ಅಂದು ಅರಿಯದೆ ಬರೆದೆ!!ಅದೇ ಇಂದು ಬಾಳದಾರಿಗೆ ರಾಮದೀವಿಗೆಯ ಅರಿವಿನತ್ತ ಕರೆದೊಯ್ಯುತಿದೆ!!!….

ಸುದ್ದಿ

ಅದೇಕೋ ನಾನಾರಿಯೆ ಬಾಲ್ಯದ ದಿನದಲೊಂದು ಹೀಗೊಂದು ಅಭ್ಯಾಸವಿತ್ತು ನನಗೆ.ಕೈಗೆ ಸಿಕ್ಕ ಯಾವುದೇ ಪೇಪರ್, ಪುಸ್ತಕದ ಮೊದಲ ಮುಖದಲಿ ಹರೇರಾಮ ,ಶ್ರೀ ಗುರುಭ್ಯೋನಮಃ, ಶ್ರೀ ಗುರುಗಣಾಧಿಪತಯೇ ಎಂದು ಬರೆಯುವ ಹುಚ್ಚು… ಅಂದು ಅರಿಯದೇ ,ಅರಿವಿಲ್ಲದೆಯೇ ಬರೆದ ಈ ಪದಗಳು ನನ್ನನ್ನು ಈ ಬಾಳದಾರಿಲಿ ರಾಮದೀವಿಗೆಯತ್ತ, ಆಧ್ಯಾತ್ಮಿಕ ಬದುಕಿನತ್ತದ ಪಥವ ಕರುಣುಸಿದೆ ಎಂದೆನಲು ಇಂದು ಅಚ್ಚರಿಯೂ ಜೊತೆಗೆ ಆನಂದ.. ಮೈರೋಮಾಂಚನ..!!
ಬಾಲ್ಯದ ಶಾಲಾಕಾಲೇಜುಗಳ ದಿನದಲಿ ಶ್ರೀಸವಾರಿಯು ಊರಿಗೆ ಬಂದಾಗ , ಶಾಲೆಗೆ ರಜೆಯ ಮಾಡಿ ಗುರುಮಂತ್ರಾಕ್ಷತೆ ಸ್ವೀಕರಿಸುವ ಸಲುವಾಗಿ ಓಡೋಡಿ ಬಂದು ಹೆತ್ತವರ ಜೊತೆ ಅಮ್ಮನ ಸೆರಗ ಹಿಡಿದು ಸಾಲಿನಲ್ಲಿ ನಿಲ್ಲುತ್ತಿದ್ದ ದಿನಗಳ ನೆನೆಯುದೇ ಇಂದೊಂದು ಮನೋಹರ ಹಬ್ಬ….
ಅದು ಆ ಬಾಲ್ಯದ ದಿನಗಳಾದರೆ….

ವೈವಾಹಿಕ ಜೀವನದ ತರುವಾಯ ವಿಮಾನ ಏರಿ ಬಂದುದು ಸಾವಿರದಮೈಲಿಯಾಚೆಯ ಮರಳುಗಾಡಿನ ಬಿಸಿಲಬೇಗೆಯ ಊರಿಗೆ. ಈ ಊರಿನಲಿ ಯಾವುದರ ಅರಿವಿಲ್ಲದ ಎನಗೆ ಬದುಕಿನಲಿ ದಾರಿ ತೋರಿಸಿದುದು ಬಾಲ್ಯದ ಅರಿಯದೆ ಬರೆದ ಈ ಹರೇರಾಮನೇ…!! ದೂರವೆಂದರೆ ದೂರ, ಅಲ್ಲ ಅಲ್ಲ ಹತ್ತಿರವೆಂದರೆ ಬಲುಹತ್ತಿರ, ಮನದ ಅಂತರಂಗದ ಹೃದಯಮಂಟಪದಲಿ ಶ್ರೀ ರಾಮಚಂದ್ರಾಪುರ ಮಠ,ಶ್ರೀ ಆರಾಧ್ಯಗುರುರಾಮರುಗಳ ನಿತ್ಯ ಪೂಜಿಸುವವಳಾಗಿರುತ್ತಿದ್ದೆ. ಉದ್ಯೋಗದತ್ತ ಮನಸು ಹರಿಸುವ ಒಲವಾಗಲೀ ಇರದ ನನಗೆ, ಅದಕ್ಕೆ ಸರಿಯಾಗಿ ವಿಧಿಯೂ ನನ್ನ ಜೊತೆ ಕೈಜೋಡಿಸಿದ್ದ ಎನ್ನುವುದು ವಿಶೇಷವೇ..ಎಲ್ಲವೂ ಗುರುಇಚ್ಛೆ! ದೈವೇಚ್ಛೆ..!!

ಮನೆಯ ಕೆಲಸಗಳ ಮಾಡುತಾ ದಿನಚರಿಯಲಿ ದೇವರು,ಭಕ್ತಿ,ಪೂಜೆ ಭಜನೆ, ಭಗವದ್ಗೀತೆ, ರಾಮಾಯಣ ಮಹಾಭಾರತ, ಶ್ರೀಮದ್ಭಾಗವತ ಆಲಿಸುತಾ, ಇಂತಹದರಲ್ಲೇ ದಿನಬೆಳಗಾಗುತ್ತಿತ್ತು.ಕೆಲವೊಮ್ಮೆ ಇಲ್ಲಿ ನಡೆಯುತ್ತಿದ್ದ ಕೃಷ್ಣಸಂಸ್ಥೆಯ ನೇರಪ್ರವಚನಗಳು ಇನ್ನಷ್ಟು ಆಧ್ಯಾತ್ಮಿಕವಾಗಿ ಲಭ್ಯ ಸಾಧ್ಯವಾಯಿತು.ಅಲ್ಲಿಂದ ನನ್ನ ಬಾಲ್ಯದ ಹರೇರಾಮ ನಿಗೆ ಜೊತೆಮಾಡಿದೆ ಹರೇಕೃಷ್ಣನನು🙏. ಈತನ್ಮಧ್ಯೆ ನಮ್ಮ ಮಠದ ಆಡಿಯೋ ಪ್ರವಚನಗಳು ದೊರೆಯಲು ಆರಂಭವಾದಾಗ ಹೇಳಲಾಗದ ಸಂಭ್ರಮ ಸಡಗರ ..ಅದಾಗಲೇ ಊರಿಗೆ ವರುಷಕ್ಕೆ ಒಂದೋ, ಎರಡೋ ಸರ್ತಿ ಬಂದಾಗ ಶ್ರೀ ಸಂಸ್ಥಾನದವರಿಂದ ಅನುಗ್ರಹ ಮಂತ್ರಾಕ್ಷತೆಯೂ , ಪಾದಪೂಜೆಯ ಸೇವೆಯ ಒಮ್ಮೊಮ್ಮೆ ಮಾಡಲು ಸಾಧ್ಯವಾಗುತ್ತಿತ್ತು.

ದಿನಗಳು ,ವರ್ಷಗಳು ಹೀಗೆ ಕಳೆಯುತ್ತಿರಲು, ತಂತ್ರಜ್ಞಾನದ ಈ ಯುಗದಲಿ ಬೆಳವಣಿಗೆಗಳಾದಾಗ ನಮ್ಮ ಶ್ರೀ ಮಠದಿಂದ ಹೆಚ್ಚಿನ ನೇರಪ್ರಸಾರಗಳು ಆರಂಭ ನಡೆಯುತ್ತಿರಲು , ನನ್ನ ಭಾಗ್ಯವೇ ಎಂಬಂತೆ ತಪ್ಪದೆ ಭಾಗವಹಿಸವ ಪರಿ ಇರುವಲ್ಲಿಂದಲೇ ಆಯಿತು. ಅಂದಿನಿಂದ ಮಠದ ನೇರಪ್ರಸಾರದ ಮೂಲಕವೇ ದೂರವಿದ್ದರೂ ಹತ್ತಿರ ವಾಯಿತು ನಮ್ಮ ಮಠ, ನಮ್ಮ ಶ್ರೀರಾಮಪ್ರಭು ಮತ್ತು ಪೀಠದ ಆರಾಧ್ಯಗುರುಗಳು.

ಗೋಕಥಾ, ರಾಮಕಥೆಯ ಜೊತೆಗೆ ಸಾಧನಾಪಂಚಕ, ತತ್ವ ಭಾಗವತಂ ಆಲಿಸುವದು ನನ್ನ ದಿನದ ಅಂಗವಾಗೇ ಹೋಯಿತು.ಅರಿವ ಅರಿಯದ ಜೀವರುಗಳಿಗೆ, ನಮ್ಮಂತಹ ಪಾಮರರಿಗೆ ಇಂತಹ ಗುರುವಾಣಿಗಳೇ ಅರಿವಿನತ್ತ ಕರೆದೊಯ್ಯುವುದು…ಇವುಗಳೇ ನಮ್ಮನ್ನು ಸನಾತನ ಧರ್ಮವ ಮೀರದ ಪಾವನ ಬದುಕಿನತ್ತ ಕೈಹಿಡಿದು ನಡೆಸುವುದು..!!ಬದುಕಿನುದ್ದಕ್ಕೂ ಅದೆಷ್ಟೋ ಸುಖ ಕಷ್ಟದ ದಿನಗಳು ಬಂದರೂ ಸಹಿಸಿ, ಎದುರಿಸಿ ನಿಲ್ಲುವಂತೆ ಮಾಡುವುದು ಈ ಆಧ್ಯಾತ್ಮಿಕ ಪ್ರವಚನಾಮೃತಗಳೇ..!!ನಮ್ಮಂತಹ ಗೃಹಸ್ಥ ರಿಗೆ ಲೌಕಿಕವ ಅನುಭವಿಸುತಾ, ಇಂತಹ ಆಧ್ಯಾತ್ಮಿಕ ಬದುಕಿನಲಿ ನಡಯುತಿದ್ದರೆ ಆ ಪರಮ ಸುಖವ ಇಲ್ಲಿ ಪಡೆಯುವುದು ಅಕ್ಷರಶಃ ಸತ್ಯ..!!
ಹ್ಞಾ! ಇನ್ನೊಂದು.. ಸತ್ಯಾತ್ಮನು ತೋರಿದ ಪಥದಲಿ ಸಾಗಲು,ಅದನ್ನೇ ಧಾರಣೆ ಮಾಡಿದಾಗ, ಶ್ರೀ ಸೂಕ್ತಿಯಂತೆ.. ನಮ್ಮ ಚಿತ್ತದಲಿ ಏಳುವ ಯೋಚನೆಗಳು ( ಚಿತ್ತವೃತ್ತಿ) ,ಆಡುವ ನುಡಿಗಳು ನೂರಕ್ಕೆ ನೂರರಷ್ಟು ಸತ್ಯವಾಗುವುದು ಎಂಬುದರಲ್ಲಿ ಎರಡು ಮಾತಿಲ್ಲ.!(ಸ್ವ – ಅನುಭವ)ಕೂಡಾ..!!!

ಬಾಲ್ಯದಿಂದಲೆ ನಾವೆಲ್ಲರೂ ಪ್ರಾಣಿಪ್ರಿಯರಾಗಿದ್ದುದರಿಂದ ಈ ಮರಳುಗಾಡಿನ ಬೀದಿಯಲಿ ಅದೆಷ್ಟೋ ಮುಗ್ಧ ಜೀವಗಳಿಗೆ ನಿತ್ಯಜೀವನದಲಿ ಆಹಾರವುಣಿಸುವುದು ಒಂದು ಭಾಗವಾಯಿತು. ಅಂತೆಯೇ ಇಲ್ಲಿಯ ಕಾನೂನಿನ ಬದಿಗಿಟ್ಟು ಸಾಕಿದ ನಮ್ಮ ಮುದ್ದಿನ ರಾಣಿಯ ಮಹಿಮೆ ನೀವೆಲ್ಲರೂ ನನಗೆ ಆತ್ಮಸಖಿಯಂತಿರುವ ಶ್ರೀ ಗುರುಚರಣಸೇವಕಿ ಲಲಿತಾಲಕ್ಷ್ಮೀ ಅಕ್ಕನವರ ಭಾವಾಕ್ಷರದಲಿ ಓದಿರುವಿರಿ.!! ಆ ಜಡಭರತನಂತೆ ನನ್ನ ಸತ್ಸಂಗದಲಿ ಭಾಗಿಯಾದ ಬಗೆ, ಮನೆ ಸದಸ್ಯಳಾಗಿ ಪ್ರೀತಿಯಲಿ ,ಸೇವೆಯನು ಗೈದು ಮುಕ್ತಿಪಥವನು ಸೇರಿದ, ಆಪ್ತ ಬಂಧು -ನಮ್ಮ ರಾಣಿಯಾಗಿತ್ತು ಎಂದೆನಲು ಮನವು ಒಮ್ಮೆ ಹೆಮ್ಮೆ ಯಲಿ ಪುಳಕಿತವಾಗಿ ಮತ್ತೊಮ್ಮೆ ಸ್ವಲ್ಪಮಟ್ಟಿಗೆ ನೋವು ಇಂದಿಗೂ ಇಷ್ಟು ಬೇಗ ನಮ್ಮಿಂದ ದೂರವಾಯಿತಲ್ಲಾ !ಎಂದೂ..!! ಮರೆಯದ ನೆನೆಪಿನಂಗಳದಿ ದುಬೈರಾಣಿ ಯೆಂದೇ ಪ್ರಸಿಧ್ಧಿ ನಮಗವಳು ಸದಾ..!!

ಇದಕೆ ಅನ್ವಯವಾಗುವಂತೆ ಗುರುಗಳು ಗೋಜಾಗೃತಿಯಲಿ ಭಿತ್ತಿದ ಗೋವಿಗೆ ಸಹಜ ಜನನ- ಮರಣದ ಕಲ್ಪಿಸುವ ಅವಕಾಶ, ಶ್ರೀಗೋ ಸಂದೇಶಗಳು, ಶ್ರೀ ಸೂಕ್ತಿ ಗಳು, ಹಾಗೂ ಬೇರೆ ಜೀವಕೆ ನೋವಾದರೆ ನನಗೇ ಬಂದಂತೆ ಅನುಭವಿಸುವ ಬಾಲ್ಯದ ಆ ನನ್ನ ಗುಣದ ಜೊತೆಗೆ… ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಶೀಗಳವರದ್ದೂ,ಅವರ ಶಿಷ್ಯರ, ಆಚಾರ್ಯರರುಗಳ ಪ್ರವಚನಧಾರೆಯ ಅಮೃತವಾಣಿಗಳು ನನ್ನ ಮನದಲ್ಲಿ ಅತೀವವಾಗಿ, ಅಗಾಧವಾಗಿ ಬೇರೂರಿತ್ತು.ಇಂತಹ ಗುರುವರೇಣ್ಯರೆಲ್ಲರ ವಾಣಿಗಳಿಂದ ಪ್ರೇರಿತವಾದ ನಾನು, ನಮ್ಮ ಆರಾಧ್ಯರು ಕೈಗೊಂಡ ವಿಶ್ವ ಗೋಂಮಗಲಯಾತ್ರೆಯ ತರುವಾಯ.. ಹರೇರಾಮ ಹರೇಕೃಷ್ಣನಿಗೆ ಮತ್ತೊಂದು ಸೇರ್ಪಡೆ ಮಾಡಿದ್ದು ವಂದೇಗೋಮಾತರಂ ಎಂಬ ಧ್ಯೇಯನುಡಿಯ.!!

ಅಷ್ಟಾಗಿ ಕುಟುಂಬ ಸಮೇತ ಕೆಲವೊಮ್ಮೆ ಬರಲಾಗದಿದ್ದರೂ ಊರಿಗೆ ಚಾತುರ್ಮಾಸಕೆಂದೇ ನಾನೊಬ್ಬಳೇ ಬಂದಿದ್ದೂ ಇದೆ.ಕಳೆದ ಚಾತುರ್ಮಾಸದಲಿ ನಮ್ಮ ವಲಯ ಭಿಕ್ಷಾ ಕಾರ್ಯಕ್ರಮಲಿ, ನನ್ನ ಕರದಲಿದ್ದ ಪುಸ್ತಕವ ಕಂಡು ನನ್ನ ಬಳಿ ಆಸೀನರಾಗಿದ್ದ ಒಬ್ಬ ಮಾತೆ ಯು ನನ್ನನು ಹಾಡುವಂತೆ ಪ್ರೇರಿತ ಗೊಳಿಸಿದಾಗ, ಪ್ರಭುರಾಮನನು ಹಾಡಿಪೊಗಳುವ ಆ ಭಾಗ್ಯವು ನನ್ನ ಪಾಲಿಗೆ ಬಂತು. ಕಣ್ಣಾಲಿಗಳು ತುಂಬಿ ತೋಯಂ ಸಮರ್ಪಿತವಾದ ಕ್ಷಣ ,ಈಗಲೂ ಹಚ್ಚಹಸಿರು..!!

ಅದೆಷ್ಟೋ ಬಂಧುಗಳು ಇಂದಿನ ದಿನದವರೆಗೆ ಈ ಗುರುಮಹಿಮೆಯಲಿ ದೊರೆತಿದ್ದು,ಆತ್ಮಬಂಧುಗಳಂತೆ ಕೆಲವರಾದರೆ,ಇದುವರೆಗೂ ಇನ್ನೂ ಮುಖ ಪರಿಚಯವಾಗಲೀ ಇಲ್ಲದೆ ಅದೆಷ್ಟೋ ಗುರುಬಂಧುಗಳು ಇನ್ನು ಹಲವರು.ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಹೇಳುವುದಾದರೆ ಈ ಗುರುಮಹಿಮೆಯೇ ನನಗೆ ಕೆಲವು ನಕಲಿ ಬಂಧುಗಳನ್ನು ದೂರ ಇಡುವಲ್ಲಿ ಸಹಕರಿಸಿದೆ ಎಂದರೆ ಪರಮಾಶ್ಚರ್ಯವಾಗುತ್ತದೆ.!!

ಶ್ರೀ ಆರಾಧ್ಯರ ಭಾವಪೂಜೆಯ ಪರಿಯು ನನ್ನ ಅಂತರಂಗಕೆ ಅತೀ ಸನಿಹದ ಭಾಗ. ನನಗೆ ನಿತ್ಯದಲಿ ಭಕ್ತಿ ಭಾವದಲಿ ಮಂತ್ರಾಕ್ಷತೆಯ ಸ್ವೀಕರಿಸದಿದ್ದರೆ ಆದಿನ ಅದೇನೋ ಕಳಕೊಂಡ ಭಾವ. ಮಂತ್ರಾಕ್ಷತೆ ಎಂಬುದು ನನಗೆ ನಿತ್ಯದ ಅಂಗವಾಗಿ, ದೈಹಿಕ ,ಮಾನಸಿಕ ಶಕ್ತಿ ಗೆ ಆಹಾರಸೇವನೆ ಎಷ್ಟು ಮುಖ್ಯವೋ ಅದರ ಹತ್ತು ಪಟ್ಟು ಜಾಸ್ತಿ ಇಡೀ ಜೀವನದ ರಕ್ಷೆಗೆ ಮಂತ್ರಾಕ್ಷತೆಯೊಂದು ಓಷಧಿ..! ಮಂತ್ರಾಕ್ಷತೆ ಎಂಬುದು ಗುರು ಶಿಷ್ಯರ ನಡುವಿನ ಬಾಂಧವ್ಯದ ಪ್ರತೀಕ.ಅದು ನಂಬಿದವರ ಪಾಲಿಗೆ ಶ್ರೀ ರಕ್ಷೆ ಮತ್ತು ಜೀವನದಲ್ಲಿ ಪೂರ್ಣತೆಯನ್ನು ಒದಗಿಸುವ ಸುವರ್ಣ ಮಂತ್ರಾಕ್ಷತೆ….!ಬದುಕಿನ ಕಷ್ಟಗಳನ್ನು ,ಅದೆಷ್ಟೋ ಅಸಂಭವಗಳನ್ನು ತಪ್ಪಿಸುವ, ಅನಾಹುತಗಳನ್ನು ದೂರವಾಗಿಸುವ, ಭವಸಂಸಾರವನ್ನು ದಾಟಿಸುವ ಶಕ್ತಿ ಮಂತ್ರಾಕ್ಷತೆದು..!! ಇಂಥ ಮಂತ್ರಾಕ್ಷತೆಯ ಶ್ರೀ ಕರಾರ್ಚಿತದಿ ಪಡೆಯಲು ನನ್ನ ಹೃನ್ಮನವು ಸದಾ ಕಾಯುತ್ತಿರುವುದು.

ಅಷ್ಟೇಕೆ ಗೋವುಗಳ ಸ್ವತಂತ್ರ ಸಾಮ್ರಾಜ್ಯ, ಗೋಸ್ವರ್ಗದಲಿ ಶೀಗಳವರು ಮೊಕ್ಕಾಂ ಇದ್ದಾಗ,ನಮ್ಮ ಕೋರಿಕೆಯನ್ನು ಸ್ವೀಕರಿಸಿ ಹತ್ತಾರು ಕನ್ಯಾಮಣಿಗಳನ್ನು ಜೊತೆಯಾಗಿಸಿ,ಅವರ ಜೊತೆಗೆ ನಮ್ಮ ಮಗಳಿಗೂ ಕನ್ಯಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿ ಸಲಿಲವಾಗಿ ಸಹಕರಿಸಿದ ಹಿರಿಯ ಮಾತೆಯರಾದ ಈಶ್ವರಿಯಕ್ಕ ಬೇರ್ಕಡವು,ಗೀತಕ್ಕಮಂಜಪ್ಪಣ್ಣ, ವೀಣಕ್ಕ ಶಿರಸಿ,…ಇನ್ನೂ ಹಲವಾರು ಮಾತೆಯರಿಗೆ ತುಂಬು ಮನದ ಧನ್ಯವಾದಗಳು. ಮತ್ತು ಆ ದಿನದ ಆ ಭಾರೀ ಮಳೆಯಲಿ ಅಲ್ಲಿ ಸುತ್ತಾಡಿದುದು,ಗೋಹಿಂಡಿನಲಿ ಫೋಟೋ ಕ್ಲಿಕ್ಕಿಸಿದ್ದುದರ ನೆನೆಯಲೇಕೋ ಇಂದು ಮನತುಂಬುತಿದೆ..
ಅಂದಿನ ದಿನ ನಾವುಗಳು ನಮ್ಮ ಊರಿನಿಂದ ಆ ಝಡಿಮಳೆಗಾಳಿಗೆ ಮಾರ್ಗಗಳ ಮೇಲೆ ಬಿದ್ದ ಮರಗಳನ್ನು ದಾಟಿ , ಗೋಸ್ವರ್ಗವೆಂಬ ಪಾವನ ಭೂಮಿಯ ಸುರಕ್ಷಿತವಾಗಿ ತಲುಪಿದ್ದೇವೆಂದರೆ ಅದಕೆ ನಾ ನಂಬಿದ ಗುರುಮಹಿಮೆಯೇ ಹೊರತು ಇನ್ನೇನು ಅಲ್ಲವೆಂದು ಈಗಲೂ ಹೇಳುವೆ.!! ನಮ್ಮ ಈ ಪ್ರಯಾಣಕೆ ಅಂದು ವಾಹನದಲ್ಲಿ ನಮ್ಮನ್ನು ಸುರಕ್ಷಿತ ವಾಗಿ ಗೋಸ್ವರ್ಗದ ಈ ಕಾರ್ಯಕ್ರಮಕ್ಕೆ ತಲುಪಿಸಿದ ನನ್ನ ಪ್ರಾಣಗೆಳತಿ ಅಂಬಿಕಾ ಕೃಷ್ಣಕುಮಾರರ ಮರೆಯುದುಂಟೇ..!!

ನಂತರದಲ್ಲಿ ನಮ್ಮ ಪ್ರಯಾಣ ಗೋಕರ್ಣದತ್ತ ಸಾಗಲು ಸಮಯ ಮೀರಿದ್ದರಿಂದ ಶ್ರೀ ಆತ್ಮಲಿಂಗನ ಸ್ಪರ್ಶ ದರ್ಶನ ಪಡೆಯಲು ಸಾಧ್ಯವಾಗದಿರಲು, ನನ್ನ ಮನದ ಇಚ್ಛೆಯು ನೆರವೇರಲಿಲ್ಲವೆಂದು ಮುಖಕುಂದಲು ಗುರುವನೇ ನೆನೆದು ಹೇಗಾದರು ದೇವರದರ್ಶನ ಮಾಡ್ಸಿ ಗುರುಗಳೇ ಎಂದು ಆರ್ತಿಸಿದೆ..,..!ಕೊನೆಗೆ ದೇವರ ಭೋಜನ ಪ್ರಸಾದವನ್ನು ಸ್ವೀಕರಿಸುತಾ ಹೊರಗೆ ಬರಲು ಊರಿಗೆ ಹೊರಡಲೆಂದು ನಿರ್ಧಾರ ಮಾಡಿದರು ಉಳಿದವರೆಲ್ಲರು…!,ಆಗಲೂ ನನ್ನ ಮನ ಇನ್ನೂ ಆ ಮಹಾದೇವನ ಸ್ಪರ್ಶ ಮಾಡಲಾಗಲಿಲ್ಲವೆಂದು …ಪರಿತಪಿಸುತಿರಲು,…ರಸ್ತೆಯತ್ತ ಬರಲು…

ಏನಾಯಿತು ಗೊತ್ತಾ…

ಕಾರು ಕೀ ತೆಗೆಯಲೆಂದು ಕಿಸೆಗೆ ಕೈ ಹಾಕಿದ ಕೃಷ್ಣಣ್ಣಂಗೆ ಕಾರಿನ ಕೀಯು ಸಿಗದೇ ವಿಚಿತ್ರ ಘಟನೆಯೇ ನಡೆದು ಹೋಯಿತು… ಇಡೀ ಗೋಕರ್ಣವ ಸುತ್ತಾಡಿ ಬೆಂಡಾದ ನಾವುಗಳು ಕೊನೆಗೆ ದೇವಳದ ಕಾರ್ಯಾಲಯಕೆ,ಪರಿಸರದ ಸೇವಾಕರ್ತರಿಗೆಲ್ಲಾ ಮಾಹಿತಿ ಕೊಟ್ಟೆವು. ಸಂಜೆಯ ತನಕ ಇನ್ನೊಂದು ಕೀ ಅವರ ಮನೆಯಿಂದ ಅಂದರೆ ಹೊನ್ನಾವರದಿಂದ ಬರುವ ತನಕ ಗೋಕರ್ಣದಲ್ಲಿ ಉಳಿಯುವಂತಾದೆವು…..ಆಗ ಹಿರಿಯ ಪುರೋಹಿತರ ಮೇರೆಗೆ ಅಶೋಕೆಯ ಮಲ್ಲಿಕಾರ್ಜುನನ ದರ್ಶಿಸಿದಾಗ ಸಿಕ್ಕ ಮನಶಾಂತಿಗೆ, ಆ ಸಂತಸಕೆ ಏನು ಹೇಳಬೇಕೋ ಅರಿಯದಾಗೇ ಹೋಯಿತು..!!
ಇದು ನಂಬಿದವರ ಕೈಬಿಡದ ನಮ್ಮ ಗುರುರಾಮರ ಮಹಿಮೆಯಲ್ಲದೆ ಇನ್ನೇನು..!!!
ಮನದಿಚ್ಛೆಯಂತೆ ನನ್ನ ಕರೆಯು ಶ್ರೀಗುರುರಾಮರ ತಲುಪಿ ಅಸ್ತು ಸಿಕ್ಕ ಮೇಲೆ ಮಹಾದೇವನ ದರುಶನವ ಗೈಯಲು ಮತ್ತಷ್ಟು ಭಾವ ಭಕುತಿ ತುಂಬಲು… ಕರುಣಾಮಯಿಯ ನೆನೆಯುತ ಮನದಲೇ ಗುರುಮಹಿಮೆಯ ಕೊಂಡಾಡುತಾ ಆತ್ಮಲಿಂಗನಿಗೆ ಅಭಿಷೇಕವ ಗೈಯುತ ದರುಶನವನ್ನು ಸಂಜೆಯ ಪೂಜೆಯಲ್ಲಿ ಸಾಂಪ್ರದಾಯಿಕವಾಗಿ ಪಡೆದೆವು. ಸೇವೆ ಸಲ್ಲಿಸುವ ಭಾಗ್ಯ ಒದಗಿದುದರ ನೆನೆದರೆ ಇಂದಿಗೂ ಬೆರಗುಗೊಳಿಸುವ ದಿನವದು.!

ನಾವು ಪ್ರಯಾಣಿಸುತ್ತಿದ್ದ ಕಾರಿನ ಕೀಯನ್ನು ಮಹಾಬಲೇಶ್ವರ ದೇವರು ಎಲ್ಲೋ ಕಳೆದುಹೋಗುವಂತೆ ಮಾಡಿ,ನನ್ನ ಇಚ್ಛೆಯನ್ನು ಪೂರೈಸಿದರೆಂದರೆ ಯಾರೂ ನಂಬಲ್ಲ..!!ಇದನ್ನು ಪವಾಡವೆನ್ನಲೋ.ವಿಸ್ಮಯ ವೋ..ಗುರುಮಹಿಮೆಯೆನ್ನಲೋ….!!
ಆರಾಧಿಪ ಗುರು ಕಾರುಣ್ಯದ ಮಹಿಮೆಯೆಂಬುದೇ ಪ್ರಬಲವಾದ ನಂಬಿಕೆ ನಮ್ಮದು..!!

ಅಂತು ಸಂಜೆಯ ಪೂಜೆಯನ್ನು ನೋಡಿ ಅಲ್ಲಿಂದ ಮನೆಯ ಕಡೆಯತ್ತ ಹೊರಟೆವು ನೋಡಿ..!

ಮರುದಿನ ಮಧ್ಯಾಹ್ನವಾಗುತ್ತಿದ್ದಂತೆ ಒಂದು ಫೋನ್ ಕಾಲ್ …”ನಿನ್ನೆ ನಿಂಗ ಕಳಕೊಂಡ ಕೀ ಸಿಕ್ಕಿದ್ದು,ಬಂದು ತೆಕ್ಕೊಂಡು ಹೋಗಿ ಅಂದರು”..ಈಗ ಮತ್ತೆ ಅಚ್ಚರಿಯ ಜೊತೆ ಸಂತೋಷವಾಯಿತು ನಮಗೆಲ್ಲರಿಗೂ. ಇದೂ ಅವನಿಚ್ಛೆ ಯೇ ಅಲ್ಲವೇ..!!
ಗುರುಚಿತ್ತ ಸತ್ಯ.!!

ಅದೆಷ್ಟೋ ಸಲ ನನ್ನ ಬಳಿ ನಮ್ಮ ಮಠದ ಬಗ್ಗೆ ಅಂದು ಕೀಳಾಗಿ ಮಾತಾಡಿದವರ ಮಾತು ನನಗೆ ಸಹಿಸಿಕೊಳ್ಳಲಾಗದೆ ,ಅಂತಹವರಲ್ಲಿ ಸ್ವಲ್ಪ ಖಾರವಾಗಿ ಕಠುಧ್ವನಿ ಎತ್ತಿ ಮಾತಾಡಿದ ಅನುಭವ ಮರೆಯಲು ಸಾಧ್ಯವಿಲ್ಲ.ಆರಾಮನ ಬತ್ತಳಿಕೆಯಲಿರುವ ಬಾಣಗಳಂತೆ ಈ ನಮ್ಮ ಶಿಷ್ಯರು ಗುರುವಿನ ಬತ್ತಳಿಕೆಲಿರುವ ಒಂದೊಂದು ಬಾಣಗಳು. ಈ ಬಿಲ್ಲುಬಾಣಪ್ರಯೋಗವಾದರೆ ಯಾವ ರಾಕ್ಷಸರು ಉಳಿಯಲಾರವು.ಅಷ್ಟೇಕೆ ಶಿಷ್ಯರೆಂದರೆ ಫಲವತ್ತಾದ ತೋಟಕೆ ಹಾಕಿದ ಕಬ್ಬಿಣದ ಸರಳುಗಳ ಬೇಲಿಯಂತೆ.ಆ ಆರುಣಿಯಂತಹ ಗುರುನಿಷ್ಠೆಯ ಶಿಷ್ಯರ ಪಡೆದ ನಮ್ಮ ಪೀಠವು ನಮ್ಮ ಹೆಮ್ಮೆ ಅಂತಹ ಶ್ರೀ ಮಠದ ಭಕ್ತೆಯೆನಲು ನನಗೂ ದೈನ್ಯದಲಿ ಹೆಮ್ಮೆ..!!

ಶ್ರೀ ಸಂಸ್ಥಾನದವರ ಗೋಸಂದೇಶವ ಕಾಯಾ,ವಾಚಾ, ಮನಸಾ ಪಾಲಿಸಿ, ಗೋಮಾತೆಯ ಸಂರಕ್ಷಣೆಯ ಸಲುವಾಗಿ ನಾನು ಹೋದಲ್ಲೆಲ್ಲ ಗೋಜಾಗೃತಿಯನು ಮೂಡಿಸುವುದು, ಆ ಮೂಲಕ ಸಾವಿರದ ಸುರಭಿಗೆ ಅಂದು ಒಂದಷ್ಟು ಸಾವಿರದರ್ಪಣೆ ಗೋಸ್ವರ್ಗದ ಪಾವನ ಭೂಮಿಲಿ ಶ್ರೀ ಚರಣಗಳಲಿ ಇತ್ತಾಗ ಆದ ಆನಂದಕೇ ಪಾರವೇ ಇರಲಿಲ್ಲ. ನನ್ನ ಜೊತೆ ಕೈ ಜೋಡಿಸಿದ ನನ್ನ ದುಬೈ ಗೆಳತಿಯರು, ಇತ್ತೀಚೆಗೆನ ಗೋಮಾತೃತ್ವಂ ನ ಸೇವೆಯಲೂ ಮಾಸದ ಮಾತೆಯಾಗಲು ಜೊತೆಯಾಗಿದ್ದುದಲ್ಲದೇ ..,ಈ ಭಾಗ್ಯವು ದೊರೆತಿದ್ದುವೆಲ್ಲವೂ ಗುರುಮಹಿಮೆಯ ಕಾರಣದಿಂದಲೇ ಎಂದು ಸಾರಿಸಾರಿ ಹೇಳಲು ಮನವು ಹರುಷದಿ ಕುಣಿಯುವುದು!!
ಈ ಮಹಿಮೆಯ ಫಲವಾಗಿಯೇ ಒಂದಷ್ಟು ಗುರು, ಗೋವು, ಮಠ ಈ ಬಗೆಗೆ ಎರಡಕ್ಷರವನು ಲೇಖನರೂಪದಲ್ಲಿ ಸಲ್ಲಿಸುವ ಭಾಗ್ಯ ಸಾಮಾಜಿಕ ಜಾಲಗಳಲ್ಲಿಯೂ ಹಲವರನ್ನು ತಲುಪಿದೆ ಎನ್ನಲು ,ಅವೆಲ್ಲವೂ ಗುರೋದಿತವಾದ ಪ್ರೇರಣೆಯಿಂದಲೇ ಎನ್ನುವುದು ಅಂತರಂಗದ ಮಾತು ,ಹಾಗೂ ಅದೆಲ್ಲವನ್ನೂ ಆ ಶ್ರೀ ಚರಣಕ್ಕೇ ಅರ್ಪಣೆ ಮಾಡಲು ಮನವೂ ಸದಾ ಹಾತೊರೆಯುತ್ತಿರುತ್ತದೆ..!!

ಇತ್ತೀಚೆಗೆ ಒಂದು ದೊಡ್ಡ ಕಂಟಕವು ಬಂದೊದಗಿದಾಗ ನಾನು ಪಾರಾಗಿದುದು ಗುರುರಾಮಗೋಮಾತೆಯ ಅನುಗ್ರಹ ಕಾರುಣ್ಯದ ಫಲದಿಂದಲೇ..!!
ಹೆಚ್ಚೇಕೆ ಅಂದು ನೇರಪ್ರಸಾರದ ರಾಮೋತ್ಸವದಲಿ,ಗುರುರಾಮರೆದುರಲಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಯವರು ಸಂಸ್ಥಾನದವರ ಜೊತೆಗಿರಲು ,ವನಮಾಲಿಯಸ್ತುತಿಯನು ೩ ಸಲ ಪಠಿಸಿದ ಫಲವೇ ಇಂದು ಅವರ ಬಳಗದ ನಿತ್ಯ ಪ್ರವಚನ ಶ್ರವಣ ಮಾಲಿಕೆಯ ಒಬ್ಬ ಸದಸ್ಯೆಯಾಗುವ ಭಾಗ್ಯ ನನ್ನದಾಯಿತು.!ಅಲ್ಲದೆ ಅವರ ಗ್ಲೋಬಲ್ ವಿಷ್ಣು ಸಹಸ್ರನಾಮ ಸಂಸ್ಥೆಗೆ ಒಂದಷ್ಟು ಸತ್ಸಂಗಿಗಳನ್ನು ಸೇರಿಸಿ,ಅವರ ಪ್ರವಚನ ಮಾಲಿಕೆಯ ಶತದಿನೋತ್ಸವದದಂದು ಅವರ ಮೇಲೆ ರಚಿಸಿ, ಸ್ತುತಿಸಲು ಅವರ ಪ್ರೀತಿಯ ಅನುಗ್ರಹಕ್ಕೆ ಪಾತ್ರ ವಾಗಿದ್ದು ನಮ್ಮ ಆರಾಧ್ಯಗುರುಗಳ ಅನುಗ್ರಹ ದಿಂದಲೇ ಎನ್ನುವುದು ದಿಟ..!!ಆಗಲೇ ನೆನೆದುಕೊಂಡೆ ಶ್ರೀ ಸೂಕ್ತಿಯಂತೆ ಮಹಾತ್ಮರೆಂದರೆ ಎಷ್ಟೇ ಎತ್ತರದಲ್ಲಿದ್ದರೂ ಹತ್ತಿರವಾಗಿರುತ್ತಾರೆ ಎನ್ನುವುದು ಕಣ್ಣಾರೆ ಸ್ವತಃ ನಾ ಕಂಡಿದ್ದು ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ವಿಠಲದಾಸರಂತ ಗುರುಗಳ ಪ್ರೀತಿಯ ಒಡನಾಟದಿಂದ ಇತ್ತೀಚೆಗೆ..!!
ಮಹಾನಂದಿ ಗೋಲೋಕ ಕೃಷ್ಣಾರ್ಪಣಮಂ ಕಾರ್ಯಕ್ರಮ ದಲಿ ಅಂತಹ ಹರಿದಾಸರ ಸಾಹಿತ್ಯದ ಶತಮಾನದ ಗ್ರಂಥವು ಬಿಡುಗಡೆಯಾದ ದಿನದಲಿ , ನಾವುಗಳು ಕೂಡ ನಿಮ್ಮೆಲ್ಲರ ಜೊತೆ ನೇರವಾಗಿ ಅಲ್ಲಿ ಬಂದು ಸಾಧ್ಯವಾಗದೇ ಇದ್ದರೂ ಇರುವಲ್ಲಿಂದಲೇ ಒಂದಷ್ಟು ಮಾತೆಯ ರನ್ನು ಸೇರಿಸಿ ಭಕ್ತಿ ಭಾವದಲಿ ನಮ್ಮ ವಿಷ್ಣು ಸಹಸ್ರನಾಮ ಸೇವೆಯನು ಆ ಗೋವರ್ಧನ ಧಾರಿಗೆ ಸಲ್ಲಿಸಸಲು ,ಪ್ರಸಾದ ವಿತರಣೆಯನ್ನು ಮಾಡುವ ಭಾಗ್ಯ ದೊರೆತದ್ದು ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯವಾಯಿತು.!

ಹೌದು ಇತ್ತೀಚೆಗೆ ಸೌರಮಾನ ಯುಗಾದಿಯ ನಂತರ ಶ್ರೀ ಕರಾರ್ಚಿತ ರಾಮದೇವರ ಪೂಜೆಯು ಸಾಧಾರಣ ತುಂಬಾ ದಿನಗಳ ವರೆಗೆ ಲಭ್ಯವಿರಲಿಲ್ಲ..ಆಕ್ಷಣದಲಿ ಮನವು ಪೂಜೆಯ ಕಣ್ತುಂಬದೆ ಬಿಕೋ ಅನ್ನುತಿರಲು ಶೀಗುರುರಾಮರ ನೆನೆದು ಭಕ್ತಿಯಲಿ ಸ್ಮರಿಸಿ , ಮನದ ಈ ಕೋರಿಕೆಯನು ಕಾಯೇನಾ ವಾಚಾಮನಸಾ ಗುರುವಿಗರ್ಪಿಸಿದೆ. ಅದಾಗಿ ಒಂದೆರಡು ದಿನವಿರಬಹುದೇನೋ ಮಠಕ್ಕೆ ಸಂಬಂಧಿತ ಬಳಗದಲ್ಲಿ ಬಂತು ನೋಡಿ ಪೂಜೆಯ ಮಾಹಿತಿಯು…
ನನಗೂ ನಂಬಲಾಗಲಿಲ್ಲ..ಮೆಲ್ಲನೆ ಓದಲು ಶುರುಮಾಡಿದೆ…!
ಏನೆಂದು ಹೇಳಲಿ…
ಇನ್ನು ಮುಂದೆ ಪ್ರತೀ ಆದಿತ್ಯವಾರ ಎರಡೂ ಹೊತ್ತಿನ ಶ್ರೀಕರಾರ್ಚಿತ ಪೂಜೆಯನು ನೇರ ಪ್ರಸಾರದಲ್ಲಿ ಫೇಸ್ಬುಕ್ ಲಿ ಶಿಷ್ಯಭಕ್ತರಿಗಾಗಿ ಹಾಕಲಾಗುವುದು ಎಂದು..!!ಯಬ್ಬಾ…ನಿನ್ನ ಮಹಿಮೆಯೋ ದೇವಾ ಎಂದು ಕೂಗಲು ಅದೇನಾಯಿತೋ ನಾ ಅರಿಯೆ,ಕಣ್ಣುಗಳು ಮಂಜಾದವು,ಕಣ್ಣಾಲಿಗಳು ತುಂಬಿತುಳುಕಿದವು.., ಹೀಗೆ ನಿಮ್ಮಲ್ಲೂ ಪೂಜೆಯ ನೋಡದೆ ಗುರುವಿಗೆ ಮೊರೆಯಿತ್ತು, ಇದೇ ಅನುಭವ ಪಡೆದ ಅದೆಷ್ಟೋ ಶಿಷ್ಯರಿರಬಹುದು…!! ಆ ಕ್ಷಣ ಈ ಪರಮಾದ್ಭುತ ಗುರು ಮಹಿಮೆಯನು ನೆನೆದು ಕಣ್ಣಾಲಿಗಳು ತುಂಬುತ, ಕೈ, ಶಿರಗಳು ಹಾಗೆ ಅವರೆದುರು ಶರಣಾಯಿತು..!! ಸದಾ ಮಾತೃಹೃದಯೇಶ್ವರ ಕರುಣಾಸಾಗರರಾದ ನಮ್ಮ ಶ್ರೀಗಳ ಮಹಿಮೆಯ ಪೊಗಳಲು ಅಕ್ಷರಗಳು ಅರಿಯದಾಗುವುದು ಒಮ್ಮೆಲೆ.!
ಅದಕೇ ಅಲ್ಲವೇ ಅವನು ಕರುಣಾಮಯಿ, ಭಕ್ತವತ್ಸಲ,ಆಶ್ರಿತ ವತ್ಸ್ಯ.ಭಕ್ತಾನುಕಂಪಿ,ಭಕ್ತಿ ಪರಾಯಣ ಮುಕ್ತಿದ ರಾಮ,ಸರ್ವಚರಾಚರ ಪಾಲಿಪ ರಾಮ…!!
ನಂಬಿದವರ ಕೈ ಬಿಡದ ಶ್ರೀ ಗುರುರಾಮರ ಈ ಕಾರುಣ್ಯಕೆ , ಆ ಪಾದಪದ್ಮಗಳಿಗೆ ಶರಣಾಗುವುದೇ ನನ್ನ ಸೇವೆ.!!

ಹೀಗೆ ಒಂದೇ , ಎರಡೇ.ಬರೆಯುತ್ತಾ ಹೋದರೆ..ಮುಗಿಯದ ಪುಟಗಳು ಈ ಗುರುಮಹಿಮೆಯೆಂಬುದು.ಈ ಗುರುಮಹಿಮೆಯೆಂಬ ಅನುಭವಗಳ , ಅದರ ಫಲವೆಂಬ ಒಂದೊಂದು ನವರತ್ನಗಳ ಪೋಣಿಸುತ ಹೋದರೆ ಅದೊಂದು ವೈಜಯಂತಿ ಸರಮಾಲೆ . ನನ್ನದೇನಿದೆ ಸ್ವಾಮಿ ಎಲ್ಲವೂ ನಿನದೇ ಎನುವಂತೆ ಅವನಿತ್ತದುದರ ಅವನಿಗರ್ಪಿಸುವ ಈ ಮಾಲೆಗೆ ಭಾವಕುಸುಮವ ಸೇರಿಸಿ ನಂಬಿದ ಆರಾಧ್ಯಗುರುರಾಮರ ಚರಣಕಮಲಗಳಿಗೂ, ಗೋಮಾತೆಯ ಚತುಷ್ಪಾದಗಳಿಗೂ , ಸಮರ್ಪಿಸುವುದಷ್ಟೆ ನನ್ನ ಕಾಯಕ..!!

ಕೊನೆಯದಾಗಿ ಇಂತಹ ನಮ್ಮ ಅವಿಚ್ಛಿನ್ನ ಪರಂಪರೆಯ ಶ್ರೀ ಶಂಕರಾಚಾರ್ಯ ಪೀಠದ ರಾಮಚಂದ್ರಾಪುರ ಮಠವು , ನಮ್ಮ ಆರಾಧ್ಯರು,ನಮ್ಮ ವಿಶ್ವಮಾತೆ ಗೋಮಾತೆ, ನಮ್ಮ ಸನಾತನ ಸಂಸ್ಕೃತಿ,ಪರಂಪರೆ ಎಲ್ಲವೂ ನಮ್ಮ ಹೆಮ್ಮೆ…!!!ಇಂತಹ ಶ್ರೀ ಮಠದ- ಶ್ರೀ ಆರಾಧ್ಯಗುರುಗಳ ಭಕ್ತೆ – ಶಿಷ್ಯೆ ಯೆನಲು ನನಗೂ ಭಕ್ತಿಯ ವಿನಮ್ರ ಹೆಮ್ಮೆ.!!
ಇಂತಹ ನಮ್ಮ ಮಠದ ಶ್ರೀ ಆರಾಧ್ಯಗುರುರಾಮರಗೋಮಾತೆಯ ಸೇವೆಯ ಮಾಡುವ ಭಾಗ್ಯವು ನಮ್ಮ ಶಕ್ತ್ಯಾನುಸಾರ ಕೊನೆಯ ತನಕವು ಲಭಿಸಲೆಂದು ಶ್ರೀ ಗುರುರಾಮರ ಚರಣಕೆ ಶರಣಾಗಿ ಪ್ರಾರ್ಥಿಸುತ್ತಾ, ದೂರದ ಸಾಗರದಾಚೆಯ ಷೇಕನೂರಿನಿಂದ ಬೇಡಿಕೊಳ್ಳುವೆನು …

Author Details


Srimukha

Leave a Reply

Your email address will not be published. Required fields are marked *