ನಿರಂತರವಾಗಿ ಗುರುಸೇವೆಯೇ ಜೀವನದ ಗುರಿ: ಇಂದಿರಾ ಬೈಲಕೇರಿ

ಮಾತೃತ್ವಮ್

 

ಕೇಂದ್ರ ಸರಕಾರದ ಅಂಚೆ ಇಲಾಖೆಯಲ್ಲಿ ಉದ್ಯೋಗ ಸಲ್ಲಿಸಿ ನಿವೃತ್ತರಾಗಿರುವ ಇಂದಿರಾ ಬೈಲಕೇರಿ ಅವರು ಮೂಲತಃ ಗೋಕರ್ಣ ನಿವಾಸಿಗಳಾದರೂ ಪ್ರಸ್ತುತ ಶಿರಸಿಯ ಮಾರಿಕಾಂಬಾ ಕಾಲೋನಿಯಲ್ಲಿ ವಾಸಿಸುತ್ತಿರುವವರು.

ಮೋಟಿನಸರ ವಿದ್ವಾನ್ ನರಸಿಂಹ ಶಾಸ್ತ್ರಿ ಮತ್ತು ಭವಾನಿ ದಂಪತಿಗಳ ಪುತ್ರಿಯಾದ ಇಂದಿರಾ ಅವರ ಪತಿ ರಾಮಚಂದ್ರ ಶಿವರಾಮ ಬೈಲಕೇರಿ .
ಬಿ.ಎಸ್.ಎನ್.ಎಲ್.ನಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತರಾಗಿರುವ ಇವರು ಕಳೆದ ನಾಲ್ಕು ವರ್ಷಗಳಿಂದ ಅಂಬಾಗಿರಿ ವಲಯದಲ್ಲಿ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಪತಿಯ ಜೊತೆಗೂಡಿ ಇಂದಿರಾ ಅವರು ತಮ್ಮ ನಿವೃತ್ತ ಜೀವನವನ್ನು ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಇಚ್ಛೆಯಿಂದ ಹಲವಾರು ಸಂಘಟನೆಗಳ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.

“ನಾವು ಮುಖ್ಯವಾಗಿ ತೊಡಗಿಸಿಕೊಂಡಿದ್ದು ನಮ್ಮ ಹೆಮ್ಮೆಯ ಶ್ರೀರಾಮಚಂದ್ರಾಪುರ ಮಠದ ಸೇವೆಯಲ್ಲಿ . ಕಳೆದ ನಾಲ್ಕು ವರ್ಷಗಳಿಂದ ಅಂಬಾಗಿರಿಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ನಾವು ಸಕ್ರಿಯವಾಗಿ ಭಾಗವಹಿಸಿದ್ದೇವೆ ಎನ್ನಲು ಹೆಮ್ಮೆಯೆನಿಸುತ್ತದೆ” ಎನ್ನುವ ಇಂದಿರಾ ಅವರಿಗೆ ಈ ಹಿಂದೆ ಗೋ ಸಂರಕ್ಷಣೆಯ ಆಂದೋಲನದ ಭಾಗವಾಗಿ ನಡೆದ ಅಭಯಾಕ್ಷರ ಅಭಿಯಾನದಲ್ಲಿ ಪಾಲ್ಗೊಂಡ ಬಗ್ಗೆ ಧನ್ಯತಾ ಭಾವವಿದೆ.

ಮಾತೃತ್ವಮ್ ಯೋಜನೆಯ ಸಾಗರ ಪ್ರಾಂತ್ಯದ ,ಸಿದ್ಧಾಪುರ ನಗರದ ,ಭವತಾರಿಣಿ ಸಮಿತಿಯಲ್ಲಿ ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುವ ಇವರು ಸ್ವಯಂ ಇಚ್ಛೆಯಿಂದ ೨೦೧೯ ಅಕ್ಟೋಬರ್ ನಲ್ಲಿ ಮಾಸದ ಮಾತೆಯಾಗಿ ಸೇವೆಗೈಯಲು ಆರಂಭಿಸಿ ೨೦೨೦ ಜನವರಿಯಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ತಮ್ಮ ಗುರಿ ತಲುಪಿದವರು.

“ಬಹಳ ಶೀಘ್ರವಾಗಿ ಗುರಿ ತಲುಪುವಂತಾಗಿದ್ದು ಶ್ರೀಗುರುಗಳ ಅನುಗ್ರಹದಿಂದ, ಶ್ರೀ ಸಂಸ್ಥಾನದವರ ಕೃಪೆಯಿಂದ ಗೋಮಾತೆಗಾಗಿ ಕಿಂಚಿತ್ ಸೇವೆ ಗೈಯುವ ಅವಕಾಶ ಒದಗಿ ಬಂತು” ಎನ್ನುವ ಇವರು ತಮ್ಮ ಗುರಿ ತಲುಪಲು ಹಿಂದೂ ಸೇವಾ ಪ್ರತಿಷ್ಠಾನದ ಸಮೂಹದವರ ಸಹಕಾರವನ್ನು ನೆನಪಿಸಿಕೊಳ್ಳುತ್ತಾರೆ.

“ನಮ್ಮ ಗುರುಗಳ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.ನನ್ನ ಒಡನಾಟದ ಸಂಘಸಂಸ್ಥೆಗಳಿಗೆ, ಬಾಲ್ಯದ ಗೆಳತಿಯರಿಗೆ,ಸೇವೆಯ ಒಡನಾಡಿಗಳಿಗೆಲ್ಲ ನಮ್ಮ ಸಂಸ್ಥಾನದವರ ಗೋ ಜಾಗೃತಿ, ಗೋ ಸಂರಕ್ಷಣೆಯ ಕುರಿತು ಮನಸಾರೆ ಸಾರುವ ಅವಕಾಶವನ್ನು ಸ್ವೀಕರಿಸಿ ಕಾರ್ಯರೂಪಕ್ಕೆ ತಂದಿದ್ದೇನೆ. ಇನ್ನು ಮುಂದೆಯೂ ಈ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಇಚ್ಛೆಯಿದೆ” ಎನ್ನುವ ಇಂದಿರಾ ಅವರು ತಮಗೆ ಗುರಿ ತಲುಪಲು ಕಾರಣರಾದ ಬಂಧು ಬಾಂಧವರು ಹಾಗೂ ಶ್ರೀಗುರುಗಳ ಸತ್ಕಾರ್ಯಕ್ಕೆ ಕೈ ಜೋಡಿಸಿದ ಗೋಕರ್ಣ ನಿವಾಸಿಗಳ ಸಹಕಾರವನ್ನು ತುಂಬು ಹೃದಯದಿಂದ ಸ್ಮರಿಸುತ್ತಾರೆ.

“ಸದಾ ಶ್ರೀಮಠದ ಸೇವೆಗೆ ಮನ ತುಡಿಯುತ್ತಿದೆ. ಶ್ರೀಗುರುಗಳ ಎಲ್ಲಾ ಕಾರ್ಯಗಳ ಹಿಂದೆಯೂ ಸಮಾಜದ ಹಿತ ಅಡಗಿದೆ. ನಮ್ಮ ಬದುಕಿಗೆ ಶ್ರೀಗುರುಗಳ ಅನುಗ್ರಹ ಮತ್ತು ಶುಭಾಶೀರ್ವಾದಗಳಿದ್ದರೆ ಎಲ್ಲವನ್ನೂ ಪಡೆದುಕೊಂಡಂತೆ” ಎಂದು ಭಾವಪೂರ್ಣವಾಗಿ ನುಡಿಯುವ ಇಂದಿರಾ ಬೈಲಕೇರಿ ಅವರ ಕುಟುಂಬವು ಗೋಸೇವೆ ಮತ್ತು ಶ್ರೀಮಠದ ಸೇವೆಯನ್ನು ಮಾಡಲು ನಿರಂತರವಾಗಿ ಶ್ರೀಗುರುಗಳ ಕೃಪೆಯನ್ನೇ ಬಯಸುತ್ತಿದೆ.

Leave a Reply

Your email address will not be published. Required fields are marked *