ಅರಿವಿನ ಹರಿವಿನ ಕೊಂಡಿಗಳಾದ ಪಾತ್ರಗಳ ಪರಿಚಯ ಮಾಡಿಕೊಳ್ಳುತ್ತಾ ಶ್ರೀ ಗೌಡಪಾದರ ಜೀವನ ಘಟನಾವಳಿಗಳನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಈ ಪಾತ್ರದ ಆಳಕ್ಕಿಳಿದು ಅವಲೋಕಿಸಿ ಅರ್ಥೈಸಿಕೊಂಡರೆ ನಾವು ಪುನಃಪುನಃ ಎತ್ತಿ ಆಡಿದ, “ಎಲ್ಲಾ ಗುರುಗಳೂ ನಾರಾಯಣ ಸ್ವರೂಪವಷ್ಟೆ” ಎಂಬ ಮಾತುಗಳು ಎಲ್ಲರಿಗೂ ಸ್ವಯಂವೇದ್ಯವಾಗುತ್ತದಲ್ಲವೇ?.. ಹೌದು, ಅದ್ಹೇಗೆಂದು ಬಿಡಿಸಿ ಹೇಳುವುದಾದರೆ ನಾರಾಯಣನ ಪ್ರತಿರೂಪ ಆದಿಶೇಷನೇ ( ಪತಂಜಲಿಗಳು) ಗೌಡದೇಶದ ವ್ಯಕ್ತಿಯೊಬ್ಬನಿಗೆ ಅರಿವಿನ ಬೋಧನೆ ಮಾಡಿದ್ದು, ಆ ಅರಿವು ಅವರಲ್ಲಿ ಪೂರ್ಣವಾಗಿ ಸಾಕ್ಷಾತ್ಕಾರಗೊಂಡು, ವಿವಿಧ ಸನ್ನಿವೇಶಗಳಿಂದ ಹದಪಾಕವಾಗಿ ಪಕ್ವಗೊಂಡ ಶುದ್ಧಪ್ರಕೃತಿ ನಿರ್ಮಾಣವಾದಾಗ ನಿರಂಜನ ಅನಾದಿನಿಧನ ನಾರಾಯಣ ಸ್ವರೂಪವಷ್ಟೇ ಉಳಿದು ಪ್ರಕಟಗೊಂಡಿದ್ದಲ್ಲವೇ..ಮತ್ತು ಅದೇ ತನ್ನರಿವನ್ನು ಮತ್ತೊಂದು ಜೀವದೇಹಭೂಮಿಕೆಯಲ್ಲಿ ಹರಿಸಿ ಗುರುಪರಂಪರೆಯನ್ನು ಬೆಳೆಸಿ ಅವಿಚ್ಛಿನ್ನತೆಯನ್ನು ಸಾಧಿಸಿದ್ದು. ಹೌದು, ಗುರುಗೌಡಪಾದರು ತಮ್ಮ ‘ಅರಿವನ್ನು’ ಯಾವ ಮಹಾನ್ ಪುರುಷನಿಗೆ ಬೋಧಿಸಿ ಗುರುಪರಂಪರೆಯಲ್ಲೊಂದು ಪಾತ್ರವಾಗಿಸಿದರೆಂದು ಈ ಸಂಚಿಕೆಯಲ್ಲಿ ನೋಡೋಣ..
ಒಮ್ಮೆ ಕಾಶ್ಮೀರಕ್ಕೆ ಸೇರಿದ ಚಂದ್ರಶರ್ಮನೆಂಬ ಬ್ರಾಹ್ಮಣ ಯುವಕನೊಬ್ಬನು ಮಹಾಭಾಷ್ಯವನ್ನು ಕಲಿಯುವ ಆಸೆಯಿಂದ ಪ್ರೇರಿತನಾಗಿ ತನಗೆ ಅದನ್ನು ಬೋಧಿಸಬಲ್ಲ ಗುರುವನ್ನು ಅರಸುತ್ತ ಕಂಚಿ ಕ್ಷೇತ್ರಕ್ಕೆ ಪ್ರಯಾಣ ಮಾಡುತ್ತಾ, ಮಾರ್ಗದಲ್ಲಿ ಬ್ರಹ್ಮರಾಕ್ಷಸ ರೂಪದಲ್ಲಿದ್ದ ಗೌಡಪಾದರನ್ನು ನೋಡಿದನು. ಚಂದ್ರಶರ್ಮನ ರೂಪ, ವರ್ಚಸ್ಸು, ಪ್ರತಿಭೆಗಳಿಂದ ಆಕರ್ಷಿತರಾದ ಗೌಡಪಾದರು ಆತನೇ ತಮಗೆ ತಕ್ಕ ಶಿಷ್ಯನೆಂದು, ಗುರುಪರಂಪರೆಯನ್ನು ಹೀಗೆಯೇ ಮುಂದುವರೆಸಬಲ್ಲವನೆಂದು ಪ್ರತಿಯಾಗಿ ಆತನ ಮೂಲಕವೇ ತಮ್ಮ ಶಾಪವಿಮೋಚನೆಯಾಗಬಲ್ಲದೆಂದು ಗ್ರಹಿಸಿ, ಅವನಿಗೆ ಮುಂದಕ್ಕೆ ಪ್ರಯಾಣ ಮಾಡಲು ಅವಕಾಶ ಕೊಡದೇ ತಾವೇ ಮಹಾಭಾಷ್ಯವನ್ನು ಅವನಿಗೆ ಬೋಧಿಸಲು ಅನುವಾದರು. ಆ ಅರಣ್ಯದಲ್ಲಿ ಲೇಖನ ಸಾಮಗ್ರಿಗಳು ದುರ್ಲಭವಾದುದರಿಂದ ಚಂದ್ರಶರ್ಮನು ಗುರುವಿನ ಉಪದೇಶಗಳನ್ನೆಲ್ಲ ಅಲ್ಲಿ ವಿಪುಲವಾಗಿ ದೊರೆಯುತ್ತಿದ್ದ ಅಶ್ವತ್ಥದ ಎಲೆಗಳ ಮೇಲೆ ಒಂದು ಕಡ್ಡಿಯಿಂದ ತನ್ನ ತೊಡೆಯ ರಕ್ತದಲ್ಲಿ ಬರೆಯತೊಡಗಿದನು. ಹೀಗೆ ಒಂಭತ್ತು ದಿನಗಳು ರಾತ್ರಿ ಹಗಲು ಬರೆದ ನಂತರ ಮಹಾಭಾಷ್ಯವು ಮುಗಿಯಿತು. ಈ ರೀತಿ ಗೌಡಪಾದರಿಂದ ಉಪದೇಶ ಪಡೆದ ಚಂದ್ರಶರ್ಮನೇ ಮುಂದೆ ಗೋವಿಂದಪಾದರೆಂಬ ಹೆಸರಿನಿಂದ ಪ್ರಖ್ಯಾತಿಗೊಂಡರು.
ಬರೆದುಕೊಂಡ ಶ್ರಮದಿಂದಲೂ, ಮಾರ್ಗಾಯಾಸದಿಂದಲೂ, ನಿದ್ರಾಹಾರಗಳಿಲ್ಲದೇ, ಬಳಲಿದ್ದುದರಿಂದಲೂ ಆತನು ಒಂದೆಡೆ ವಿಶ್ರಮಿಸಿಕೊಳ್ಳಲು ಮಲಗಿದನು. ಆಗ ಹಸಿದು ಬಂದ ಒಂದು ಆಡು ಆ ಅಶ್ವತ್ಥ ಪತ್ರಗಳ ಸ್ವಲ್ಪ ಭಾಗವನ್ನು ತಿಂದುಬಿಟ್ಟಿತು. ಹೀಗೆ ನಷ್ಟವಾದ ಭಾಗಗಳನ್ನು ಸರಿಪಡಿಸಲು ಬೇರೊಂದು ಭಾಷ್ಯವನ್ನು ರಚಿಸಲಾಯಿತು. ಇದಕ್ಕೆ ” ಅಜಾಭಕ್ಷಿತಭಾಷ್ಯ”ವೆಂದು ಹೆಸರುಬಂದಿದೆ. ಕೆಲ ಸಮಯದ ನಂತರ ತನಗೆ ಮಹಾಭಾಷ್ಯವನ್ನು ಉಪದೇಶಿಸಿದ ಗೌಡಪಾದರು ಸಂನ್ಯಾಸವನ್ನು ಸ್ವೀಕರಿಸಿ ಬದರಿಕಾಶ್ರಮದಲ್ಲಿ ವಾಸಿಸುತ್ತಿರುವುದಾಗಿ ಅವನಿಗೆ ತಿಳಿಯಬಂದಿತು. ಚಂದ್ರಶರ್ಮನು ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ಗೌಡಪಾದರನ್ನು ಸಂದರ್ಶಿಸಿ ಅವರಿಂದ ಸಂನ್ಯಾಸವನ್ನು ಸ್ವೀಕರಿಸಿದನು. ಗೋವಿಂದಪಾದರೆಂದು ಅಭಿದಾನಗೊಂಡು ಗುರುಸನ್ನಿಧಿಯಲ್ಲಿಯೇ ಉಪಸ್ಥಿತರಾದರು. ಹೀಗಿರಲು ಒಮ್ಮೆ ಚಿರಂಜೀವಿಗಳಾದ ವೇದವ್ಯಾಸರು ಬದರಿಕಾಶ್ರಮಕ್ಕೆ ಬಂದರು. ಅವರು ಗೋವಿಂದಪಾದರಿಗೆ ಪರಮಾತ್ಮನೇ ಭೂಲೋಕದಲ್ಲಿ ಧರ್ಮಸಂಸ್ಥಾಪನೆಗಾಗಿ ಅವತರಿಸಿ ನಾನು (ವೇದವ್ಯಾಸರು) ರಚಿಸಿರುವ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆಯುವನು ಭೂಲೋಕದಲ್ಲಿನ ಎಲ್ಲ ಮಾನವರಂತೆ ಆತನಿಗೂ ನಿಮಿತ್ತಮಾತ್ರವಾಗಿಯಾದರೂ ಗುರೂಪದೇಶವಾಗಬೇಕಾಗುತ್ತದೆ ಆದುದರಿಂದ ನೀವು ಆತನು ಬರುವವರೆಗೂ ನರ್ಮದಾ ತೀರದಲ್ಲಿ ಕಾದಿದ್ದು ನರರೂಪಿ ಶಂಕರನಿಗೆ ಉಪದೇಶ ಮಾಡು ಎಂದು ಆದೇಶವಿತ್ತರು. ಮುಂದೆ ಇವರೇ ಶಂಕರಾಚಾರ್ಯರ ಗುರುಗಳಾದರು.
ಒಟ್ಟಿನಲ್ಲಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ತಮ್ಮ ಶಿಷ್ಯನಾದ ಗೌಡಪಾದರ ಶಾಪವಿಮೋಚನೆಗಾಗಿ ನಾರಾಯಣನ ಪ್ರತಿರೂಪವೇ ( ಪತಂಜಲಿಯೇ) ಮತ್ತೆ ಗೋವಿಂದಪಾದರ ರೂಪದಲ್ಲಿ ಅವತರಿಸಿ ತಾವು ಅವರಿಗೆ ಬೋಧಿಸಿದ ಮಹಾಭಾಷ್ಯವನ್ನೇ ಮತ್ತೆ ಅವರಿಂದ ಉಪದೇಶ ಪಡೆದುದು. ದಿವ್ಯತೆಯೂ ಭುವಿಯಲ್ಲಿ ಮೈವೆತ್ತು ಬರಬೇಕೆಂದರೆ ಮಹತ್ತರವಾಗಿ ಆಯ್ಕೆಯಾದ ಸಂಸ್ಕಾರವಂತ ಜೀವ ಮಾಧ್ಯಮವಾಗಿ ಬೇಕೇಬೇಕು. ದ್ವಂದಮಯ ಈ ಭೂಲೋಕದಲ್ಲಿ ಕಾಲಧರ್ಮಕ್ಕನುಸಾರವಾಗಿ ವಿವಿಧ ಸನ್ನಿವೇಶಗಳ ತಾಪದಿಂದ ಆ ಜೀವಪ್ರಕೃತಿ ಪರಿಶುದ್ಧಗೊಂಡು ತನ್ಮೂಲಕ ಅರಿವನ್ನು ಹರಿಸಿದುದೇ ಇಲ್ಲೆಲ್ಲಾ ಭಾಸವಾಗುತ್ತದೆ. ಅವಿಚ್ಛಿನ್ನ ಗುರುಪರಂಪರೆಯ ಪಾತ್ರಗಳ ಜೀವನಘಟನಾವಳಿಗಳ ಏರಿಳಿತಗಳೇನೇ ಇದ್ದರೂ, ಸಾರವಾಗಿ ಉಳಿಯುವ ಸಮತ್ವವನ್ನು ನಾವು ಹೊಂದಬೇಕೆನ್ನುವುದೇ ನಮ್ಮ ಆಶಯ ಎನ್ನುತ್ತಾ ಗುರುಪರಂಪರೆಗೆ, ನಮ್ಮ ಬೆಳಗಿಸುವ ಬೆಳಕಿಗೆ ವಂದಿಸೋಣ..