ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೮

ಅರಿವು-ಹರಿವು
ಅರಿವೇ ಅವಿದ್ಯಾತಿಮಿರವನ್ನು ನಾಶ ಮಾಡುವ ಸಂಕಲ್ಪಹೊತ್ತು ಜ್ಞಾನಾಂಜನ ಶಲಾಕದಂತೆ ಶಂಕರರ ರೂಪದಲ್ಲಿ ಭುವಿಗಿಳಿದು ಬಂದಾಗ ತನ್ನ ದಿವ್ಯೌಷಧ ಪ್ರಭಾವದಿಂದ ಬೆಳಕ ಚೆಲ್ಲಿ ಪ್ರಕಾಶ ದರ್ಶನ ಮಾಡಿಸದೇ ಹಾಗೆಯೇ ಇದ್ದೀತೇ?? ಹೌದು, ಅದ್ವೈತ ತತ್ವ ಪ್ರತಿಪಾದಿಸಿ, ಪ್ರತಿಷ್ಠಾಪಿಸಿ ಆ ಪರಮ ತತ್ವ, ಪರಮಾತ್ಮನೆಂಬ ಮಧುರ ಫಲದ ಪ್ರಾಪ್ತಿ ಸರ್ವರಿಗೂ ಲಭಿಸಲೆಂದೇ ಆದ ಆ ಆಚಾರ್ಯ ಶಂಕರರ ಅವತಾರ ಆ ಕಾರ್ಯವನ್ನು ಹೇಗೆ ಮಾಡುತ್ತಾ ಸಾಗಿತೆಂಬುದನ್ನು ನೋಡೋಣ.
ಸಂನಂದನನನ್ನು ಪದ್ಮ ಪಾದಾಚಾರ್ಯರನ್ನಾಗಿಸಿದುದ್ದನ್ನು  ಹಿಂದಿನ ಸಂಚಿಕೆಯಲ್ಲಿ ಅವಲೋಕಿಸಿದ್ದೆವು. ಈ ಸಂಚಿಕೆಯಲ್ಲಿ ಮಂಡನ ಮಿಶ್ರರಿಗೆ ಅರಿವಾಗಿಸಿದ ಪರಿಯನ್ನು ಅರಿಯೋಣ.
ಶಂಕರರು ವಿವಿಧ ಸೂತ್ರಗಳಿಗೆ ಭಾಷ್ಯ ರಚಿಸುತ್ತಾ ಕಾಶಿಯಲ್ಲಿ ಕೆಲಕಾಲ ಕಳೆದ ನಂತರ ಕುಮಾರಿಲ ಭಟ್ಟರನ್ನು ಸಂಧಿಸುವಲ್ಲಿ ಚಿತ್ತೈಸಿ ಅತ್ತ ಸಾಗಿದರು. ಕುಮಾರಿಲ ಭಟ್ಟರಿಂದ ವಾರ್ತಿಕವನ್ನು ರಚಿಸಬೇಕೆಂಬ ಅಪೇಕ್ಷೆ ಹೊತ್ತು ಬಂದಿದ್ದ ಶಂಕರರಿಗೆ ಭಟ್ಟರು ತುಷಾಗ್ನಿಯನ್ನು ಪ್ರವೇಶಿಸಿ ಕುಳಿತಿರುವುದು ಕಂಡುಬಂದಿತು. ಅವರೆಡೆಗೆ ಧಾವಿಸಿ ತಾವು ಬಂದ ಉದ್ದೇಶ ಭಿನ್ನೈಸಿದಾಗ ಶಂಕರರು…ಕುಮಾರಿಲ ಭಟ್ಟರು ಆ ಸ್ಥಿತಿಯಲ್ಲೇ ತಮ್ಮ ಸ್ವಯಂ ಪ್ರಾಯಶ್ಚಿತ್ತಕ್ಕೆ ಕಾರಣಗಳನ್ನು ಮತ್ತು ವಾರ್ತಿಕ ರಚನೆಗೆ ಇಚ್ಛೆ ಇದ್ದರೂ ಅದು ತಮ್ಮಿಂದಾಗಲಾರದು ಎಂದು ಹೇಳಿ ತಮ್ಮ ಶಿಷ್ಯಶ್ರೇಷ್ಠ ಮಹಾಕರ್ಮಠ ( ಕರ್ಮಯೋಗವನ್ನನುಸರಿಸುವವನು) ಮಂಡನ ಮಿಶ್ರನಲ್ಲಿಗೆ ತೆರಳಿ ಅವನನ್ನು ವಾದದಲ್ಲಿ ಜಯಿಸಿ ಅದ್ವೈತಕ್ಕೆ ಮಣಿಯುವಂತೆ ಮಾಡಿದರೆ ತಮ್ಮ ಜ್ಞಾನ ಪ್ರಸಾರಕ್ಕೂ ಪುಷ್ಟಿ ಸಿಗುವುದು ಮತ್ತು ಘನಪಂಡಿತನಾದ ಅವನನ್ನು ಶಿಷ್ಯನಾಗಿಸಿಕೊಂಡ ಮೇಲೆ ಅವನಿಂದಲೇ ವಾರ್ತಿಕಗಳನ್ನು ರಚಿಸಿಕೊಳ್ಳಿ ಎಂದು ಅರುಹಿದರು. ತುಷಾಗ್ನಿಯಲ್ಲಿರುವ ಕುಮಾರಿಲ ಭಟ್ಟರ ವಿನಂತಿಯಂತೆಯೇ ಆಶ್ರಮದ ಶಿಷ್ಯರಿಂದ ಶಂಕರರು ಸಮ್ಯಕ್ ಉಪಚಾರಗೊಂಡರು. ಬ್ರಹ್ಮತತ್ವವನ್ನು ಶಂಕರರಿಂದಲೇ ಕೇಳಲು ಇಚ್ಛೆಗೊಂಡ ಭಟ್ಟರಿಗೆ ಆ ಅಂತಿಮ ಸ್ಥಿತಿಯಲ್ಲಿ ಉಪದೇಶಗೈದು ಮಂಡನ ಮಿಶ್ರರ ಭೇಟಿಗೆ ಮುನ್ನಡೆದರು. ಮುಂದೆ ಮುಂದೆ ಸಾಗಿ ಮಾಹಿಷ್ಮತಿ  ನಗರಕ್ಕೆ ಪ್ರವೇಶಗೊಂಡರು. ಅಲ್ಲೇ ಸಾಗುತ್ತಿದ್ದ ಸ್ತ್ರೀಯರನ್ನು ವಿಚಾರಿಸಿದಾಗ ಯಾವ ಮನೆಯ ಮುಂದೆ ಹೆಣ್ಣು ಗಿಳಿಗಳೂ “ಫಲವನ್ನು ಕೊಡತಕ್ಕದ್ದು ಕರ್ಮ, ಫಲವನ್ನು ಕೊಡತಕ್ಕವನು ಈಶ್ವರ, ಜಗತ್ತು ನಿತ್ಯ-ಅನಿತ್ಯ ” ಎಂದೆಲ್ಲಾ ಮಾತನಾಡುತ್ತಿರುತ್ತವೋ ಅದೇ ಅವನ ಮನೆಯೆಂದು ತಿಳಿಯಿರಿ ಎಂದರು. ಅಂತೆಯೇ ಅಂತಹ ಮಂಡನ ಮಿಶ್ರರ ಮನೆಗೆ ಶಂಕರರು ಬಂದರು. ( ಅಲ್ಲಿದ್ದ ಸನ್ನಿವೇಶಗಳ ಬಗೆಗೆ ವಿವಿಧ ಉಲ್ಲೇಖಗಳ ಪ್ರಕಾರ ಏನೇ ಇರಲಿ ನಾವು ಮುಖ್ಯಾಂಶವನ್ನಷ್ಟೇ ತೆಗೆದು….)ಶಂಕರರು ಅದ್ವೈತ ಸ್ಥಾಪನೆಗೋಸ್ಕರ ವಾದಕ್ಕೆ ಮುಂದಾದರು. ಸೋತವರು ಗೆದ್ದವರ ಆಶ್ರಮವನ್ನು ಸೇರಬೇಕೆಂಬ ಪಣವಿಟ್ಟು.. ವಾದಗಳು ಸರಸ್ವತೀ ಸ್ವರೂಪಿಣಿಯೇ ಆದ ಉಭಯಭಾರತಿಯ ಅಧ್ವರ್ಯುವನ್ನಾಶ್ರಯಿಸಿಯೇ ಮಂಡನೆಗೊಂಡವು.
 ಮಂಡನ ಮಿಶ್ರರ ವಾದದಂತೆ,,’ ಚಿದ್ರೂಪವಾದ ‘ಬ್ರಹ್ಮ’ ವಿಷಯದಲ್ಲಿ ಉಪನಿಷತ್ತುಗಳು ಪ್ರಮಾಣವಲ್ಲ, ಚಿದ್ರೂಪವಾದ ಬ್ರಹ್ಮದ ವಿಷಯದಲ್ಲಿ ಅವು ಸಂಗತವಾಗುವುದಿಲ್ಲ. ಆದ್ದರಿಂದ ವೇದದ ಪೂರ್ವ ಭಾಗವಾದ ಕರ್ಮಕಾಂಡವು ನಮಗೆ ಪ್ರಮಾಣ. ಕರ್ಮದಿಂದಲೇ ಮುಕ್ತಿಯಾಗುತ್ತದೆಂಬುದು ನಮಗೆ ಸಮ್ಮತ.’                                                                                           ಇದಕ್ಕೆ ಪ್ರತಿವಾದವಾಗಿ,
ಶಂಕರರು.. ಬ್ರಹ್ಮವು ಸಚ್ಚಿದಾನಂದ ಸ್ವರೂಪವಾಗಿದೆ, ಜೀವವೂ ಪರಮಾತ್ಮವೇ (‘ತತ್ ಸತ್ಯಂ ಸ ಆತ್ಮಾ’)
ಜೀವಾತ್ಮ ಪರಮಾತ್ಮ ಅಭೇದ ( ‘ತತ್ವಮಸಿ’).
ಇದು ಬೆಳೆಯುತ್ತ ಸಕಲ ಶಾಸ್ತ್ರವಾಕ್ಯಗಳ ಚರ್ಚೆ ಮುನ್ನಡೆಯುತ್ತ ಕೆಲವು ದಿನಗಳೆ ಕಳೆದವು. ಅಂತಿಮ ತೀರ್ಪಿಗಾಗಿ ಉಭಯಭಾರತಿಯೇ ಮಧ್ಯಸ್ಥಿಕೆ ವಹಿಸಿ ಬಿಳಿಯ ಹೂವಿನ ಮಾಲೆಯನ್ನು  ಇಬ್ಬರ ಕೊರಳಿಗೂ ಹಾಕಿ, ಯಾರ ಕೊರಳಲ್ಲಿ ಇದು ಮೊದಲು ಬಾಡುತ್ತದೋ ಅವರೇ ಸೋತಂತೆ ಎಂಬ ಶರತ್ತನ್ನಿಟ್ಟು ವಾದ ಮುಂದುವರೆಸಿದಳು. ಮಂಡನಮಿಶ್ರರ ಕೊರಳಲ್ಲೇ ಮೊದಲು ಬಾಡಿತು ಮತ್ತು ಅವರಲ್ಲಿ ಜೀವಾತ್ಮ ಪರಮಾತ್ಮಗಳ ಅಭೇದವನ್ನು ಖಂಡಿಸಿ ಕರ್ಮಸಿದ್ಧಾಂತವೇs ಎಂದು ಸಮರ್ಥಿಸುವುದಕ್ಕೆ ಬೇಕಾದ ಪ್ರಾಗಲ್ಭ್ಯವು ಉಳಿದಿರಲಿಲ್ಲ. ಅಲ್ಲಿಗೆ ಅದ್ವೈತಕ್ಕೆ ಮಣಿದರು ಮಂಡನರು. ಮಂಡನರ ಅರ್ಧಾಂಗಿ, ಸರಸ್ವತಿ ಸ್ವರೂಪಿಣಿಯೇ ಅದ ಉಭಯಭಾರತಿಯೊಡನೆಯೂ ಶಂಕರರು ವಾದಿಸಿ ಸೈ ಎನಿಸಿಕೊಂಡರು ಮತ್ತು ಅವಳಿಗೊದಗಿದ್ದ ದೂರ್ವಾಸರ ಶಾಪವೂ ಪರಮಪವಿತ್ರ ಶಂಕರರ ದರ್ಶನದಿಂದಾಗಿ ವಿಮುಕ್ತಿ ಹೊಂದಿತು. ಅಲ್ಲದೇ, ಮಂಡನಮಿಶ್ರರಿಗೆ ಮಹರ್ಷಿ ಜೈಮಿನಿಗಳ ಸ್ಫುರಣೆಯೂ ಉಂಟಾಗಿ ಶಂಕರರ ಶಿಷ್ಯತ್ವಕ್ಕೆ ಹಂಬಲಿಸಿದರು. ಶಂಕರರು ಮಂಡನಮಿಶ್ರರರನ್ನು  ಶಿಷ್ಯರನ್ನಾಗಿ ಸ್ವೀಕರಿಸಿ ‘ತತ್ವಮಸಿ’ಯನ್ನು ಉಪದೇಶಿಸಿ, ಸಾಕ್ಷಾತ್ಕಾರಗೊಳ್ಳುವಂತೆ ಮಾಡಿ ಸುರೇಶ್ವರಾಚಾರ್ಯರ ಎತ್ತರಕ್ಕೇರಿಸಿ ಅವಿಚ್ಛಿನ್ನ ಗುರುಪರಂಪರೆಯ ಮುಂದುವರಿಕೆಗೆ ಒಂದು ಕೊಂಡಿಯನ್ನಾಗಿಸಿದರು ಎಂಬಲ್ಲಿಗೆ ಇಂದಿನ ಸಂಚಿಕೆಗೆ ಮುಕ್ತಾಯ ಹಾಡುತ್ತಿದ್ದೇವೆ.

Author Details


Srimukha

Leave a Reply

Your email address will not be published. Required fields are marked *