ಕೃಷ್ಣ ನಗರಿಯ ಬಹುಮುಖ ಪ್ರತಿಭೆ ಸಂಹಿತಾ

ಅಂಕುರ

ಈಕೆಯ ವಯಸ್ಸು ಕೇವಲ 13. ಆದರೆ ಸಾಧನೆ ಮಾತ್ರ ಅಗಾಧವಾದದ್ದು. ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ಚಿತ್ರಕಲೆ, ನಾಟಕ, ಭಾಷಣ, ನಟನೆ…. ಅಬ್ಬಾ! ಒಂದೋ ಎರಡೋ. ವಿವಿಧ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾಳೆ. ಕನ್ನಡದ ಪ್ರಸಿದ್ಧ ವಾಹಿಸಿ ಝೀ ಕನ್ನಡ ನಡೆಸುವ ಜನಪ್ರಿಯ ಶೋ ‘ಕನ್ನಡದ ಕಣ್ಮಣಿ’ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಈಕೆಯದ್ದು‌.

ಅಂದಹಾಗೆ ಈ ಪ್ರತಿಭೆಯ ಹೆಸರು ಸಂಹಿತಾ ಜಿ.ಪಿ. ಮಣಿಪಾಲದ ಪರ್ಕಳದ ನಿವಾಸಿ, ಅದಮಾರಿನ ಪೂರ್ಣಪ್ರಜ್ಞ ಕಾಲೇಜಿನ ಶಿಕ್ಷಕ ಜಿ.ಪಿ. ಪ್ರಭಾಕರ ತುಮರಿ ಮತ್ತು ಮಣಿಪಾಲ ವಿವಿಯ ಉದ್ಯೋಗಿ ಕಲ್ಪನಾ ಪಿ. ದಂಪತಿಯ ಪುತ್ರಿ. ಮಣಿಪಾಲದ ಮಾಧವ ಕೃಪಾ ಆಂಗ್ಲಮಾಧ್ಯಮ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.

ಬಾಲ್ಯದಿಂದಲೇ ಕಲೆಯೆಡೆಗೆ ಆಸಕ್ತಿ:
ಚಿಕ್ಕಂದಿನಿಂದಲೇ ಕಲಾ ವಾತಾವರಣದಲ್ಲಿ ಬೆಳೆದ ಸಂಹಿತಾಳಿಗೆ ಎಲ್ಲಾ ರಂಗದಲ್ಲೂ ಇನ್ನಿಲ್ಲದ ಆಸಕ್ತಿ. ಒಂದು ವರ್ಷದವಳಿದ್ದಾಗಲೇ ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆದ ಬಾಲ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣನ ಬಾಲಲೀಲೆಯನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದಿದ್ದಳು. ಅಲ್ಲದೇ ಅತ್ರಾಡಿಯ ವಿ.ಉಮಾಮಹೇಶ್ವರಿ ಭಟ್ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದು, ಹೆಜ್ಜೆಗೆಜ್ಜೆ ಸಂಸ್ಥೆಯ ವಿ.ಯಶಾರಾಮಕೃಷ್ಣ ಅವರಲ್ಲಿ ಭರತನಾಟ್ಯ ಮತ್ತು ಕಲಾವಿದ ಪರ್ಕಳ ಸುಬ್ರಾಯ ಶಾಸ್ತ್ರಿ ಅವರಲ್ಲಿ ಚಿತ್ರಕಲೆಯನ್ನೂ ಅಭ್ಯಾಸ ಮಾಡಿದ್ದಾಳೆ.

ರಂಗಭೂಮಿ ಮತ್ತು ಕಿರುತೆರೆಯಲ್ಲೂ ಛಾಪು:
ಕೇವಲ ಭರತನಾಟ್ಯ, ಸಂಗೀತ ಮಾತ್ರವಲ್ಲದೇ ರಂಗಭೂಮಿಯಲ್ಲೂ ನಾಟಕ ಮಾಡಿದ ಖ್ಯಾತಿ ಇವಳದ್ದು. ಖ್ಯಾತ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್ ನಿರ್ದೇಶನದ ಹಲವು ನಾಟಕಗಳಲ್ಲಿ ಪ್ರದರ್ಶನ ನೀಡಿದ್ದಾಳೆ. ‘ಪ್ರೀತಿಯ ಕಾಳು’, ‘ರಾಮಾಯಣ’, ರಂಗಕರ್ಮಿ ಪ್ರಥ್ವಿನ್ ನಿರ್ದೇಶನದ ‘ಗುಡುಗುಡು ಗುಮ್ಮಟದೇವರು’, ‘ಸತ್ತೂ ಅಂದ್ರೆ ಸಾಯ್ತಾರಾ?’, ಎನ್‌ಎಸ್‌ಡಿಯ ರಂಗನಿರ್ದೇಶಕ ಯಶ್ ಶೆಟ್ಟಿ ನಿರ್ದೇಶನದ ‘ತುಕ್ರನ ಕನಸು’, ಅಭಿಲಾಷಾ ನಿರ್ದೇಶನದ ‘ಜಯ ಗೋಪಾಲ’ ಹೀಗೆ ಹಲವು ರಂಗಪ್ರಯೋಗಗಳಲ್ಲಿ ಅಭಿನಯಿಸಿದ್ದಾಳೆ.

ಚಲನಚಿತ್ರದಲ್ಲೂ ಬಾಲನಟಿಯಾಗಿ ಅಭಿನಯಿಸಿರುವ ಸಂಹಿತಾ, ಪ್ರವೀಣ ತೊಕ್ಕೊಟ್ಟು ನಿರ್ದೇಶಿಸಿದ ‘ಪವಾಡಪುರುಷ ಸಂತ ಲಾರೆನ್ಸ್’ ಸಿನಿಮಾದಲ್ಲಿ ಖ್ಯಾತ ಚಿತ್ರತಾರೆ ಭವ್ಯ ಅವರ ಮಗಳಾಗಿ ಅಭಿನಯಿಸಿದ್ದಾಳೆ. ಅಲ್ಲದೇ ಖ್ಯಾತ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ನಿರ್ಮಿಸಿದ ‘ಮಕ್ಕಳ ಹತ್ರ ಮಾತಾಡಿ ಪ್ಲೀಸ್’, ‘ಯುವರ್ಸ್ ಚಾಯ್ಸ್’ ಮೊದಲಾದ ಟೆಲಿಫಿಲ್ಮ್‌ಗಳಲ್ಲೂ ನಟಿಸಿದ್ದಾಳೆ.

ಯೂಟ್ಯೂಬರ್:
ಚಿಕ್ಕವಯಸ್ಸಿನಲ್ಲೇ ಯೂಟ್ಯೂಬರ್ ಆಗಿಯೂ ಗುರುತಿಸಿಕೊಂಡಿರುವ ಸಂಹಿತಾ ತನ್ನದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಇದರಲ್ಲಿ ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಹಬ್ಬಗಳ ಮಹತ್ವ ಮತ್ತು ವಿಶೇಷತೆ ಕುರಿತು ಹಲವಾರು ಆಡಿಯೋ-ವಿಡಿಯೋ ತಯಾರಿಸಿ ಬಿಡುಗಡೆ ಮಾಡಿದ್ದಾಳೆ.

‘ಕನ್ನಡದ ಕಣ್ಮಣಿ’ ರಿಯಾಲಿಟಿ ಶೋ ವಿಜೇತೆ:
ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕಣ್ಮಣಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಕನ್ನಡ ಕಣ್ಮಣಿ’ ಟ್ರೋಫಿ ಗೆದ್ದ ಗಮನ ಸೆಳೆದಿದ್ದಾಳೆ. ರಾಜ್ಯದ 32 ಕೇಂದ್ರಗಳಿಂದ ಸುಮಾರು 30 ಸಾವಿರ ಮಕ್ಕಳನ್ನು ಆಡಿಶನ್ ನಡೆಸಿ, 30 ಜನರನ್ನು ಆಯ್ಕೆ ಮಾಡಿ ಬೆಂಗಳೂರಿನಲ್ಲಿ ಮೆಗಾ ಆಡಿಷನ್‌ನಲ್ಲಿ ಅಂತಿಮವಾಗಿ ಆಯ್ಕೆಯಾದ 14 ಜನ ಸ್ಪರ್ಧಿಗಳಲ್ಲಿ ಮೊದಲಿಗಳು ಸಂಹಿತಾ.

‘ಸಾವಿರಾರು ಸ್ಪರ್ಧಿಗಳ ಮಧ್ಯೆ ಆಯ್ಕೆಯಾಗುವುದು ಸುಲಭವಲ್ಲ. ಆಡಿಷನ್, ಮೆಗಾ ಆಡಿಷನ್‌ಗಳಲ್ಲಿ ಆಯ್ಕೆಯಾಗಿ ವಿಜೇತೆಯಾಗಿ ಹೊರಹೊಮ್ಮಿದ್ದಕ್ಕೆ ಖುಷಿ ಇದೆ. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ಸಾಹಿತಿ ಜಯಂತ್ ಕಾಯ್ಕಿಣಿ, ನಟ ಜಗ್ಗೇಶ್, ಕಲಾವಿದ ಗಂಗಾವತಿ ಪ್ರಾಣೇಶ್, ನಿರೂಪಕ‌ ಕಿರಿಕ್ ಕೀರ್ತಿ, ಮೆಂಟರ್ಸ್ ಇವರೆಲ್ಲರ ಶಿಸ್ತೇ ಮತ್ತು ಮಾರ್ಗದರ್ಶನ ಕೂಡ‌ ಈವರೆಗೆ ತಂದು ನಿಲ್ಲಿಸಿದೆ ಎನ್ನುತ್ತಾಳೆ ಸಂಹಿತಾ.

‘ಮಗಳ ಸಾಧನೆ ಕುರಿತು ಹೆಮ್ಮೆಯಿದೆ ಎನ್ನುವುದು ತಂದೆ ಜಿ.ಪಿ.ಪ್ರಭಾಕರ ತುಮರಿ ಅವರ ಅಂಬೋಣ.

ಸಾಧನೆಗೆ ಅರಸಿ ಬಂತು ಪ್ರಶಸ್ತಿ-ಗೌರವಗಳು:
¶ ರಾಘವೇಶ್ವರ ಶ್ರೀಗಳ‌ ಛಾತ್ರ ಚಾತುರ್ಮಾಸ್ಯದಲ್ಲಿ ವಿಶೇಷ ಪುರಸ್ಕಾರ ಅನುಗ್ರಹ.
¶ ಚಿತ್ರದುರ್ಗದಲ್ಲಿ ನಡೆದ ‘ಶರಣ ಸಂಸ್ಕೃತಿ ಉತ್ಸವ’ದಲ್ಲಿ ಮುರುಘಾಶ್ರೀಗಳಿಂದ ಪ್ರಶಂಸೆ.
¶ ಉಡುಪಿಯ ರಂಗಭೂಮಿ ಸಂಸ್ಥೆಯಿಂದ ಗೌರವ.
¶ ಮಂಗಳೂರಿನ ಮಕ್ಕಿಮನೆ ಕಲಾವೃಂದದಿಂದ ಗೌರವ.
¶ ಉಡುಪಿ ಹವ್ಯಕ ಸಭಾಸಂಸ್ಥೆಯಿಂದ ಗೌರವ.
¶ ಮಣಿಪಾಲದ ಸಸ್ಯವಿಜ್ಞಾನಿ ದಿ.ಪಳ್ಳತ್ತಡ್ಕ ಕೇಶವ ಮೆಮೋರಿಯಲ್ ಟ್ರಸ್ಟಿನ ‘ಪ್ರಮಾ ಅವಾರ್ಡ್’.
¶ ಸಾಗರದಲ್ಲಿ ನಡೆದ ಸಾಗರೋತ್ಸವದಲ್ಲಿ ‘ಸಹೃದಯ ಬಾಲಪ್ರತಿಭಾ’ ಪ್ರಶಸ್ತಿ.
¶ ಮಣಿಪಾಲದ ಪರ್ಕಳದಲ್ಲಿ ‘ವಿಪ್ರಸಾಧಕಿ ಪ್ರಶಸ್ತಿ.’
¶ ಕರ್ನಾಟಕ ಸರ್ಕಾರದ ‘ಕೆಳದಿ ಚೆನ್ನಮ್ಮ ಅಸಾಧಾರಣ ಬಾಲಪ್ರತಿಭೆ’ ಜಿಲ್ಲಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರ ಮತ್ತು ಗೌರವಗಳು ಸಂದಿವೆ.

Author Details


Srimukha

Leave a Reply

Your email address will not be published. Required fields are marked *