ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ -೩೭

ಅರಿವು-ಹರಿವು
ಎಂದೆದೂ ಇರುವ ಅರಿವಿನ ಪರಂಜ್ಯೋತಿಯು ಮಾಯೆಯ ಆಟದಲ್ಲಿ ಮರೆತು  ಮರೆಯಾಗಿ ಕಗ್ಗತ್ತಲ ಕಹಿಯ ಅನುಭವದಲ್ಲಿ ಜೀವ ಶೋಷಗೊಳ್ಳುವುದು ಯುಗದಾದಿಯಿಂದಲೂ ನಡೆಯುತ್ತಿರುವುದೇ. ಅಂತೆಯೇ ಪರಮಾತ್ಮನೂ ರಸಾದಿಧಾತು, ತ್ರಿಗುಣಗಳೆಲ್ಲ  ಸಮತ್ವಗೊಳಿಸಿ ಶುದ್ಧಪ್ರಕೃತಿಯಲ್ಲಿ ಪ್ರಾಜ್ವಲ್ಯಮಾನ ಬೆಳಕಿನೊಟ್ಟಿಗೆ ತಂಪು ವೇದ್ಯವಾಗುವಂತೆ  ‘ಗುರು’ವೆಂಬ ಸ್ಥಾನದಿಂದ ತೋರ್ಪಟ್ಟು ಜೀವೋನ್ನತಿಯಗೈಯ್ಯುತ್ತಿರುವುದೂ  ಅಂದಿನಿಂದಲೇ. ಇದು ಹೀಗೆಯೇ ಲೋಗರಿಗೆ ಎಂದೆಂದೂ ಭರವಸೆಯ ಬಲವಾಗಿ ಅನುಮಾನಕ್ಕಾಸ್ಪದವಿಲ್ಲದೆ ಶ್ರದ್ಧೆಯ ಕೇಂದ್ರವಾಗಿ ಸಾಧನಾನುಸರಣೀಯವಾಗಲು ಸಕಾಲದಲ್ಲಿ ಸ್ಥಾಪಿತವಾದುದು ‘ಮಠ’ವೆಂಬ ವ್ಯವಸ್ಥೆ ಎಂಬುದನ್ನು ಈ ಹಿಂದೆಯೇ ನೋಡಿದೆವು. ಈ ವ್ಯವಸ್ಥೆಯಲ್ಲಿ ಅವಿಚ್ಛಿನ್ನಗುರುಪರಂಪರೆಯನ್ನುಳಿಸಿಕೊಂಡು ಸರಿಯಾದ ನಿಶ್ಚಿತ ಪದ್ಧತಿಯನ್ನು ಮುಂದುವರೆಸುತ್ತಿರುವುದು ‘ಶ್ರೀರಾಮಚಂದ್ರಾಪುರಮಠ’. ಇಲ್ಲಿ ಮೂವತ್ತನೆಯ ಪೀಠಾಧೀಶರಾಗಿ ಶ್ರೀಮನ್ನಾರಾಯಣನ ಪ್ರತಿರೂಪ ಪ್ರಕಟಗೊಂಡಿರುವುದು ‘ಶ್ರಿ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು’ – ೭ ರೂಪದಿಂದ.ಈ ಪೂಜ್ಯ ಸಾಕಾರಮೂರ್ತಿಯಿಂದ  ಸಮಾಜಕ್ಕೂ ಮತ್ತು  ಪರಂಪರೆಯ  ಮುಂದುವರಿಕೆಗೆ ಅರಿವು  ಹರಿದಿದ್ದನ್ನು ಮತ್ತು ಅಂತಹಾ ಅರಿವ ತುಂಬಿಕೊಂಡಿದ್ದ ಪ್ರಸ್ತುತ  ಪಾತ್ರವನ್ನು  ಈ ಸಂಚಿಕೆಯಲ್ಲಿ ನೋಡೋಣ.
        ಪೂಜ್ಯಶ್ರೀಗಳು ಪ್ರಸಿದ್ಧ ವಾಗ್ಮಿಗಳೂ ಶಾಸ್ತ್ರಸಂಪನ್ನರೂ ಪರಮದಯಾಶೀಲರೂ ಆಗಿದ್ದರು. ತಮ್ಮ ಗುರುಗಳಿಂದಲೇ ಶಾಸ್ತ್ರಾಧ್ಯಯನವನ್ನು ಮಾಡಿದ್ದ ಪೂಜ್ಯರು ವೇದಾಂತಶಾಸ್ತ್ರದ  ಮೇಲಿನ ಆಸಕ್ತಿಯಿಂದಾಗಿ ಅನೇಕಕಾಲ ಮಠದಲ್ಲಿಯೇ ಪ್ರಸಿದ್ಧ ವಿದ್ವಾಂಸರನ್ನಿಟ್ಟುಕೊಂಡು ಮೀಮಾಂಸ, ಯೋಗ ಮೊದಲಾದ ಅನೇಕಶಾಸ್ತ್ರಗಳಲ್ಲಿ ಅಪ್ರತಿಹತ ಪಾಂಡಿತ್ಯವನ್ನು ಗಳಿಸಿದ್ದರು. ಈ ಶ್ರೀಗಳೂ ಸಹ ತಮ್ಮ ಪೂರ್ವಾಚಾರ್ಯರಂತೆ ಕೊಡಗು, ಅನಂತಶಯನ, ಮೈಸೂರು, ಧಾರವಾಡ ಮೊದಲಾದ ಅನೇಕ ಪ್ರಾಂತಗಳಿಗೆ  ಭೇಟಿ ನೀಡಿದ್ದನ್ನು ಆಕಾಲದ ರಹದಾರಿಗಳು ದೃಢಪಡಿಸುತ್ತವೆ. ಪೂಜ್ಯರಿಗೂ ವ್ಯಾವಹಾರಿಕವಾಗಿ ಅನ್ಯಮಠಗಳಿಂದ ತೊಂದರೆ, ತಕರಾರುಗಳು ತಪ್ಪಿರಲಿಲ್ಲ. ಆದರೆ ಅವಿಚ್ಛಿನ್ನ ಗುರುಪರಂಪರೆಯಲ್ಲಿ ಅರಿವಿನ ಹರಿವಿಗಾಗಿಯೇ ಹುಟ್ಟಿದ್ದ ಚೇತನ, ಶಿಷ್ಯಭಕ್ತರಿಗೆ ಅರಿವಿನಾನಂದದ ಸಿಹಿಯನ್ನೇ ಉಣ್ಣಿಸಿ ತಮ್ಮ ಅಂತ್ಯಕಾಲದಲ್ಲಿ ಬಾಲವಟುವೋರ್ವರಿಗೆ  ಯೋಗಪಟ್ಟವನ್ನಿತ್ತು ಶ್ರೀಮಠದ ಆಡಳಿತವನ್ನವರಿಗೊಪ್ಪಿಸಿ ಬ್ರಹ್ಮಲೀನರಾದರು ಎಂಬಲ್ಲಿಗೆ ಅರಿವಿನ ಹರಿವಿಗೆ ಪಾತ್ರರಾದ ಪಾತ್ರಕ್ಕೆ ನಮಿಸುತ್ತಾ ಈ ಸಂಚಿಕೆಗೆ ವಿರಾಮವನ್ನಿಡುತ್ತಿದ್ದೇವೆ.

Author Details


Srimukha

Leave a Reply

Your email address will not be published. Required fields are marked *