ಗುರಿಯೆಡೆಗಿನ ರಹದಾರಿಯಲ್ಲಿ ಸಾಧನೆಯ ಸಿಂಚನಾ…

ಅಂಕುರ

 

ಸಾಧನೆಯ ದಾರಿಯಲ್ಲಿ ಕಲ್ಲುಮುಳ್ಳುಗಳಿಗೆ ಏತರ ಕೊರತೆ? ಆ ಕಲ್ಲುಮುಳ್ಳುಗಳು ನಮ್ಮ ದೃಢಮನಸ್ಸನ್ನು ಪರೀಕ್ಷಿಸುತ್ತಿರುತ್ತವೆ. ಅವುಗಳಿಗೆ ಅಂಜದೆ ಗುರಿಯನ್ನು ಸಾಧಿಸಬೇಕಾದುದು ನಮ್ಮ ಕರ್ತವ್ಯ.
ದೈಹಿಕ ಸಮಸ್ಯೆಯಿದ್ದರೂ ಅದನ್ನು ಮೆಟ್ಟಿನಿಂತು ತನ್ನ ಗುರಿಯನ್ನು ಸಾಧಿಸಿ ದೇಶವೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ ಒಬ್ಬಾಕೆ ಸಾಧಕಿ ನಮ್ಮೂರಿನಲ್ಲಿದ್ದಾರೆ….

“ಎಷ್ಟು ಹೊತ್ತು ಓದುತ್ತೇವೆಂಬುದು ಮುಖ್ಯವಲ್ಲ. ಓದುವಷ್ಟು ಹೊತ್ತು ಯಾವ ರೀತಿ ಓದುತ್ತೇವೆಂಬುದು ವಿಷಯವಾಗುತ್ತದೆ ಮತ್ತು ಓದಿನೊಂದಿಗೆ ಹೊಂದಿಕೊಂಡಿರುವುದು ಮುಖ್ಯವಾಗುತ್ತದೆ.” ಎಂಬ ಈ ಮಾತನ್ನು ಆಡಿದವರು ಸಿಂಚನಾ ಲಕ್ಷ್ಮೀ. ಈ ವರ್ಷದ NEET ಪರೀಕ್ಷೆಯಲ್ಲಿ ದೇಶಕ್ಕೆ ಎರಡನೇ ರ‌್ಯಾಂಕ್ ಪಡೆದ ನಮ್ಮೂರ ಹೆಮ್ಮೆ.

17 ಅಕ್ಟೋಬರ್ 2003 ರಂದು ಮುರಳೀಧರ ಭಟ್ ಬಂಗಾರಡ್ಕ ಮತ್ತು ಶೋಭಾ ಅವರ ದ್ವಿತೀಯ ಪುತ್ರಿಯಾಗಿ ಜನಿಸಿದ ಕುಮಾರಿ ಸಿಂಚಾನಾಲಕ್ಷ್ಮೀಗೆ ಜನ್ಮತಃ ‘Congenital Scoliosis’ ಎಂಬ ಬೆನ್ನುಮೂಳೆ ಒಂದು ಪಾರ್ಶ್ವಕ್ಕೆ ಬಾಗಿಕೊಂಡಿರುವ ಸಮಸ್ಯೆ ಇತ್ತು.
ಅದನ್ನು ಸರಿಪಡಿಸಲೆಂದು ಆರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಆಗೆಲ್ಲಾ ಆಕೆಗೆ ಶಾಲೆಗೆ ಹಾಜರಾತಿ ಇರುತ್ತಿರಲಿಲ್ಲ‌.

“ಸಹಪಾಠಿಗಳು ಮತ್ತು ಶಿಕ್ಷಕರ ಸಹಕಾರವನ್ನು ಮರೆಯುವಂತಿಲ್ಲ. ನಾನು LKG ಯಿಂದ SSLC ತನಕ ಓದಿದ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, PUC ಓದಿದ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜ್ ಎರಡೂ ವಿದ್ಯಾಲಯಗಳಲ್ಲೂ ಉತ್ತಮ ಬೆಂಬಲ ಪ್ರೋತ್ಸಾಹವೂ ಲಭಿಸಿತ್ತು.
ನಾನು ಗೈರುಹಾಜರಾಗಿದ್ದ ಸಮಯದಲ್ಲಿನ ನೋಟ್ಸ್‌ಗಳನ್ನು ನೀಡಿ ಗೆಳೆಯರು ಸಹಾಯ ಮಾಡುತ್ತಿದ್ದರು. ಶಿಕ್ಷಕರು ಅರ್ಥವಾಗದ ಪಾಠಗಳನ್ನು ಹೇಳಿಕೊಡುತ್ತಿದ್ದರು.” ಎನ್ನುತ್ತಾರೆ ಸಿಂಚನಾ.

ಹೆತ್ತವರು ಯಾವತ್ತೂ ಮಗಳ ಆರೋಗ್ಯ ಸಮಸ್ಯೆಯಿಂದ ಧೃತಿಗೆಡದೆ ಆಕೆಯ ಸಾಧನೆಗೆ ಬೆಂಬಲವಾಗಿದ್ದರು. ಅವರು ಉತ್ತಮ ಪರಿಸರವನ್ನು ಮಗಳಿಗಾಗಿ ನೀಡಿದ್ದರು. ಮನೆಯವರ ಬೆಂಬಲವನ್ನು ಮತ್ತು ಧೈರ್ಯದ ನುಡಿಗಳು ನನಗೆ ಯಾವತ್ತೂ ಧೈರ್ಯವನ್ನು ಕೊಡುತ್ತಿತ್ತು ಎಂದು ಅವರು ಹೇಳುತ್ತಾರೆ.

‘ಬೆಳೆಯುವ ಸಿರಿ ಮೊಳಕೆಯಲ್ಲೇ’ ಎಂಬ ಹಿರಿಯರ ಮಾತಿನಂತೆಯೇ ಚಿಕ್ಕಂದಿನಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲೂ ಸಿಂಚನಾ ಗುರುತಿಸಿಕೊಂಡಿದ್ದರು. ಭಾಷಣ ಮತ್ತಿತರ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.
Young Scientist Award ಕೂಡಾ NCSC ಯಲ್ಲಿ ಬಾಚಿಕೊಂಡ ಪ್ರತಿಭಾವಂತೆ ಈಕೆ.

ಮುಂದೆ ಅದೇನೋ ದೊಡ್ಡದಾಗಿ ಸಾಧಿಸುವ ಸೂಚನೆಯೊಂದನ್ನು ಹಿಂದೆಯೇ ಪಿಯು ಬೋರ್ಡ್ ಪರೀಕ್ಷೆಯಲ್ಲಿ 600 ರಲ್ಲಿ 600 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಕೊಟ್ಟಿದ್ದರು ಸಿಂಚನಾ.

ಟೈಂ ಟೇಬಲ್ ಹಾಕಿಕೊಂಡು ಬದುಕುವುದಲ್ಲ – ಬದಲಾಗಿ ಸಮಯ ಸಂದರ್ಭ ನೋಡಿಕೊಂಡು ಕೆಲಸಗಳನ್ನು ಮಾಡುವ ಸಿಂಚನಾ, ದಿನಕ್ಕೆ ಆಗುವಷ್ಟು ಓದುತ್ತಿದ್ದರು ಮತ್ತು ಓದುವಷ್ಟನ್ನು ಅತ್ಯಂತ ಶ್ರದ್ಧೆಯಿಂದ ಓದುತ್ತಿದ್ದರು.

ಚಿಕ್ಕಂದಿನಿಂದಲೂ ಅವರಿಗೆ ಡಾಕ್ಟರ್ ಆಗಬೇಕೆಂಬ ಆಸೆ. “ಪ್ರತಿಯೊಬ್ಬ ವ್ಯಕ್ತಿಯಲ್ಲಿ ನಾನು ಕಾಣುವ ಉತ್ತಮ ಗುಣಗಳೆಲ್ಲವೂ ನನಗೆ ಪ್ರೇರಣೆ” ಎನ್ನುವ ಸಿಂಚನಾ ಮುಂದೆ ದೆಹಲಿಯ AIIMS ನಲ್ಲಿ MBBS ಮಾಡಬೇಕೆಂಬ ಕನಸು ಹೊತ್ತಿರುವ ಸಿಂಚನಾಗೆ ಮುಂದೆ ಯಾವ ಸ್ಪೆಶಲೈಸೇಶನ್‌ನತ್ತ ಆಸಕ್ತಿ ಮೂಡುವುದೋ ಅದರಲ್ಲೇ ಮುಂದುವರಿಯುವುದೆಂದು ನಿರ್ಧರಿಸಿದ್ದಾರೆ.

ಓದುವ ಸಮಯದಲ್ಲಿ ಒತ್ತಡ ನಿವಾರಣೆಗಾಗಿ ಸುಡೋಕು, ರುಬಿಕ್ಸ್ ಕ್ಯೂಬ್‌ನ ಪಜ಼ಲ್‌ಗಳನ್ನು ಭೇದಿಸುವ ಸಿಂಚನಾ ಬ್ಯಾಡ್ಮಿಂಟನ್ ಆಡುತ್ತಾರೆ ಅಥವಾ ತನಗೆ ಇಷ್ಟವಾಗುವಂಥ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.

ವಿವೇಕಾನಂದ ಪಿಯು ಕಾಲೇಜಿನಲ್ಲಿಯೇ ಕೋಚಿಂಗ್ ಲಭಿಸುತ್ತಿದ್ದುದರಿಂದ ಅದನ್ನೇ ಪಡೆದುಕೊಂಡ ಸಿಂಚನಾ, “ಒಳ್ಳೆಯ ಅಂಕಗಳು ಬರಬಹುದೆಂಬ ನಿರೀಕ್ಷೆಯಿತ್ತು, ಆದರೆ ರ‌್ಯಾಂಕನ್ನು ನಿರೀಕ್ಷಿಸಿರಲಿಲ್ಲ” ಎನ್ನುತ್ತಾರೆ.

ಅಕ್ಕ ಸಿಂಧೂರಾ ಸರಸ್ವತಿ ಕೂಡಾ ತಮ್ಮ ಇಂಜಿನಿಯರಿಂಗ್ ಕಾಲೇಜಿಗೆ ಮೊದಲನೇ ರ‌್ಯಾಂಕ್ ಪಡೆದು ಇದೀಗ ಉದ್ಯೋಗಸ್ಥೆಯಾಗಿದ್ದಾರೆ. ಇವರ ತಮ್ಮ ಚೈತನ್ಯ ರಾಮ್ ಕೂಡಾ ಮುಂದೆ ಅಕ್ಕಂದಿರ ದಾರಿಯನ್ನೇ ಹಿಡಿಯುವುದರಲ್ಲಿ ಸಂಶಯವಿಲ್ಲ.

ತಂದೆ, ತಾಯಿ, ಅಕ್ಕ, ತಮ್ಮ, ಮನೆಯವರು ಎಲ್ಲರೂ ಧೈರ್ಯ ಹೇಳಿ ತನ್ನನ್ನು ಉತ್ತೇಜಿಸಿದ್ದಾರೆ – ಅವರನ್ನು ಯಾವತ್ತೂ ಸ್ಮರಿಸುತ್ತೇನೆ ಎನ್ನುವ ಸಿಂಚನಾ ‘ವಿದ್ಯಾ ದದಾತಿ ವಿನಯಂ’ ಎಂಬ ಮಾತಿಗೆ ಪ್ರತ್ಯಕ್ಷ ಉದಾಹರಣೆಯಂತಿದ್ದಾರೆ.

ತೊಂದರೆಗಳುಂಟಾದಷ್ಟು ಗೆಲ್ಲುವ ಹಠ ಹೆಚ್ಚಾಗುತ್ತದೆ ಎಂಬ ಮಾತಿದೆ. ಅದರಂತೆಯೇ ಆರೋಗ್ಯ ಸಮಸ್ಯೆಗೆ ಹೆದರದೇ, ಕುಗ್ಗದೇ ಸಾಧನೆಯ ದಾರಿಯನ್ನು ಹಿಡಿದ ಇವರಿಗೆ ಬೇಕಾದ ಚಿಕಿತ್ಸೆಯನ್ನು ನೀಡಿ ಸಮಸ್ಯೆಯನ್ನು ಗುಣಪಡಿಸಿ, ಎಲ್ಲಾ ಏಳುಬೀಳುಗಳಲ್ಲಿ ಜೊತೆಗೆ ನಿಂತ ಕುಟುಂಬವನ್ನು ಅಭಿನಂದಿಸಲೇಬೇಕು.

ತಾಳ್ಮೆ, ಧೈರ್ಯ, ದೃಢಮನಸ್ಸು, ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುವ ಸಿಂಚನಾ ಮುಂದೊಂದು ದಿನ ಉತ್ತಮ ವೈದ್ಯೆಯಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ.

ಆಕೆಯ ಪ್ರತಿಯೊಂದು ಆಸೆ, ಕನಸುಗಳೂ ಸಾಕಾರಗೊಳ್ಳಲಿ. ಮುಂದಿನ ಜೀವನ ಸುಖಮಯವಾಗಿರಲಿ. ಅವಳಿಗೆ ಆ ಸರ್ವಶಕ್ತನು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಕಾಪಾಡಲಿ. ಇನ್ನಷ್ಟು ಸಾಧಿಸಿ ಮನೆ, ದೇಶದ ಗೌರವ ಪತಾಕೆಯನ್ನು ಕಾಂಚನಗಂಗೆಯೆತ್ತರಕ್ಕೆ ಹಾರಿಸುವ ಶಕ್ತಿಯನ್ನು ಅವಳಿಗೆ ನೀಡಲೆಂದು ನಾವೆಲ್ಲರೂ ಹಾರೈಸೋಣ..

 

Author Details


Srimukha

Leave a Reply

Your email address will not be published. Required fields are marked *