ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬ್ಯಾಂಕ್ ಬ್ಯಾಲೆನ್ಸ್, ಪಾಸ್‌ಬುಕ್, ಕ್ರೆಡಿಟ್ ಕಾರ್ಡ್, ಡೆಪಾಸಿಟ್ ಇತ್ಯಾದಿಗಳ ಬಗ್ಗೆ ಅತಿಯಾದ ಆಸೆ ಇರುತ್ತದೆ. ಆದರೆ ನಮ್ಮದೊಂದು ಅಕೌಂಟ್ ಇದ್ದು ಅದರಲ್ಲಿ ಪ್ರತಿದಿನ 86,400 ರೂಪಾಯಿ ಜಮೆ ಆಗುತ್ತದೆ; ಅದನ್ನು ಆ ದಿವಸವೇ ಖರ್ಚು ಮಾಡಬೇಕು. ಅದಿಲ್ಲವಾದರೆ ಅದು ಲ್ಯಾಪ್ಸ್ ಆಗುತ್ತದೆ ಎಂದು ಊಹಿಸಿಕೊಳ್ಳಿ. ಆಗ ಪ್ರತಿಯೊಂದು ರೂಪಾಯಿಯನ್ನೂ ಹೇಗೆ ಖರ್ಚುಮಾಡುತ್ತಿದ್ದೆವು ಎಂದು ಯೋಚಿಸಿಕೊಳ್ಳಿ. ಪ್ರತಿ ರೂಪಾಯಿಯೂ ಅಮೂಲ್ಯವೆಂದು ತಿಳಿದು ನಮಗೆ ಸಂತೋಷವನ್ನು ಕೊಡುವ ವಿಷಯಕ್ಕೇ ಖರ್ಚು ಮಾಡುತ್ತಿದ್ದೆವಲ್ಲವೇ?
ಹೌದು, ನಮ್ಮ ಪ್ರತಿಯೊಬ್ಬರ ಅಕೌಂಟ್‌ನಲ್ಲಿ ಪ್ರತಿದಿನದ ಸೂರ್ಯೋದಯಕ್ಕೆ ಸರಿಯಾಗಿ 86,400 ಕ್ಷಣಗಳನ್ನು ದೇವರು ಕರುಣಿಸುತ್ತಾನೆ. ಅದು ನಮ್ಮದೇ ಅಕೌಂಟಿನಲ್ಲಿರುತ್ತದೆ. ನಾವು ಅದನ್ನು ಹೇಗೆ ಬೇಕಾದರೂ ವಿನಿಯೋಗಿಸಬಹುದು. ಆದರೆ ಸೂರ್ಯಾಸ್ತವಾದ ಕೂಡಲೇ ಅದು ಲ್ಯಾಪ್ಸ್ ಆಗಲು ಪ್ರಾರಂಭವಾಗುತ್ತದೆ. ಮುಂದಿನ ಸೂರ್ಯೋದಯಕ್ಕೆ ಅದರಲ್ಲಿ ಒಂದು ಕ್ಷಣವೂ ಇರುವುದಿಲ್ಲ.
ಆದ್ದರಿಂದ ಪ್ರತಿದಿನ ಸೂರ್ಯೋದಯದಿಂದ ಹಣವನ್ನು ಖರ್ಚು ಮಾಡಿದಂತೆ, ಯಾರು ಬುದ್ಧಿವಂತಿಕೆಯಿಂದ ಸಮಯವನ್ನು ವಿನಿಯೋಗಿಸುತ್ತಾರೋ ಅವರು ಸಾಧಕರಾಗುತ್ತಾರೆ.
‘ಕ್ಷಣಶಃ ಕಣಶಶ್ಚೈವ ವಿದ್ಯಾಂ ಅರ್ಥಂ ಚ ಸಾಧಯೇತ್|
ಕ್ಷಣೇ ನಷ್ಟೇ ಕುತೋ ವಿದ್ಯಾ ಕಣೇ ನಷ್ಟೇ ಕುತೋ ಧನಮ್||’
ಎಂಬುದು ಒಂದು ಸುಭಾಷಿತ. ಪ್ರತಿದಿನದ ಸೂರ್ಯೋದಯವೂ ನಮ್ಮ ಒಂದು ದಿನದ ಆಯುಷ್ಯವ(ಬದುಕ)ನ್ನು ಕಡಿಮೆ ಮಾಡುತ್ತದೆ ಎಂಬ ಅರಿವಿನಿಂದ ನಾವು ದಿನ ಕಳೆದು ಸಾರ್ಥಕಗೊಳಿಸಿಕೊಳ್ಳಬೇಕು.