ಚಂದನ್‌ಗೆ ಒಲಿದ ಯೋಗ

ಅಂಕುರ

ಇತ್ತೀಚೆಗೆ ಹಲವಾರು ವರ್ಷಗಳಿಂದ ಯೋಗ ವಿಶ್ವದ ಗಮನ ಸೆಳೆದಿದೆ. ಶಾಲಾ-ಕಾಲೇಜುಗಳಲ್ಲಿ ಪ್ರತಿವರ್ಷ ಶಾಲಾ ಮಟ್ಟದಿಂದ ರಾಷ್ಟ್ರಮಟ್ಟದ ತನಕ ವಿವಿಧ ಹಂತಗಳಲ್ಲಿ ಯೋಗ ಸ್ಪರ್ಧೆಯೂ ನಡೆಯುತ್ತಿದೆ. ಹೀಗೆ ಸ್ಪರ್ಧೆಗಳಿಂದ ಆಕರ್ಷಿತನಾದ ಈ ಪ್ರತಿಭೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾನೆ.
ಹೀಗೆ ಚಿಕ್ಕ ವಯಸ್ಸಿಗೇ ಯೋಗ ಒಲಿಸಿಕೊಂಡ ಸಾಧಕ ಚಂದನ್ ಕೆ.ಆರ್. ಈಗಾಗಲೇ ಜನರಿಂದ ‘ಯೋಗ ಚಂದನ್ ಎಂಬ ಅಭಿದಾನಕ್ಕೂ ಪಾತ್ರನಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನುಗೋಡಿನ ವಕೀಲ ರಾಘವೇಂದ್ರ ಕೆ.ಎಸ್. ಮತ್ತು ವಿಜಯಲಕ್ಷ್ಮೀ ಕೆ.ಆರ್. ದಂಪತಿಯ ಪುತ್ರ ಚಂದನ್ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸಿನ ಮೆಟ್ಟಿಲೇರಿದ್ದಾನೆ.


ಉಡುಪಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಚಂದನ್ ಈಗಾಗಲೇ ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಪ್ರೌಢಶಿಕ್ಷಣ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡ ಈತ ಪ್ರಾರಂಭದಲ್ಲಿ ಸಾಗರದ ಗುರುಕುಲಂ ಯೋಗ ತರಬೇತಿ ಕೇಂದ್ರದ ತರಬೇತುದಾರ ಶ್ರೀಧರಮೂರ್ತಿ ಹಾಗೂ ವನಶ್ರೀ ಶಾಲೆಯ ಎಚ್.ಪಿ.ಮಂಜಪ್ಪ ಅವರಲ್ಲಿ ಅಭ್ಯಾಸ ನಡೆಸಿ ಬಳಿಕ ಯಶವಂತ ಕುಮಾರ್ ಅವರಲ್ಲಿಯೂ ಕಠಿಣ ಅಭ್ಯಾಸ ನಡೆಸಿದ್ದಾನೆ.
ಕಠಿಣ ಆಸನಗಳೂ ಕರಗತ:
ಮುಕ್ತಹಸ್ತ ಪದ್ಮ ವೃಶ್ಚಿಕ, ಮುಕ್ತಹಸ್ತ ವಾಮದೇವ ದ್ವಿಪಾದ, ತ್ರಿವಿಕ್ರಮಾಸನ, ನಟರಾಜ ಆಸನ, ಮುಕ್ತಹಸ್ತ ದೀಪ ವೃಶ್ಚಿಕ, ಗಂಡಭೇರುಂಡ….. ಹೀಗೆ ೫೦ಕ್ಕೂ ಅಧಿಕ ಬಗೆಯ ಆಸನಗಳು ಚಂದನ್‌ಗೆ ಕರಗತವಾಗಿದ್ದು, ಇದು ಈತನ ಸತತ ಪರಿಶ್ರಮವನ್ನು ತೋರ್ಪಡಿಸುತ್ತಿದೆ.


ಸಾಧನೆಗೆ ಸಂದ ಪ್ರಶಸ್ತಿಗಳು:
ಚಂದನ್‌ನ ಯೋಗ ಸಾಧನೆಗೆ ನೂರಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿವೆ.
* ಶ್ರೀರಾಮಚಂದ್ರಾಪುರ ಮಠದ ಛಾತ್ರ ವಿಭಾಗದ ವತಿಯಿಂದ ಶ್ರೀಸಂಸ್ಥಾನದವರಿಂದ ಎರಡು ಬಾರಿ ವಿಶೇಷ ಪುರಸ್ಕಾರ ಮತ್ತು ಅನುಗ್ರಹ.
* ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ನಡೆದ ತಾಲೂಕು, ಜಿಲ್ಲಾ, ವಿಭಾಗ ಮಟ್ಟ ಹಾಗೂ ರಾಜ್ಯಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ.
* ನವದೆಹಲಿ, ಛತ್ತೀಸಗಡ, ರಾಂಚಿ, ಉತ್ತರಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾನೆ.
* ಮೈಸೂರಿನ ವಿಶ್ವ ಸಂಸ್ಕೃತಿ ಯೋಗ ಫೌಂಡೇಶನ್ ನಡೆಸಿದ ಮುಕ್ತ ರಾಷ್ಟ್ರ ಯೋಗ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ.
* ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ನಡೆಸಿದ ಮುಕ್ತ ರಾಜ್ಯ ಯೋಗ ಸ್ಪರ್ಧೆಯಲ್ಲಿ ಬ್ಯಾಕ್ ಬೆಂಡಿಂಗ್ ವಿಭಾಗ ಮತ್ತು ಹ್ಯಾಂಡ್ ಬ್ಯಾಲೆನ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ.
* ಇಂಟರ್‌ನ್ಯಾಶನಲ್ ಕೃಷ್ಣ ಯೋಗ ಅಸೋಸಿಯೇಶನ್ ಬೆಂಗಳೂರಿನಲ್ಲಿ ನಡೆಸಿದ್ದ ಸ್ಪರ್ಧೆಯ ಸಾಮಾನ್ಯ ಸ್ಪರ್ಧೆಯಲ್ಲಿ ದ್ವಿತೀಯ, ಬ್ಯಾಕ್ ಬೆಂಡಿಂಗ್ ದ್ವಿತೀಯ, ಲೆಗ್ ಮತ್ತು ಹ್ಯಾಂಡ್ ಬ್ಯಾಲೆನ್ಸ್ ಸ್ಪರ್ಧೆಯಲ್ಲಿ ಪ್ರಥಮ.
* ಸಿವಮೊಗ್ಗ ಮಹಾನಗರ ಪಾಲಿಕೆಯಿಂದ ಮಕ್ಕಳ ದಸರಾ ಪ್ರಶಸ್ತಿ.
* ಸಂಸ್ಕೃತಿ ಕುಂಭ ಮಲೆನಾಡ ಉತ್ಸವದಲ್ಲಿ ಪ್ರಶಸ್ತಿ.
* ಯೋಗ ದಸರಾ -೨೦೧೬
* ಕನ್ನಡ ರಾಜ್ಯೋತ್ಸವ ಪ್ರಶಸ್ತಿ- ೨೦೧೬
* ವನಶ್ರೀ ಶಾಲೆ ವತಿಯಿಂದ ಯೋಗರತ್ನ ಪ್ರಶಸ್ತಿ.
ಮುಂದಿನ ದಿನಗಳಲ್ಲಿ ನಂ.೦೧ ಯೋಗ ಪಟುವಾಗುವ ಜೊತೆಗೆ ಇಂಜಿನಿಯರ್ ಆಗಬೇಕೆನ್ನುವ ಮತ್ವಾಕಾಂಕ್ಷೆಯನ್ನು ಚಂದನ್ ಹೊಂದಿದ್ದಾನೆ.

Leave a Reply

Your email address will not be published. Required fields are marked *