ಒಂದು ದಿನ ಒಬ್ಬ ವ್ಯಕ್ತಿ ದೇವರ ಮನೆಯ ಬಾಗಿಲು ಬಡಿಯುತ್ತಾನೆ. ಬಾಗಿಲಿಗೆ ಚಿಲಕ ಹಾಕಿರುತ್ತದೆ.
ಒಳಗಿನಿಂದ ಒಂದು ಧ್ವನಿ-
‘ಯಾರು?’ ಎಂದು ಕೇಳುತ್ತದೆ.
ಅದಕ್ಕೆ ಇವನು-
‘ನಾನು’ ಎನ್ನುತ್ತಾನೆ.
ಬಾಗಿಲು ತೆಗೆಯುವುದೇ ಇಲ್ಲ. ಬಹಳ ಸಮಯ ಕಾದ ಅನಂತರ ಈ ವ್ಯಕ್ತಿ ಕಾಡಿಗೆ ಹೋಗಿ ಬಹಳ ಕಾಲ ತಪಸ್ಸು ಮಾಡಿ ಆತ್ಮಜ್ಞಾನ ಪಡೆಯುತ್ತಾನೆ. ಅನಂತರ ಬಂದು ಬಾಗಿಲು ತಟ್ಟುತ್ತಾನೆ.
ಆಗ ಒಳಗಿನಿಂದ ಅದೇ ಧ್ವನಿ-
‘ಯಾರು?’ ಎಂದು ಕೇಳುತ್ತದೆ.
ಆಗ ಈ ವ್ಯಕ್ತಿ-
‘ನೀನೇ’ ಎನ್ನುತ್ತಾನೆ.
ಆಗ ಬಾಗಿಲು ತೆಗೆಯುತ್ತದೆ. ಆಗ ಇವನಿಗೆ ಅರಿವಾಗುವುದೆಂದರೆ ನಾನು ಸಾಯದೇ ಸ್ವರ್ಗ ಸಿಗುವುದಿಲ್ಲ. ದೈವ ಸಾಕ್ಷಾತ್ಕಾರವಾಗಬೇಕಾದರೆ ನಾನು ಎಂಬ ಅಹಂಕಾರ ಹೋಗಬೇಕು ಎಂದು.
ಪ್ರೇಮದ ಹಾದಿ ಬಹು ಕಿರಿದು ಅಲ್ಲಿ ಇಬ್ಬರು ಒಟ್ಟಿಗೇ ಪ್ರಯಾಣಿಸುವ ಹಾಗಿಲ್ಲ; ಎರಡು ಹೋಗಿ ಒಂದಾಗಿ ಅದ್ವೈತವಾಗಬೇಕು.
ಗಂಗೆ, ತುಂಗೆ, ಗೋದಾವರಿ, ಸರಸ್ವತಿ, ಯಮುನಾ, ಕಾವೇರಿಯರು ಸಮುದ್ರ ಸೇರಿದ ಮೇಲೆ ಬಣ್ಣ, ಆಕಾರ, ರುಚಿ ಎಲ್ಲವೂ ಒಂದೇ ಆಗುತ್ತದೆ. ಆಗ ಅವು ಬೇರೆ ಬೇರೆಯಲ್ಲ. ಅಲ್ಲಿ ಅವೆಲ್ಲ ವಿಶಾಲತೆಯನ್ನು, ಧನ್ಯತೆಯನ್ನು ಪಡೆಯುವಂತೆ ನಾವು ನಮ್ಮೆಲ್ಲ ಅಹಂಕಾರಗಳನ್ನು ಬದಿಗಿರಿಸಿ ನಮ್ಮನ್ನೇ ನಾವು ಭಗವಂತನಲ್ಲಿ ಅರ್ಪಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ.