ಕಾರ್ತವೀರ್ಯನ ಮರಣ

ಲೇಖನ

 

ಬ್ರಹ್ಮಾಸ್ತ್ರಗಳ ನಿರಸನದಿಂದ ಕಾರ್ತವೀರ್ಯ ಬೆರಗಾಗಿಹೋದ. ಬದುಕಿನುದ್ದಕ್ಕೂ ಕಾಣದ ಪವಾಡವನ್ನು ಕಂಡ. ಕ್ಷಾತ್ರದ ಹುಚ್ಚು ಸಾಹಸ ಸುಮ್ಮನಿರಗೊಡುವುದೆ? ಆವೇಶದಿಂದ ಅಬ್ಬರಿಸಿ ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿದ‌. ರಾಮ ಅದನ್ನು ವಾರುಣಶರದಿಂದ ನಿಷ್ಕ್ರಿಯಗೊಳಿಸಿದಾಗ ತನ್ನಲ್ಲಿರುವ ದಿವ್ಯಮಹಾಮಂತ್ರಾಸ್ತ್ರಗಳನ್ನೆಲ್ಲ ತೆಗೆತೆಗೆದು ಬಿಡಲಾರಂಭಿಸಿದ. ಅವುಗಳನ್ನೆಲ್ಲ ಅಷ್ಟೇ ಲಾಘವದಿಂದ ಪರಿಹರಿಸಿಕೊಂಡು ರಾಮ ನೆಟ್ಟ ಬಾಣ ಸಹಸ್ರಾರ್ಜುನನ ಕಿವಿಯನ್ನೇ ಕತ್ತರಿಸಿತು. ಜೊತೆಗೆ ಅವನ ಕುಂಡಲವೂ ನೆಲಸೇರಿತು. ದತ್ತಾತ್ರೇಯ ದತ್ತ ಕುಂಡಲವದು! ಮತ್ತೆ ಅರಸನಿಗೆ ಗುರುವಿನ ನೆನಪಾಯಿತು. ಅಂತರಂಗದಿಂದಲೇ ಸ್ಮರಿಸಿಕೊಂಡ. ಅನೇಕ ಯುದ್ಧ ಸಂದರ್ಭಗಳಲ್ಲಿ ಆತ ರಣದ ಮಧ್ಯೆಯೇ ಸ್ಮರಿಸಿವುದಿತ್ತು. ಇಂದು ಗುರುಸ್ಮೃತಿಗೆ ಮೂಡಿಬರಲಿಲ್ಲ.

ಅರಸನ ಚಿತ್ತ ತೀವ್ರ ಚಂಚಲಕ್ಕೊಳಗಾಯಿತು. ಕರ್ಣಕುಂಡಲ ಕರ್ಣಸಮೇತ ಹಾರಿಹೋದುದು ಚಕ್ರವರ್ತಿತ್ವದ ಭೀಕರಪತನ, ಇತ್ತಕಡೆ ವೀರಪುತ್ರರು ರಾಮನ ಬಾಣಾಘಾತಕ್ಕೆ ಒಬ್ಬೊಬ್ಬರೇ ಇಹಲೋಕ ತ್ಯಜಿಸುತ್ತಿದ್ದರು. ತಾನು ಇಂದಿನವರೆಗೂ ಅಜೇಯನೆಂದೇ ಖ್ಯಾತನಾದವ. ಅದಕ್ಕೆ ಗುರುಗಳ ಅನುಗ್ರಹದ ಕವಚವಿರುತ್ತಿತ್ತು. ದಿವ್ಯ ಮಹಾಶರಗಳಂತೂ ಧನುಸ್ಸಿನಿಂದ ಚಿಮ್ಮಲು ಹಾತೊರೆಯುತ್ತಿದ್ದವು. ರಣರಂಗದಲ್ಲಿ ಕ್ಷಣಾರ್ಧದಲ್ಲಿ ವಿಜಯಸಾಧಿಸಿ ಮೆರೆಯುವುದು ಲೀಲಾಜಾಲವಾದ ಕೆಲಸವಾಗಿತ್ತು. ಎಲ್ಲದಕ್ಕೂ ಕೊನೆ ಇರಲೇಬೇಕು. ತನ್ನ ಸಾಹಸಕ್ಕೆ ಕೊನೆ ಹೀಗೆ ಎಂದಾದರೆ ಮರಣವನ್ನು ಸಾಹಸದಿಂದಲೇ ಸಾಧಿಸುವುದೂ ಕ್ಷಾತ್ರದ ಲಕ್ಷಣ. ವೀರನಿಗೆ ಮರಣ ರಣದಲ್ಲಿ ಬರುವುದೇ ಶ್ರೇಯಸ್ಸು. ಹೀಗೆ ಚಿಂತಿಸಿದ ಅರಸ ಅಂತಿಮ ಯುದ್ಧಕ್ಕೆ ಸಿದ್ಧನಾದ.

ಏಕೋ ಈಗ ತನ್ನ ಎದುರಾಳಿ ಒಬ್ಬ ಸಾಮಾನ್ಯ ಋಷಿಕುಮಾರನಾಗಿ ಕಾಣಿಸಲಿಲ್ಲ. ದೇದೀಪ್ಯಮಾನ ವರ್ಚಸ್ಸು, ದೈವೀಕಲೆಯ ಆವಿರ್ಭಾವದಂತೆ ಕಂಡಿತು. ಮೇಲಿನ ರೂಪಕ್ಕಿಂತ ಭಿನ್ನವಾದ ಮೂಲ ಮೂರ್ತಿಯೊಂದು ಅಂತರಂಗದಿಂದ ಪ್ರಕಟವಾದಂತಿದ್ದು ಅದು ತನ್ನ ನಿಜವನ್ನು ಮರೆಸಿ ರಾಮನೆಂಬ ಬಾಹ್ಯವನ್ನು ಆವರಿಸಿದಂತಿತ್ತು. ತಾನು ಅಂತರಂಗದಿಂದಲೂ ಬಹಿರಂಗದಿಂದಲೂ ಸೋಲುಕಾಣುತ್ತಿರುವುದು. ಎದುರಾಳಿಯು ಅದೇ ಅಂತರಂಗ ಬಹಿರಂಗಗಳಿಂದ ಪ್ರಬಲನಾಗುತ್ತಿರುವುದು ಸ್ಪಷ್ಟಗೊಳ್ಳುತ್ತಾ ತನ್ನಂತ್ಯಕ್ಕೆ ವಿಧಿ ನೇಯ್ದ ಬಲೆ ಬಲವಾಗಿದೆ ಎಂಬುದನ್ನು ಅರಿತ ಅರ್ಜುನ.

ಈಗ ಒಂದುಬಗೆಯ ನಿಷ್ಕ್ರಿಯತೆಯಿಂದ ಹೊರಬಂದ ಅರಸ ಮತ್ತೆ ದಿವ್ಯಾಸ್ತ್ರಗಳನ್ಮು ನೆನಪಿಸಿಕೊಂಡ. ಮಂತ್ರಗಳು ಸ್ಮೃತಿ ಪಟಲದಿಂದ ಜಾರಿಹೋಗಿದ್ದವು. ಅನುಭವದ ಲಾಘವ ಕಡಿಮೆ ಅನ್ನಿಸಿತು. ಅದೇ ಸಮಯಕ್ಕೆ ರಾಮನೆಸೆದ ಮಹಾಸ್ತ್ರವೊಂದು ಅರಸನ ಚಕ್ರವರ್ತಿತ್ವದ ಸಮಗ್ರ ಪ್ರತೀಕವಾದ ಕಿರೀಟವನ್ನು ಧರೆಗುರುಳಿಸಿತು.

ಹೈಹಯ ವಂಶದ ಪ್ರತಿಷ್ಠೆ, ಮಾಹಿಷ್ಮತಿಯ ಮರ್ಯಾದೆ ತನ್ನೊಂದಿಗೆ ಹೀಗೆ ಅವನತಿ ಹೊಂದಿತೇ ಎಂಬುದು ಅರಸನ ಆತಂಕಕ್ಕೆ ಕಾರಣವಾಗುತ್ತದ್ದಂತೆ ರಾಮನ ಅಂತರಂಗಕ್ಕೆ ದಿವ್ಯಧ್ವನಿಯೊಂದು ಕೇಳಿಸಿತು.

‘ಗುರವಿನ ಅನುಗ್ರಹಾಮೃತ ಈತನ ಹೃದಯದಲ್ಲಿ ಸ್ಥಿರವಾಗಿದೆ’

ರಾಮನೀಗ ಹರನ ಅನುಗ್ರಹದ ಪಾಶುಪತ ಮಹಾಶರವನ್ನು ಸ್ಮರಿಸಿಕೊಂಡ. ಹೃದಯವನ್ನೇ ಗುರಿಯಾಗಿಸಿ ಕರ್ಣಾಂತ ಸೆಳೆದು ಪ್ರಯೋಗಿಸಿದ‌. ಅದು ಕಾರ್ತವೀರ್ಯಾರ್ಜುನನ ಉದರಕ್ಕೇ ನಾಟಿತು. ಅದೇ ಕ್ಷಣದಲ್ಲಿ ರಾಮನೆಸೆದ ಗಂಡುಗೊಡಲಿ ಆತನ ಶಿರವನ್ನು ಕತ್ತರಿಸಿತು.

ಜಗತ್ತನ್ನು ಗೆದ್ದು ಯಜ್ಞಕ್ರಿಯೆಯಿಂದಲೇ ಸಮ್ರಾಟನೆನಿಸಿ, ರಾವಣನಂತಹ ಮಹಾವೀರನನ್ನೇ ಮಣಿಸಿದ ಮಹಾರಾಜ ತನ್ನೆಲ್ಲ ಕೀರ್ತಿಧ್ವಜ ಸಮೇತನಾಗಿ ಮಹಾವೃಕ್ಷವೊಂದು ಧರೆಗುರುಳಿದಂತೆ ರಾಮನ ಪರಶುವಿನ ಹೊಡೆತಕ್ಕೆ ಧರೆಗುರುಳಿದ. ಆತನ ಕುರಿತ ಸುದರ್ಶನನ ಕಥೆ ಸತ್ಯವೋ ಎಂಬಂತೆ ಅವನ ದಿವ್ಯಚೇತನ ಮೂಲಸ್ವರೂಪಕ್ಕೆ ದಾರಿಯಾಗಿ ಅಲ್ಲಿಗೇ ಹೋಗಿ ಸೇರಿತು.

ಅಳಿದುಳಿದ ಸೈನ್ಯ ಹಾಹಾಕಾರವೆಬ್ಬಿಸುತ್ತಾ ಓಡುತ್ತಿದ್ದರೆ ರಾಮ ಅವರ ಕಡೆ ನಿರ್ಲಕ್ಷಿಸಿ ಧನುಸ್ಸನ್ನು ಅಕೃತವ್ರಣನ ಕೈಗಿತ್ತು ಸರಸರನೆ ನರ್ಮದಾ ನದಿಯಕಡೆಗೆ ಹೊರಟ. ಅಕೃತವ್ರಣನೂ ಅನುಸರಿಸಿದ. ನದಿಯಲ್ಲಿ ಮುಳುಗಿ ಮೇಲೆದ್ದಮೇಲೆ ಮನಸ್ಸು ಉದ್ವಿಗ್ನತೆಯಿಂದ ಹೊರಬಂತು. ಆವರಿಸಿಕೊಂಡ ಆವೇಶದಂತಹ ಭಾವ ಒಮ್ಮೆ ಸಡಿಲಾಯಿತು. ಜೊತೆಗಾರನೊಂದಿಗೆ ಆಶ್ರಮದ ಕಡೆಗೆ ಹೊರಟ.

Leave a Reply

Your email address will not be published. Required fields are marked *