” ಬದುಕಿನ ನೋವುಗಳಿಗೆ ಮುಕ್ತಿ ದೊರಕಿದ್ದು ಶ್ರೀಮಠದ ಸೇವೆಯಲ್ಲಿ” : ಪ್ರೇಮಲತಾ ಉಪ್ಪಿನಂಗಡಿ

ಮಾತೃತ್ವಮ್

 

” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಇರುವ ಕಾರಣ ಶ್ರೀಗುರುಗಳ ಕಾರುಣ್ಯದ ಬಗ್ಗೆ ತಿಳಿದಿತ್ತು. ಬದುಕಿನ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಸಂಪೂರ್ಣ ಶರಣಾಗಿದ್ದು ಶ್ರೀಗುರು ಚರಣಕ್ಕೆ. ಶ್ರೀಗುರುಗಳ ಆಶೀರ್ವಚನಗಳೇ ಭರವಸೆಯ ಸಾಂತ್ವನದ ನುಡಿಗಳಾಗಿ ಕತ್ತಲ ಬಾಳಿಗೆ ಬೆಳಕಿನ ಹಾದಿಯನ್ನು ತೋರಿದಾಗ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡೆ..ಇದರಲ್ಲಿ ದೊರಕುವ ನೆಮ್ಮದಿ, ಭರವಸೆ ಬೇರೆಲ್ಲೂ ಸಿಗಲಾರದು ಎಂಬುದು ನನ್ನ ಅನುಭವದ ನುಡಿ ” ಎನ್ನುತ್ತಾರೆ ಉಪ್ಪಿನಂಗಡಿ ಮಂಡಲದ , ಉಪ್ಪಿನಂಗಡಿ ವಲಯದ ನೆಕ್ಕಿಲಾಡಿ ಘಟಕದ ಪ್ರೇಮಲತಾ ಕಾಂಚನ ಅವರು.

ಮಂಚಿಕಜೆಯ ವೆಂಕಟೇಶ್ವರ ಭಟ್, ಮಹಾಲಕ್ಷ್ಮಿ ದಂಪತಿಗಳ ಪುತ್ರಿಯಾದ ಇವರು ಕಾಂಚನ ಶಾಂತಾರಾಮ ಭಟ್ಟರ ಪತ್ನಿಯಾಗಿದ್ದಾರೆ.

ಶ್ರೀಗುರುಗಳ ಆಶೀರ್ವಾದದಿಂದ ಬದುಕಿನಲ್ಲಿ ಮಹತ್ವದ ಬದಲಾವಣೆಯಾಗಿದೆ, ಇಂದು ನಾವು ಹೀಗಿರಲು ಕಾರಣ ಶ್ರೀಗುರು ಕೃಪೆ ಎಂದು ನುಡಿಯುವ ಪ್ರೇಮಲತಾ ಅವರಿಗೆ ಹೊಸನಗರದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಅನುಭವವಿದೆ.
ಶ್ರೀಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಾಧ್ಯವಾದಷ್ಟು ಭಾಗವಹಿಸುವ ಇವರ ಮನೆಯಲ್ಲಿ ಕೆಲವು ವರ್ಷಗಳ ಹಿಂದೆ ಶ್ರೀಗುರುಗಳ ಭಿಕ್ಷಾಸೇವೆಯೂ ನಡೆದಿತ್ತು.

ಶ್ರೀಗುರುಗಳ ಮಾತುಗಳ ಪ್ರೇರಣೆಯಿಂದ ಹಾಗೂ ಗೋಮಾತೆಯ ಮೇಲಿನ ಶ್ರದ್ಧೆಯಿಂದ ಮಾತೃತ್ವಮ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಇವರು ಮಾಸದ ಮಾತೆಯಾಗಿ ಒಂದು ವರ್ಷದ ಗುರಿಯನ್ನು ತಲುಪಿದವರು.

ದೇಶೀಯ ಗೋವುಗಳ ರಕ್ಷಣೆಯ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆಯಿದೆ ಎನ್ನುವ ಇವರ ಗೋಸೇವಾ ಕೈಂಕರ್ಯಕ್ಕೆ ನೆಂಟರು, ಮಿತ್ರರು ಹಾಗೂ ಇತರ ಸಮಾಜದ ಬಂಧುಗಳು ಸಹಾ ಉತ್ಸಾಹದಿಂದ ಸ್ಪಂದಿಸಿದ್ದಾರೆ ಎಂದು ಹರ್ಷದಿಂದ ನುಡಿಯುವ ಇವರಿಗೆ ಗೋಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಹಂಬಲವಿದೆ.

” ಬದುಕಿನ ಸಿಹಿ ಕಹಿ ಅನುಭವಗಳಲ್ಲಿ ಶಕ್ತಿ ತುಂಬಿ ಮುನ್ನಡೆಸಿದ್ದು ಶ್ರೀಗುರುಗಳ ಅನುಗ್ರಹ, ಹಾಗಾಗಿಯೇ ಇನ್ನು ಮುಂದೆಯೂ ಶ್ರೀಗುರು ಸೇವೆ ಮಾಡುವ ಅವಕಾಶ, ಶಕ್ತಿ ನೀಡಬೇಕೆಂಬುದೇ ನಮ್ಮ ಮನದಾಳದ ಕೋರಿಕೆ, ಸಾಧ್ಯವಾದಷ್ಟು ಸಮಯ , ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ಶ್ರೀಮಠದ ಸೇವೆಯಲ್ಲಿ ಕೈ ಜೋಡಿಸಬೇಕೆಂಬುದೇ ನಿರಂತರ ಹಂಬಲ ಎನ್ನುವ ಪ್ರೇಮಲತಾ ಅವರ ಈ ಸೇವೆಗೆ ಪತಿ , ಮಗ,ಸೊಸೆ ಹಾಗೂ ಪುಟ್ಟ ಮೊಮ್ಮಗಳ ಸಹಕಾರವಿದೆ.

Author Details


Srimukha

Leave a Reply

Your email address will not be published. Required fields are marked *