ಗೋಮಾತೆಯ ಸೇವೆ ಮಾಡಲು ಹೃದಯ ಶ್ರೀಮಂತಿಕೆ ಇದ್ದರೆ ಸಾಕು : ಪುಷ್ಪಾ ಹರೀಶ್ , ಬೆಂಗಳೂರು

ಮಾತೃತ್ವಮ್

 

” ಗೋಸೇವೆ ಮಾಡಲು ಮುಂದೆ ಬರುವ ಮಾತೆಯರು ಯಾವುದೇ ಕಾರಣಕ್ಕೂ ಅಳುಕಬಾರದು, ಗೋಸೇವೆ ಮಾಡಲು ಪೂರ್ವ ಜನ್ಮದ ಸುಕೃತ ಬೇಕು, ಗೋಮಾತೆಯ ಸೇವೆಗೆ ಹೃದಯ ಶ್ರೀಮಂತಿಕೆ ಅತೀ ಅಗತ್ಯ ” ಎಂದವರು ಬೆಂಗಳೂರು ಉತ್ತರ ಮಂಡಲ ಸರ್ವಜ್ಞ ವಲಯದ ಹರೀಶ್ ಭಟ್ ಅವರ ಪತ್ನಿ ಪುಷ್ಪಾ.

ಮುರುಡೇಶ್ವರದ ಗಜಾನನ ಭಟ್ ಹಾಗೂ ಭವಾನಿ ದಂಪತಿಗಳ ಪುತ್ರಿಯಾದ ಇವರು ಸರ್ವಜ್ಞ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

” ತವರಿಗೆ ಹೋಗಿದ್ದಾಗ ಅಕ್ಕನ ಜೊತೆ ಮೊದಲ ಬಾರಿ ಶ್ರೀಗುರುಗಳ ದರ್ಶನ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದೆ. ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಕುಂಕುಮಾರ್ಚನೆ, ಭಜನೆಗಳನ್ನು ಮಾಡುತ್ತಿದ್ದೆ. ನಮ್ಮ ವಲಯದ ವೀಣಾ ಗೋಪಾಲ, ಅಮೃತಾ ಪ್ರಸಾದ್ ಇವರ ಪ್ರೋತ್ಸಾಹದಿಂದ ಗೋಸೇವೆಯಲ್ಲಿ ತೊಡಗಿಸಿಕೊಂಡೆ.‌ ಅಭಯಾಕ್ಷರ ಅಭಿಯಾನದಲ್ಲಿ ಭಾಗವಹಿಸಿದೆ. ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಬಾಗಿನವನ್ನೂ ಸ್ವೀಕರಿಸಿದೆ.‌ ನಿಮ್ಮ ಮನೆಯ ಮಗು ಎಂದು ಭಾವಿಸಿ ಸಹಕಾರ ನೀಡಿ ‘ ಎಂದು ಜನರಲ್ಲಿ ಕೇಳಿಕೊಂಡಾಗ ಗೋಮಾತೆಯ ಸೇವೆಗೆ ಅನೇಕ ಮಂದಿ ತಾವಾಗಿಯೇ ಮುಂದೆ ಬಂದು ಕೈ ಜೋಡಿಸಿದರು. ನನ್ನ ಮಕ್ಕಳು, ಅಳಿಯಂದಿರು ಸಹಾ ಸಹಕಾರ ನೀಡಿದ್ದಾರೆ ” ಎನ್ನುವ ಪುಷ್ಪಾ ಹರೀಶ್ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ತಮ್ಮ ಕಿರಿಯ ಮಗಳ ಮದುವೆಯನ್ನು ಬಾನ್ಕುಳಿಯ ಗೋಸ್ವರ್ಗದಲ್ಲಿ ಸರಳವಾಗಿ ನಡೆಸಿದ ಇವರು ಉಳಿದ ಹಣವನ್ನು ಗೋಸ್ವರ್ಗಕ್ಕೆ ಅರ್ಪಿಸಿದವರು. ಗೋಸ್ವರ್ಗದಲ್ಲಿ ಮದುವೆಗೆ ಬಂದ ಅನೇಕ ಮಂದಿ ಇಲ್ಲಿರುವ ಗೋವುಗಳನ್ನು ಕಂಡು ಸಂತಸಪಟ್ಟು ತಾವಾಗಿಯೇ ಗೋಸೇವೆಗೆ ಮುಂದೆ ಬಂದಿರುವುದು ಪುಷ್ಪಾ ಅವರಿಗೆ ಅತ್ಯಂತ ಹರ್ಷ ನೀಡಿದ ವಿಚಾರ.

” ಗೋಸ್ವರ್ಗದಲ್ಲಿ ಸರಳವಾಗಿ ಮಗಳ ಮದುವೆ ಮಾಡಿದೆವು. ಬಂದ ಅತಿಥಿಗಳಿಗೆಲ್ಲ ಗೋಗ್ರಾಸ ನೀಡುವ ಅವಕಾಶವೂ ಒದಗಿತು. ಸುಂದರವಾದ ವಾತಾವರಣದಲ್ಲಿ ಮದುವೆ ಮಾಡಿದಿರಿ ಎಂದು ಅನೇಕ ಮಂದಿ ಹೊಗಳಿದರು. ಬಾಳೆದಿಂಡಿನ ಮಂಟಪ ಎಲ್ಲರಿಗೂ ಖುಷಿ ನೀಡಿತು. ಮದುಮಕ್ಕಳ ಮೂಲಕ ಗೋದಾನ ಸೇವೆಯನ್ನು ಮಾಡಿಸಿದೆವು ” ಎಂದು ಸಂತಸ ಹಂಚಿಕೊಳ್ಳುವ ಪುಷ್ಪಾ ಹರೀಶ್ ಅವರ ಜೀವನದಲ್ಲಿ ಬಾಲ್ಯದ ಘಟನೆಯೊಂದು ಗೋಮಾತೆಯ ಬಗ್ಗೆ ವಿಶೇಷ ಪ್ರೀತಿ ಬೆಳೆಯಲು ಸಹಕಾರಿಯಾಗಿದೆ.

” ಸುಮಾರು ಎಪ್ಪತ್ತು ವರ್ಷಗಳ ಹಿಂದೆ ನಡೆದ ಘಟನೆಯಿದು. ನಮ್ಮ ಮನೆಯಲ್ಲಿ ಮಂಗಳಗೌರಿ ಎಂಬ ಹಸುವಿತ್ತು. ಅಮ್ಮ ನಿತ್ಯವೂ ಆ ಹಸುವಿಗೆ ಅರಶಿನ ಕುಂಕುಮ ಹಚ್ಚುತ್ತಿದ್ದರು. ನಮ್ಮ ಮನೆಯ ಸುತ್ತಮುತ್ತ ಅದನ್ನು ಓಡಾಡಲು ಬಿಡುತ್ತಿದ್ದೆವು. ಒಮ್ಮೆ ನನ್ನ ತಂದೆಗೆ ರಕ್ತಭೇದಿ ಆರಂಭವಾಗಿ ಯಾವುದೇ ಔಷಧಕ್ಕೂ ಬಗ್ಗದೆ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ‌ಒಂದು ದಿನ ಮಂಗಳಗೌರಿ ನಮ್ಮ ಚಾವಡಿಗೆ ಬಂದು ಮಲಗಿರುವ ಅಪ್ಪನ ಮೈಯನ್ನೆಲ್ಲಾ ನೆಕ್ಕಿತು. ಆಶ್ಚರ್ಯ ಎಂಬಂತೆ ಯಾವುದೇ ಔಷಧಿಗೂ ಬಾಗದಿದ್ದ ಅಪ್ಪನ ಅನಾರೋಗ್ಯ ಠಪ್ಪನೆ ಒಂದೇ ದಿನದಲ್ಲಿ ಮಾಯವಾಗಿ ಅಪ್ಪ ಮುಂದೆ ಯಾವುದೇ ಕಾಯಿಲೆಗೂ ಒಳಗಾಗದೆ ದೀರ್ಘಾಯುವಾಗಿ ಬಾಳಿದರು. ಇದು ಗೋಮಾತೆಯ ಮಹಿಮೆಯಲ್ಲದೆ ಇನ್ನೇನು ? ” ಎನ್ನುವ ಪುಷ್ಪಾ ಹರೀಶ್ ಅವರಿಗೆ ದೇಶದ ಮೂಲೆ ಮೂಲೆಗಳಿಗೂ ದೇಶೀಯ ತಳಿ ಹಸುಗಳ ಮಹತ್ವ ಅರಿವಾಗಬೇಕು, ಮಾತೆಯರೆಲ್ಲ ತಾವಾಗಿಯೇ ಗೋಸೇವೆಗೆ ಮುಂದೆ ಬರುವಂತಾಗಬೇಕು ಎಂಬ ಸದಾಶಯವಿದೆ.

 

Author Details


Srimukha

Leave a Reply

Your email address will not be published. Required fields are marked *