ಮಂಗಳೂರು: ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ರಾಣಿ ಅಬ್ಬಕ್ಕ @500 ಪ್ರೇರಣಾದಾಯಿ ಉಪನ್ಯಾಸಗಳ ಸರಣಿ ಎಸಳು-20 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಿವೃತ್ತ ಶಿಕ್ಷಕಿ ಸುಭದ್ರಾ ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಕೆಲವು ಗುಣಗಳಾದ ಕಾಕದೃಷ್ಟಿ, ಬಕಧ್ಯಾನ, ಶ್ವಾನ ನಿದ್ರಾ ಬಗ್ಗೆ ಹಾಗೂ ಸ್ವಾಮಿ ವಿವೇಕಾನಂದರು, ಶಂಕರಾಚಾರ್ಯರು ಮುಂತಾದ ಆದರ್ಶ ವ್ಯಕ್ತಿಗಳು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಕುಮಾರ್ ಉದ್ಘಾಟಿಸಿ, ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರುವ ಗುರುಗಳನ್ನು ಗೌರವಿಸಬೇಕು ಹಾಗೂ ದೇಶಪ್ರೇಮವನ್ನು ಮೆರೆದ ರಾಣಿ ಅಬ್ಬಕ್ಕ ನಮಗೆಲ್ಲ ಸ್ಫೂರ್ತಿದಾಯಕರು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಮತಾ ಶೆಟ್ಟಿ, ಮಾಧ್ಯಮ ಪ್ರಮುಖ್ ಕೆ.ಆರ್. ಎಮ್.ಎಸ್.ಎಸ್ ಮಂಗಳೂರು ವಿಭಾಗ ಮಾತನಾಡಿದರು. ಶಿಕ್ಷಕ ದಿನಾಚರಣೆ ಪ್ರಯುಕ್ತ ನಿವೃತ್ತ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಎನ್. ಭಟ್ ಅವರನ್ನು ಸಮ್ಮಾನಿಸಲಾಯಿತು.
ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಪ್ರಾಂಶುಪಾಲ ಸಂದೀಪ್ ಆಚಾರ್ಯ ಹಾಗೂ ವಿದ್ಯಾರ್ಥಿ ಸಂಘದ ನಾಯಕ ಭವನ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪೂರ್ವಿಕಾ ಸ್ವಾಗತಿಸಿ, ವಿದ್ಯಾರ್ಥಿನಿ ತನಿಷ್ಕಾ ವಂದಿಸಿದರು. ಪ್ರಥಮ ಪಿ ಯು ಸಿ ವಿದ್ಯಾರ್ಥಿನಿ ಸಾಧನ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.