ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೩

ಅರಿವು-ಹರಿವು
ಆರ್ಯಾವರ್ತದ ಪುಣ್ಯಭೂಮಿ ಭಾರತ ದೇಶದಲ್ಲಿ ಶ್ರೇಷ್ಠ ಸಂಸ್ಕೃತಿಯಿದ್ದು ‘ಅರಿವಿಗಾಗೇ’ ಜೀವಿಕೆ ಎಂಬಂತಿದ್ದರೂ, ತತ್ವ-ವಿಜ್ಞಾನದ ಹೆಸರಿನಲ್ಲಿ ಅವೈಜ್ಞಾನಿಕ,  ಅರಿವಿನ ಪೂರ್ಣಾನಂದದಿಂದ ಬೇರೆಡೆಗೆ ಕರೆದೊಯ್ಯುವ ಮತಗಳ ವಿಜೃಂಭಣೆ ನಮ್ಮತನಕ್ಕೆ ಗ್ರಹಣವುಂಟುಮಾಡಿದ ಪರಮಕಷ್ಟಕಾಲದಲ್ಲಿ ಭರವಸೆಯ ಬೆಳಕಾಗಿ ‘ನಾನು’ ಉಳಿಯಲು ಕಾರಣೀಕರ್ತರಾದವರು ಆಚಾರ್ಯ ಶಂಕರ ಭಗವತ್ಪಾದರು.
ಹೌದು, ಅರಿವೇ ಮೈವೆತ್ತುಬಂದು ಗುರುಪರಂಪರೆಯನ್ನಾಗಿಸಾದ ಪಾತ್ರಗಳಲ್ಲೊಂದು ಮಹಾಮೇರು ಪಾತ್ರ ಆಚಾರ್ಯ ಶಂಕರರದ್ದು. ಗುರು ಗೋವಿಂದಭಗವತ್ಪಾದರ ನಂತರ ಗುರುಪರಂಪರಾ ಸರಣಿಯಲ್ಲಿ ಉಲ್ಲೇಖಗೊಳ್ಳುವ ಗಣನೀಯ ಪಾತ್ರ  ಶಂಕರಾಚಾರ್ಯರದ್ದು. ಗುರುಪರಂಪರೆ ಉಳಿದು ಅರಿವು ಅವಿಚ್ಛಿನ್ನವಾಗಿ ತಲೆಮಾರು ತಲೆಮಾರುಗಳಿಗೆ ಹರಿದು ಆ ಪರಿಪೂರ್ಣತೆಯ, ಆ ಪರಮ ಸತ್ಯದ  ಆರಾಧನೆಯೇ ಎಲ್ಲೆಲ್ಲೂ ಸ್ಥಾಪನೆಗೊಳ್ಳಲು ಕಾರಣೀಭೂತರು ಇವರು ಎಂದರೆ ಅತಿಶಯೋಕ್ತಿ ಎನ್ನಿಸಲಾರದು. ಗುರುಪರಂಪರೆಗೂ ಒಂದು ಶಿಸ್ತಿನ ಚೌಕಟ್ಟು ಕೊಟ್ಟು ಮತ್ತದರ ಮಹಾಮೌಲ್ಯವನ್ನು ಸಮಾಜಕ್ಕೆ ಅರಿವಾಗಿಸಿದವರಿವರೆಂದರೆ ತಪ್ಪಾಗಲಾರದು. ಇವರ ಅವತಾರದ ಬಗ್ಗೆ ಶಿವರಹಸ್ಯ ಎಂಬ ಕಾವ್ಯಗ್ರಂಥದಲ್ಲಿ ಶಿವನು ಪಾರ್ವತಿಗೆ ಕಲಿಯುಗದಲ್ಲಿ ತಾನು ಅವತಾರವೆತ್ತಲಿರುವುದನ್ನು ತಿಳಿಸುವ ಉಲ್ಲೇಖವಿದ್ದು ಅಲ್ಲಿ ಆಚಾರ್ಯ ಶಂಕರರೇ ತಾನಾಗಿ ಬರುವ ಚಿತ್ರಣವಿದೆ. ಇಂತಹ ಚೈತನ್ಯಕ್ಕೆ ನಮ್ಮ ನಮನಗಳನ್ನರ್ಪಿಸುತ್ತಾ ಇವರ ಜೀವನ ಚರಿತ್ರೆಯನ್ನು ಇಂದಿನ ಸಂಚಿಕೆಯಿಂದ ಅವಲೋಕಿಸೋಣ.
 ಆಚಾರ್ಯ ಶಂಕರರ ಕಾಲದ ಬಗ್ಗೆ ಹಲವಾರು ಅಭಿಪ್ರಾಯಗಳಿದ್ದರೂ ಮಾಧವೀಯ ಶಂಕರ ವಿಜಯದಲ್ಲಿ ಉಲ್ಲೇಖಗೊಂಡಂತೆ ಇವರು  “ಕಲಿ ಪ್ರಾರಂಭವಾದ ಮೇಲೆ 2593ನೇ ನಂದನ ಸಂವತ್ಸರದ ಉತ್ತರಾಯಣ ವೈಶಾಖ ಶುದ್ಧ ಪಂಚಮಿ ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನ (ಅಂದರೆ  ಕ್ರಿ.ಪೂ 509ನೇ ಶತಮಾನ) ದಲ್ಲಿ ಪರಮಸಾತ್ವಿಕ ಬ್ರಾಹ್ಮಣ ದಂಪತಿಗಳಾದ ಶಿವಗುರು-ಆರ್ಯಾಂಬೆಯಲ್ಲಿ ಜನಿಸಿದರು. ಪರಮಶ್ರೇಷ್ಠ  ಜನ್ಮಜಾತಕ ಇವರದ್ದು. (ರವಿ, ಕುಜ, ಗುರು, ಶನಿ ಗ್ರಹಗಳು ಉಚ್ಛಸ್ಥರಾಗಿ ಕೇಂದ್ರದಲ್ಲಿರಲು ಶುಕ್ರನು ಉಚ್ಛಸ್ಥಾನದಲ್ಲಿದ್ದು ಬುಧನು ರವಿಯೊಡನೆ ಸೇರಿರಲು ಇಂಥಾ ಶುಭಮುಹೂರ್ತದಲ್ಲಿ ಆರ್ಯಾಂಬೆಯು ಮಗುವನ್ನು ಪಡೆದಳು). ಕೇರಳದ ಕಾಲಟಿಯ ಗ್ರಾಮಸ್ಥರಿವರಾಗಿದ್ದರು. ಕೇರಳ ರಾಜ್ಯದಲ್ಲಿ ಕಾಲಟಿಯೆಂಬುದು ಒಂದು ಅಗ್ರಹಾರ. ಇದು ಪೂರ್ಣಾನದಿಯ ದಡದಲ್ಲಿದೆ. ಈ ಗ್ರಾಮದಲ್ಲಿ ವಿದ್ಯಾಧಿರಾಜ ಎಂಬ ವೈದಿಕ ವಿದ್ವಾಂಸರೊಬ್ಬರಿದ್ದರು. ಇವರು ಕಾಲಟಿಯ ಅಗ್ರಹಾರದ ಗುರುಕುಲವನ್ನು ನಡೆಸುತ್ತಿದ್ದರು. ಇವರ ಮಗನೇ ಶಿವಗುರು. ಇವರೂ ಸಹ ವೇದ ವಿದ್ವಾಂಸರು. ಪತ್ನಿ ಪರಮಸಾಧ್ವಿ ಆರ್ಯಾಂಬೆ. ಈ ದಂಪತಿಗಳಿಗೆ ವಿವಾಹಾನಂತರ ಬಹಳ ವರ್ಷಗಳವರೆಗೆ ಮಕ್ಕಳಾಗಿರಲಿಲ್ಲ. ಅವರಿಬ್ಬರೂ ತ್ರಿಶ್ಶೂರು ಬಳಿಯಿರುವ ವೃಷಭಾಚಲಕ್ಕೆ ಬಂದು ಅಲ್ಲಿರುವ ವೃಷಭಾಚಲೇಶ್ವರನ ಸೇವೆಯನ್ನು ಅನನ್ಯ ಭಕ್ತಿಯಿಂದ ಮಾಡಿದರು. ಇವರ ಶ್ರದ್ಧಾಭಕ್ತಿಗಳಿಗೆ ಮೆಚ್ಚಿದ ವೃಷಭಾಚಲೇಶ್ವರನು ಆ ದಂಪತಿಗಳ ಕನಸಿನಲ್ಲಿ ಕಾಣಿಸಿಕೊಂಡು ವರವನ್ನು ಕೇಳುವಂತೆ ಹೇಳಿದನು. ಅವರು ತಮ್ಮ ಉದ್ದೇಶವನ್ನು ತಿಳಿಸಿದರು. ಆಗ ಅವರ ಇಚ್ಛೆಯಂತೆ ಅಲ್ಪಾಯುವಾದರೂ ಸರ್ವಶಾಸ್ತ್ರವಿಶಾರದನಾದ ಒಬ್ಬ ಮಗನನ್ನು ಈಶ್ವರನು ಅನುಗ್ರಹಿಸಿದನು. ಸಂತೋಷಗೊಂಡ ಶಿವಗುರು ಆರ್ಯಾಂಬಾ ದಂಪತಿಗಳು ಕಾಲಟಿಗೆ ಬಂದು ಬ್ರಾಹ್ಮಣ ಸಂತರ್ಪಣೆ ಮಾಡಿ ಅವರ ಆಶೀರ್ವಾದ ಪಡೆದು ಭುಕ್ತಶೇಷವನ್ನು ಅವರು ಸೇವಿಸಿದರು. ಆ ಭುಕ್ತಶೇಷದಲ್ಲಿ ಈಶ್ವರನ ಜ್ಯೋತಿಯು ಪ್ರವೇಶಿಸಿತು. ಇದರ ಪರಿಣಾಮವಾಗಿ ಆರ್ಯಾಂಬೆಯು ಗರ್ಭಧರಿಸಿ ಹತ್ತನೇ ಮಾಸದ ಶುಭದಿನದಲ್ಲಿ ಮಗನನ್ನು ಹೆತ್ತಳು. ಈ ಮಗುವಿಗೆ ಶಂಕರ ಎಂದು ನಾಮಕರಣ ಮಾಡಿದರು. ಆಚಾರ್ಯ ಶಂಕರರು ಬಾಲಕರಿದ್ದಾಗಲೇ ತಮ್ಮ ಅಪ್ರತಿಮ ಪ್ರಜ್ಞಾ ಪ್ರೌಢಿಮೆಯನ್ನು ಅಭಿವ್ಯಕ್ತಿಗೊಳಿಸಿದ್ದರು. ಒಂದನೆಯ ವರ್ಷದಲ್ಲಿ ಸ್ವಭಾಷೆಯನ್ನು, ವರ್ಣಾಭ್ಯಾಸವನ್ನು ಪೂರ್ಣಗೊಳಿಸಿದರು. ಎರಡನೆಯ ವರ್ಷದಲ್ಲಿ ಬರೆದ ಅಕ್ಷರಗಳನ್ನು ಓದಿದರು. ಆಮೇಲೆ ಕಾವ್ಯ ಪುರಾಣಗಳ ಅರ್ಥವನ್ನು ಶ್ರಮವಿಲ್ಲದೆ ತಿಳಿದುಕೊಂಡರು.  ಇತರ ಮಕ್ಕಳು ಮಣ್ಣಿನ ಧೂಳಿನಲ್ಲಿ ಆಡುತ್ತಿರುವ ವಯಸ್ಸಿನಲ್ಲಿಯೇ ಸಕಲ ಲಿಪಿಗಳನ್ನು ಕಲಿತುಕೊಂಡರು. ತಂದೆ ಶಿವಗುರುವು ಬಾಲಕ ಶಂಕರನಿಗೆ ಮೂರನೆಯ ವಯಸ್ಸಿನಲ್ಲಿ ಚೌಲಕರ್ಮವನ್ನು ನೆರವೇರಿಸಿದರು. ಕೆಲವು ದಿನಗಳ ನಂತರ ಶಿವಗುರುವಿನ ದೇಹಾಂತವಾಯಿತು. ತದನಂತರ ತಾಯಿ ಆರ್ಯಾಂಬೆಯು ಐದನೆಯ ವಯಸ್ಸಿನಲ್ಲಿಯೇ ಬಂಧುಜನರಿಂದ ಬಾಲಶಂಕರನಿಗೆ ಉಪನಯನ ಸಂಸ್ಕಾರವನ್ನು ನೆರವೇರಿಸಿದರು.
ಮುಂದಿನ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಅವಲೋಕಿಸೋಣ ಎನ್ನುತ್ತಾ
 श्रुतिस्मृति पुराणानां आलयं करुणालयं।
नमामि भगवत्पादं शंकरं लोकशंकरम्।।

Author Details


Srimukha

Leave a Reply

Your email address will not be published. Required fields are marked *