ಗೋಮಾತೆಯ ಸೇವೆಗಾಗಿ ಸಮಾಜದಲ್ಲಿ ಒಗ್ಗಟ್ಟು ಮೂಡಿದೆ : ಅನಿತಾ ಹೆಗಡೆ, ಬೆಂಗಳೂರು

ಮಾತೃತ್ವಮ್

 

” ಗೋಸೇವೆ ನಮ್ಮ ಜೀವನದ ಅವಿಭಾಜ್ಯ ಅಂಗ. ಶ್ರೀಗುರುಗಳಿಂದಾಗಿ ನಮಗೆ ಇಂತಹ ಅವಕಾಶ ಒದಗಿಬಂತು. ಪೂರ್ವ ಜನ್ಮದ ಸುಕೃತದಿಂದ ನಾವು ನಮ್ಮ ಗುರುಗಳನ್ನು ಪಡೆದೆವು. ಅವರ ಮಾರ್ಗದರ್ಶನದಿಂದ ದೊರಕಿದ ಗೋಮಾತೆಯ ಸೇವೆಗಾಗಿ ಸಮಾಜವೇ ಒಂದಾಗಿದೆ ” ಎನ್ನುವವರು ಮೂಲತಃ ಸಿದ್ಧಾಪುರ ತಾಲೂಕಿನವರಾದ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ ಯಲಹಂಕ ಅವಲಳ್ಳಿಯ ನಾರಾಯಣ ಹೆಗಡೆಯವರ ಪತ್ನಿ ಅನಿತಾ ಹೆಗಡೆ.

ಸಿದ್ಧಾಪುರ ತಾಲೂಕಿನ ಕರಿಬಾಳು ಶಿವರಾಮ ಭಟ್ಟ ಹಾಗೂ ಸಾವಿತ್ರಿ ಭಟ್ಟ ಅವರ ಪುತ್ರಿಯಾದ ಅನಿತಾ ಹೆಗಡೆಯವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ಕೋಟಿ ದೇವತೆಗಳ ನಿವಾಸವಾಗಿರುವ ಗೋಮಾತೆಯ ಸೇವೆ ಮಾಡಲು ಅವಕಾಶ ದೊರಕಿದ್ದೇ ಪುಣ್ಯ ಎಂದು ಭಾವಿಸಿಕೊಂಡಿದ್ದೇನೆ. ಹವ್ಯಕೇತರ ಸಮಾಜದ ಗೋಪ್ರೇಮಿಗಳೇ ಈ ಕೈಂಕರ್ಯಕ್ಕೆ ಹೆಚ್ಚು ಕೈ ಜೋಡಿಸಿದವರು. ಕೇಳಿದವರೆಲ್ಲಾ ಗೋಮಾತೆಯ ಮಹತ್ವವನ್ನು ಅರಿತುಕೊಂಡು ಸಹಕಾರ ನೀಡಿದ್ದಾರೆ. ಇತರ ಸಮಾಜದವರಿಗೂ ಗೋಮಾತೆಯ ಮಹತ್ವ ಅರಿವಾಗಬೇಕೆಂಬುದೇ ನನ್ನ ಆಸೆ ” ಎನ್ನುವ ಅನಿತಾ ಹೆಗಡೆಯವರಿಗೆ ಗೋವುಗಳೆಂದರೆ ತುಂಬಾ ಪ್ರೀತಿ.

ಊರಿನಲ್ಲಿ ಇರುವಾಗಲೇ ಶ್ರೀಮಠದ ಸಂಪರ್ಕಕ್ಕೆ ಬಂದ ಇವರು ಬೆಂಗಳೂರು ನಗರಕ್ಕೆ ಬಂದ ಮೇಲೆ ಶ್ರೀಮಠದ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು. ಊರಿನಲ್ಲಿ ಹಸು ಸಾಕಣೆ ಇದ್ದರೂ ಇಲ್ಲಿ ಅದು ಅಸಾಧ್ಯ ಎಂಬ ನೋವಿನಲ್ಲಿ ಇರುವಾಗಲೇ ಅವರಿಗೆ ಶ್ರೀಮಠದ ಮೂಲಕ ಗೋಮಾತೆಯ ಸೇವೆಯ ಅವಕಾಶ ಒದಗಿ ಬಂತು.

” ನಮ್ಮ ಮಠದ ಆದರಾಥಿತ್ಯಗಳು ನಮಗೆ ಮಾದರಿಯಾಗಬೇಕು. ಯಾರು ಎಷ್ಟು ಹೊತ್ತಿಗೆ ಹೋದರೂ ಸ್ವಲ್ಪವೂ ಬೇಸರಿಸದೆ ತಮ್ಮ ಆತ್ಮೀಯ ನೆಂಟರು ಬಂದಂತೆ ಉಪಚರಿಸುವ ಕಲೆ ಎಲ್ಲರಿಗೂ ಮಾದರಿ ” ಎನ್ನುವ ಇವರು ಒಂದು ಬಾರಿ ಶ್ರೀಮಠಕ್ಕೆ ಹೋಗಿದ್ದಾಗ ತುಸು ಅನಾರೋಗ್ಯ ಕಾಡಿದ ಸಂದರ್ಭದಲ್ಲಿ ಅಲ್ಲಿಯವರು ವಹಿಸಿದ ಕಾಳಜಿಯ ಬಗ್ಗೆ ಹೃದಯ ತುಂಬಿ ನುಡಿಯುತ್ತಾರೆ ‌.

ಯೋಗ, ಭಜನೆ, ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುವ ಅನಿತಾ ಹೆಗಡೆ ವಿ ವಿ ವಿ ಗಾಗಿಯೂ ಸೇವೆ ಮಾಡುತ್ತಿದ್ದಾರೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ತಮ್ಮ ಅನೇಕ ಕನಸುಗಳು ನನಸಾಗಿವೆ, ಎಲ್ಲವೂ ಶ್ರೀಗುರುಗಳ ಕೃಪೆ, ಮಂತ್ರಾಕ್ಷತೆಯ ಮಹಿಮೆ ಎನ್ನುವ ಇವರು ಮನೆಯ ಪ್ರತಿಯೊಬ್ಬ ಸದಸ್ಯರ ಹುಟ್ಟುಹಬ್ಬದಂದೂ ಗೋಕಾಣಿಕೆಯನ್ನು ತೆಗೆದಿರಿಸುತ್ತಾರೆ.

” ಗೋಮಾತೆಯ ಸೇವೆಯನ್ನು ಈಗಲೂ ಮುಂದುವರಿಸುತ್ತಿದ್ದೇನೆ. ನಮ್ಮ ಮನೆಯವರು, ವಲಯದವರು ಸದಾ ನನ್ನ ಕಾರ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ ” ಎನ್ನುವ ಅನಿತಾ ಹೆಗಡೆಯವರಿಗೆ ಎಲ್ಲವನ್ನೂ ತಮಗೆ ನೀಡುವ ಸಮಾಜಕ್ಕಾಗಿ ತಾವೂ ಒಂದಿಷ್ಟು ನೀಡಬೇಕು ಎಂಬ ಸದಾಶಯವಿದೆ.

ಪ್ರಸನ್ನಾ ವಿ ಚೆಕ್ಕೆಮನೆ
ಧರ್ಮತ್ತಡ್ಕ

Author Details


Srimukha

Leave a Reply

Your email address will not be published. Required fields are marked *