರ್ಪಿಸಲು ಇಷ್ಟಪಡುತ್ತಾರೆ.

೨೦೦೫ ರಲ್ಲಿ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆದ ವಿವಿಧ ಮಂಡಲಗಳ ವಿದ್ಯಾರ್ಥಿಗಳಿಗಾಗಿ ನಡೆಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿದ ನವ್ಯಶ್ರೀ ಅವರು ‘ ಶಬರಿ ‘ ಯ ಏಕಪಾತ್ರಾಭಿನಯವನ್ನು ಪ್ರದರ್ಶಿಸಿ ಪ್ರಥಮ ಬಹುಮಾನವನ್ನು ಪಡೆದವರು . ಶ್ರೀ ಗುರುಗಳು ನಡೆಸಿಕೊಡುತ್ತಿದ್ದ ಶ್ರೀರಾಮ ಕಥಾ ಕಾರ್ಯಕ್ರಮದ ಕೊನೆಯಲ್ಲಿ ನಡೆಯುವ ರೂಪಕಗಳಲ್ಲಿ ಭಾಗವಹಿಸಿ ಪುರಾಣ ಪಾತ್ರಗಳಿಗೆ ಜೀವ ತುಂಬಿದವರು.

ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿರುವ ನವ್ಯಶ್ರೀ ಮಾಸದ ಮಾತೆಯಾಗಿ ಒಂದು ವರ್ಷದ ಗುರಿ ತಲುಪಿದ್ದಾರೆ. ಹನ್ನೊಂದು ಬಾರಿ ಶ್ರೀಗುರುಗಳ ಭಿಕ್ಷಾ ಸೇವೆಯನ್ನು ಮಾಡಿಸುವ ಸೌಭಾಗ್ಯ ಈ ದಂಪತಿಗಳಿಗೆ ಒದಗಿ ಬಂದಿದೆ.

” ಗೋಸೇವೆಗೆ ಅನೇಕ ಮಂದಿ ಕೈ ಜೋಡಿಸಿದ್ದಾರೆ, ತವರುಮನೆ ಹಾಗೂ ಪತಿಯ ಮನೆಯಲ್ಲಿ ಈಗಲೂ ಹಸುಗಳನ್ನು ಸಾಕುತ್ತಿದ್ದಾರೆ. ಗೋಮಾತೆ ಎಂದರೆ ನನ್ನ ಮಕ್ಕಳಿಗೂ ತುಂಬಾ ಪ್ರೀತಿ , ಬದುಕಿನಲ್ಲಿ ದೊರಕಿದ ಎಲ್ಲಾ ಸೌಭಾಗ್ಯವೂ ಶ್ರೀಗುರುಗಳ ಅನುಗ್ರಹದಿಂದ . ಸ್ಮರಣೆ ಮಾತ್ರದಿಂದಲೇ ಮನದ ಕ್ಲೇಶ ಪರಿಹರಿಸುವ ಶ್ರೀಗುರುಗಳ ಚರಣಾರವಿಂದಗಳನ್ನು ಸ್ಮರಿಸಿಯೇ ಯಾವುದೇ ಕಾರ್ಯಕ್ಕೆ ಕೈಯಿಕ್ಕುವವಳು ನಾನು.‌ ನಾನು ಕೇವಲ ನಿಮಿತ್ತ ಎಂಬುದೇ ಸತ್ಯ. ಗುರಿ ಮುಟ್ಟುವುದೂ, ಮುಟ್ಟಿಸುವುದೂ ಶ್ರೀಗುರು ಕೃಪೆಯಿಂದ ಮಾತ್ರ ಸಾಧ್ಯ ” ಎಂದು ನುಡಿಯುವ ಇವರ ಮೂವರು ಪುತ್ರಿಯರಾದ ಭಕ್ತಿ, ದ್ಯುತಿ ಹಾಗೂ ಸ್ತುತಿಗೂ ಶ್ರೀಗುರುಗಳ ಮೇಲೆ ಶ್ರದ್ಧಾಭಕ್ತಿಗಳಿವೆ.

ಶ್ರೀಗುರುಗಳ ನಿರ್ದೇಶಾನುಸಾರವಾಗಿ ಪಠಿಸುವ ಸ್ತೋತ್ರಗಳನ್ನು ಮಕ್ಕಳೇ ಸ್ವಯಂ ಇಚ್ಛೆಯಿಂದ ಕಲಿತಿದ್ದಾರೆ ಎನ್ನುವ ನವ್ಯಶ್ರೀ ಅವರಿಗೆ ಶ್ರೀಗುರುಸೇವೆಯಲ್ಲಿ ಸದಾ ನಿರತಳಾಗಿರಬೇಕೆಂಬುದೇ ದೇವರಲ್ಲಿ ಪ್ರತಿನಿತ್ಯದ ಪ್ರಾರ್ಥನೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *