ಯಕ್ಷಗಾನದ ಬಾಲ ಪ್ರತಿಭೆ ಸಾನಿಕಾ

ಅಂಕುರ

ವೇದಿಕೆಯ ಮೇಲೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ, ಎದುರಿಗೆ ಕುಳಿತ ಸಭಿಕರನ್ನು ಬೆರಗುಗೊಳಿಸುವ ಈ ಪ್ರತಿಭೆಯ ಹೆಸರು ಸಾನಿಕಾ ಬಿ.ಎಸ್.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಭಾಸಿಯ ಶ್ರೀಕಾಂತ್ ಮತ್ತು ವೀಣಾ ದಂಪತಿಯ ಪುತ್ರಿ ಸಾನಿಕಾ ಕಿರಿಯ ವಯಸ್ಸಿನಲ್ಲೇ ಕೇವಲ ಯಕ್ಷಗಾನವನ್ನಲ್ಲದೇ ಹರಿವಾಣ ನೃತ್ಯ, ಕೊಡದ ಮೇಲಿನ ನೃತ್ಯ, ಭರತನಾಟ್ಯದಲ್ಲಿಯೂ ಗಮನ ಸೆಳೆದಿದ್ದಾಳೆ.

6 ನೇ ತರಗತಿಯಲ್ಲಿರುವಾಗಲೇ ನಿಟ್ಟೂರಿನ ಡಿ.ಎಸ್.ಸುಬ್ರಹ್ಮಣ್ಯ ಭಟ್ ಅವರಲ್ಲಿ ಯಕ್ಷಗಾನ ಕಲಿಯಲು ಪ್ರಾರಂಭಿಸಿದ ಸಾನಿಕಾ, ಹಲವಾರು ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾಳೆ. ಯಕ್ಷಗಾನದ ಜೊತೆ ಕಳೆದ ಎರಡು ವರ್ಷಗಳಿಂದ‌ ಕಾವ್ಯಾ ಹೆಬ್ಬುರುಳಿ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಯುತ್ತಿದ್ದಾಳೆ.

ಸದ್ಯ ಸಂಪೇಕಟ್ಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈಕೆ, “ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಒಲವಿತ್ತು. ಮನೆಯವರು ಕೂಡಾ ಪ್ರೋತ್ಸಾಹ ನೀಡಿ, ಗುರು ಡಿ.ಎಸ್.ಸುಬ್ರಹ್ಮಣ್ಯ ಭಟ್ ಅವರಲ್ಲಿ ತರಬೇತಿಗೆ ಕಳುಹಿಸಿದರು. ಶಾಲೆಯಲ್ಲಿಯೂ ಕೂಡ ಚೆನ್ನಾಗಿ ಪ್ರೋತ್ಸಾಹ ದೊರೆಯುತ್ತಿದೆ” ಎನ್ನುತ್ತಾಳೆ.

50 ಕ್ಕೂ ಅಧಿಕ ಕಡೆಗಳಲ್ಲಿ ಯಕ್ಷಗಾನ, ಭರತನಾಟ್ಯ ಪ್ರದರ್ಶನ ನೀಡಿದ್ದು, ಹಲವಾರು ಪುರಸ್ಕಾರ, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.

“ಮಗಳು ಕಿರಿಯ ವಯಸ್ಸಿನಲ್ಲಿಯೇ ಸಾಧನೆಗೈಯ್ಯುತ್ತಿದ್ದಾಳೆ. ಮಗಳ ಸಾಧನೆಯ ಕುರಿತು ಹೆಮ್ಮೆ ಇದೆ” ಎನ್ನುತ್ತಾರೆ ತಾಯಿ ವೀಣಾ. ಕಲಾ ರಂಗದಲ್ಲಿ ಈ ಪ್ರತಿಭೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದು ಈ ಹೊತ್ತಿನ ಆಶಯ.

Author Details


Srimukha

Leave a Reply

Your email address will not be published. Required fields are marked *