ತೇಜೋವಧೆ ಮಾಡುತ್ತಿದ್ದವರಿಗೆ ನ್ಯಾಯಾಲಯ ಮಾಡಿದ್ದೇನು !

ಸುದ್ದಿ

ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಕುರಿತು ಆಧಾರರಹಿತವಾದ ವದಂತಿಗಳನ್ನು ಹಬ್ಬಿಸಿ, ತೇಜೋವಧೆ ಮಾಡುವ ಹಾಗೂ ಸಮಾಜದ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನಗಳನ್ನು ಪ್ರತಿಬಂಧಿಸಿ ಹೊಳೆನರಸಿಪುರ ಸಿವಿಲ್ ಜಡ್ಜ್ ಮತ್ತು ಜೆ. ಎಂ. ಎಫ್. ಸಿ. ನ್ಯಾಯಾಲಯ ಆದೇಶ ನೀಡಿದೆ.

 

ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳು ಸಮಾಜದಲ್ಲಿ ಧಾರ್ಮಿಕತೆಯನ್ನು ಬೆಳೆಸುವ ಜೊತೆಗೆ ಸರ್ವಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಮಠದ ವ್ಯವಹಾರಗಳನ್ನು ಪಾರದರ್ಶಕವಾಗಿ ಇಟ್ಟಿರುವ ಜೊತೆಗೆ ಸುವ್ಯವಸ್ಥಿತ ಆಡಳಿತವನ್ನು ನೀಡಿದ್ದಾರೆ. ಗೋಸಂರಕ್ಷಣಾ ಕಾರ್ಯದ ಜೊತೆಗೆ ಸರ್ವಸಮಾಜದ ಉನ್ನತಿಗಾಗಿ ಶ್ರಮವಹಿಸಿರುತ್ತಾರೆ. ಆದರೆ ಕೆಲವು ಪಟ್ಟಭದ್ರ ಸ್ವಹಿತಾಸಕ್ತಿಗಳು ಆಧಾರರಹಿತವಾಗಿ ಹಾಗೂ ಅಕಾರಣವಾಗಿ ಶ್ರೀಗಳ ತೇಜೋವಧೆಯನ್ನು ನಿರಂತರವಾಗಿ ಮಾಡುತ್ತಿದ್ದು, ಪತ್ರಿಕಾ ಹೇಳಿಕೆ – ಸಾಮಾಜಿಕ ಜಾಲತಾಣ ಹಾಗೂ ವದಂತಿಗಳಿಂದ ಸಮಾಜದ ನಂಬಿಕೆಗಳನ್ನು ಬುಡಮೇಲು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಲಕ್ಷಾಂತರ ಜನರ ಧಾರ್ಮಿಕ ಭಾವನೆ ಹಾಗೂ ಸಾಮಾಜಿಕ ನಂಬಿಕೆಗಳಿಗೆ ಹಾನಿಯಾಗುವುದನ್ನು ತಪ್ಪಿಸುವ ಸಲುವಾಗಿ ಸದರಿ ಸಮಾಜ ವಿರೋಧಿ ಕೃತ್ಯಗಳನ್ನು ಪ್ರತಿಬಂಧಿಸಲು ಶ್ರೀಮಠದ ಭಕ್ತರೊಬ್ಬರು ಸಲ್ಲಿಸಿದ್ದ ಮನವಿಯನ್ನು ಮಾನ್ಯ ಮಾಡಿದೆ.

 

ಪೂರಕ ದಾಖಲೆಗಳನ್ನು ಸಮಗ್ರವಾಗಿ ಗಮನಿಸಿ, ಪುರಸ್ಕರಿಸಿದ ನ್ಯಾಯಾಲಯವು, 27 ಜನರಿಗೆ ಸಮನ್ಸ್ ಜಾರಿಗೊಳಿಸುವಂತೆ ಸೂಚಿಸಿ, ಸದರಿ ವ್ಯಕ್ತಿಗಳು ಸ್ವತಃ ಅಥವಾ ಅವರ ಪ್ರತಿನಿಧಿಗಳ ಮೂಲಕ ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀರಾಮಚಂದ್ರಾಪುರಮಠದ ಪೀಠಾಧಿಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳ ವಿರುದ್ಧ ಮುದ್ರಣ ಮಾಧ್ಯಮ – ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಸೇರಿದಂತೆ, ಯಾವುದೇ ರೀತಿಯಿಂದಲೂ ಹೇಳಿಕೆ – ಸಂದೇಶಗಳನ್ನು ನೀಡದಂತೆ ಪ್ರತಿಬಂಧಿಸಿ ಆಜ್ಞೆ ಮಾಡಿದೆ.

Leave a Reply

Your email address will not be published. Required fields are marked *