ಕತ್ತಲೆಯ ಸಮಾಜಕ್ಕೊಂದು ಗುರುವೆಂಬ ಆಶಾಕಿರಣ (ಭಾಗ – ೧) : ಮಹೇಶ ಕೋರಿಕ್ಕಾರ್

ಲೇಖನ

ತುಂಬು ನಿಸರ್ಗದ ಮಧ್ಯೆ ಹಳೆಯದಾದೊಂದು ಹೆಂಚು ಹಾಸಿನ ಮನೆ. ಮನೆಯ ಮುಂದೆ ಸೆಗಣಿ ಸಾರಿಸಿದ ವಿಶಾಲವಾದೊಂದು ಅಂಗಳ. ಅಂಗಳದ ತುಂಬೆಲ್ಲ ಹರಡಿದ ಅಡಿಕೆ, ಕಾಳುಮೆಣಸುಗಳ ಮಧ್ಯೆಯೊಂದು ತುಳಸೀ ಕಟ್ಟೆ. ಅಂಗಳದ ಆ ಬದಿಗೊಂದು ಆಕಳ ಕೊಟ್ಟಿಗೆ. ಅದರೊಳಗೆ ಹಸಿರು ಹುಲ್ಲನ್ನು ಮೇಯುತ್ತಾ ನಿರ್ಲಿಪ್ತವಾಗಿ ಮಲಗಿರುವ ಒಂದೆರಡು ಹಸುಗಳು. ಇನ್ನೂ ಮುಂದಕ್ಕೆ ದಟ್ಟವಾಗಿ ಹರಡಿರುವ ಅಡಿಕೆ ತೋಟ, ವಿಶಾಲವಾದ ಭತ್ತದ ಗದ್ದೆ. ಆಗೊಮ್ಮೆ ಈಗೊಮ್ಮೆ ಬಂದು ಹರಟೆ ಹೊಡೆದು ಹೋಗುವ ನೆರೆಮನೆಯವರು, ಬಂಧುಗಳು. ಮದುವೆ, ಉಪನಯನ, ಪೂಜೆ, ಪುರಸ್ಕಾರ, ಆತಿಥ್ಯ, ಹೋಮ ಹವನಗಳು, ಯಕ್ಷಗಾನ, ತಾಳಮದ್ದಳೆ, ಊರ ದೇಗುಲದ ಉತ್ಸವಗಳು…

 

ಸುಮಾರು 1990ರ ದಶಕದವರೆಗೂ ಹವ್ಯಕರ ಪ್ರಪಂಚವೆಂದರೆ ಇಷ್ಟೇ ಆಗಿತ್ತು. ಈ ಸೀಮಿತ ವ್ಯಾಪ್ತಿಯನ್ನು ಬಿಟ್ಟು, ಹೊರಲೋಕದೊಂದಿಗೆ ಬೆರೆವ, ಬೆರೆಯಬೇಕಾದ ಪ್ರಮೇಯವೇ ಇರಲಿಲ್ಲ ಅವರಿಗೆ.  

 

ಯಾರೋ ಬೆರಳೆಣಿಕೆಯ ಕೆಲವು ಮಂದಿ ಈ ವ್ಯಾಪ್ತಿಯನ್ನು ಬಿಟ್ಟು ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದನ್ನು ಬಿಟ್ಟರೆ, ಸಮಾಜಕ್ಕೆ ಹವ್ಯಕರ ಕೊಡುಗೆಯೆಂದರೆ, ನಿರುಪದ್ರವಿಗಳಾಗಿ ಸಾತ್ತ್ವಿಕ ಜೀವನವನ್ನು ನಡೆಸಿಕೊಂಡು ಬಂದಿರುವುದು ಮಾತ್ರವಾಗಿತ್ತು ಅಂದು.  

 

ಹಿರಿಯರಿಂದ ಬಳುವಳಿಯಾಗಿ ಬಂದ ಅಡಿಕೆ ತೋಟ, ಹೊಲಗದ್ದೆಗಳನ್ನೇ ನೆಚ್ಚಿ ಜೀವಿಸುತ್ತಿದ್ದುದರಿಂದಲೇ ಆರ್ಥಿಕ ಅನುಕೂಲತೆಗಳೂ ಕಡಿಮೆಯೇ. 

 

ಶ್ರೀರಾಮಚಂದ್ರಾಪುರಮಠವೆಂಬ ಹೆಸರಿನ ತಮ್ಮದೇ ಆದ ಗುರುಪೀಠವೊಂದಿದ್ದರೂ ಅದರ ಅರಿವೇ ಹೆಚ್ಚಿನ ಮಂದಿಗಿರಲಿಲ್ಲ. ಒಂದಷ್ಟು ಮಂದಿಗೆ ಅರಿವಿದ್ದರೂ, ಅದರತ್ತ ಸುಳಿಯಬೇಕೆಂಬ ಪರಿವೆಯಿರಲಿಲ್ಲ. ಶಂಕರಾಚಾರ್ಯರಾದಿಯಾಗಿ ನಡೆದು ಬಂದ ಅವಿಚ್ಛಿನ್ನ ಗುರುಪರಂಪರೆ, ಶ್ರೀಸೀತಾರಾಮಚಂದ್ರ, ಚಂದ್ರಮೌಳೀಶ್ವರ, ರಾಜರಾಜೇಶ್ವರೀ, ಹಸ್ತಿದಂತ ಸಿಂಹಾಸನ ಎಂಬಿತ್ಯಾದಿ ಪದಗಳು ವರುಷಕ್ಕೊಂದು ಬಾರಿ ಟಪಾಲು ಮೂಲಕ ಬರುತ್ತಿದ್ದ ಗುರುಮಂತ್ರಾಕ್ಷತೆಯೊಂದಿಗೆ ಲಗತ್ತಿಸಿದ ರಾಯಸಕ್ಕಷ್ಟೇ ಸೀಮಿತವಾಗಿದ್ದ ಕಾಲವದು. ಮದುವೆ, ಮುಂಜಿಗಳಂತಹ ಸಮಾರಂಭಗಳನ್ನು ಬಿಟ್ಟರೆ, ಹವ್ಯಕರನ್ನು ಒಂದಾಗಿ ಬೆಸೆವ ಸಂದರ್ಭಗಳೇ ಇಲ್ಲ. ಸಾಲದೆಂಬಂತೆ ಅವರ ಮಧ್ಯೆ ಬಡವ, ಶ್ರೀಮಂತ, ದೂರದೂರಿನವ, ಒಳ್ಳೆಯವ, ಕೆಟ್ಟವನೆಂಬ ನೂರು ಕಂದಕಗಳು ಬೇರೆ. 

 

ಹೀಗಿದ್ದ ಹವ್ಯಕ ಸಮಾಜಕ್ಕೂ, ಗೋವಿಗೂ ಒಂದು ಬಿಡಿಸಲಾರದ ಬಂಧವಿತ್ತು. ಮನೆಯ ಮುಂದಿನ ಅಂಗಳಕ್ಕೆ ಸಗಣಿ ಸಾರಿಸುವುದರಿಂದ ಹಿಡಿದು, ತೋಟದಲ್ಲಿಯ ಕೃಷಿ ಚಟುವಟಿಕೆಗಳಿಗೆ, ಹೋಮ-ಹವನಗಳಲ್ಲಿ ಬಳಸುವ ಪಂಚಗವ್ಯಗಳಿಗೆ, ತಮ್ಮ ಆಹಾರ ಪದ್ಧತಿಯಲ್ಲಿ ನಿತ್ಯವೂ ಬಳಸುವ ಹಾಲು, ಮೊಸರುಗಳಿಗೆಂದು, ಒಂದಾದರೂ ಗೋವನ್ನು ಸಾಕದ ಹವ್ಯಕ ಮನೆಗಳಿರಲಿಲ್ಲ ಆ ಕಾಲದಲ್ಲಿ. 

 

ತೊಂಬತ್ತರ ದಶಕದಲ್ಲಿ ಬದಲಾವಣೆಯ ಗಾಳಿಯೊಂದು ಬೀಸಿ ಬಂತು. ಅದು ಬರಿಯ ಗಾಳಿಯಾಗಿರಲಿಲ್ಲ; ಬದಲಾಗಿ ಜಾಗತೀಕರಣವೆಂಬ ಹೆಸರಿನ ಸುಂಟರಗಾಳಿಯಾಗಿತ್ತು!
ಆ ಸುಂಟರಗಾಳಿಯು ತೋಟದಲ್ಲಿದ್ದ ಹವ್ಯಕ ಯುವ ಜನಾಂಗವನ್ನು ಪಟ್ಟಣಗಳತ್ತ ಹೊತ್ತೊಯ್ದಿತು. ದೇಸೀ ಗೋವುಗಳು ನಲಿದಾಡುತ್ತಿದ್ದ ಹವ್ಯಕರ ಮನೆಯ ಕೊಟ್ಟಿಗೆಯೊಳಗೆ ವಿಲಾಯತಿ ಹಸುಗಳನ್ನು ತಂದು ನೂಕಿತು. ದೇಸೀ ಹಸುಗಳ ಮಾಂಸದ ರುಚಿಯನ್ನು ಜಗತ್ತಿನೆಲ್ಲೆಡೆ ಪರಿಚಯಿಸಿತು. ಪರಿಣಾಮವಾಗಿ ದೇಸೀ ಗೋವುಗಳು ಕೊಟ್ಟಿಗೆಯಿಂದ ಪಟ್ಟಣದ ಕಸಾಯಿಖಾನೆಗೆ, ವಿಲಾಯಿತಿ ಹಸುಗಳು ಪಟ್ಟಣದಿಂದ ಕೊಟ್ಟಿಗೆಯೊಳಗೆ ಎಡೆಬಿಡದ ಪ್ರವಾಹವಾಗಿ ಹರಿಯತೊಡಗಿದವು. ಮನೆ ಮನೆಯನ್ನು ಹೊಕ್ಕ ಜಾಗತೀಕರಣದ ಸುಂಟರಗಾಳಿಯು ಮನ ಮನವನ್ನೂ ಹೊಕ್ಕು ಮಲಿನವಾಗಿಸಿತು.  

 

ಸಗಣಿ ಸಾರಿಸುತ್ತಿದ್ದ ಅಂಗಳವನ್ನು ಕಾಂಕ್ರೀಟ್ ಆವರಿಸಿತು. ಗೋವಿನ ಗೊಬ್ಬರ ಬಿದ್ದು ಹುಲುಸಾಗಿದ್ದ ಮಣ್ಣನ್ನು ರಾಸಾಯನಿಕ ಗೊಬ್ಬರಗಳು ಆವರಿಸಿ ಬರಡಾಗಿಸಿದವು. ಮನೆ ಮನೆಯ ಕುಡಿಗಳು ಬೆಳೆದು ದೊಡ್ಡವರಾದಂತೆಯೇ, ಉದ್ಯೋಗವನ್ನರಸಿ ವಲಸೆ ಹೊರಟವು. ಹವ್ಯಕರ ಮನೆ, ಮನಗಳು ಬರಿದಾಗತೊಡಗಿದವು.  

 

ಆರ್ಥಿಕವಾಗಿ ಬಲಗೊಂಡ ಹವ್ಯಕ ಯುವ ಜನಾಂಗವು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಯಿತು. ತಲೆತಲಾಂತರಗಳಿಂದ ನಡೆದು ಬಂದ ಪೂಜೆ, ಪುರಸ್ಕಾರಗಳು ಮನೆಯಲ್ಲಿರುವ ವೃದ್ಧ ತಂದೆ-ತಾಯಿಯರಿಗೆ ಮಾತ್ರವೇ ಸೀಮಿತವಾಯಿತು. ತಮ್ಮ ಸಂಸ್ಕೃತಿಯ ಪರಿವೆಯೇ ಇಲ್ಲದ ಪೀಳಿಗೆಯೊಂದು ನೋಡನೋಡುತ್ತಿರುವಂತೆಯೇ ಸೃಷ್ಟಿಯಾಯಿತು. 

 

ತೊಂಬತ್ತರ ದಶಕವು ಇನ್ನೇನು ಕೊನೆಗೊಳ್ಳಬೇಕು ಎನ್ನುವಷ್ಟರಲ್ಲಿ ದೇಸೀ ಗೋವುಗಳ ಜೊತೆ ಜೊತೆಗೆ ಸನಾತನ ಸಂಸ್ಕೃತಿಯೂ ವಿನಾಶದ ಅಂಚಿಗೆ ಬಂದು ನಿಂತಿತು. ಅವೆರಡೂ ನಶಿಸಿಯೇ ಹೋಗುತ್ತಿದ್ದವೇನೋ. ಆ ಸುಂಟರಗಾಳಿಗೆ ತಡೆಯೊಡ್ಡುವ ಮೇರು ಪರ್ವತವೊಂದು ಎದ್ದು ಬರದಿದ್ದರೆ!


ನಿಜ. ಶ್ರೀರಾಮಚಂದ್ರಾಪುರಮಠವೆಂಬ ಅವಿಚ್ಛಿನ್ನ ಗುರುಪರಂಪರೆಯ 35ನೆಯ ಯತಿಗಳು. ದೊಡ್ಡ ಗುರುಗಳೆಂದೇ ಹೆಸರುವಾಸಿಯಾಗಿರುವ ಜಗದ್ಗುರು ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳಿಗಾಗ ಇಳಿ ವಯಸ್ಸು. ಸಕಲ ಕಷ್ಟ ಕಾರ್ಪಣ್ಯಗಳ ನಡುವೆಯೂ, ಪರಂಪರೆಯ ರೀತಿ ರಿವಾಜುಗಳಿಗೆ, ತಪೋಕಾರ್ಯಗಳಿಗೆ ಒಂದಿಷ್ಟೂ ಕುಂದಿಲ್ಲದಂತೆ, ದಿಟ್ಟತನದಿಂದ ಮಠವೆಂಬ ವ್ಯವಸ್ಥೆಯನ್ನು ಅದುವರೆಗೆ ಮುನ್ನಡೆಸಿಕೊಂಡು ಬಂದ ಅವರು ಶಿಷ್ಯ ಸ್ವೀಕಾರದ ತೀರ್ಮಾನವನ್ನು ಮಾಡಿದರು. ಪರಿಣಾಮವಾಗಿ, ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳೆಂಬ ನಾಮಧೇಯದೊಂದಿಗೆ 19ರ ಹರೆಯದ ಸಂಕಲ್ಪಿತ ಕಾರ್ಯಸಿದ್ಧಿ ಪ್ರವೀಣರೊಬ್ಬರು ಅವಿಚ್ಛಿನ್ನ ಪೀಠವನ್ನೇರಿದರು. ಮೂರು ತಲೆಮಾರುಗಳ ಹಿಂದಿನ ರಾಘವೇಶ್ವರಭಾರತಿಗಳ ಅನಂತರ ಯಾವ ಗುರುಗಳೂ ಏರಿರದ ಐತಿಹಾಸಿಕ ಹಸ್ತಿದಂತ ಸಿಂಹಾಸನವನ್ನು ಏರಿ ಕುಳಿತರು. ಪೀಠವನ್ನು ಏರಿದ ದಿನವೇ ಎರಡು ಐತಿಹಾಸಿಕ ಉದ್ಘೋಷಗಳನ್ನು ಮಾಡಿದರು. ಒಂದು, ಹರಿದು ಹಂಚಿಹೋದ ಹವ್ಯಕ ಸಮಾಜವನ್ನು ಧಾರ್ಮಿಕತೆಯ ಏಕಸೂತ್ರದಲ್ಲಿ ಒಗ್ಗೂಡಿಸುವುದು. ಮತ್ತೊಂದು ವಿನಾಶದ ಅಂಚಿನಲ್ಲಿರುವ ದೇಸೀ ಗೋವುಗಳನ್ನು ಸಂರಕ್ಷಿಸುವುದು. 

 

ಈ ಎರಡು ಕನಸುಗಳನ್ನು ಹೊತ್ತ ಯುವ ಯತಿಗಳು ಊರು ಊರುಗಳಲ್ಲಿ ಸಂಚಾರವನ್ನು ಪ್ರಾರಂಭಿಸಿದರು. ಅದುವರೆಗೆ ಗುರುಪೀಠ, ಸನ್ಯಾಸಿಯೆಂದರೆ ತಮಗೆ ದೂರದಿಂದ ಮಾತ್ರವೇ ಲಭ್ಯ ಎಂದು ಭಾವಿಸಿದ್ದ ಸಮಾಜದ ಒಬ್ಬೊಬ್ಬರನ್ನೂ ಕರೆದು ಅನುಗ್ರಹಿಸಿದರು. ಅವರ ಅಪ್ರತಿಮ ವಾಗ್ಝರಿಗೆ, ತೀಕ್ಷ್ಣ ನೋಟಕ್ಕೆ ಅದಾವ ಸೂಜಿಗಲ್ಲಿನ ಸೆಳೆತವಿತ್ತೋ! ಸಮಾಜಕ್ಕೆ ಸಮಾಜವೇ ಅವರ ಹಿಂದೆ ಹೆಜ್ಜೆಯಿಟ್ಟಿತು.  

 

ಮುಂದೆ ನಡೆದುದು ಚಮತ್ಕಾರ.  

 

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಮಾಜದಲ್ಲಿ ಒಂದು ಸುತ್ತು ಪರ್ಯಟನೆಯನ್ನು ಪೂರ್ತಿಗೊಳಿಸುವುದರೊಳಗೆ ಸಮಾಜ ಸಂಘಟನೆಯ ವಿರಾಟ ಸ್ವರೂಪವೊಂದು ಜನ್ಮತಾಳಿತ್ತು.  

 

ಸಮಾಜವನ್ನು ಮಠದೊಂದಿಗೆ ಸಂಧಿಸುವ ಗುರಿಕ್ಕಾರ ವ್ಯವಸ್ಥೆಯ ಪುನರ್ರಚನೆಯಾಯಿತು. ಮೊತ್ತ ಮೊದಲ ಬಾರಿಗೆ ಹವ್ಯಕ ಮಹಿಳೆಯರ ಸಂಘಟನೆಯೊಂದು ರೂಪುಗೊಂಡಿತು. ಅದೇ ಮೊದಲ ಬಾರಿಗೆ ಹವ್ಯಕ ಮಹಿಳೆಯರು ತಮ್ಮ ಅಡುಗೆಕೋಣೆಯಿಂದ ಹೊರಕ್ಕೆ ಅಡಿಯಿಟ್ಟು, ಸಮಾಜ ಸಂಘಟನೆಯಲ್ಲಿ ನಿರತರಾದರು. ಕುಂಬಳೆ ಸೀಮೆಯ ಬದಿಯಡ್ಕವೆಂಬ ಪುಟ್ಟ ಊರಿನಲ್ಲಿ ಮಹಿಳೆಯರಿಗಾಗಿಯೇ ಇರುವ, ಮಹಿಳೆಯರಿಂದಲೇ ನಡೆಸಲ್ಪಡುವ ಮಹಿಳೋದಯ ಎಂಬ ನಾಮಧೇಯದ ಸ್ವಉದ್ಯೋಗ ಸಂಸ್ಥೆಯೊಂದು ಹುಟ್ಟಿಕೊಂಡಿತು. ಮಹಿಳೆಯರು ಸಮಾಜಮುಖಿಯಾಗಿದ್ದೇ ತಡ, ಮನೆ ಮನೆಗಳಲ್ಲಿ ಬದಲಾವಣೆಯು ಗೋಚರವಾಯಿತು. ಭಜನೆ, ಕುಂಕುಮಾರ್ಚನೆಗಳಂತಹ ಕಾರ್ಯಕ್ರಮಗಳು ದಿನನಿತ್ಯವೆಂಬಂತೆ ನಡೆಯತೊಡಗಿದವು. ಹವ್ಯಕರ ಮನೆ ಮನೆಗಳಲ್ಲಿ ಜಗದ್ಗುರುವಿನ ಭಾವಚಿತ್ರಗಳು ರಾರಾಜಿಸಿದವು. 

 

ನಾನು, ನನ್ನದು ಎನ್ನುವ ಭಾವವನ್ನು ಬಿಟ್ಟ ಹವ್ಯಕ ಸಮಾಜದ ದೊಡ್ಡ ಪಂಗಡವೊಂದು ಸಮಾಜದತ್ತ ಮುಖ ಮಾಡಿ ನಿಂತಂತೆಯೇ, ಹವ್ಯಕರೆಲ್ಲರೂ ಒಂದೇ, ಮನೆ ಮಠಗಳು ಒಂದೇ ಎನ್ನುವ ಭಾವವು ಮನ ಮನಗಳಲ್ಲಿ ಭದ್ರವಾಗಿ ಬೇರೂರತೊಡಗಿತು. ಹೀಗೆ ಎಡೆ ಬಿಡದೇ ಹತ್ತು ವರ್ಷಗಳ ಕಾಲ ಶ್ರೀರಾಘವೇಶ್ವರರೆಂಬ ಮಹಾನ್ ಸಂತರು ಸಮಾಜ ಪರ್ಯಟನೆಯನ್ನು ನಡೆಸುತ್ತಲೇ ಬಂದರು.  ಹರಿದು ಹಂಚಿಹೋಗಿದ್ದ ಸಮಾಜಕ್ಕೊಂದು ಸ್ಪಷ್ಟ ಧ್ಯೇಯೋದ್ದೇಶವು ಪ್ರಾಪ್ತವಾಗಿತ್ತು ಅಷ್ಟರೊಳಗೆ. 

 

ಅದು 2000ನೆಯ ಇಸವಿ. ಸಮಾಜದಲ್ಲಿ ಧಾರ್ಮಿಕತೆಯನ್ನು ಬಿತ್ತಿ ಸಮಾಜ ಸಂಘಟನೆಯನ್ನು ನಡೆಸುವ ಕಾರ್ಯವು ಸಂಪೂರ್ಣ ಯಶಸ್ಸನ್ನು ಕಂಡಿತ್ತು. ಸಮಾಜ ಪರಿವರ್ತನೆಯ ಎರಡನೇ ಹಂತಕ್ಕೆ ಅಡಿಯಿಡುವ ಕಾಲವಾಗ ಸನ್ನಿಹಿತವಾಗಿತ್ತು. ಮತ್ತೆ ನಾವು ಕಂಡುದು ರಾಮಾಯಣ ಮಹಾಸತ್ರದಂತಹ ಧರ್ಮಜಾಗೃತಿಯ ಬೃಹತ್ ಕಾರ್ಯಕ್ರಮಗಳು, ವಿಶ್ವ ಗೋಸಮ್ಮೇಳನ, ಗೋಯಾತ್ರೆ, ಗೋಸ್ವರ್ಗಗಳಂತಹ ಬೃಹತ್ ಆಂದೋಲನಗಳು. 

Author Details


Srimukha

Leave a Reply

Your email address will not be published. Required fields are marked *