“ಶ್ರೀ ಮಠದ ಸಂಘಟನೆಯನ್ನು ಬಲ ಪಡಿಸುವುದೇ ಜೀವನದ ಗುರಿ” : ದೇವಿಕಾ ಶಾಸ್ತ್ರಿ

ಮಾತೃತ್ವಮ್

ತವರುಮನೆ ಪೆರ್ನಾಜೆ ಮನೆತನದವರು ಬಹಳ ಹಿಂದಿನಿಂದಲೂ ಏಳು ಗ್ರಾಮಗಳ ಗುರಿಕ್ಕಾರರಾದುದರಿಂದ ಬೆಳ್ತಂಗಡಿ ಸಮೀಪದ ಪಿಲಿಗೂಡಿನಲ್ಲಿರುವ ಮಾತೃತ್ವಮ್ ಮಹಾಮಂಡಲ ಸಂಚಾಲಕಿಯಾಗಿರುವ ದೇವಿಕಾ ಶಾಸ್ತ್ರಿ ಅವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿತು.

“ನಾನು ಪುಟ್ಟ ಬಾಲಕಿಯಾಗಿದ್ದಾಗ ದೊಡ್ಡ ಗುರುಗಳು ಸುಮಾರು ಒಂದು ತಿಂಗಳಷ್ಟು ಸಮಯ ನಮ್ಮಲ್ಲಿ ಮೊಕ್ಕಾಂ ಹೂಡಿದ್ದರು. ಆಗ ನಾನು ಅತೀವ ಕುತೂಹಲ, ಶ್ರದ್ಧೆಗಳಿಂದ ನಿತ್ಯವೂ ಶ್ರೀಕರಾರ್ಚಿತ ಪೂಜೆಯನ್ನು ನೋಡುತ್ತಿದ್ದೆ. ಆಗಲೇ ಮನಸ್ಸಿನಲ್ಲಿ ಶ್ರೀಗುರುಗಳ ಬಗ್ಗೆ, ಶ್ರೀಮಠದ ಬಗ್ಗೆ ಭಕ್ತಿ ಭಾವ ಬೆಳೆಯಿತು. ಅದುವೇ ಮುಂದಿನ ಸೇವೆಗಳಿಗೆ ಭದ್ರ ಬುನಾದಿಯಾಯಿತು. ಮದುವೆಯ ನಂತರ ಪತಿ ಮಣಿಮುಂಡ ಮೂಲದ ನೆಕ್ಕರೆ ದಿವಾಕರ ಶಾಸ್ತ್ರಿಗಳ ಮನೆಯವರು ಸಹಾ ಗುರುಭಕ್ತರಾದುದರಿಂದ ಶ್ರೀಮಠ ಮತ್ತಷ್ಟು ನಿಕಟವಾಯಿತು. ಭಕ್ತಿ ಮಾರ್ಗದಲ್ಲಿ ಆಸಕ್ತಿ ಇದ್ದ ನನಗೆ ಶ್ರೀ ಗುರುಗಳ ವಿವಿಧ ಯೋಜನೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜನ್ಮ ಪಾವನಗೊಳಿಸುವ ಅವಕಾಶ ಒದಗಿಬಂತು”  ಎಂದು ಹರ್ಷದಿಂದ ನುಡಿಯುವ ದೇವಿಕಾ ಶಾಸ್ತ್ರಿಯವರು ೧೯೯೮ ರಿಂದ ಶ್ರೀಮಠದ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾರಂಭಿಸಿದರು.

ಮಹಿಳಾ ಪರಿಷತ್ ರೂಪೀಕರಣಗೊಂಡಾಗ ಮಂಗಳೂರು ಹೋಬಳಿ ಮಹಿಳಾ ಪರಿಷತ್ತಿನ ಕಾರ್ಯದರ್ಶಿಯಾಗಿದ್ದವರು ಮುಂದೆ ಆರು ವರ್ಷಗಳ ಕಾಲ ಮಾತೃಪ್ರಧಾನೆಯಾಗಿಯೂ, ಇತ್ತೀಚಿನ ಮೂರು ವರ್ಷಗಳ ಕಾಲ ಮಂಡಲ ಉಪಾಧ್ಯಕ್ಷೆಯಾಗಿಯೂ, ಪ್ರಸ್ತುತ ಮಹಾಮಂಡಲದ ಮಾತೃಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಸಂಸ್ಥಾನದವರ ಯೋಜನೆಗಳೆಲ್ಲವೂ ಸಮಾಜದ ಉನ್ನತಿಗೆ ಎಂದು ತಿಳಿದ ಕಾರಣ ಹಿಂದೆ ಮುಂದೆ ಯೋಚಿಸದೆ ಮಾಸದ ಮಾತೆಯಾಗಿ ಸೇರಿದೆ ಎನ್ನುವ ದೇವಿಕಾ ಶಾಸ್ತ್ರಿ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಬಾಗಿನ ಪಡೆದವರು.

ಮನಸ್ಸಿನಲ್ಲಿ ಊಹಿಸಿದ ಕಾರ್ಯಗಳು ಸಹಾ ಶ್ರೀ ಗುರು ಕಾರುಣ್ಯದಿಂದ ಕೈಗೂಡಿದಾಗ ಗುರುಪೀಠದ ಮೇಲೆ ಮತ್ತಷ್ಟು ಶ್ರದ್ಧೆ, ವಿಶ್ವಾಸ ಹೆಚ್ಚುತ್ತದೆ ಎಂಬುದು ಅವರ ಮನದಾಳದ ಮಾತುಗಳು.

ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚ ಭರಿಸಿ ಮಾಸದ ಮಾತೆಯಾಗಿ ಗುರಿ ತಲುಪಿದ ಇವರಿಗೆ ಆರಂಭದಲ್ಲಿ ಒಂದೆರಡು ಕಡೆಗಳಲ್ಲಿ ಕಹಿ ಅನುಭವಗಳು ಉಂಟಾದರೂ ಅವುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಮುಂದೆ ನಡೆದವರು.

ಹಳ್ಳಿಯ ಜನರು ಗೋಸ್ವರ್ಗದ ಬಗ್ಗೆ ಕೇಳಿದಾಗ ತುಂಬಾ ಕುತೂಹಲದಿಂದ ಅದರ ವಿಚಾರಗಳನ್ನು ಕೇಳಿ ತಿಳಿದುಕೊಂಡು ಗೋಸ್ವರ್ಗವನ್ನು ನೋಡುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದರು.

“ನೀವು ನಿಜಕ್ಕೂ ಪುಣ್ಯವಂತರು. ನಿಮ್ಮ ಗುರುಗಳ ಯೋಜನೆಗಳು ಸಮಾಜಕ್ಕೆ ಒಳಿತನ್ನು ಉಂಟು ಮಾಡುತ್ತವೆ” ಎಂದು ಇತರ ಸಮಾಜದ ಜನರು ಹೇಳುವಾಗ ಮನಸ್ಸಿಗೆ ಅತ್ಯಂತ ಆನಂದವಾಗುತ್ತದೆ. ಈ ಸೇವೆಯಲ್ಲಿ ಪಾಲ್ಗೊಂಡ ಬಗ್ಗೆ ಹೆಮ್ಮೆ, ಸಂತಸ ದೊರಕುತ್ತದೆ. ಈ ಮೂಲಕ ಅದೆಷ್ಟೋ ಗುರುಬಂಧುಗಳು ಆತ್ಮೀಯರಾಗಿದ್ದಾರೆ ಎಂಬ ಸಂತಸ ದೇವಿಕಾ ಶಾಸ್ತ್ರಿ ಅವರಿಗೆ ‌.

ಒಂದು ಬಾರಿ ಪೋನ್ ಮೂಲಕ ಮಾತೆಯೊಬ್ಬರ ಬಳಿ ಮಾತೃತ್ವಮ್ ಯೋಜನೆಯ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಅವರು ಅತೀವ ನೋವಿನಿಂದ ” ಹಳ್ಳಿಯಲ್ಲಿ ಹಸು ಸಾಕುವವರಿಗೆ ಯಾರು ಹೆಣ್ಣು ಕೊಡುತ್ತಾರೆ” ಎಂದು ತಮ್ಮ ಮಗನಿಗೆ ಮನೆಯಲ್ಲಿ ಹಸುಗಳಿವೆ ಎಂಬ ಕಾರಣದಿಂದ ತಪ್ಪಿ ಹೋದ ಮದುವೆ ಬಗ್ಗೆ  ನೋವು, ಸಂಕಟಗಳನ್ನು ಹೊರಹಾಕಿದ್ದರು. ಆ ಕ್ಷಣದಲ್ಲಿ ನನಗೂ ಏನು ಉತ್ತರ ಕೊಡಬೇಕೆಂದು ಅರಿಯದೆ ತೊಳಲಾಡುವಂತಾಗಿತ್ತು. ಗೋವಿನ ಮಹತ್ವವನ್ನು ತಿಳಿದು, ಅವುಗಳ ಪಾಲನೆ ಮಾಡುವ ನಮ್ಮ ಸಮಾಜದ ಯುವಕರ ಬಗ್ಗೆ ಅವರ ತಾಯಂದಿರು ಹೀಗೆ ಸಂಕಟಪಡುವಂತಾಯಿತಲ್ಲಾ’ ಎಂಬ ಭಾವನೆ ಬಂದಿತ್ತು. ಆದರೆ ಶ್ರೀ ಗುರುಗಳ ಕೃಪೆ. ಆ ತಾಯಿಯ ನೋವಿಗೆ ಬಹುಬೇಗ ಪರಿಹಾರ ದೊರಕಿದೆ. ಆ ಯುವಕನಿಗೆ ಸೂಕ್ತ ಕನ್ಯೆ ದೊರಕಿ ವಿವಾಹ ನಿಶ್ಚಿತಾರ್ಥ ನಡೆದ ವಿಚಾರವನ್ನು ಆ ತಾಯಿಯೇ ನನಗೆ ತಿಳಿಸಿದಾಗ ಮನಸ್ಸಿಗೆ ಉಂಟಾದ ನೆಮ್ಮದಿ ಅಪಾರ. ಈ ಘಟನೆ ನಿಜಕ್ಕೂ ಮರೆಯಲಾಗದ ಅನುಭವ’ ಎಂದು ಮಾಸದ ಮಾತೆಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ತಮಗೆ ಉಂಟಾದ ವಿಶೇಷ ಅನುಭವಗಳನ್ನು ವಿವರಿಸಿದರು.

ಅಭಯಾಕ್ಷರ ಅಭಿಯಾನದ ಸಂದರ್ಭದಲ್ಲೂ ಕೆಲವು ಕಹಿ ಅನುಭವಗಳು ಎದುರಾಗಿವೆ. ಆದರೆ ತಾಳ್ಮೆಯಿಂದ  ಸಂಪೂರ್ಣ ಮಾಹಿತಿ ನೀಡಿ ಸ್ಪಷ್ಟವಾಗಿ ವಿವರಿಸಿದಾಗ ಅತ್ಯಂತ ಉತ್ಸಾಹದಿಂದ ಅವರು ಸಹಾ ನಮ್ಮ ಜೊತೆ ಸೇವೆಗೆ ಕೈ ಜೋಡಿಸಿದ್ದಾರೆ.

“ಗುರುಸೇವೆಯಲ್ಲಿ ಆನಂದ ಕಂಡು ಕೊಳ್ಳುವವಳು ನಾನು. ಇದಕ್ಕೆ ನಮ್ಮ ಯಜಮಾನರ ಸಂಪೂರ್ಣ ಸಹಕಾರ ಇದೆ.  ನಮ್ಮ ಸಮಾಜದಿಂದ ದೂರ ಸರಿದಿರುವವರ ಮನವೊಲಿಸಿ ಅವರನ್ನೆಲ್ಲ ಮತ್ತೆ ಒಂದು ಗೂಡಿಸಿ ಸುಭದ್ರ ಸಂಘಟನೆಯ ನಿರ್ಮಾಣವೇ ನನ್ನ ಗುರಿ. ಸಂಘಟನೆಯನ್ನು ಸರಿ ಪಡಿಸಿ,ಬಲಪಡಿಸುವ ಮೂಲಕ ಅವರ ಬದುಕು ಕೂಡ ಶ್ರೀಮಠದ ಸೇವೆಯಲ್ಲಿ ಸಾರ್ಥಕ ಭಾವ ಪಡೆಯುವಂತಾಗ ಬೇಕು ಎಂಬುದೇ ಉದ್ದೇಶ” ಎನ್ನುವ ದೇವಿಕಾ ಶಾಸ್ತ್ರಿ ಅವರಿಗೆ  “ಸಮಾಜದ ಒಳಿತಿಗಾಗಿ ಯಾವ ಕೆಲಸವನ್ನು ಮಾಡಬೇಕು ಎಂಬುದೇ ಸತತ ಯೋಚನೆಯಂತೆ.

ಶ್ರೀ ಸಂಸ್ಥಾನದವರ ಮಾರ್ಗದರ್ಶನ ಪಡೆಯುತ್ತಾ ಕೊನೆಯ ಉಸಿರಿನ ವರೆಗೂ ಪತಿಯೊಡಗೂಡಿ ಶ್ರೀ ಮಠದ ಸೇವೆ ಮಾಡಬೇಕೆಂಬ ಮಹದಾಸೆ ಹೊತ್ತಿರುವ ದೇವಿಕಾ ಶಾಸ್ತ್ರಿಯವರ ಜೀವನದ ಗುರಿ ಎಲ್ಲರಿಗೂ ಆದರ್ಶವಾಗಿದೆ.

Author Details


Srimukha

Leave a Reply

Your email address will not be published. Required fields are marked *