ಆರೋಹಿ ಚತುರ್ಥ ಸಂಗೀತ ಸಮಾರೋಹ ಜ. 24, 25 ಕ್ಕೆ – ವಿ.ವಿ.ವಿ.ಯ ಸ್ಮರಾತ್ಮ ಗುರುಕುಲ ಪ್ರಾಚಾರ್ಯರಾದ ಡಾ| ಹರೀಶ ಹೆಗಡೆಯವರಿಗೆ ಆರೋಹಿ ಸಾಧಕ ಪ್ರಶಸ್ತಿ

ಸುದ್ದಿ

 

ನಿರಂತರ ಹಿಂದುಸ್ಥಾನಿ ಗಾಯನ ಮೂಲಕ ತರಬೇತಿಯ ತರಗತಿಗಳು, ರಾಜ್ಯ ಮಟ್ಟದ ಖ್ಯಾಲ್ ಗಾಯನ ಸ್ಪರ್ಧೆ, ಧ್ವನಿ ಸಂಸ್ಕಾರ ರಸಗ್ರಹಣ ಶಿಬಿರಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಶಿರಸಿಯನ್ನು ಕೇಂದ್ರವಾಗಿರಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಶಿರಸಿಯ ನೆಮ್ಮದಿ ಆವರಣದ ರಂಗಧಾಮದಲ್ಲಿ ಜ.24, ಶನಿವಾರ ಮಧ್ಯಾಹ್ನ 3 ರಿಂದ ರಾತ್ರಿ 9 ಹಾಗೂ ದಿನಾಂಕ ಜ.25, ಭಾನುವಾರ, ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಎರಡು ದಿನಗಳ ಕಾಲ “ಚತುರ್ಥ ಸಂಗೀತ ಸಮಾರೋಹ”ವನ್ನು ಹಮ್ಮಿಕೊಳ್ಳಲಾಗಿದೆ.

ಈ ವರ್ಷದ ಆರೋಹಿ ಸಾಧಕ ಪ್ರಶಸ್ತಿಗೆ ಭಾಜನರಾದ ಸ್ವರಾತ್ಮ ಗುರುಕುಲ,ವಿಷ್ಣುಗುಪ್ತ ವಿಶ್ವವಿದ್ಯಾಲಯ, ಅಶೋಕೆ, ಗೋಕರ್ಣ ಇದರ ಪ್ರಾಚಾರ್ಯರಾಗಿರುವ ಡಾ॥ ಹರೀಶ ಹೆಗಡೆ ಇವರನ್ನು ಶಾಸಕರುಗಳಾದ ಭೀಮಣ್ಣ ನಾಯ್ಕ, ಶಿವರಾಮ್ ಹೆಬ್ಬಾರ, ಉದ್ಯಮಿಗಳಾದ ಉಪೇಂದ್ರ ಪೈ, ಅನಂತಮೂರ್ತಿ ಹೆಗಡೆ, ಕೆ.ಬಿ. ಲೋಕೇಶ ಹೆಗಡೆ, ನಿವೃತ್ತ ಶಿಕ್ಷಕರಾದ ಎಸ್.ಎನ್. ಭಟ್ ಹಾಗೂ ಪತ್ರಕರ್ತರಾದ ಕೃಷ್ಣಮೂರ್ತಿ ಕೆರೆಗದ್ದೆ ಇವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು.

ಆಹ್ವಾನಿತ ಕಲಾವಿದರುಗಳಾಗಿ ಅಶ್ವಿನ್ ವಾಲ್ವಾಲ್ಕರ್ ಸಂತೂರ್,
ನಿರಂಜನ ಹೆಗಡೆ ಕೊಳಲು, ಗಣೇಶ ಗುಂಡ್ಕಲ್ ತಬಲಾದ ನಾದ- ನಿನಾದ-ಸಂಗೀತ ಜುಗಲ್ ಬಂದಿ ಕಾರ್ಯಕ್ರಮ ಜ.24ರಂದು ಸಂಜೆ 7ಕ್ಕೆ ಹಾಗೂ ಜ.25ರಂದು ಮಧ್ಯಾಹ್ನ 12 ಕ್ಕೆ ವಿದುಷಿ ದೀಪಾ ಶಶಾಂಕ ಹೆಗಡೆ ಅವರ ಗಾಯನ, ಸಂಜೆ 5 ಕ್ಕೆ ವಿನಾಯಕ ಸಾಗರ ಇವರಿಂದ ತಬಲಾ ಸೋಲೊ, ನಂತರದಲ್ಲಿ ಆರೋಹಿ ಸಾಧಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ, ಕೊನೆಯಲ್ಲಿ ಡಾ| ಹರೀಶ ಹೆಗಡೆಯವರ ಗಾಯನ ಕಾರ್ಯಕ್ರಮಗಳಿರುತ್ತದೆ. ಅಜಯ ವರ್ಗಾಸರ ಸಂವಾದಿನಿ ಹಾಗೂ ಗಣೇಶ ಗುಂಡ್ಕಲ್ ತಬಲಾ ಸಹಕಾರವಿದೆ.
ನಿರಂತರ ಹದಿನೆಂಟು ಗಂಟೆಗಳ ವಿದ್ಯಾರ್ಥಿಗಳ ಗಾಯನ – ವಾದನಗಳಿಗೆ ಸುಬ್ಬಣ್ಣ ಮಂಗಳೂರು, ಶಿವರಾಮ್ ಹೆಗಡೆ, ಚಿನ್ಮಯ ಕೆರೆಗದ್ದೆ ತಬಲಾ ಸಹಕಾರ ನೀಡಲಿದ್ದಾರೆ. ಪಾಲಕ ಬಳಗ, ಶಿರಸಿಯ ನೆಮ್ಮದಿ ಪರಿವಾರ, ಶ್ರೀಪ್ರಭಾ ಸ್ಟುಡಿಯೊ, ಉದಯ ಸೌಂಡ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ. ಸಂಗೀತಾಸಕ್ತ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು, ಯುವ ಕಲಾವಿದರನ್ನು ಹರಸುವಂತೆ ಸಂಸ್ಥೆಯ ಅಧ್ಯಕ್ಷರಾದ ಶಶಾಂಕ ಹೆಗಡೆ, ಕಾರ್ಯದರ್ಶಿಗಳಾದ ವಿದುಷಿ ದೀಪಾ ಶಶಾಂಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *