ಶ್ರೀ ರಾಮಚಂದ್ರಾಪುರ ಮಠದ ಅಂಗ ಸಂಸ್ಥೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಂಕಲ್ಪದ ಯೋಜನೆ ಗ್ರಾಮರಾಜ್ಯ ಟ್ರಸ್ಟ್ (ರಿ). ಈ ಸಂಸ್ಥೆಗೆ ಸಾರ್ಥಕ ೧೫ ಸಂವತ್ಸರಗಳು ತುಂಬಿರುವ ಶುಭ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯ ಮತ್ತು ತನ್ಮೂಲಕ ನೆಮ್ಮದಿ ಎನ್ನುವ ಕಲ್ಪನೆಯ ಅಡಿಯಲ್ಲಿ ವಿಷ ಮುಕ್ತ ಅಡುಗೆ ಮನೆಯ ಕಲ್ಪನೆ ಸಮಾಜಕ್ಕೆ ಸಾಧ್ಯವಾದಷ್ಟು ತಲುಪಿಸುವ ಯೋಚನೆ ನಮ್ಮದು. ಈ ನಿಟ್ಟಿನಲ್ಲಿ ಸಮಾಜದ ಕೆಲವು ಗಣ್ಯ ಮಾನ್ಯರನ್ನು ಆಹ್ವಾನಿಸಿ ಶ್ರೀಸಂಸ್ಥಾನದವರ ಪರಿಕಲ್ಪನೆ ಮತ್ತು ಸಮಾಜಕ್ಕೆ ಗಣ್ಯರ ಮೂಲಕ ಈ ಶ್ರೀಗಳ ಸಂದೇಶ ತಲುಪಿಸುವ ಸರಣಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ ಸುದ್ದಿವಾಹಿನಿಯ ಸಂಪಾದಕ ಅಜಿತ್ ಹನುಮಕ್ಕನವರ್ ಆಗಮಿಸಿದ್ದರು. ಸಂಸ್ಥೆಯ ಕಾರ್ಯ ವಿಧಾನಗಳು , ಉತ್ಪನ್ನಗಳ ಜ್ಯೇಷ್ಠತೆ , ಸಮಾಜಕ್ಕೆ ಇವುಗಳ ಮಹತ್ವ ಇವೆಲ್ಲವುಗಳ ಬಗೆಗೆ ಉತ್ತಮ ಸಂವಾದ ನಡೆಯಿತು.

ಇವರ ಜತೆಗೆ ಸಂವಾದಕಾರರಾಗಿ ಖ್ಯಾತ ಹಿನ್ನಲೆ ಧ್ವನಿ ಕಲಾವಿದರೂ, ಕಾರ್ಯಕ್ರಮ ನಿರೂಪಕ ಬಡೆಕ್ಕಿಲ ಪ್ರದೀಪ ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾಜದ ಈಗಿನ ವಸ್ತುಸ್ಥಿತಿ, ಆಹಾರ ವಸ್ತುಗಳ ಆಯ್ಕೆಯಲ್ಲಿ ಸಮಾಜ ಗಮನ ನೀಡಲೇಬೇಕಾದ ಅಂಶಗಳ ಕುರಿತು ಅಜಿತ್ ಅವರು ಒಳ್ಳೆಯ ಅವಲೋಕನ ಮಾಡಿದರು. ದೇಶದ ಪ್ರಗತಿಗೆ ಆರೋಗ್ಯವಂತ ಸಮಾಜದ ಅಗತ್ಯದ ಬಗ್ಗೆ ಬೆಳಕು ಚೆಲ್ಲಲಾಯಿತು. ಹಾಗೆಯೇ ಗ್ರಾಮರಾಜ್ಯದ ವ್ಯವಸ್ಥೆ , ಗುಣಮಟ್ಟ ಮತ್ತು ಸಮಾಜ ಕ್ಷೇಮದ ಬಗೆಗಿನ ಧ್ಯೇಯದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಶ್ರೀ ಸಂಸ್ಥಾನದವರು ೧೫ ವರ್ಷಗಳ ಹಿಂದೆಯೇ ಈ ಬಗ್ಗೆ ಚಿಂತನೆ ನಡೆಸಿ ಹಾಕಿಕೊಟ್ಟ ದಾರಿ ಅನುಕರಣೀಯ. ಮಠ ಮಂದಿರಗಳು ಸಮಾಜದ ಏಳಿಗೆಗೆ ಇದೇ ರೀತಿಯಲ್ಲಿ ಸ್ಪಂದಿಸುವ ಹಾಗಿರಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕ ಶಶಾಂಕ ಕಂಗಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಉದ್ಯೋಗಿಗಳು ಈ ಸಂದರ್ಭ ಉಪಸ್ಥಿತರಿದ್ದರು.