ಹಿಮ್ಮೇಳದಲ್ಲಿ ಮಿಂಚುವ ಯುವ ಪ್ರತಿಭೆ ಅತುಲಕೃಷ್ಣ ಕೆ.ಪಿ.

ಅಂಕುರ

ಮಕ್ಕಳಲ್ಲಿ ವೈವಿಧ್ಯಮಯವಾದ ಪ್ರತಿಭೆಗಳಿರುತ್ತವೆ. ಅವನ್ನು ಗುರುತಿಸಿ ಪೋಷಿಸುವ ಕೆಲಸವನ್ನು ಮನೆಯ ಹಿರಿಯರು ಮತ್ತು ಶಿಕ್ಷಕರು ಮಾಡಿದಾಗ ಮಾತ್ರ ಅದು ಪ್ರಕಾಶಕ್ಕೆ ಬರುತ್ತದೆ. ಯಕ್ಷಗಾನ ಎಂಬುದು ಅಗಾಧವಾದ ಜ್ಞಾನವನ್ನು ಒದಗಿಸುವ ವಿವಿಧ ರೀತಿಯ ಕಲೆಗಳ ಮಿಶ್ರಣ ಅಂತ ಹೇಳಬಹುದಾದ ಕಲೆಯಲ್ಲವೇ. ಆ ಕಲೆಯಲ್ಲಿ ನಾಟ್ಯ ವೈವಿಧ್ಯಕ್ಕೆ, ಕೈಚಳಕ್ಕೆ ಹೀಗೆ ಹಲವಾರು ರೀತಿಯ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶವಿದೆ. ಸಾಹಿತ್ಯ, ಕಲೆಯೇ ಮೊದಲಾದದ ವಿವಿಧ ರೀತಿಯ ಪ್ರಕಾರಗಳಲ್ಲಿ ಪ್ರತಿಭಾನ್ವಿತರಾಗಿ ಮೂಡಿಬರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ. ಅಂತಹ ಅಪೂರ್ವ ಪ್ರತಿಭೆಯಾಗಿ ಮಿಂಚುತ್ತಿರುವ ಯುವ ಕಲಾವಿದ ಅತುಲಕೃಷ್ಣ ಕೆ.ಪಿ.
ಕಾಸರಗೋಡು ಜಿಲ್ಲೆಯ ಗುಂಪೆ ವಲಯದ ಕಕ್ವೆ ಮನೆಯಲ್ಲಿ ಶ್ರೀಮತಿ ಭಾರತಿ ಮತ್ತು ಶ್ರೀ ನರಸಿಂಹ ರಾಜ ಅವರ ಸುಪುತ್ರನಾಗಿ ಜನಿಸಿದ ಅತುಲ್ ಕೃಷ್ಣನಿಗೆ ಬಾಲ್ಯದಿಂದಲೇ ಎಲ್ಲ ರೀತಿಯ ಪ್ರೋತ್ಸಾಹ ದೊರಕಿದೆ. ತಂದೆ ತಾಯಿ ಎಂದೂ ಅವನನ್ನು ಕೇವಲ ಪುಸ್ತಕದಲ್ಲಿರುವುದನ್ನು ಮಾತ್ರ ಕಲಿತರೆ ಸಾಕು ಎಂದು ಒತ್ತಾಯ ಮಾಡಿದವರಲ್ಲ. ಆದುದರಿಂದಲೇ ಅವನಲ್ಲಿದ್ದ ವಿಭಿನ್ನ ಪ್ರತಿಭೆಗಳನ್ನು ಬೆಳಸಿಕೊಳ್ಳಲು ಅವಕಾಶ ಸಿಕ್ಕಿತು ಅನ್ನಬೇಕು. ಸ್ವತಃ ಶಿಕ್ಷಕರಾದ ತಂದೆ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರೀ ಪ್ರೌಢಶಾಲೆಯಲ್ಲಿ ವೃತ್ತಿ ನಿರತರಾದವರು. ಅವರ ಜೊತೆಗೆ ಅವನ ಇತರ ಶಿಕ್ಷಕರೂ ಅತ್ಯಂತ ಶ್ರದ್ಧೆಯಿಂದ ಪ್ರೋತ್ಸಾಹಿಸಿದ್ದರಿಂದ ಬೇರೆ ಬೇರೆ ವಿಚಾರಗಳಲ್ಲಿ ಬಹಳಷ್ಟು ಪ್ರಾವೀಣ್ಯವನ್ನು ಪಡೆಯಲು ಸಾಧ್ಯವಾಯಿತು.
ಪ್ರಕೃತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾದ ಅತುಲ್ ಕೃಷ್ಣ ಬೆಳ್ತಂಗಡಿ ಸಮೀಪದ ಗರ್ಡಾಡಿ ಎಂಬಲ್ಲಿ ವಾಸವಿರುವುದೇ ಅವನ ಇತರ ಕಲಾಸಾಮರ್ಥ್ಯದೊಂದಿಗೆ ಯಕ್ಷಗಾನ ಹಿಮ್ಮೇಳದಲ್ಲಿ ಪಳಗುವಂತೆ ಮಾಡಿದ್ದು ಯೋಗಾಯೋಗ. ತಾನು ಏನೇನು ಕಲಿಯುತ್ತೇನೋ ಅದರಲ್ಲೆಲ್ಲ ಗರಿಷ್ಠ ಪ್ರಾವೀಣ್ಯವನ್ನು ಗಳಿಸಬೇಕೆಂಬ ಛಲದಿಂದಲಾಗಿ ಶಾಲಾ ಮಕ್ಕಳಿಗಾಗಿ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಹಿಂದಿ ಕಂಠಪಾಠ, ಸಂಸ್ಕೃತ ಕಂಠಪಾಠ, ಧಾರ್ಮಿಕ ಪಠಣ, ಪ್ರಬಂಧ ಸ್ಪರ್ಧೆ, ಕಥೆ ಹೇಳುವ ಸ್ಪರ್ಧೆ, ರಸಪ್ರಶ್ನೆ, ಆಟೋಟ ಸ್ಪರ್ಧೆಗಳಲ್ಲಿ ಪ್ರಥಮಸ್ಥಾನಿಯಾಗಲು ಅತುಲ್ಕೃಷ್ಣನಿಗೆ ಸಾಧ್ಯವಾಗಿದೆ.
2018-19ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಮಟ್ಟದ Win national spell bee ಪರೀಕ್ಷೆಯಲ್ಲಿ 26ನೇ rank ಗಳಿಸಿದ ಈತ ಯಕ್ಷಗಾನ ಹಿಮ್ಮೇಳಕ್ಕೆ ದಾಟುವುದಕ್ಕೆ ಮೊದಲು ನಾಟ್ಯಾಭ್ಯಾಸ ಮಾಡಿದ ಅದರಲ್ಲೂ ಎತ್ತಿದ ಕೈ ಎನಿಸಿದ್ದಾನೆ. ನಾಟ್ಯಗುರುಗಳಾದ ಶ್ರೀ ಅರುಣ್ ಕುಮಾರ್ ಗೌಡ ಅವರು ಗುರುತಿಸಿದ ಹಿಮ್ಮೇಳದಲ್ಲಿ ಕಾಣುವ ಆಸಕ್ತಿ ಮತ್ತು ಪ್ರತಿಭೆಯು ಅವನನ್ನು ಚೆಂಡೆ ಅಭ್ಯಾಸ ಮಾಡುವಂತೆ ಮಾಡಿತು. ಯಕ್ಷಗಾನ ಹಿಮ್ಮೇಳ ಗುರುಗಳಾದ ಶ್ರೀ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಅವರ ಗರಡಿಯಲ್ಲಿ ಪಳಗುತ್ತಿರುವ ಅತುಲ್ಕೃಷ್ಣನಿಗೆ ಈಗ ಮದ್ದಳೆ ಪಾಠವೂ ನಡೆಯುತ್ತದೆ.
ಮಣ್ಣಿನಿಂದ ವಿಗ್ರಹಗಳನ್ನು ರಚಿಸುವ ಕಲೆಯನ್ನೂ ಕರಗತ ಮಾಡಿಕೊಂಡ ಉತ್ತಮ ಚೆಂಡೆ ವಾದಕ ಅತುಲ್ಕೃಷ್ಣನಿಗೆ ವಿದ್ಯಾಭ್ಯಾಸದಲ್ಲೂ ಕಲಾಪೋಷಣೆಯಲ್ಲೂ ಉತ್ತಮ ಶ್ರೇಯಸ್ಸಾಗುವಲ್ಲಿ ಶ್ರೀಗುರು ಅನುಗ್ರಹ ಇರಲಿ ಎಂದು ನಾವೆಲ್ಲ ಹಾರೈಸೋಣ.

Author Details


Srimukha

Leave a Reply

Your email address will not be published. Required fields are marked *