ಒಂದು ಕಾಡಿನಲ್ಲಿ ಒಂದೇ ರೀತಿಯ ಎರಡು ಪಕ್ಷಿಗಳಿದ್ದವು. ಆಚಾರ, ವಿಚಾರ, ಆಹಾರಾದಿಯಾಗಿ ಎಲ್ಲ ರೀತಿಯಲ್ಲೂ ಅವೆರಡೂ ಒಂದೇ ಬಗೆಯಾಗಿದ್ದವು. ಒಂದು ದಿನ ಒಬ್ಬ ಬೇಟೆಗಾರ ಬಂದು ಅವೆರಡನ್ನೂ ಸೆರೆ ಹಿಡಿದು ತನ್ನ ಮನೆಗೆ ಕೊಂಡು ಹೋಗಿ ಒಂದೇ ರೀತಿಯ ಎರಡು ಪಂಜರಗಳಲ್ಲಿ ಅವುಗಳನ್ನು ಬಂಧಿಸಿ ಇಡುತ್ತಾನೆ. ಅವಕ್ಕೆ ಸ್ವಲ್ಪ ಆಹಾರ, ಕುಡಿಯಲು ನೀರು ಇಟ್ಟು ಅವನು ಹೊರಟು ಹೋಗುತ್ತಾನೆ. ಒಂದು ಪಕ್ಷಿ ತುಂಬಾ ಬೇಸರಗೊಳ್ಳುತ್ತದೆ. ಆಹಾರವಿದ್ದರೂ ತನಗೆ ಬೇಕಾದ ತಾನೇ ಸಂಪಾದಿಸಿದ ಆಹಾರವಿಲ್ಲ. ನೀರಿದ್ದರೂ ಸ್ವತಂತ್ರವಾಗಿ ಹರಿಯುವ ನೀರಿಲ್ಲ. ಸ್ವಲ್ಪ ಜಾಗವಿದ್ದರೂ ಸ್ವಚ್ಛಂದವಾಗಿ ಹಾರಾಡುವಷ್ಟು ಜಾಗವಿಲ್ಲ ಎಂದೆಲ್ಲ ಆಲೋಚಿಸಿ ಉಪವಾಸವ್ರತ ಆಚರಿಸಿ ಸಂಜೆಯಾಗುವಾಗ ಕೊರಗಿನಿಂದ ಸತ್ತೇಹೋಗುತ್ತದೆ. ಆದರೆ ಮತ್ತೊಂದು ಪಕ್ಷಿ ಸಕಾರಾತ್ಮಕವಾಗಿ ಆಲೋಚಿಸಿ ಇದ್ದುದರಲ್ಲೇ ತೃಪ್ತಿಪಟ್ಟು ಒಳ್ಳೆಯ ದಿನ ಬರಬಹುದು; ಹಾಗಾಗಿ ನಾನು ಬದುಕಬೇಕು ಎಂದು ತೀರ್ಮಾನಿಸಿ ಆಹಾರ, ನೀರು ಉಪಯೋಗಿಸುತ್ತದೆ. ಸಂಜೆ ಬೇಟೆಗಾರ ಬಂದು ಆ ಪಕ್ಷಿಗಳನ್ನು ಬಿಡುಗಡೆ ಮಾಡಬೇಕೆಂದು ಪಂಜರದ ಬಾಗಿಲನ್ನು ತೆರೆದಾಗ ಒಂದು ಪಕ್ಷಿ ಸಂತೋಷದಿಂದ ಹಾರಿಹೋಗುತ್ತದೆ. ಆದರೆ ಮತ್ತೊಂದು ಪಕ್ಷಿ ಪಂಜರದಲ್ಲಿಯೇ ಸತ್ತು ಹೋಗಿರುತ್ತದೆ.
ನಮ್ಮೆಲ್ಲರ ಜೀವನದಲ್ಲಿಯೂ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ತೊಂದರೆ, ಆಪತ್ತು, ಕಷ್ಟ ಇದ್ದೇ ಇರುತ್ತದೆ. ಆದ್ದರಿಂದ ಕೊರಗಿ ಆತ್ಮಹತ್ಯೆ ಮಾಡಿಕೊಳ್ಳದೇ ಸಕಾರಾತ್ಮಕವಾಗಿ ಆಲೋಚಿಸಿ ನಮ್ಮ ಕರ್ತವ್ಯ ನಿರ್ವಹಿಸಿದಾಗ ಮುಂದೊಂದು ದಿನ ಒಳ್ಳೆಯ ದಿನ ಬರಬಹುದು. ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು, ಇಷ್ಟಪಟ್ಟದನ್ನು ಪಡೆಯಬಹುದು.