ಹಳ್ಳಿಗಳು ಹಾಗೂ ಹಳ್ಳಿಗರು ಬೆಂಗಳೂರನ್ನು ಸೇರುತ್ತಾ ಸಾಗಿದಂತೆ ಬೆಂಗಳೂರು ದೊಡ್ಡದಾಗುತ್ತಾ ಹೋಗಿದೆ. ನಾವು ಹಳ್ಳಿಗಳನ್ನು ಮಾತ್ರ ಬಿಟ್ಟುಬಂದಿಲ್ಲ, ಈ ಮಾಯಾ ನಗರಿಗೆ ಬರುವಾಗ ನಮ್ಮ ಸಂಸ್ಕೃತಿಯನ್ನೂ ಬಿಟ್ಟು ಬಂದಿರುವುದು ದುರಂತ. ಇಂದು ಹಳ್ಳಿಗಳಲ್ಲಿಯೂ ಕೂಡ ನಗರದ ಸಂಸ್ಕೃತಿ ಬೆಳೆಯುತ್ತಿರುವುದು ಆತಂಕಕಾರಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.
ಬೆಂಗಳೂರಿನ ಗಿರಿನಗದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖೆಯಲ್ಲಿ ನಡೆದ ‘ಗೋದೀಪ – ದೀಪಾವಳಿ ಗೋಪೂಜೆ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಗೋಸಂದೇಶ ನೀಡಿದ ಶ್ರೀಗಳು, ಭಗವಾನ್ ಶ್ರೀಕೃಷ್ಣನು ಗೋಪೂಜೆಯ ಪ್ರವರ್ತಕನಾಗಿದ್ದು, ಗೋವು ಜನರ ಜೀವನದ ಆಧಾರವಾದ್ದರಿಂದ ಗೋವಿಗೆ ಪೂಜೆ ಸಲ್ಲಬೇಕು ಎಂದು ಭಾಗವತದಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ನಮ್ಮ ಜೀವನದಲ್ಲಿ ಗೋವನ್ನು ತಂದರೆ ಅದೇ ನಿಜವಾದ ಗೋಪೂಜೆಯಾಗಿದ್ದು, ಗೋವನ್ನು ನಮ್ಮ ಜೀವನದ ಜೋಡಿಸಿಕೊಳ್ಳಬೇಕು. ಆದರೆ ಗೋವಿನ ಮರಣವನ್ನು ನಮ್ಮ ಜೀವನದಲ್ಲಿ ಜೋಡಿಸಿಕೊಂಡಿರುವುದು ದುರಂತವಾಗಿದೆ ಎಂದರು.
ಪೇಟೆಯಲ್ಲಿ ಗೋಪೂಜೆ ಮಾಡಲು ಗೋವು ಇಲ್ಲ ಹಾಗೂ ಪೂಜೆ ಮಾಡುವ ಮನಸ್ಸು ಇಲ್ಲಾ ಎಂಬಂತಾಗಿದೆ. ಈ ಕುರಿತಾಗಿ ಜಾಗೃತಿ ಮೂಡಿಸಲು ಇಂದು ವಿವಿಧ ಕ್ಷೇತ್ರಗಳ ಗಣ್ಯರಿಂದ ಪೂಜೆ ನಡೆಸಲಾಗಿದೆ. ಈ ಸಂಸ್ಕೃತಿ ಮತ್ತಷ್ಟು ಬೆಳೆಯಲಿ ಎಂದು ಆಶಿಸಿದರು.
*ಸಂಸದ ತೇಜಸ್ವಿ ಸೂರ್ಯ* ಮಾತನಾಡಿ, ಮದುವೆಯಾದ ನಂತರ ಮೊದಲ ದೀಪಾವಳಿಯನ್ನು ಗೋಪೂಜೆಯೊಂದಿಗೆ ಶ್ರೀರಾಮಚಂದ್ರಾಪುರ ಮಠದಲ್ಲಿ ಆಚರಿಸುತ್ತಿರುವುದು ನಮ್ಮ ಪಾಲಿನ ಭಾಗ್ಯವಾಗಿದೆ. ದೇಶದಲ್ಲಿ ಗೋಸಂರಕ್ಷಣೆಗೆ ಶ್ರೀಗಳ ಕೊಡುಗೆ ಅಪಾರವಾಗಿದ್ದು, ಬೆಂಗಳೂರು ನಗರದಲ್ಲಿ ದೇಶಿ ಗೋತಳಿಗೆ ವಿಶೇಷವಾಗಿ ಪೂಜೆ ಸಲ್ಲಿಸುವ ಅವಕಾಶ ಲಭಿಸಿದ್ದು ಧನ್ಯತೆಯ ಕ್ಷಣವಾಗಿದೆ ಎಂದರು.

ಇದಕ್ಕೂ ಮೊದಲು ವಿಶ್ರಾಂತ ಮುಖ್ಯ ನ್ಯಾಯಾಧೀಶ ಪಿ.ಎಸ್. ದಿನೇಶ್ ಕುಮಾರ್ ದಂಪತಿಗಳು, ಸಂಸದ ತೇಜಸ್ವೀ ಸೂರ್ಯ ದಂಪತಿಗಳು, ಶಾಸಕ ರವಿಸುಬ್ರಹ್ಮಣ್ಯ ಎಲ್. ಎ. ದಂಪತಿಗಳು, ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ಎಮ್ ದಂಪತಿಗಳು, ಖ್ಯಾತ ಲೇಖಕ, ಚಿಂತಕ ಡಾ. ನಾ. ಸೋಮೇಶ್ವರ ದಂಪತಿಗಳು, ರಿಪಬ್ಲಿಕ್ ನ್ಯೂಸ್ ಕನ್ನಡದ ಸಂಪಾದಕಿ ಶೋಭಾ ಮಲವಳ್ಳಿ ದಂಪತಿಗಳು, ಸಂಸ್ಕೃತಿ ಚಿಂತಕಿ ಡಾ. ಆರತಿ ವಿ. ಬಿ. ದಂಪತಿಗಳು, ವಿದ್ವಾನ್ ಶ್ರೀಕಂಠ ಶಾಸ್ತ್ರೀ ದಂಪತಿಗಳು,
ವಿಕ್ರಮ ಪತ್ರಿಕೆ ಸಂಪಾದಕ ರಮೇಶ್ ದೊಡ್ಡಪುರ, ಗೋ ಸೇವಕ ಕುಮಾರ ಸುಬ್ರಹ್ಮಣ್ಯ ಜಾಗೀರ್ದಾರ್ ದಂಪತಿಗಳು, ಲಕ್ಷ್ಮೀನಾರಾಯಣ ಪ್ರಸಾದ ಪಕಳಕುಂಜ ದಂಪತಿಗಳು 10 ವಿವಿಧ ತಳಿಯ ಸಾಲಂಕೃತ ಗೋವುಗಳಿಗೆ ಏಕಕಾಲಕ್ಕೆ ಸಾಂಪ್ರದಾಯಿಕ ಗೋಪೂಜೆಯನ್ನು ಸಲ್ಲಿಸಿದರು. ಗೋಸೂಕ್ತ ಪಾರಾಯಣ, ಗೋಸೂಕ್ತ ಹವನ ನಡೆಯಿತು.

ಶಿವಶ್ರೀ ಸ್ಕಂದಪ್ರಸಾದ ಮತ್ತು ತಂಡದವರಿಂದ ನಡೆದ ‘ಗೋ ಗಾನಾಮೃತ’ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು. ಹವ್ಯಕ ಮಹಾಮಂಡಲದ ಶಿಷ್ಯ ಮಾಧ್ಯಮ ಪ್ರಧಾನ ಪ್ರಮೋದ್ ಮೋಹನ್ ಹೆಗಡೆ ಶ್ರೀರಾಮಚಂದ್ರಾಪುರಮಠದಿಂದ ನಡೆದ ಗೋಸಂರಕ್ಷಣಾ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು. ರಂಜನಿ ಕೀರ್ತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬೆಳಗ್ಗೆಯಿಂದ ನಡೆದ ಸಾರ್ವಜನಿಕ ಗೋಪೂಜೆಯಲ್ಲಿ ನೂರಾರು ಗೋಪ್ರೇಮಿಗಳ ಭಾಗಿಗಳಾಗಿ ಪೂಜೆ ಹಾಗೂ ಗೋಗ್ರಾಸವನ್ನು ಸಮರ್ಪಿಸಿದರು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಅಧ್ಯಕ್ಷರಾದ ಮೋಹನ್ ಭಾಸ್ಕರ ಹೆಗಡೆ, ಯೋಜನಾ ಖಂಡದ ಶ್ರೀಸಂಯೋಜಕ ವಿದ್ವಾನ್ ಜಗದೀಶಶರ್ಮಾ ಸಂಪ, ಗೋದೀಪ ಕಾರ್ಯಕ್ರಮದ ಸಂಚಾಲಕ ವಾದಿರಾಜ ಸಾಮಗ, ಸಹ ಸಂಚಾಲಕ ಶಂಕರ್ ಹಿರೇಗಂಗೆ ಮುಂತಾದವರು ಉಪಸ್ಥಿತರಿದ್ದರು.
ನಾನು ವೇದ ಮಂತ್ರಗಳನ್ನು ಕಲಿತಿದ್ದು ಶ್ರೀರಾಮಚಂದ್ರಾಪುರ ಮಠದಲ್ಲಿ. ನಮ್ಮ ಕುಟುಂಬದಲ್ಲಿ ಯಾವುದೇ ಶುಭಕಾರ್ಯವಾದರೂ ಇಲ್ಲಿ ಪೂಜೆ ಸಲ್ಲಿಸಿಯೇ ಆರಂಭಿಸುತ್ತೇವೆ. ಮಂದಹಾಸದ ಶ್ರೀಗಳ ಕೃಪಾದೃಷ್ಟಿಯೇ ನಮ್ಮೆಲ್ಲರ ನೋವುಗಳನ್ನು ಪರಿಹರಿಸುತ್ತದೆ.
– ತೇಜಸ್ವಿ ಸೂರ್ಯ, ಸಂಸದ