ನಮ್ಮ ಶ್ರೀಮಠಕ್ಕೆ ಕಾರ್ಯಕ್ರಮ ಎನ್ನುವುದು ಹೊಸತಲ್ಲ, ಜೊತೆಗೆ ನವರಾತ್ರಿಯೂ ಹೊಸತಲ್ಲ. ಅದೆಷ್ಟೋ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ವಿಭಿನ್ನವಾದ ಮತ್ತು ವಿಶಿಷ್ಟವಾದ ಕಾರ್ಯಕ್ರಮಗಳ ಆಯೋಜನೆ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ನಡೆದಿದೆ. ಒಂದೇ ವೇದಿಕೆಯಲ್ಲಿ ಸಹಸ್ರ ಸಂಖ್ಯೆಗೂ ಮೀರಿದ ಯತಿ ಸಮಾವೇಶದಿಂದ ಮೊದಲ್ಗೊಂಡು ನೂರು ಜನ ಗಣ್ಯರು ಪುಸ್ತಕವೊಂದರ ಲೋಕಾರ್ಪಣೆಯ ವೇದಿಕೆಯಲ್ಲಿ ಸೇರಿದ ವಿಶೇಷ ಕಾರ್ಯಕ್ರಮದವರೆಗೆ…
ಹೀಗಿದ್ದೂ ಸಾಗರದ ನವರಾತ್ರ ನಮಸ್ಯಾ ಏಕೋ ಹೊಸತನದ ಕಾರ್ಯಕ್ರಮ ಎನ್ನುವ ಭಾವ ಜತಗೆ ಹರುಷ ಹಾಗೂ ಸಂಭ್ರಮ ಮನೆ ಮಾಡಿರುವುದು ಎದ್ದು ಕಾಣುತ್ತಿದೆ.
ಇದಕ್ಕೆ ಸಾಗರದ ನೆಲದಲ್ಲಿ ಈ ರೀತಿಯ ಪ್ರಥಮ ಕಾರ್ಯಕ್ರಮ, ಹಾಗಾಗಿ ಹೀಗಿರಬಹುದು ಎಂದು ಹೇಳಬಹುದಾದರೂ ಖಂಡಿತಾ ಅದೊಂದೆ ಅಲ್ಲವೇ ಅಲ್ಲ..!
ಶಾಸನತಂತ್ರದಿಂದ ಹಿಡಿದು ಘಟಕ ಸಂಘಟನೆಯವರೆಗೆ..
ಹೌದು! ಸಾಗರದಲ್ಲಿ ನವರಾತ್ರ ನಮಸ್ಯಾ ಕಾರ್ಯಕ್ರಮಕ್ಕೆ ಶ್ರೀಸಂಸ್ಥಾನದವರು ಸಮ್ಮತಿ ನೀಡಿದ ಆ ಕ್ಷಣಕ್ಕೆ ಭಾವುಕರಾದ ಸಾಗರ ನವರಾತ್ರ ನಮಸ್ಯಾ ಸಮಿತಿಯ ಮುಂದೆ ಇದ್ದ ಪ್ರಶ್ನೆ ಮುಂದೇನು ಮುಂದೇನು ಎನ್ನುವುದು..?
ಆಗ ಹೀಗೆ ಯೋಜಿಸಿ ಎನ್ನುವ ಸಲಹೆ ಬಂದಿದ್ದು ಶ್ರೀಮಠದ ಆಡಳಿತ ವ್ಯವಸ್ಥೆ ಜವಾಬ್ದಾರಿ ಹೊತ್ತವರಿಂದ – ಅದು ಉತ್ಸವ ಖಂಡದ ದ್ವಾರ. ಇಲ್ಲಿರುವ ಸೂಕ್ಷ್ಮತೆ ಗಮನಿಸಿ; ನವರಾತ್ರ ನಮಸ್ಯಾ ಹಿಂದೆಂದಿಗಿಂತ ಅತ್ಯಂತ ವಿಶೇಷವಾಗಿ ಸಂಪನ್ನಗೊಳ್ಳಬೇಕು ಎನ್ನುವ ಅತೀವ ಕಾಳಜಿ ಆಡಳಿತದ ಪ್ರಮುಖರಲ್ಲಿತ್ತು. ಅದಕ್ಕಾಗಿಯೇ ಹತ್ತಲ್ಲ ನೂರು ಬಾರಿ ರಾತ್ರಿ ಹಗಲು ಅವರನ್ನು ಸಂಪರ್ಕಿಸಿದರೆ ಪ್ರೀತಿಯಿಂದ ಹಾಗೂ ತಾಳ್ಮೆಯಿಂದ ಸಲಹೆ ಕೊಟ್ಟರು, ಈಗಲೂ ಕೊಡುತ್ತಲೇ ಇದ್ದಾರೆ.
ಇನ್ನು ಶಾಸನತಂತ್ರದ ತಂಡ ಅಲ್ಲೆಲ್ಲೊ ಮೇಲೆ ಕುಳಿತು ಮಾತಾಡಿಲ್ಲ, ಬದಲಾಗಿ ಕಾರ್ಯದ ಸ್ಥಳಕ್ಕೆ ಬಂದು ಕೇಳಿದ ಮಾತು ನಿಜಕ್ಕೂ ಸ್ಪೂರ್ತಿಯುತ. ನಮ್ಮಿಂದ ಏನು ಸಹಕಾರ ಬೇಕು ನಾವಿದ್ದೇವೆ ಎಂದು. ಶಾಸನತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ. ಪಿ. ಎಡಪ್ಪಾಡಿ, ಮತ್ತವರ ತಂಡ ಕೊಟ್ಟ ಧೈರ್ಯ ಕಾರ್ಯಕ್ರಮದ ಮುಂದಡಿ ಇಡುವುದಕ್ಕೆ ಆನೆಬಲ ತಂದಿರುವುದು ಖಂಡಿತಾ ಸುಳ್ಳಲ್ಲ. ಅವರಿಗೂ ಸಾಗರದ ನವರಾತ್ರಿ ವಿಶಿಷ್ಟತೆಯಿಂದ ಕೂಡಿರಬೇಕು ಎನ್ನುವ ಹಂಬಲ ಅವರ ಪೂರ್ಣ ಸಹಕಾರ ದೊರೆಯುವಂತಾಯ್ತು.
ಇನ್ನು ಯೋಜನಾ ಖಂಡದ ಜಗದೀಶ ಶರ್ಮ ಸಂಪರವರ ನೇತೃತ್ವದಲ್ಲಿ ಇಲ್ಲಿಗೆ ಆಗಮಿಸಿ ಅವರ ಯಾವತ್ತೂ ಸೂಕ್ತ ಮಾರ್ಗದರ್ಶನದ ಮಾತು ಕಾರ್ಯಕ್ರಮಕ್ಕೆ ಸರಿಯಾದ ದಾರಿ ಹಾಕಿಕೊಟ್ಟಿತ್ತು.
ಅಂದಿನ ಸಭೆಯ ಕೇವಲ ಎರಡು ಗಂಟೆ ಎನ್ನುವುದು ನವರಾತ್ರ ನಮಸ್ಯಾದ ದೊಡ್ಡ ಹೊಣೆಗಾರಿಕೆಯು ಅತ್ಯಂತ ಸುಲಭವಾಗಿಸಿತು.
ಇನ್ನು ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು ಆದಿಯಾಗಿ ಇಡೀ ತಂಡ ನವರಾತ್ರ ನಮಸ್ಯಾದ ಭಾಗವಾಗಿ ತೊಡಗಿಕೊಂಡ ಪರಿ ಮತ್ತಷ್ಟು ಹುಮ್ಮಸ್ಸು ಬರುವುದಕ್ಕೆ ಪ್ರೇರಣೆಯಾಯ್ತು.
ಇದರ ಜೊತೆಗೆ ಶ್ರೀಪರಿವಾರದವರ ಪ್ರೋತ್ಸಾಹ…..
ಸಾಗರ, ರಾಮಚಂದ್ರಾಪುರ, ಸಿದ್ದಾಪುರ ಈ ಮೂರು ಮಂಡಲದ ಸರ್ವ ಪದಾಧಿಕಾರಿಗಳು, ಗುರಿಕಾರರವರೆಗಿನ ಆಸಕ್ತಿ ….
ಕಾರ್ಯಕ್ರಮದ ಜವಾಬ್ದಾರಿ ಹೊತ್ತವರಿಗೆ ಉತ್ಸಾಹದ ಹೆಜ್ಜೆ ಇಡುವಂತಾಗಿದೆ. ಶ್ರೀಸಂಸ್ಥಾನದವರ ಅನುಗ್ರಹ ಮತ್ತು ಮಾರ್ಗದರ್ಶನ ಇದರ ಯಶಸ್ಸಿನ ಭಾಗವಾಗುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಶ್ರೀಮಠದ ಕಾರ್ಯಕ್ರಮವಾದರೂ ಸ್ಥಳವೊಂದು ನಿಕ್ಕಿಯಾದ ಮೇಲೆ ಪ್ರಾದೇಶಿಕವಾಗಿ ಆ ಭಾಗದವರು ಕಾರ್ಯಕ್ರಮಕ್ಕೆ ಹೆಚ್ಚು ಹೊಣೆ ಹೊತ್ತು ಒತ್ತಡದಲ್ಲಿರುವ ಸಂದರ್ಭಗಳು ಹೆಚ್ಚಾಗಿ ನೋಡಿದ ನನಗೆ, ಈ ನವರಾತ್ರ ನಮಸ್ಯಾ ಹೊಣೆಹೊತ್ತವರಿಗೆ ಒತ್ತಡವಿಲ್ಲದೆ ಸಂಭ್ರಮಿಸಿ ಕಾರ್ಯಕ್ರಮ ಮಾಡುವುದಕ್ಕೆ ಕಾರಣವಾಗಿರುವ ಶಾಸನತಂತ್ರದಿಂದ ಹಿಡಿದು ಘಟಕದವರೆಗಿನ ಎಲ್ಲರ ಪಾಲ್ಗೊಳುವಿಕೆ ನಿಜವಾದ ಸಂಭ್ರಮಕ್ಕೆ ಕಾರಣ ಎನಿಸುತ್ತಿದೆ.
ಹೌದು, ಅದಕ್ಕೆ ಸಾಗರದ ನವರಾತ್ರ ನಮಸ್ಯಾಕ್ಕೆ ಇಷ್ಟೊಂದು ಸಂಭ್ರಮ.
ಖಂಡಿತಾ ಇದರಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಇರಲಿ….
ಈ ಸಂಭ್ರಮ ಸಮಾಜದ ಸಂಭ್ರಮ….
ದೇವಿಯೂ ಸಂಭ್ರಮಿಸಿ ಅನುಗ್ರಹಿಸುವುದರಲ್ಲಿ ಅನುಮಾನವೇ ಬೇಡ, ಅದರ ಫಲ ನಿಮಗೂ ಸಿಗಲಿ ಬನ್ನಿ…
ಇಂದಿನಿಂದಲೇ ನವರಾತ್ರ ನಮಸ್ಯಾದ ಸಂಭ್ರಮದಲ್ಲಿ ಭಾಗಿಯಾಗಿ…..
ರಮೇಶ್ ಹೆಗಡೆ ಗುಂಡೂಮನೆ
ಸಂಚಾಲಕರು, ನವರಾತ್ರ ನಮಸ್ಯಾ – ಪ್ರಚಾರ ಸಮಿತಿ