ಆಂಗ್ಲರ ಅಂಧಾನುಕರಣೆ ತೊರೆದು ನಮ್ಮತನ ಉಳಿಸಿಕೊಳ್ಳೋಣ; ರಾಘವೇಶ್ವರ ಶ್ರೀ

ಮಠ

ಗೋಕರ್ಣ: ನಮ್ಮ ಹಿರಿಯರು ಬಳಸುತ್ತಿದ್ದ ಪದಗಳನ್ನು ಮತ್ತೆ ಬಳಕೆಗೆ ತರುವ ಮೂಲಕ ನಾವು ನಾವಾಗೋಣ; ಆಂಗ್ಲರ ಅಂಧಾನುಕರಣೆ ತೊರೆದು ನಮ್ಮತನವನ್ನು ಉಳಿಸಿಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

 

ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 54ನೇ ದಿನವಾದ ಸೋಮವಾರ ಮಂಗಳೂರು ಮಂಡಲದ ಕನ್ಯಾನ, ಬಾಯಾರು, ಕೋಳ್ಯೂರು, ವಿಟ್ಲ, ಕೇಪು ಮತ್ತು ಕಲ್ಲಡ್ಕ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.

 

ಕನ್ನಡ ಭಾಷೆಯಲ್ಲಿ ಕಲಬೆರಕೆಯಾಗಿರುವ ಆಂಗ್ಲ ಮತ್ತು ಇತರ ಭಾಷೆಗಳ ಪದಗಳನ್ನು ಬಿಡುವುದು ಮೊದಮೊದಲು ಕಷ್ಟವೆನಿಸಬಹುದು. ಆದರೆ ನಮ್ಮ ಭಾಷೆ- ಸಂಸ್ಕøತಿ ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಆದ್ದರಿಂದ ಈ ಕಷ್ಟಗಳಿಗೆ ಅನಿವಾರ್ಯವಾಗಿ ನಾವು ಅದಕ್ಕೆ ಒಗ್ಗಿಕೊಳ್ಳಲೇಬೇಕು ಎಂದು ಸೂಚಿಸಿದರು.

 

ಸ್ವಭಾಷಾ ಚಾತುರ್ಮಾಸ್ಯದಲ್ಲಿ ಸವಿಗನ್ನಡ ಗೋಷ್ಠಿ ಮತ್ತು ಹವಿಗನ್ನಡ ಗೋಷ್ಠಿ ಮುಗಿದಲ್ಲಿಗೆ ನಮ್ಮ ಕೆಲಸ ಮುಗಿಯುವುದಿಲ್ಲ. ಇದೀಗ ಸಮಾಜದ ಪ್ರತಿಯೊಬ್ಬರೂ ಮತ್ತೆ ನಮ್ಮತನಕ್ಕೆ ಮರಳುವಂತೆ ಮಾಡುವ ದೊಡ್ಡ ಹೊಣೆ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.

 

ದಿನಕ್ಕೊಂದು ಆಂಗ್ಲಪದ ಕೈಬಿಡುವ ಅಭಿಯಾನದಲ್ಲಿ ಪರ್ಸ್ ಪದ ಬಿಡುವಂತೆ ಸಲಹೆ ಮಾಡಿದರು. ಇದಕ್ಕೆ ಸಂಚಿ ಎಂಬ ಪದದಿಂದ ಕರೆಯಲಾಗುತ್ತಿದೆ. ಕೈಚೀಲ, ಥೈಲಿ, ಕೋಶ, ಸ್ಯೂತ ಪದಗಳನ್ನು ಬಳಸಬಹುದು ಎಂದರು.

 

ಸಂಘಟನೆಯಿಂದ ಸಮಾಜಕ್ಕೆ ದೊಡ್ಡ ಪ್ರಯೋಜನವಿದೆ. ಸಂಘಟನೆಯನ್ನು ಬಲಪಡಿಸುವ ಮೂಲಕ ಸಮಾಜದ ಉನ್ನತಿಗೆ ಕೊಡುಗೆ ನೀಡಿ ಎಂದು ಆಶಿಸಿದರು. ನದಿಗಳು ಕೂಡಿ ಸಮುದ್ರವಾಗುವಂತೆ ಚಾತುರ್ಮಾಸ್ಯವೆಂಬ ಸಮುದ್ರಕ್ಕೆ ಆರು ವಲಯಗಳಿಂದ ನದಿಗಳು ಬಂದು ಸೇರಿವೆ. ಎಲ್ಲ ಶಿಷ್ಯರ ಬಾಳು ಹಸನಾಗಲಿ ಎಂದು ಅನುಗ್ರಹಿಸಿದರು. ಜೀವನ ಪೂರ್ಣವಾಗಬೇಕಾದರೆ ಅನುಗ್ರಹ ಬೇಕು. ಪಂಕ ತಿರುಗಲು ವಿದ್ಯುತ್ ಹೇಗೆ ಅಗತ್ಯವೋ ಜೀವನ ಮುನ್ನಡೆಯಲು ಅನುಗ್ರಹ ಬೇಕು ಎಂದು ಹೇಳಿದರು.

 

ಕೆಲ ಕಾರ್ಯಕರ್ತರಲ್ಲಿ ಮಾತ್ರ ಸಮಾಜಸೇವೆಯ ಪ್ರಜ್ಞೆ ಜಾಗೃತವಾಗುತ್ತದೆ. ಇದಕ್ಕೆ ಪ್ರೇರಣೆ ಸಿಗುತ್ತದೆ. ಹೊಸ ಉತ್ಸಾಹ, ಹೊಸ ಯೋಚನೆಗಳೊಂದಿಗೆ ಸಂಘಟನೆ ಬೆಳೆಸಿ ಎಂದು ಸೂಚಿಸಿದರು. ಗಂಗೆ ಪವಿತ್ರವಾಗಲು ಹೇಗೆ ನಿರಂತರ ಹೊಸತನ ಅಗತ್ಯವೋ ಹಾಗೇ ಸಂಘಟನೆಗೂ ಹೊಸ ವಿಧಾನ, ಹೊಸ ಶಿಷ್ಯರನ್ನು ಕರೆ ತನ್ನಿ ಎಂದು ಕರೆ ನೀಡಿದರು.

 

ಅತ್ಯುತ್ಸಾಹ ಮತ್ತು ನಿರುತ್ಸಾಹ ಎರಡೂ ಒಳ್ಳೆಯದಲ್ಲ; ಬದಲಾಗಿ ಸದೋತ್ಸಾಹ ಇರಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕರ್ತರಲ್ಲೂ ಸೇವಾವಧಿಯುದ್ದಕ್ಕೂ ಉತ್ಸಾಹ ಉಳಿಸಿಕೊಳ್ಳಿ. ಸೈನಿಕ ದೇಶದ ಬಗ್ಗೆ ಎಷ್ಟು ನಿಷ್ಠೆ ಹೊಂದಿದ್ದಾನೋ ಅಷ್ಟೇ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

 

ಹವ್ಯಗಂಧ ಎಂಬ ದೊಡ್ಡ ಕಾರ್ಯ ಬಾಯಾರು ವಲಯದಲ್ಲಿ ತಲೆ ಎತ್ತುತ್ತಿದೆ. ಸಮಾಜದ ಅಸ್ಮಿತೆ ಹೆಚ್ಚಿಸುವ ಹಲವು ಕಾರ್ಯಗಳು ಇಲ್ಲಿ ನಡೆಯಲಿವೆ. ಈ ಹವ್ಯಗಂಧ ಎಲ್ಲೆಡೆ ಪಸರಿಸಲಿ ಎಂದು ಹಾರೈಸಿದರು.

 

ಗ್ರಾಮಪಂಚಾಯ್ತಿ ಪಿಡಿಓ ವಂಕಟರಮಣ ಪಟಗಾರ, ಕಾರ್ಯದರ್ಶಿ ಮಂಜುನಾಥ್ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜಿ.ಎಲ್, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ವಿವಿವಿ ಆಡಳಿತಾಧಿಕಾರಿ ಟಿ.ಜೆ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮುಖ್ಯ ಎಂಜಿನಿಯರ್ ವಿಷ್ಣು ಬನಾರಿ, ವ್ಯವಸ್ಥಾ ಪರಿಷತ್ ಕಾರ್ಯದರ್ಶಿ ಶ್ರೀಕಾಂತ ಪಂಡಿತ್,ಉಪಸ್ಥಿತರಿದ್ದರು. ವಿಟ್ಲದ ಹರಿಓಂ ತತ್ಸತ್ ತಂಡದಿಂದ 251 ವಿಷ್ಣು ಸಹಸ್ರನಾಮ ಪಾರಾಯಣ ಸೇವೆ, ಗೋವಿಶ್ವಕ್ಕೆ 25108 ರೂಪಾಯಿಗಳ ಸಮರ್ಪಣೆ ನೆರವೇರಿತು.

 

Leave a Reply

Your email address will not be published. Required fields are marked *