ಬದುಕು ಅರ್ಥಪೂರ್ಣವಾಗುವುದು ಗೋಸೇವೆ, ಗುರುಸೇವೆಯ ಮೂಲಕವೇ ಎನ್ನುವ ನಂಬಿಕೆಯನ್ನು ತಮ್ಮ ನಿತ್ಯದ ಜೀವನದಲ್ಲಿ ಸಾಕಾರಗೊಳಿಸುತ್ತಿರುವವರು ಮುಳ್ಳೇರಿಯ ಮಂಡಲ ಸುಳ್ಯ ವಲಯದ ಶೈಲಜಾ ಸುಬ್ರಹ್ಮಣ್ಯ ಭಟ್. ಗೋಮಾತೆಯ ಸೇವೆ ಹಾಗೂ ಶ್ರೀಮಠದ ಸೇವೆ ಇವೆರಡೂ ಇವರ ಬದುಕಿನ ಅವಿಭಾಜ್ಯ ಅಂಗವಾಗಿದೆ.
ಈಂದುಗುಳಿ ಡಾ. ಗೋಪಾಲಕೃಷ್ಣ ಭಟ್ ಹಾಗೂ ಶಶಿಕಲಾ ದಂಪತಿಗಳ ಪುತ್ರಿಯಾದ ಶೈಲಜಾ ಮೂಲತಃ ಮುಳ್ಳೇರಿಯ ಮಂಡಲದ ಉಕ್ಕಿನಡ್ಕ ಸಮೀಪದ ದಂಬೆಮೂಲೆಯವರಾದ, ಪ್ರಸ್ತುತ ಸುಳ್ಯ ವಲಯದ ಕುದುಪಾಜೆಯಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಭಟ್ಟರ ಪತ್ನಿ. ತಾಯಿಯ ತವರುಮನೆಯಲ್ಲಿ ಅಜ್ಜ ಕೀರಿಕ್ಕಾಡು ವಿಷ್ಣು ಭಟ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಶೈಲಜಾ ಬಾಲ್ಯದಿಂದಲೇ ಜೀವನ ಮೌಲ್ಯಗಳನ್ನು ರೂಢಿಸಿಕೊಂಡವರು. ಹಸುಗಳ ಒಡನಾಟ, ಹಿರಿಯರ ಮಾರ್ಗದರ್ಶನ ಇವೆಲ್ಲವೂ ಅವರ ಮನಸ್ಸಿನಲ್ಲಿ ಉತ್ತಮ ಸಂಸ್ಕಾರದ ಬೀಜವನ್ನು ಬಿತ್ತಿದವು. ಮುಂದೆ ಇದುವೇ ಗುರುಸೇವೆ ಹಾಗೂ ಗೋಸೇವೆಗೆ ಪ್ರೇರಣೆಯಾಯಿತು.
ಮದುವೆಯ ನಂತರ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಲೇ ಶೈಲಜಾ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು . ೨೦೦೨ರಿಂದ ಶ್ರೀಮಠದ ಸಂಪರ್ಕದಲ್ಲಿರುವ ಅವರು ಶ್ರೀಮಠದ ಚಟುವಟಿಕೆಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರು.
ಹೊಸನಗರದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನಗಳಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡಿದ್ದ ಇವರು ಮಹಿಳಾ ಪರಿಷತ್ ನ ಅಧ್ಯಕ್ಷೆಯಾಗಿಯೂ, ಕಾರ್ಯದರ್ಶಿಯಾಗಿಯೂ ಸೇವೆ ಮಾಡಿದ್ದಾರೆ. ಪತಿ ಸುಬ್ರಹ್ಮಣ್ಯ ಭಟ್ ಸುಳ್ಯ ವಲಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಲಯ ಮಾತೃ ಪ್ರಧಾನೆಯಾಗಿಯೂ ಶೈಲಜಾ ಸೇವೆ ಸಲ್ಲಿಸಿದ್ದಾರೆ.
ಗೋಮಾತೆಯ ಸೇವೆಯು ಶೈಲಜಾ ಅವರ ಬದುಕಿನ ಭಾಗವಾಗಿದೆ. ತಮ್ಮ ಮನೆಯಲ್ಲಿಯೂ ಹಸುಗಳನ್ನು ಸಾಕುವ ಇವರು, ಗೋಸೇವೆಯನ್ನು ಕೇವಲ ಕರ್ತವ್ಯವೆಂದು ಭಾವಿಸದೆ ಗೋಮಾತೆಯ ಸೇವೆ ಎಂಬ ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಮನೆಯಲ್ಲಿ ಸುಮಾರು ಹತ್ತಿಪ್ಪತ್ತು ಹಸುಗಳನ್ನು ಸಾಕುತ್ತಿರುವ ಸಂದರ್ಭದಲ್ಲಿ ಗೋಸೇವೆಯ ಸುಖ-ದುಃಖಗಳನ್ನು ಹತ್ತಿರದಿಂದ ಬಲ್ಲಂತಹ ಇವರು ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಲು ಮುಂದೆ ಬಂದವರು.
” ಮನೆಯಲ್ಲಿ ಹಸುಗಳಿರುವ ಕಾರಣ ಹಸುಗಳನ್ನು ಸಾಕುವ ಕಷ್ಟ ಸುಖ ನಮಗೆ ಗೊತ್ತಿದೆ. ಹಾಗಾಗಿ ಮಾತೃತ್ವಮ್ ಯೋಜನೆಯ ಬಗ್ಗೆ ತಿಳಿದಾಗ ಸ್ವಯಂ ಪ್ರೇರಣೆಯಿಂದ ಮಾಸದಮಾತೆಯಾದೆ. ಅನೇಕ ಮಂದಿ ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಆತ್ಮೀಯರು, ಪರಿಚಿತರು, ನೆಂಟರು ಮಾತ್ರವಲ್ಲದೆ ಈ ಬಗ್ಗೆ ತಿಳಿದ ಅನ್ಯ ಸಮಾಜದ ವ್ಯಕ್ತಿಯೊಬ್ಬರು ತಮ್ಮ ತಿಂಗಳಿನ ಒಂದು ದಿನದ ಸಂಬಳವನ್ನು ಗೋಮಾತೆಯ ಸೇವೆಗೆ ಸ್ವಯಂ ಇಚ್ಛೆಯಿಂದ ನೀಡುತ್ತಿದ್ದರು ” ಎನ್ನುವ ಶೈಲಜಾ ತಾವು ಲಕ್ಷ ಬಾಗಿನಿಯಾದ ನಂತರ, ಪದವಿ ವಿದ್ಯಾರ್ಥಿನಿಯಾಗಿರುವ ಪುತ್ರಿ ಶ್ರೇಯಾ ಸರಸ್ವತಿಯನ್ನೂ ಮಾಸದ ಮಾತೆಯಾಗಿಸಿ, ಅವಳನ್ನೂ ಈ ಸೇವಾ ಪಥದಲ್ಲಿ ಹೆಜ್ಜೆ ಇಡಿಸಿದ್ದಾರೆ. ಪರಂಪರೆಯ ಮೂಲಕ ಸೇವಾಭಾವ ಹರಿಯಬೇಕು ಎನ್ನುವ ಅವರ ಆಶಯ, ಶ್ರೇಯಾ ಮೂಲಕ ಸಾಕಾರಗೊಂಡಿದೆ. ಒಂದು ಗೋವಿನ ಗುರಿ ತಲುಪಿದ ಶ್ರೇಯಾ ತಾಯಿ ತೋರಿದ ಗೋಮಾತೆಯ ಸೇವಾಪಥದಲ್ಲಿ ಮುಂದುವರಿಯುತ್ತಿದ್ದಾರೆ.
” ಗೋಮಾತೆಯ ಸೇವೆ ಮತ್ತು ಶ್ರೀಮಠದ ಸೇವೆ ಮಾಡಿದ ಸಂತೃಪ್ತಿಯೇ ಬದುಕಿನ ನೆಮ್ಮದಿಯ ಸೆಲೆ” ಎನ್ನುವ ಶೈಲಜಾ ಅವರಿಗೆ, ಈ ಎಲ್ಲಾ ಕಾರ್ಯಗಳಲ್ಲಿ ಪತಿ ಸುಬ್ರಹ್ಮಣ್ಯ ಭಟ್ ಹಾಗೂ ಅತ್ತೆಯವರ ಸಂಪೂರ್ಣ ಸಹಕಾರ ದೊರಕಿದೆ. ಮನೆಯವರ ಬೆಂಬಲದಿಂದ ಸೇವೆಯ ಪಥ ಸುಲಭ ಎನ್ನುವುದು ಇವರ ಅನುಭವದ ನುಡಿ.
ಭವಿಷ್ಯದಲ್ಲಿಯೂ ಇನ್ನಷ್ಟು ಗೋಸೇವೆ, ಗುರುಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಕಾಂಕ್ಷೆ ಹೊಂದಿರುವ ಶೈಲಜಾ ಅವರ ಗೋಮಾತೆಯ ಸೇವೆಗೆ ಗುರುಕೃಪೆಯೇ ದಾರಿದೀಪವಾಗಿದೆ.
ಪ್ರಸನ್ನಾ ವಿ. ಚೆಕ್ಕೆಮನೆ