ಶಾಲೆಗಳು ಪ್ರತೀ ವಿದ್ಯಾರ್ಥಿಯ ಅಂತರಂಗವನ್ನು ನಿರ್ಮಾಣ ಮಾಡುತ್ತದೆ – ರಾಘವೇಶ್ವರಶ್ರೀ

ಇತರೆ

ಧರ್ಮಪರ ಸರಕಾರಗಳು ಎಷ್ಟು ಮುಖ್ಯವೋ ಧರ್ಮಪರ ಶಿಕ್ಷಣ ಸಂಸ್ಥೆಗಳೂ ಅಷ್ಟೇ ಮುಖ್ಯ. ಧರ್ಮ-ಸಂಸ್ಕೃತಿ ಆಧಾರಿತ ಶಿಕ್ಷಣ ದೇಶಕ್ಕೆ ಅಗತ್ಯ.ಸರಕಾರಗಳು ರಸ್ತೆ ಸಹಿತ ಮೂಲಭೂತ ಸೌಕರ್ಯಗಳ ಕುರಿತಂತೆ ಬಹಿರಂಗ ಕಾರ್ಯಗಳನ್ನು ಮಾಡಿದರೆ ಶಾಲೆಗಳು ಪ್ರತೀ ವಿದ್ಯಾರ್ಥಿಯ ಅಂತರಂಗವನ್ನು ನಿರ್ಮಾಣ ಮಾಡುವ ಕೆಲಸವನ್ನು ಮಾಡುತ್ತಿವೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಇ) ಇದರ ನೂತನ ಕಟ್ಟಡ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸನಾತನ ಧರ್ಮ ಆಧಾರಿತ ಶಿಕ್ಷಣ ಪದ್ಧತಿ ಭಾರತದಲ್ಲಿ ಮತ್ತೆ ಜಾರಿಗೆ ಬರುತ್ತಿರುವುದು ಸಂತಸದ ವಿಚಾರ. ಭಾಷಾ ಮಾಧ್ಯಮ ಯಾವುದೇ ಇರಲಿ ಆದರೆ ಸಂಸ್ಕೃತಿ ಮತ್ತು ಸಂಸ್ಕಾರ ನಮ್ಮದಾಗಿರಲಿ. ಭಾರತದ ಇತಿಹಾಸ ಮತ್ತು ಪರಂಪರೆಯನ್ನು ಅವಲೋಕಿಸಿದರೆ ಇಲ್ಲಿನ ಗುರುಕುಲ ಶಿಕ್ಷಣ ಪದ್ಧತಿಗಳು ನೆನಪಿಗೆ ಬರುತ್ತದೆ. ಲಕ್ಷಲಕ್ಷ ಗುರುಕುಲಗಳು ಭಾರತದಲ್ಲಿ ಇದ್ದವು. ಸಮೂಹ ಶಿಕ್ಷಣ ಪದ್ಧತಿ ಅಸ್ತಿತ್ವದಲ್ಲಿರದ ಇಂಗ್ಲೆಂಡ್ ದೇಶದಲ್ಲಿ ಭಾರತೀಯ ಗುರುಕುಲ ಮಾದರಿಯನ್ನು ಕ್ರೈಸ್ತ ಮಿಷನರಿಗಳು ಆರಂಭಿಸಿದವು ಎಂದು ಹೇಳಿದರು.

ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ಶಾಲೆಗಳು ಜಾಸ್ತಿಯಾದರೂ ಶಿಕ್ಷಣದ ವ್ಯವಸ್ಥೆ, ಗುಣಮಟ್ಟ ಬದಲಾಗದ ಪರಿಸ್ಥಿತಿ ಮತ್ತು ಎಲ್ಲರೂ ಸ್ವಾರ್ಥವನ್ನೇ ನೋಡುವ ಸಂದರ್ಭದಲ್ಲಿ ಈ ಭಾಗದ ಶಾಲೆಯನ್ನು ನೋಡಿದಾಗ ಇದೊಂದು ವಿಭಿನ್ನ ಸಂಸ್ಥೆಯಾಗಿದೆ.ಸಮಾಜದ ಮೂಲಕವೇ ಮತ್ತೊಮ್ಮೆ ಹೊಸ ವ್ಯವಸ್ಥೆಯನ್ನು ಅರಳಿಸುವ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ಪ್ರಯತ್ನ ದೇಶಕ್ಕೇ ಮಾದರಿ ಎಂದು ಹೇಳಿದರು.

‘ಕಲ್ಪನಾ ಚಾವ್ಲಾ’ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಶ್ರೇಷ್ಟವಾದ ಚಿಂತನೆಯ ಆಧಾರದಲ್ಲಿ ಕೊಡಬೇಕೆಂಬ ಕಲ್ಪನೆಯ ಏಕೈಕ ಕಾಲೇಜು ವಿವೇಕಾನಂದ ವಿದ್ಯಾ ಸಂಸ್ಥೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳು ಏಕವ್ಯಕ್ತಿಯ ಶಿಕ್ಷಣ ಸಂಸ್ಥೆಗಳು.ವ್ಯಾಪಾರದ ಹಿಂದೆ ಇರುವಂತಹದ್ದು, ಸಾಮೂಹಿಕವಾಗಿ ಚಿಂತನೆಯೊಂದಿಗೆ ಶಿಕ್ಷಣವನ್ನು ಬೆಳೆಸಿರುವ ಸಂಸ್ಥೆ ಎಂದರೆ ಅದು ವಿವೇಕಾನಂದ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಿದ್ದರು.

ಪುತ್ತೂರು ಶಾಸಕ ಸಂಜೀವ ಮಠಂದೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಸಿ)ಯ ಮುಖ್ಯಶಿಕ್ಷಕಿ ಸಿಂಧು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವೇಕಾನಂದ ಸಿಬಿಎಸ್‌ಸಿ ಶಾಲೆಯ ಅನನ್ಯ, ಜನ್ಯ, ಧೃತಿ, ಅದ್ಯಲಕ್ಷ್ಮೀ ಮತ್ತು ಸುದೀಕ್ಷಾ ಪ್ರಾರ್ಥಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಇ)ಯ ಆಡಳಿತ ಮಂಡಳಿ ಸಂಚಾಲಕ ಭರತ್ ಪೈ ಸ್ವಾಗತಿಸಿದರು. ಅಧ್ಯಕ್ಷೆ ವಸಂತಿ ಕೆದಿಲ ವಂದಿಸಿದರು.ನರೇಂದ್ರ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ವಿಘ್ನೇಶ್, ಸಹನಾ ಕಾರ್ಯಕ್ರಮ ನಿರೂಪಿಸಿದರು.

Author Details


Srimukha

Leave a Reply

Your email address will not be published. Required fields are marked *