ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೪

ಅರಿವು-ಹರಿವು
ಅವಿಚ್ಛಿನ್ನ ಗುರುಪರಂಪರೆಯಲ್ಲಿ ನಾವೀಗ ಶಂಕರ ಭಗವತ್ಪಾದರ ಜೀವನ ಚರಿತ್ರೆಯನ್ನು ಅವಲೋಕಿಸುತ್ತಿದ್ದೇವೆ. ಅದರ ಮುಂದುವರಿಕೆಯಾಗಿ ಚರಿತ್ರೆ ಹೀಗೆ ಸಾಗುತ್ತದೆ. ಐದನೇ ವಯಸ್ಸಿಗೇ ಉಪನಯನವಾದ ಬಳಿಕ ಬಾಲ ಶಂಕರರು ಅಧ್ಯಯನಕ್ಕಾಗಿ ಗುರು ನಿವಾಸವನ್ನು ಸೇರಿದರು. ಕ್ರಮದಂತೆ  ನಿಯಮಿತ ಮನೆಗಳಲ್ಲಿ ಭಿಕ್ಷೆಗಾಗಿ ಹೋಗಬೇಕಿತ್ತು. ಅದರಂತೆ ಒಂದು ದಿನ ಭಿಕ್ಷಾಟನೆಗೆಂದು ಹೋದಾಗ ಬಡ ಬ್ರಾಹ್ಮಣನ ಮನೆಗೆ ಬಂದು ಭವತಿ ಭಿಕ್ಷಾಂ ದೇಹಿ ! ಎಂದ ಶಂಕರರ ಕರೆಗೆ  ಓಗೊಟ್ಟು ಹೊರ ಬಂದ ಆ ಮನೆಯ ಗೃಹಿಣಿ ಈ ಶ್ರೇಷ್ಠ ವಟುವನ್ನು  ನೋಡಿದೊಡನೆಯೇ ಕರಗಿದಳು. ಬಡವಿ ಕೊಡಲೇನೂ ಇರದೆ… ಮನೆಯೆಲ್ಲಾ ಹುಡುಕಿ, ತಡಕಿ, ಸಿಕ್ಕ ಒಂದು ಒಣಗಿದ ನೆಲ್ಲಿಕಾಯಿಯನ್ನೇ ಕೊಟ್ಟಳು! ಅವಳ ಭಾವಕ್ಕೆ ಕರಗಿದ ಬಾಲಶಂಕರರ ಕರೆಗೆ ಓಗೊಟ್ಟು ತಾಯಿ ಲಕ್ಷ್ಮಿಯೇ ಚಿನ್ನವಾಗಿ ಮಳೆಗರೆದಳೆಂದು ಪ್ರತೀತಿ ಇದೆ.  ಮಹಾತ್ಮರಲ್ಲಿನ ದಿವ್ಯತೆ ಆಗಾಗ ಹೀಗೆ ಪ್ರಕಟವಾಗುತ್ತದೆ.
ಅಷ್ಟವರ್ಷೇ ಭವೇತ್ ವೇದೀ… ಎಂಟನೇ ವಯಸ್ಸಿಗೇ ವೇದಾಧ್ಯಯನ ಮುಗಿಸಿದ್ದ ಬಾಲ ಶಂಕರರಲ್ಲಿ ಆಗಲೇ ನಿಸ್ವಾರ್ಥ ಸೇವೆಯ, ಲೋಕೋದ್ಧಾರಕ ಮಹತ್ಕಾರ್ಯಗಳ ಕಾರ್ಯಯೋಜನೆ, ಸಂಕಲ್ಪದ ಆಲೋಚನೆ ಸ್ಪಷ್ಟವಾಗುತ್ತಿತ್ತು…
   ಗುರುಕುಲದಲ್ಲಿ ಅಧ್ಯಯನದ ನಂತರ ಮನೆಗೇ ಬಂದು ತಾಯಿಯ ಸೇವೆಯಲ್ಲಿ ನಿರತರಾದರು. ತುಡಿತ ಮಾತ್ರ ಅಂತರಂಗದಲ್ಲಿ ಮಹತ್ತಾಗಿತ್ತು.  ವೃದ್ಧಾಪ್ಯವನ್ನು ತಲುಪಿದ್ದ
ತಾಯಿ ಆರ್ಯಾಂಬೆ ಶಾರೀರಿಕವಾಗಿ ಸದೃಢವಿಲ್ಲದಿದ್ದರೂ ಸ್ವಲ್ಪ ದೂರದಲ್ಲಿ ಹರಿಯುತ್ತಿದ್ದ ಪೂರ್ಣಾನದಿಗೇ ಹೋಗಿ ಸ್ನಾನ ಮಾಡಿ ಬರುವ ಪರಿಪಾಠವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. ಒಂದು ದಿನ ಉರಿಬಿಸಿಲಿದ್ದ ಹಗಲಿನಲ್ಲಿ ಆರ್ಯಾಂಬೆಯು ನದಿಗೆ ನಡೆದುಹೋಗುತ್ತಿದ್ದಾಗ ಬಹಳ ಬಳಲಿ ನೆಲಕ್ಕುರುಳಿಬಿಟ್ಟಳು. ಜೊತೆಯಲ್ಲಿಯೇ ಇದ್ದ ಬಾಲಕ ಶಂಕರರು ಇದನ್ನು ಕಂಡು ನದಿದೇವತೆಯನ್ನು ಕುರಿತು ಪ್ರಾರ್ಥಿಸಿ, ಆ ನದಿಯು ಪಥ ಸರಿಸಿ ತಮ್ಮ ಮನೆಯ ಸಮೀಪದಲ್ಲಿಯೇ ಹರಿಯುವಂತೆ ಮಾಡಿದರು.
ತಾಯಿಗೆ ಸಹಜವಾಗಿ ಲೋಕ ಚಿಂತೆ… ಶಂಕರರು ಆತ್ಮ ಪರರಾಗಿ, ಜಗದ ನೋವ ಪರಿಹರಿಪ ಮಹತ್ಕಾರ್ಯದೆಡೆಗೆ ಚಿಂತನೆ ನಡೆಸಿದ್ದರು. ತಾಯಿಯ ಮನವರಿವಿದ್ದೂ ಅವಳಿಗೆ ನೋವಾಗದಂತೆ ಹೊರ ನಡೆವ ಕುರಿತು ಮೌನ ತಪಸ್ಸು ನಡೆದಿತ್ತು. ದೈವ ಕೃಪೆಗೆ ಕಾಯುತ್ತಾ…
ಆ ದಿನವೂ ಬಂತು.. ಸಂನ್ಯಾಸ ಸ್ವೀಕರಿಸಲು ತಾಯಿಯ ಅನುಮತಿ ಅತ್ಯಂತ ಅಗತ್ಯವಾಗಿತ್ತಾದ್ದರಿಂದ ಆ ಸಮಯಕ್ಕಾಗಿ ಬಾಲಕ ಶಂಕರರು ಕಾಯುತ್ತಿರುವಾಗಲೇ ಒಂದು ದಿನ  ನದಿಯಲ್ಲಿ ಸ್ನಾನ ಮಾಡುವಾಗ ಒಂದು ಮೊಸಳೆಯು ಇವರ ಕಾಲನ್ನು ಹಿಡಿಯಿತು. ಆಗ “ಅಮ್ಮಾ ಮೊಸಳೆ ‘ಕಾಲ’ ಎಳೆಯುತ್ತಿದೆ” ಎಂದು ಕೂಗಿಕೊಂಡರು. ದಡದಲ್ಲಿದ್ದ ತಾಯಿ ಮಗನ ಆರ್ತನಾದವನ್ನು ಕೇಳಿ ಪರಿಸ್ಥಿತಿಯನ್ನು ಕಂಡು ಚಿಂತೆಗೀಡಾದಳು. ಆಗ ಶಂಕರರು “ಅಮ್ಮಾ ದೇಹವೇ ನಾಶವಾಗುವ ಕಾಲ, ಈಗಲಾದರೂ ಸಂನ್ಯಾಸ ಗ್ರಹಣ ಮಾಡಿದರೆ ಉತ್ತಮ ಲೋಕಗಳು ಉಂಟಾಗುತ್ತವೆಯಂತೆ; ನೀನು ಅಪ್ಪಣೆ ಕೊಡುವುದಾದರೆ ನಾನು ಸಂನ್ಯಾಸಕ್ಕೆ ಸಂಕಲ್ಪ ಮಾಡುತ್ತೇನೆ” ಎಂದರು. ತಾಯಿ ಕರುಳಲ್ಲವೇ, ಆರ್ಯಾಂಬೆಯು ಸಂನ್ಯಾಸ ಸಂಕಲ್ಪಕ್ಕೆ ಅನುಮತಿಯನ್ನು ಕೊಟ್ಟಳು. ಆಪತ್ ಸಂನ್ಯಾಸ ಸ್ವೀಕಾರ ಮಾಡುತ್ತಿದ್ದಂತೆಯೇ ಮೊಸಳೆಯು ಶಂಕರರ ಕಾಲನ್ನು ಬಿಟ್ಟಿತು.
  ಪೂರ್ಣಾನದಿಯನ್ನು ಮನೆಯ ಬಳಿಗೇ ತಂದಿದ್ದರಿಂದ ಅಲ್ಲಿದ್ದ ಶ್ರೀಕೃಷ್ಣದೇವಾಲಯಕ್ಕೆ ಅಪಾಯ ಬಂದೊದಗಿತು. ಇದರ ಪರಿಹಾರಾರ್ಥವಾಗಿ  ಶಂಕರರು ಆತ್ಮೀಯರ ಸಹಾಯದಿಂದ ನದಿಯ ದಂಡೆಯ ಮೇಲೆ ಅಪಾಯ ರಹಿತ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಿಸಿ ಶ್ರೀಕೃಷ್ಣ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಿದರು ಎಂಬಲ್ಲಿಗೆ ಈ ಸಂಚಿಕೆಯನ್ನು ಸಮಾಪ್ತಿಗೊಳಿಸುತ್ತಿದ್ದೇವೆ.

Author Details


Srimukha

Leave a Reply

Your email address will not be published. Required fields are marked *