ಒಂದು ದಿನ ತಿಮ್ಮ ಕಾರಿನಲ್ಲಿ ಪ್ರಯಾಣ ಹೊರಡುತ್ತಾನೆ. ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ತನ್ನ ಕೆಲಸಕ್ಕಾಗಿ ಹೋಗುತ್ತಾನೆ. ಕೆಲಸ ಮುಗಿಸಿ ಹಿಂತಿರುಗಿ ಬರುವಾಗ ಜೋರಾಗಿ ಮಳೆ ಬರುತ್ತದೆ. ನಿಲ್ಲಲು ಜಾಗವಿಲ್ಲದ ತಿಮ್ಮ ಮಳೆಯಲ್ಲಿಯೇ ಒಂದು ಮರದ ಬುಡದಲ್ಲಿ ನಿಲ್ಲುತ್ತಾನೆ. ತಿಮ್ಮನ ಹತ್ತಿರ ಕೊಡೆ, ರೈನ್‌ಕೋಟ್ ಎರಡೂ ಇರುತ್ತದೆ. ಅವು ಕಾರಿನಲ್ಲಿದ್ದು ಕಾರು ಲಾಕ್ ಆಗಿರುತ್ತದೆ. ಕಾರಿನ ಲಾಕ್ ತೆಗೆಯದೇ ಅವನ್ನು ತೆಗೆಯಲು ಸಾಧ್ಯವಿಲ್ಲ. ಆದರೆ ಜೋರಾಗಿ ಮಳೆ ಬರುತ್ತಿದ್ದರಿಂದ ಕಾರಿನ ಹತ್ತಿರ ಹೋಗುವುದಕ್ಕೂ ತಿಮ್ಮನಿಗೆ ಸಾಧ್ಯವಾಗುವುದಿಲ್ಲ.
ನಮ್ಮ ಜೀವನವೂ ಹಾಗೇ. ಭಗವಂತ ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ನಮ್ಮಲ್ಲೇ ಇರುತ್ತದೆ. ಅದರ ಅರಿವು ನಮಗಿರುವುದಿಲ್ಲ. ನಮ್ಮ ಅಂತಸ್ಸತ್ತ್ವವನ್ನು ಒಳಗಣ್ಣಿನಿಂದ ನಾವು ನೋಡದಿರುವುದರಿಂದ ನಮಗೆ ಅದರ ಅರಿವಾಗುವುದಿಲ್ಲ. ಅಂತರಾತ್ಮದ ಲಾಕ್ ತೆಗೆಯದೇ ಜ್ಞಾನ ನಮಗೆ ದೊರೆಯುವುದಿಲ್ಲ.
ಕಾಣದಾಗಿದೆ ಇಟ್ಟು ಮರೆತಿಹ ಕೀಲಿ
ಹುಡುಕಿ ಬಸವಳಿದು ಮನವೆಲ್ಲ ಖಾಲಿ
ಕಟ್ಟಿಹೋಗಿದೆ ಸುತ್ತ ಮುಳ್ಳಿನ ಬೇಲಿ
ಒಳನುಸುಳಿ ಬರಲಿ ಗುರುಕರುಣೆ ಹಾಲಿ |